ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಎಲ್ಲರೂ ಗಂಟು ಕಳ್ಳರು!

ಸಿಐಡಿ ತನಿಖಾ ವರದಿಯಲ್ಲಿ ಬಹಿರಂಗ
Last Updated 27 ನವೆಂಬರ್ 2013, 20:26 IST
ಅಕ್ಷರ ಗಾತ್ರ

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್‌ ಅಧಿಕಾರಿಗಳ ನೇಮಕಾ­ತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಮತ್ತು ಸದಸ್ಯೆ ಮಂಗಳಾ ಶ್ರೀಧರ್‌ ಅವರಲ್ಲದೆ ಬಹುತೇಕ ಎಲ್ಲ ಸದಸ್ಯರೂ ‘ಗಂಟು’ ಕೊಳ್ಳೆ ಹೊಡೆದಿದ್ದಾರೆ ಎಂಬುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ 10ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸ­ಲಾದ ಈ ವರದಿಯಲ್ಲಿ ಎಲ್ಲ ವಿವರ­ಗಳೂ ಇವೆ. ಅಧ್ಯಕ್ಷ ಗೋನಾಳ ಭೀಮಪ್ಪ, ಸದಸ್ಯರಾದ ಮಂಗಳಾ ಶ್ರೀಧರ್‌, ಎಸ್‌.ದಯಾಶಂಕರ್‌, ಬಿ.ಪಿ.ಕನಿರಾಂ, ಡಾ.ಬಿ.ಎಸ್‌.

ಕೃಷ್ಣ­ಪ್ರಸಾದ್‌, ಡಾ.ಎಚ್‌.­ವಿ.ಪಾರ್ಶ್ವ­ನಾಥ್‌, ಡಾ.ಎಚ್‌.­ಡಿ.­ಪಾಟೀಲ್‌, ಎಸ್‌.­ಆರ್‌.­ರಂಗಮೂರ್ತಿ ಮುಂತಾ­ದವರು ಮತ್ತು ಅವರ ಏಜೆಂಟರು, ಸೇವಕರು, ಕಾರಿನ ಚಾಲಕರು ಯಾವ ಯಾವ ಅಭ್ಯರ್ಥಿಗಳನ್ನು ಸಂಪರ್ಕಿ­ಸಿದ್ದರು, ಎಷ್ಟು ಬಾರಿ ದೂರವಾಣಿ ಕರೆ ಮಾಡಿದ್ದರು, ಎಸ್‌ಎಂಎಸ್‌ ಕಳುಹಿಸಿ­ದ್ದರು ಎಂಬ ಮಾಹಿತಿಗಳನ್ನೂ ಈ ವರದಿಯಲ್ಲಿ ಹೇಳಲಾಗಿದೆ.

ಸಂದರ್ಶನದ ಸಂದರ್ಭದಲ್ಲಿ ಇಲ್ಲದೇ ಇದ್ದರೂ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಎಲ್ಲ ಅಭ್ಯರ್ಥಿಗಳಿಗೆ ಹೇಗೆ ಅಂಕಗಳನ್ನು ನೀಡಿದ್ದಾರೆ. ಸಂದರ್ಶನ ನಡೆಯುವ ಸಂದರ್ಭದಲ್ಲಿ ಅವರು ಎಲ್ಲಿದ್ದರು ಎನ್ನುವ ವಿವರಗಳೂ ವರದಿಯಲ್ಲಿ ಇದೆ. ಸಿಐಡಿ ಪೊಲೀಸರು ತನಿಖೆಯ ಸಂದರ್ಭದಲ್ಲಿ 720 ಮೊಬೈಲ್‌ ಫೋನ್‌ಗಳ ಕರೆಗಳನ್ನು ಪರಿಶೀಲಿಸಿದ್ದಾರೆ. 55 ಬ್ಯಾಂಕ್‌ಗಳ 75 ಶಾಖೆಗಳಲ್ಲಿ ಆರೋಪಿಗಳ ಖಾತೆಗಳನ್ನು ಪರಿಶೀಲಿಸಲಾಗಿದೆ. ಆದಾಯ ತೆರಿಗೆ, ಎನ್‌ಎಸ್‌ಡಿಎಲ್‌, ಸ್ಟ್ಯಾಂಪ್‌ ಮತ್ತು ರಿಜಿಸ್ಟ್ರೇಷನ್‌ ಇನ್‌ಸ್ಪೆಕ್ಟರ್‌ ಜನರಲ್‌ ಅವರ ಮಾಹಿತಿ ಹಾಗೂ ಹಣಕಾಸು ವಹಿವಾಟಿನ ಇನ್ನೂ ಇತರ ಮೂಲ­ಗಳನ್ನೂ ಪರಿಶೀಲಿಸಲಾಗಿದೆ.

ಗೋನಾಳ ಭೀಮಪ್ಪ ಮತ್ತು ಅವರ ಪತ್ನಿ, ಪುತ್ರರ ಆಸ್ತಿ, ಬ್ಯಾಂಕ್‌ ಲಾಕರ್‌, ಬ್ಯಾಂಕ್‌ ಖಾತೆಯ ವಿವರಗಳನ್ನೂ ಸಂಗ್ರಹಿ­ಸಲಾಗಿದೆ. ಆರೋಪಿ ಸುಧೀರ್‌ ಆಸ್ತಿ ವಿವರಗಳೂ ವರದಿಯಲ್ಲಿವೆ. ಇತರ ಸದಸ್ಯರ ಆಸ್ತಿ ಮತ್ತು ಬ್ಯಾಂಕ್‌ ವಹಿ­ವಾಟಿನ ವಿವರಗಳನ್ನು ಕಲೆ ಹಾಕುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಕೆಪಿಎಸ್‌ಸಿ ಕಚೇರಿಯಿಂದ 337 ಕಡತ­ಗಳನ್ನು ವಶಪಡಿಸಿಕೊಂಡು ಪರಿಶೀ­ಲಿ­ಸಲಾಗಿದೆ. ಪ್ರಶ್ನೆ  ಪತ್ರಿಕೆ, ಉತ್ತರ ಪತ್ರಿಕೆ, ಮೌಲ್ಯಮಾಪಕರ ವಿವರಗ­ಳನ್ನೂ ಸಂಗ್ರಹಿಸಲಾಗಿದ್ದು ಉತ್ತರ ಪತ್ರಿಕೆ ಮತ್ತು ಅಂಕ ಪಟ್ಟಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿ­ಗಳಿಂದ ಪರೀಕ್ಷಿಸಿ ಅದರ ಫಲಿತಾಂ­ಶವನ್ನು ವರದಿಯಲ್ಲಿ ತಿಳಿಸಲಾಗಿದೆ.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಏಜೆಂಟರ ಮೂಲಕ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವ್ಯವಹಾರ ಕುದುರಿಸಿದ್ದಾರೆ. ಹಣ ಕೊಟ್ಟವರಿಗೆ ಮುಖ್ಯಪರೀಕ್ಷೆ ಮತ್ತು ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡ­ಲಾಗಿದೆ. ಹಣ ನೀಡದೇ ಇರುವ­ವರನ್ನು ಕಡೆಗಣಿಸಲಾಗಿದೆ ಎನ್ನುವು­ದನ್ನು ಸಂಶಯಕ್ಕೆ ಎಡೆ ಇಲ್ಲದ ಹಾಗೆ ದಾಖಲೆ ಸಹಿತ ಸಿಐಡಿ ವರದಿಯಲ್ಲಿ ಹೇಳಲಾಗಿದೆ.

ಗೋನಾಳ ಭೀಮಪ್ಪ ಅವರೇ ಸ್ವತಃ ಮಲ್ಲಪ್ಪ ಎಂಬ ಅಭ್ಯರ್ಥಿಗೆ 8 ಬಾರಿ, ಜಂಬಗಿ ರೇಣುಕಾಪ್ರಸಾದ್‌ ದಿಲೀಪ್‌ಗೆ 7 ಬಾರಿ, ಎಸ್‌.ರಾಜಶೇಖರ್‌ಗೆ 6 ಬಾರಿ, ಖುದ್‌ಸಿಯಾ ವಾಜಿದ್‌ಗೆ 5 ಬಾರಿ, ಕೆ.ಆರೀಫ್‌ ಹಫೀಜ್‌, ಎಂ.­ಗಂಗಪ್ಪ, ಜಿ.ಅಜಯ್‌, ಶಂಕರಾ­ನಂದ ಬನಶಂಕರಿ ಅವರಿಗೆ ತಲಾ ಒಂದೊಂದು ಬಾರಿ ದೂರವಾಣಿ ಕರೆ ಮಾಡಿದ್ದಾರೆ.

ಗೋನಾಳ ಅವರ ಆಪ್ತ ಸಹಾಯಕ ಗೋಪಿಕೃಷ್ಣ ಅವರು ಎಂ.ಶೈಲಾ ಎಂಬ ಅಭ್ಯರ್ಥಿಗೆ 54 ಬಾರಿ ದೂರವಾಣಿ ಕರೆ ಮಾಡಿದ್ದಾರೆ ಅಥವಾ ಎಸ್‌ಎಂಎಸ್‌ ಕಳಿಸಿದ್ದಾರೆ. ಕೆ.ಆರೀಫ್‌ ಹಫೀಜ್‌ಗೆ 6 ಬಾರಿ, ನಿತಿನ್‌ ಚಕ್ಕಿ, ಕೆ.ಎಸ್‌.­ಸೋಮಶೇಖರಗೆ ತಲಾ ಒಮ್ಮೆ ಕರೆ ಮಾಡಿದ್ದಾರೆ. ಇನ್ನೊಬ್ಬ ಆಪ್ತ ಸಹಾಯಕ ನಾವೆಲ್‌ ಬಲ್ಲಣ್ಣ ಅವರು ಮಲ್ಲಣ್ಣ ಎಂಬ ಅಭ್ಯರ್ಥಿಗೆ ಒಮ್ಮೆ ಕರೆ ಮಾಡಿದ್ದಾರೆ. ಗೋನಾಳ ಭೀಮಪ್ಪ ಅವರ ಕಾರಿನ ಚಾಲಕ ಜಾಧವ್‌ ಅವರು ಮಲ್ಲಣ್ಣ ಅವರಿಗೆ 30 ಬಾರಿ, ಮಹಾಲಿಂಗ ಅವರಿಗೆ 20 ಬಾರಿ, ಮಹೇಶ್‌ ಮಾಲಗತ್ತಿ ಅವರಿಗೆ 9 ಬಾರಿ, ಎಂ.ಎನ್‌.ನವೀನ್‌, ಪ್ರಸನ್ನಕುಮಾರ್‌ ಅವರಿಗೆ ತಲಾ ಒಂದೊಂದು ಬಾರಿ ದೂರವಾಣಿ ಕರೆ ಮಾಡಿದ್ದಾರೆ.

ಗೋನಾಳ ಅವರ ಏಜೆಂಟ್‌ ಅಮರನಾಥ್‌ ಅವರು ಡಿ.ಎಂ.ಗೀತಾ ಅವರಿಗೆ 129 ಬಾರಿ, ಜೆ.ಅಮಿತ್‌ ಅವರಿಗೆ 83 ಬಾರಿ, ಎ.ಆರ್‌.ಸುಮೀತ್‌ ಮತ್ತು ಆರ್‌.ಮಂಜುಳಾ ಅವರಿಗೆ ತಲಾ 27 ಬಾರಿ, ಪಿ.ಎಂ.ಚಿದಂಬರ ಅವರಿಗೆ 7 ಬಾರಿ, ಎಂ.ಗಂಗಪ್ಪ, ಎಚ್‌.ಎಸ್‌.ಕೀರ್ತನಾ, ಗೋವರ್ಧನ ಗೋಪಾಲ್‌, ಎಂ.ಬಿ.ಅಶ್ವಥಾ ಅವರಿಗೆ ತಲಾ ಒಂದೊಂದು ಬಾರಿ ದೂರವಾಣಿ ಕರೆ ಮಾಡಿದ್ದಾರೆ. ಗೋನಾಳ ಅವರ ಸೇವಕ ಅನಿಲ್‌ ಕೂಡ ಅಭ್ಯರ್ಥಿ ನಿತಿನ್‌ ಚಕ್ಕಿ ಅವರಿಗೆ 20 ಬಾರಿ ದೂರ­ವಾಣಿ ಕರೆ ಬಾಡಿದ್ದಾರೆ. ಮಂಗಳಾ ಶ್ರೀಧರ್‌, ಅವರ ಆಪ್ತ ಸಹಾಯಕ ಅಶೋಕ್‌­ಕುಮಾರ್‌, ಮಂಗಳಾ ಅವರ ಸಹೋದರ ಮಾದೇಶ್‌ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ­ದ್ದಾರೆ. ಮಂಗಳಾ ಅವರು ಎಚ್‌.ಪಿ.ಎಸ್‌. ಮೈತ್ರಿ ಅವರಿಗೆ ಒಂದು ಬಾರಿ ಕರೆ ಮಾಡಿ­ದ್ದರೆ ಮಾದೇಶ್‌ 3 ಬಾರಿ ಕರೆ ಮಾಡಿದ್ದಾರೆ. ಮಾದೇಶ್‌ ಅವರು ಮಂಜು­ನಾಥ್‌ ರೆಡ್ಡಿ ಎಂಬುವವರಿಗೆ 14 ಬಾರಿ, ಕೆ.ಎಸ್‌.ಸೋಮಶೇಖರಗೆ ಒಮ್ಮೆ ಕರೆ ಮಾಡಿದ್ದಾರೆ.

ಮಂಗಳಾ ಅವರ ಆಪ್ತ ಸಹಾಯಕ ಅಶೋಕ್‌ಕುಮಾರ್‌ ಅವರು ಎ.ಆರ್‌.ಸುಮೀತ್‌ ಎಂಬ ಅಭ್ಯರ್ಥಿಗೆ 133 ಬಾರಿ ಕರೆ ಮಾಡಿದ್ದಾರೆ. ಲಕ್ಷ್ಮಿ ಅಷ್ಟಗಿ ಮತ್ತು ಅನ್ನಪೂರ್ಣ ನಾಗಪ್ಪ ಮುದುಕನ್ನನವರ್‌ಗೆ ತಲಾ 45 ಬಾರಿ ಕರೆ ಮಾಡಿದ್ದಾರೆ. ಎನ್‌.ರೀನಾ ಸುವರ್ಣ ಅವರಿಗೆ 40 ಬಾರಿ, ಎಚ್‌.ಪಿ.ಎಸ್‌.ಮೈತ್ರಿ ಅವರಿಗೆ 20 ಬಾರಿ, ಸುವರ್ಣ ವಾಲಿಕಾರ್‌ಗೆ 15 ಬಾರಿ, ಡಿ.ಎಲ್‌.ಮಂಜುನಾಥ ರೆಡ್ಡಿ ಅವರಿಗೆ 16 ಬಾರಿ ಕರೆ ಮಾಡಿದ್ದಾರೆ.

ಕೆಪಿಎಸ್‌ಸಿ ಸದಸ್ಯ ದಯಾಶಂಕರ್‌ ಮತ್ತು ಅವರ ಆಪ್ತ ಸಹಾಯಕ ರಘುನಾಥ್‌ ಅವರು ವಿವಿಧ ಅಭ್ಯರ್ಥಿಗಳಿಗೆ ಒಟ್ಟು 78 ದೂರವಾಣಿ ಕರೆ ಮಾಡಿದ್ದಾರೆ. ಕನಿರಾಂ ಅವರು ಅಭ್ಯರ್ಥಿಗಳಿಗೆ 12 ಕರೆ ಮಾಡಿದ್ದರೆ ಅವರ ಆಪ್ತ ಸಹಾಯಕ ಸುಭಾಶ್‌ ಲಮಾಣಿಗೆ 357 ಬಾರಿ ಕರೆ ಮಾಡಿದ್ದಾರೆ. ಸುಭಾಶ್‌ ಲಮಾಣಿ ಅವರು ನೀಲಾ­ಬಾಯಿ ಲಮಾಣಿ ಎಂಬುವರನ್ನು 1,165 ಬಾರಿ ಕರೆ,ಎಸ್‌ಎಂಎಸ್‌ ಮೂಲಕ ಸಂಪರ್ಕಿಸಿದ್ದಾರೆ. ಕನಿರಾಂ ಅವರು ಸುಧೀರ್‌ ಮೂಲಕ ವ್ಯವಹಾರ ಕುದುರಿಸಿದ್ದಾರೆ.

ಸದಸ್ಯ ಕೃಷ್ಣಪ್ರಸಾದ್‌ ಅವರು ಎಚ್‌.ಎಸ್‌.ಕೀರ್ತನಾ ಎಂಬ ಅಭ್ಯರ್ಥಿ­ಯನ್ನು 76 ಬಾರಿ ಸಂಪರ್ಕಿ­ಸಿದ್ದಾರೆ. ಅವರ ಆಪ್ತ ಸಹಾಯಕ ರಮೇಶ್‌ 66 ಬಾರಿ ವಿವಿಧ ಅಭ್ಯರ್ಥಿ­ಗಳಿಗೆ ಕರೆ ಮಾಡಿದ್ದಾರೆ. ಇವರೂ ಕೂಡ ಸುಧೀರ್‌ ಜೊತೆ ಸಂಪರ್ಕ ಹೊಂದಿದ್ದರು. ಸದಸ್ಯ ಪಾರ್ಶ್ವನಾಥ್‌ ಕೂಡ ಮೂವರು ಅಭ್ಯರ್ಥಿಗಳನ್ನು ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಜೊತೆಗೆ ಅವರ ಆಪ್ತ ಸಹಾಯಕ ನೇಮಿರಾಜು ಅಭ್ಯರ್ಥಿಗಳಿಗೆ 285 ಕರೆ ಮಾಡಿದ್ದಾರೆ. ಸದಸ್ಯ ಎಚ್‌.ಡಿ.­ಪಾಟೀಲ್‌ ಮೂವರನ್ನು ಸಂಪರ್ಕಿಸಿದ್ದಾರೆ. ಅವರ ಆಪ್ತ ಸಹಾಯಕ ಎಂ.ವಿ. ಜ್ಞಾನ­ರಂಗ 170 ಕರೆ ಮಾಡಿದ್ದಾರೆ. ಸದಸ್ಯ ರಂಗಮೂರ್ತಿ 6 ಅಭ್ಯರ್ಥಿ­­ಗಳನ್ನು ನೇರವಾಗಿ ಸಂಪರ್ಕಿಸಿದ್ದಾರೆ. ಅವರ ಆಪ್ತ ಸಹಾಯಕ ವೆಂಕಟೇಶಯ್ಯ 78 ಕರೆ ಮಾಡಿದ್ದಾರೆ.

(ಸಂದರ್ಶನ ನಡೆಯುವಾಗ ಸದಸ್ಯರೆಲ್ಲಾ ಎಲ್ಲಿದ್ದರು? ನಿರೀಕ್ಷಿಸಿ..)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT