ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಹೂಳಿನಲ್ಲಿದೆ ₹2 ಸಾವಿರ ಕೋಟಿ!

ಬೆಳ್ಳಂದೂರು, ವರ್ತೂರು ಕೆರೆ: ಐಐಎಸ್‌ಸಿ, ಎಂಇಜಿ ಬಯೋಮೆಟ್ರಿಕ್‌ ಸಮೀಕ್ಷೆ
Last Updated 12 ಏಪ್ರಿಲ್ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಹೂಳು ಹಾಗೂ ನೊರೆ ಸಮಸ್ಯೆ   ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಗ್ಗಂಟಾಗಿದೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಒಂದು ವೇಳೆ ಈ ಹೂಳನ್ನು ವಾಣಿಜ್ಯ ಉದ್ದೇಶದಿಂದ ಬಳಕೆ ಮಾಡಿಕೊಂಡರೆ ₹2 ಸಾವಿರ ಕೋಟಿ ಆದಾಯ ಗಳಿಸಬಹುದು! ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ಅವರ ಸಲಹೆ ಇದು.

ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ನ ಸದಸ್ಯರನ್ನು ಒಳಗೊಂಡ ತಂಡವು ಎರಡು ಕೆರೆಗಳ ಬಯೋಮೆಟ್ರಿಕ್‌ ಸಮೀಕ್ಷೆ ಸಮೀಕ್ಷೆ ನಡೆಸಿದೆ. ತಂಡವು ವರ್ತೂರು ಕೆರೆಯಲ್ಲಿ  ಏಪ್ರಿಲ್‌ 4ರಂದು ಸಮೀಕ್ಷೆ ಆರಂಭಿಸಿತು. ಬೆಳ್ಳಂದೂರು ಕೆರೆಯಲ್ಲಿ ಅಧ್ಯಯನ ಮಂಗಳವಾರ ಕೊನೆಗೊಂಡಿತು.

ಐಐಎಸ್‌ಸಿಯ ಆರು ಮಂದಿ ತಜ್ಞರು ಹಾಗೂ ಎಂಇಜಿಯ 13 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡರು. ವೈಟ್‌ಫೀಲ್ಡ್‌ ರೈಸಿಂಗ್ ಸಂಘಟನೆಯ ಸದಸ್ಯರು ಹಾಗೂ ಕೆ.ಕೆ. ಆಂಗ್ಲ ಮಾಧ್ಯಮ ಶಾಲೆಯವರು ಸಮೀಕ್ಷೆಗೆ ಅಗತ್ಯ ನೆರವು ನೀಡಿದರು.

‘ಉಭಯ ಕೆರೆಗಳ ಆಳ ಅರಿಯುವ ಉದ್ದೇಶದಿಂದ ಬಯೋಮೆಟ್ರಿಕ್ ಸಮೀಕ್ಷೆ ನಡೆಸಲಾಯಿತು. ಕೆರೆಗಳ ಹೂಳಿನ ಪ್ರಮಾಣದ ಬಗ್ಗೆ ವಿವರ ಲಭ್ಯವಾಯಿತು.  ಕೆರೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಇದು ದಿಕ್ಸೂಚಿಯಾಗಲಿದೆ’ ಎಂದು ರಾಮಚಂದ್ರ ತಿಳಿಸಿದರು.

ಈ ಹಿಂದೆ ವರ್ತೂರು ಕೆರೆಯ ಆಳ 30 ಅಡಿ ಇತ್ತು.  ಆದರೆ, ದಶಕಗಳಿಂದ ಕೆರೆಯ ಆಳ ಕುಗ್ಗುತ್ತಾ ಬಂದಿದೆ. ಕೆಲವು ಕಡೆಗಳಲ್ಲಿ ಆಳ 1 ಮೀಟರ್‌ನಷ್ಟು ಇದೆ. ಎರಡೂ ಕೆರೆಗಳಲ್ಲಿ ಒಟ್ಟು 73 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ಇದೆ. ಇದನ್ನು ಗೊಬ್ಬರಕ್ಕಾಗಿ, ಕಟ್ಟಡ ನಿರ್ಮಾಣಕ್ಕೆ ಇಟ್ಟಿಗೆ ನಿರ್ಮಾಣಕ್ಕೆ ಬಳಸಿಕೊಂಡರೆ ₹2 ಸಾವಿರ ಕೋಟಿ ಗಳಿಸಬಹುದು ಎಂದು ಅವರು ಮಾಹಿತಿ ನೀಡಿದರು.

ಕೆರೆಗಳ ಹಿನ್ನೆಲೆ: ಕೆಲವು ದಶಕಗಳ ಹಿಂದೆ ಈ ಕೆರೆಗಳ ನೀರನ್ನು ಜನರು ಕುಡಿಯಲು ಬಳಸುತ್ತಿದ್ದರು. ಸಾವಿರಾರು ಕೃಷಿಕರಿಗೆ ನೀರಿನ ಮೂಲಗಳಾಗಿದ್ದವು. ಸುತ್ತಮುತ್ತಲ ಗ್ರಾಮಗಳ ಕೃಷಿಕರು ಪ್ರತಿ ಎರಡು ವರ್ಷಕ್ಕೊಮ್ಮೆ ಕೆರೆಗಳ ಹೂಳು ತೆಗೆಯುತ್ತಿದ್ದರು. ಹೂಳನ್ನು ಗದ್ದೆಗಳಿಗೆ ಹಾಕುತ್ತಿದ್ದರು. ಅದು ಅವರಿಗೆ ಗೊಬ್ಬರದ ಮೂಲವಾಗಿತ್ತು.

1970ರಲ್ಲಿ ಕೊನೆಯ ಬಾರಿಗೆ ಹೂಳು ತೆಗೆಯಲಾಗಿತ್ತು. ನಗರೀಕರಣದ ಫಲವಾಗಿ ಕೆರೆ ಮಲೀನಗೊಳ್ಳುತ್ತಾ ಬಂತು. ಆಸುಪಾಸಿನಲ್ಲಿ ಕಟ್ಟಡಗಳು ತಲೆ ಎತ್ತಿದವು. ಕಳೆದ ವರ್ಷ ಬೆಳ್ಳಂದೂರು ಕೆರೆಯ ನೊರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

‘ಕೆರೆಯ ಹೂಳು ತೆಗೆಯುವಂತಹ ಅತ್ಯಾಧುನಿಕ ತಂತ್ರಜ್ಞಾನ ಲಭ್ಯ ಇದೆ. ಗುಣಮಟ್ಟದ ಕೆಲಸ ಮಾಡಿದರೆ ಫಲಿತಾಂಶ ಶೀಘ್ರದಲ್ಲಿ ಲಭ್ಯವಾಗಲಿದೆ. 24 ತಿಂಗಳಲ್ಲಿ ಕೆರೆಯ ಹೂಳನ್ನು ತೆಗೆಯಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೂಳು ತೆಗೆದರೆ ಏನು ಲಾಭ
*ಎರಡು ಕೆರೆಗಳ ಆಸುಪಾಸಿನಲ್ಲಿ ಅಂತರ್ಜಲದ ಮಟ್ಟ ಏರಲಿದೆ.
*ಕೆರೆಯ ಸುತ್ತಮುತ್ತಲಿನ ನೂರಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಹೂಳು ತೆಗೆದರೆ ಇವುಗಳಲ್ಲಿ ನೀರು ಉಕ್ಕಲಿದೆ. ಜಕ್ಕೂರು ಕೆರೆಯಲ್ಲೂ ಈ ಹಿಂದೆ  ಹೂಳು ತುಂಬಿಕೊಂಡಿತ್ತು. ಕೆಲವು ವರ್ಷಗಳ ಹಿಂದೆ ಸ್ಥಳೀಯರ ನೆರವಿನಿಂದ ಅಭಿವೃದ್ಧಿಪಡಿಸಲಾಯಿತು. ಈಗ ಕೆರೆಯ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಇದೆ.
*ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕೆ ಜಲಮಂಡಳಿ ಐದು ಹಂತದ ಯೋಜನೆ ರೂಪಿಸಿದೆ. ಇದಕ್ಕಾಗಿ ₹700ರಿಂದ ₹900 ಕೋಟಿ ಬೇಕಿದೆ ಎಂಬುದು ಮಂಡಳಿಯ ಲೆಕ್ಕಾಚಾರ. ಹೂಳಿನ ರೂಪದಲ್ಲಿರುವ ‘ನಿಧಿ’ಯನ್ನು ಬಳಸಿಕೊಂಡರೆ ಕೆರೆಯ ಪುನಶ್ಚೇತನಕ್ಕೆ ಸರ್ಕಾರದ ನೆರವಿಗೆ ಕಾಯಬೇಕಿಲ್ಲ.

*
ವರ್ತೂರು ಕೆರೆಯ ಆಳ ಕೆಲವು ಕಡೆಗಳಲ್ಲಿ 1 ಮೀಟರ್‌ ಮಾತ್ರ ಇದೆ
ಪ್ರೊ.ಟಿ.ವಿ. ರಾಮಚಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT