ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರವಳ್ಳಿ ತೋಟದ ಸಿನಿಬಳ್ಳಿ

Last Updated 24 ಜುಲೈ 2015, 19:54 IST
ಅಕ್ಷರ ಗಾತ್ರ

ಭಾರತೀಯ ಸಿನಿಮಾ ಜಗತ್ತಿನಲ್ಲಿ ವಿಶಿಷ್ಟ ಛಾಪು ಮೂಡಿಸಿದ ಅಪರೂಪದ ನಿರ್ದೇಶಕ ಗಿರೀಶ ಕಾಸರವಳ್ಳಿ. ತಮ್ಮದೇ ಆದ ಸಿನಿಮಾ ವ್ಯಾಕರಣ ರೂಪಿಸಿಕೊಂಡಿರುವ ಕೆಲವೇ ಕೆಲವು ಶಕ್ತಿಶಾಲಿ ಸಿನಿಕರ್ಮಿಗಳಲ್ಲಿ ಒಬ್ಬರಾಗಿರುವ ಇವರು, ಕನ್ನಡ ಚಿತ್ರಗಳು ಜಾಗತಿಕ ಮಹತ್ವ ಪಡೆಯುವಂತೆ ಮಾಡಿರುವವರಲ್ಲಿ ಪ್ರಮುಖರು.

ಕಾಸರವಳ್ಳಿಯವರ ಚಿತ್ರಗಳನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಭಾರತೀಯ ವಿದ್ಯಾಭವನ ಇದೇ 25ರಿಂದ 29ರವರೆಗೆ ಐದು ದಿನಗಳ ಕಾಲದ ‘ಗಿರೀಶ ಕಾಸರವಳ್ಳಿ ಚಲನಚಿತ್ರೋತ್ಸವ’ ಆಯೋಜಿಸಿದೆ.

ಇಂದಿನ ಯುವಪೀಳಿಗೆಗೆ ಗಿರೀಶ ಕಾಸವಳ್ಳಿಯವರ ಕಲಾತ್ಮಕ ಚಿತ್ರಗಳನ್ನು ನೋಡುವ ಅವಕಾಶ ಒದಗಿಸಬೇಕು  ಮತ್ತು ಅವರ ಚಿತ್ರದ ಕುರಿತಾದ ಆರೋಗ್ಯಕರ ಸಂವಾದಕ್ಕೆ ವೇದಿಕೆಯನ್ನು ಒದಗಿಸಬೇಕು ಎಂಬ ಉದ್ದೇಶವನ್ನು ಈ ಚಿತ್ರೋತ್ಸವ ಹೊಂದಿದೆ. ಈ ಚಿತ್ರೋತ್ಸವದಲ್ಲಿ ಗಿರೀಶ ನಿರ್ದೇಶನದ ಒಟ್ಟು ಹತ್ತು ಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಕೊನೆಯ ದಿನ ಕಾಸರವಳ್ಳಿ ರೂಪಿಸಿರುವ ಅಡೂರು ಗೋಪಾಲಕೃಷ್ಣ ಅವರ  ಸಾಕ್ಷ್ಯಚಿತ್ರ ‘ಇಮೇಜಸ್‌ ಅಂಡ್‌ ರಿಫ್ಲೆಕ್ಷನ್ಸ್‌: ಎ ಜರ್ನಿ ಇನ್‌ಟು ಆಡೂರ್ಸ್‌ ಇಮೇಜರಿ’ ಪ್ರದರ್ಶನಗೊಳ್ಳಲಿದೆ.

‘ಗಿರೀಶ ಕಾಸರವಳ್ಳಿ ಅವರದು ಕಲಾತ್ಮಕ ಮಾರ್ಗ. ಇಂತಹ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುವುದು ತುಂಬ ಕಷ್ಟ. ವಿತರಕರು, ನಿರ್ಮಾಪಕರು ಮನಸ್ಸು ಮಾಡಿದರೆ ಮಾತ್ರ ಇವು  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಇಲ್ಲದಿದ್ದರೆ ಹಾಗೆಯೇ ಉಳಿದುಬಿಡುತ್ತವೆ. ಈ ಕಾರಣದಿಂದಲೇ ಗಿರೀಶರ ಅನೇಕ ಸಿನಿಮಾಗಳ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಅವುಗಳನ್ನು ನೋಡಿಯೂ ಇರುವುದಿಲ್ಲ. ಇಂತಹ ಚಲನಚಿತ್ರೋತ್ಸವಗಳನ್ನು ಏರ್ಪಡಿಸುವುದರ ಮೂಲಕ ಅಂತಹ ಅಪರೂಪದ ಕಲಾತ್ಮಕ ಸಿನಿಮಾಗಳನ್ನು ನೋಡಲು ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ’ ಎಂದು ಚಿತ್ರೋತ್ಸವದ ಹಿಂದಿನ ಉದ್ದೇಶವನ್ನು ವಿವರಿಸುತ್ತಾರೆ ಭಾರತೀಯ ವಿದ್ಯಾಭವನದ ಉಪನಿರ್ದೇಶಕ ಸಿ.ಎನ್‌. ಅಶೋಕ್‌ ಕುಮಾರ್‌.

‘ಹೀಗೆ ಒಬ್ಬರೇ ನಿರ್ದೇಶಕರ ಹತ್ತು ಚಿತ್ರಗಳನ್ನು ಒಟ್ಟಿಗೇ ನೋಡುವ ಅವಕಾಶ ಸಿಗುವುದು ತುಂಬ ಅಪರೂಪ. ಸಿನಿಮಾ ವಿದ್ಯಾರ್ಥಿಗಳಿಗಂತೂ ಇದೊಂದು ಅವಕಾಶ’ ಎಂದೂ ಅವರು ಹೇಳುತ್ತಾರೆ.

ಸಂವಾದವೂ ಇದೆ
ಈ ಚಿತ್ರೋತ್ಸವದಲ್ಲಿ ಬರೀ ಚಿತ್ರಪ್ರದರ್ಶನವಷ್ಟೇ ಅಲ್ಲ, ಪ್ರತಿ ಚಿತ್ರದ ಬಗ್ಗೆಯೂ ಸಂವಾದ ನಡೆಯಲಿದೆ. ಪರಿಣತರು ಆಯಾ ಚಿತ್ರದ ಬಗ್ಗೆ ಮಾತನಾಡಲಿದ್ದಾರೆ. ಖ್ಯಾತ ಚಿತ್ರ ನಿರ್ದೇಶಕರು, ವಿಮರ್ಶಕರು ಗಿರೀಶರ ಚಿತ್ರಗಳ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೇ ಆಯಾ ಚಿತ್ರದಲ್ಲಿ ಕೆಲಸ ಮಾಡಿದ  ನಟರು– ತಂತ್ರಜ್ಞರು ಕೂಡ ಈ ಚರ್ಚೆಯಲ್ಲಿ ಉಪಸ್ಥಿತರಿರುವುದು ವಿಶೇಷ.

‘ಈ ಚಲನಚಿತ್ರೋತ್ಸವದಲ್ಲಿ ಪ್ರತಿ ಚಿತ್ರದ ಕುರಿತೂ ಮೌಲ್ಯಯುತವಾದ ಚರ್ಚೆ ನಡೆಯುತ್ತದೆ.  ಚಿತ್ರ ಪರಿಣತರ ಜತೆ ವೀಕ್ಷಕರು ಸಂವಾದ ನಡೆಸಬಹುದು. ಸ್ವತಃ ಗಿರೀಶ ಕಾಸರವಳ್ಳಿ ಅವರೇ ಐದೂ ದಿನ ಉಪಸ್ಥಿತರಿದ್ದು, ಎಲ್ಲ ಸಂವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಜತೆ ನೇರವಾಗಿ ವೀಕ್ಷಕರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು’ ಎಂದು ವಿವರಿಸುತ್ತಾರೆ ಅಶೋಕ್‌ ಕುಮಾರ್‌.

ಉಚಿತ ಪ್ರವೇಶ
ಭಾರತೀಯ ವಿದ್ಯಾಭವನದ ಥಿಯೇಟರ್‌ನಲ್ಲಿಯೇ ನಡೆಯಲಿರುವ ಈ ಚಲನಚಿತ್ರೋತ್ಸವಕ್ಕೆ ಯಾವುದೇ ಪ್ರವೇಶ ಶುಲ್ಕ ಇಲ್ಲ. ಜನರಿಗೆ ಉತ್ತಮ ಸಿನಿಮಾ ತಲುಪಿಸುವುದಷ್ಟೇ ಮುಖ್ಯ  ಉದ್ದೇಶ, ‘ಭಾರತೀಯ ವಿದ್ಯಾಭನದ ಥಿಯೇಟರ್‌ನಲ್ಲಿ ಮೂರು ನೂರು ಜನರು ಕುಳಿತು ನೋಡಬಹುದಾದ ವ್ಯವಸ್ಥೆ ಇದೆ. ಇನ್ನೂ ನೂರು ಜನರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲು ಅವಕಾಶವೂ ಇದೆ’ ಎನ್ನುತ್ತಾರೆ ಅಶೋಕ್‌.

ಛಾಯಾಚಿತ್ರ ಪ್ರದರ್ಶನ
ಈ ಚಿತ್ರೋತ್ಸವದ ಜತೆಯಲ್ಲಿಯೇ ಗಿರೀಶ ಕಾಸರವಳ್ಳಿ ಅವರ ಕುರಿತ ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಈ ಪ್ರದರ್ಶನವನ್ನು ಹಿರಿಯ ಛಾಯಾಗ್ರಾಹಕ ಕೆ.ಎಸ್‌. ರಾಜಾರಾಂ  ಸಂಘಟಿಸಲಿದ್ದಾರೆ. ಗಿರೀಶ ಅವರ ಛಾಯಾಚಿತ್ರಗಳ ಜತೆಗೆ ಅವರ ಸಿನಿಮಾದ ಸ್ಥಿರ ಚಿತ್ರಗಳೂ ಇಲ್ಲಿ ಇರಲಿವೆ.

‘1970ರ ದಶಕದಿಂದ ಹಿಡಿದು ಇಂದಿನವರೆಗೂ ಅನೇಕ ಅಪರೂಪದ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇವುಗಳಲ್ಲಿ ಅನೇಕ ಅಪರೂಪದ ಛಾಯಾಚಿತ್ರಗಳಿವೆ. ನಾನು ಪ್ರತಿ ಹಂತದಲ್ಲಿಯೂ ಗಿರೀಶ ಅವರೊಟ್ಟಿಗೆ ಚರ್ಚಿಸಿ ಛಾಯಾಚಿತ್ರಗಳನ್ನು ಆಯ್ದುಕೊಂಡಿದ್ದೇನೆ. ಇವುಗಳಲ್ಲಿನ ಬಹುತೇಕ ಛಾಯಾಚಿತ್ರಗಳು ಅವರ ಸಂಗ್ರಹದಿಂದಲೇ ಆಯ್ದವು. ಇದು ಗಿರೀಶ ಅವರ ಸರಳ ವ್ಯಕ್ತಿತ್ವದ ಸೃಜನಶೀಲ ಜಗತ್ತನ್ನು ಪ್ರತಿಬಿಂಬಿಸುವಂತಿರುತ್ತದೆ. 12 ಇಂಚು ಅಗಲ ಮತ್ತು 36 ಇಂಚು ಉದ್ದದ ಪ್ಯಾನೆಲ್‌ಗಳಲ್ಲಿ ಛಾಯಾಚಿತ್ರಗಳು ಪ್ರದರ್ಶಿತಗೊಳ್ಳಲಿವೆ’ ಎಂದು ವಿವರಿಸುತ್ತಾರೆ ಕೆ.ಎಸ್‌.ರಾಜಾರಾಂ. ಈ ಛಾಯಾಚಿತ್ರ ಪ್ರದರ್ಶನ ಚಿತ್ರೋತ್ಸವದ ಅರ್ಥಪೂರ್ಣತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಅವರದ್ದು.

ಕಾರ್ಯಕ್ರಮದ ವಿವರಗಳು
ದಿನಾಂಕ 25 ಶನಿವಾರ

ಬೆಳಿಗ್ಗೆ 10.30ಕ್ಕೆ ಉದ್ಘಾಟನೆ– ಸಚಿವೆ ಉಮಾಶ್ರೀ. ಮುಖ್ಯ ಅತಿಥಿಗಳು–  ಕನ್ನಡ  ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ. ವಿಮರ್ಶಕಿ ವಿಜಯಾ. ನಟಿ ಮಾಳವಿಕಾ ಅವಿನಾಶ್‌. ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್‌. 11.30ಕ್ಕೆ ‘ಗುಲಾಬಿ ಟಾಕೀಸ್‌’ ಚಿತ್ರದ ಪ್ರದರ್ಶನ. 1.30ಕ್ಕೆ ‘ಗುಲಾಬಿ ಟಾಕೀಸ್‌’ ಕುರಿತು ಸಂವಾದ. ಭಾಗವಹಿಸುವವರು– ಮನು ಎಂ. ಬಳಿಗಾರ್‌. ಗಿರೀಶ ಕಾಸರವಳ್ಳಿ. 2.30ಕ್ಕೆ ‘ನಾಯಿ ನೆರಳು’ ಸಿನಿಮಾ ಪರಿಚಯ– ಷಡಕ್ಷರಿ ಎಸ್‌. 3ಕ್ಕೆ ‘ನಾಯಿನೆರಳು’ ಸಿನಿಮಾ ಪ್ರದರ್ಶನ. 5.30ಕ್ಕೆ ‘ಕ್ರೌರ್ಯ’ ಸಿನಿಮಾ ಪರಿಚಯ– ಪತ್ರಕರ್ತ ಜೋಗಿ. 6ಕ್ಕೆ ‘ಕ್ರೌರ್ಯ’ ಸಿನಿಮಾ ಪ್ರದರ್ಶನ.

ದಿನಾಂಕ 26 ಭಾನುವಾರ
ಬೆಳಿಗ್ಗೆ 10.30ಕ್ಕೆ ‘ಮಾಸ್ಟರ್‌ ಕ್ಲಾಸ್‌’ ಭಾಗವಹಿಸುವವರು– ಚಿತ್ರನಿರ್ದೇಶಕ ಬಿ. ಸುರೇಶ ಮತ್ತು ಗಿರೀಶ ಕಾಸರವಳ್ಳಿ. 1.30ಕ್ಕೆ ‘ತಾಯಿ ಸಾಹೇಬ’ ಸಿನಿಮಾ ಪ್ರದರ್ಶನ. 3.30ಕ್ಕೆ ‘ತಾಯಿ ಸಾಹೇಬ’ ಕುರಿತು ಸಂವಾದ. ಭಾಗವಹಿಸುವವರು– ಸಿನಿಮಾ ವಿಮರ್ಶಕ ಎನ್‌. ಮನು ಚಕ್ರವರ್ತಿ. ವಿಮರ್ಶಕಿ ಎಂ.ಎಸ್‌. ಆಶಾದೇವಿ. ಗಿರೀಶ ಕಾಸರವಳ್ಳಿ. ಸಂಜೆ 5.30ಕ್ಕೆ ‘ಘಟಶ್ರಾದ್ಧ’ ಸಿನಿಮಾ ಪರಿಚಯ– ಹಿರಿಯ ಸಿನಿಮಾಟೊಗ್ರಾಫರ್‌ ಜಿ.ಎಸ್‌. ಭಾಸ್ಕರ್‌. 6ಕ್ಕೆ ‘ಘಟಶ್ರಾದ್ಧ’ ಸಿನಿಮಾ ಪ್ರದರ್ಶನ.

ದಿನಾಂಕ 27 ಸೋಮವಾರ
ಮಧ್ಯಾಹ್ನ 3.30ಕ್ಕೆ ‘ತಬರನ ಕಥೆ’ ಸಿನಿಮಾ ಪ್ರದರ್ಶನ. ಸಂಜೆ 5ಕ್ಕೆ ‘ತಬರನ ಕಥೆ’ ಕುರಿತು ಸಂವಾದ. ಭಾಗವಹಿಸುವವರು– ವಿಮರ್ಶಕ ಎಚ್‌.ಎಸ್‌. ರಾಘವೇಂದ್ರ ರಾವ್‌, ಎಂ.ಎಚ್‌. ಕೃಷ್ಣಯ್ಯ, ಗಿರೀಶ ಕಾಸರವಳ್ಳಿ. ಸಂಜೆ 5.30ಕ್ಕೆ ‘ದ್ವೀಪ’ ಸಿನಿಮಾ ಪರಿಚಯ– ನಟ ಅವಿನಾಶ್‌ ಮತ್ತು ಸಿನಿಮಾ ವಿಮರ್ಶಕ ಪುಟ್ಟಸ್ವಾಮಿ ಕೆ. ಸಂಜೆ 6ಕ್ಕೆ ‘ದ್ವೀಪ’ ಸಿನಿಮಾ ಪ್ರದರ್ಶನ.

ದಿನಾಂಕ 28 ಮಂಗಳವಾರ
ಮಧ್ಯಾಹ್ನ 3.30ಕ್ಕೆ ‘ಕನಸೆಂಬೋ ಕುದುರೆಯನೇರಿ’ ಸಿನಿಮಾ ಪ್ರದರ್ಶನ. ಸಂಜೆ 5ಕ್ಕೆ ಸಂವಾದ. ಭಾಗವಹಿಸುವವರು– ಶೇಷಾದ್ರಿ ಮತ್ತು ಗಿರೀಶ ಕಾಸರವಳ್ಳಿ. ಸಂಜೆ 5.30ಕ್ಕೆ ‘ಹಸೀನಾ’ ಸಿನಿಮಾ ಪರಿಚಯ– ಐ.ಎಂ. ವಿಠ್ಠಲಮೂರ್ತಿ ಮತ್ತು ಸುಧಾ ವಾರಪತ್ರಿಕೆ ಸಹಾಯಕ ಸಂಪಾದಕ ಬಿ.ಎಂ. ಹನೀಫ್‌. ಸಂಜೆ 6ಕ್ಕೆ ‘ಹಸೀನಾ’ ಚಿತ್ರ ಪ್ರದರ್ಶನ.

ದಿನಾಂಕ 29 ಬುಧವಾರ
ಮಧ್ಯಾಹ್ನ 3.30ಕ್ಕೆ ‘ಕೂರ್ಮಾವತಾರ’ ಸಿನಿಮಾ ಪ್ರದರ್ಶನ. ಸಿನಿಮಾದ ಕುರಿತು ಸಂವಾದ. ಭಾಗವಹಿಸುವವರು– ವಿಮರ್ಶಕ ಸಿ.ಎನ್‌. ರಾಮಚಂದ್ರನ್‌, ಗಿರೀಶ್‌ ಕಾಸರವಳ್ಳಿ.  ಸಂಜೆ 5.45ಕ್ಕೆ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ. ಮುಖ್ಯ ಅತಿಥಿಗಳು– ಜಿ.ಕೆ. ಗೋವಿಂದರಾವ್ ಮತ್ತು ಗಿರೀಶ ಕಾಸರವಳ್ಳಿ. ಸಂಜೆ 6.15ಕ್ಕೆ ಆಡೂರು ಗೋಪಾಲಕೃಷ್ಣನ್‌ ಅವರ ಕುರಿತ ಗಿರೀಶ ಕಾಸರವಳ್ಳಿ ನಿರ್ದೇಶನದ ಸಾಕ್ಷ್ಯಚಿತ್ರ ‘ಇಮೇಜಸ್‌ ಅಂಡ್‌ ರಿಫ್ಲೆಕ್ಷನ್ಸ್‌: ಎ ಜರ್ನಿ ಇನ್‌ಟು ಆಡೂರ್ಸ್‌‌ ಇಮೇಜರಿ’ ಪ್ರದರ್ಶನ.

ಚಲನಚಿತ್ರೋತ್ಸವ ನಡೆಯುವ ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ. ನಂ. 43, ರೇಸ್‌ಕೋರ್ಸ್‌ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT