ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರು ಶೈವರು: ಸಿದ್ದರಾಮಯ್ಯ

ವೈಷ್ಣವ ದೀಕ್ಷೆ: ಮುಕ್ತ ಚರ್ಚೆಗೆ ಪೇಜಾವರ ಶ್ರೀ ಸಿದ್ಧ
Last Updated 26 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು:  ‘ಕನಕದಾಸರ ಆರಾಧಕರು (ಕುರುಬರು) ಶೈವರು. ಹಾಗಾಗಿ, ವೈಷ್ಣವ ದೀಕ್ಷೆ ಪಡೆಯುವ ಅಗತ್ಯ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಷ್ಟವಾಗಿ ಹೇಳಿದರು.

ನಗರದ ಲಲಿತ ಮಹಲ್‌ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಕದಾಸರ ಆರಾಧಕರು
ಬಯಸಿದರೆ ವೈಷ್ಣವ ದೀಕ್ಷೆ ನೀಡಲು  ಸಿದ್ಧ’ ಎಂಬ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಲಹೆ ರೂಪದ
‘ಆಹ್ವಾನವನ್ನು’ ನಯವಾಗಿ ತಿರಸ್ಕರಿಸಿದರು.

‘ಕನಕದಾಸರು ವೈಷ್ಣವ ಸಿದ್ಧಾಂತದ ಪರಿಪಾಲಕರು. ಕನಕ ಸಿದ್ಧಾಂತದ ಬಗ್ಗೆ ಸತ್ಯವನ್ನು ತಿಳಿದಿದ್ದೇನೆ. ಈ ಹಿನ್ನೆಲೆಯಲ್ಲಿ ಕನಕ ಭಕ್ತರಿಗೆ ವೈಷ್ಣವ ದೀಕ್ಷೆ ನೀಡಲು ಸಿದ್ಧ’ ಎಂದು ಶ್ರೀಗಳು ಹೇಳಿದ್ದಾರಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ ‘ಕುರುಬರೆಲ್ಲ ಶೈವ ಪಂಥದವರು. ಹಾಗಾಗಿ, ವೈಷ್ಣವ ದೀಕ್ಷೆ ಸ್ವೀಕರಿಸುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಉತ್ತರಿಸಿದರು.

ಬಾಗಲಕೋಟೆ ವರದಿ: ‘ಕುರುಬರಿಗೆ ವೈಷ್ಣವ ದೀಕ್ಷೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ, ಮುಕ್ತ ಚರ್ಚೆಗೂ ಸಿದ್ಧನಿದ್ದೇನೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಕದಾಸರು ಶ್ರೀಕೃಷ್ಣನ ಅನುಯಾಯಿ ಆಗಿದ್ದ ಕಾರಣ ಕುರುಬರು ವೈಷ್ಣವ ದೀಕ್ಷೆ ಪಡೆಯಬೇಕು ಎಂದು ಹೇಳಿದ್ದೇನೆ. ಇದು ಒತ್ತಾಯಪೂರ್ವಕ ದೀಕ್ಷೆಯಲ್ಲ. ಅವರ ಇಚ್ಛೆಗೆ ಬಿಟ್ಟದ್ದು’ ಎಂದರು.

‘ಕನಕನ ಅನುಯಾಯಿಗಳು ಹರಿಯ ಗುಲಾಮರಾಗಿ ಎಂದಿದ್ದೇನೆಯೇ ಹೊರತು ಬ್ರಾಹ್ಮಣರ ಗುಲಾಮರಾಗಿ ಎಂದೇನು ಹೇಳಿಲ್ಲ’ ಎಂದರು.

ಕುರುಬ ಸಮಾಜದ ಮಠಾಧೀಶರು ತಮ್ಮನ್ನು ಹಾಲುಮತ ದೀಕ್ಷೆ ಪಡೆಯುವಂತೆ ಆಹ್ವಾನಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ನಾನು ಹಾಲುಮತ ಪರಂಪರೆ ಆರಾಧಕನಲ್ಲ. ಹಾಲುಮತಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧನಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT