ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜುರಾಹೊ ಸಾಲಭಂಜಿಕೆ ಭಾರತಕ್ಕೆ ಹಸ್ತಾಂತರ

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಒಟ್ಟಾವ (ಐಎಎನ್‌ಎಸ್‌): ಖಜುರಾಹೊದ ಎಂಟುನೂರು ವರ್ಷಗಳಷ್ಟು ಹಳೆಯದಾದ ಸಾಲಭಂಜಿಕೆಯ ಶಿಲ್ಪವನ್ನು ಕೆನಡಾ ಪ್ರಧಾನಿ ಸ್ಟೀಫನ್‌ ಹಾರ್ಪರ್‌ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.

ಒಂದು ಕೈಯಲ್ಲಿ ಗಿಳಿಯನ್ನು ಹಿಡಿದಿರುವ ಶೃಂಗಾರ ರಸ ಉಕ್ಕಿಸುವಂತಿರುವ  ಈ  ಶಿಲ್ಪ ‘ನಾಯಿಕಾ’ ಎಂದು   ಹೆಸರಾಗಿದೆ. ಮರಳುಕಲ್ಲಿನ ಈ ಶಿಲ್ಪವನ್ನು  12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಖಜುರಾಹೊ ದೇವಾಲಯವನ್ನು ಅಲಂಕರಿಸಲು ಸಿದ್ಧಪಡಿಸಲಾಗಿದ್ದ ಶೃಂಗಾರ ಶಿಲ್ಪಗಳ ಪೈಕಿ ಇದೂ ಒಂದಾಗಿದೆ ಎಂದು ಕೆನಡಾ ಪತ್ರಿಕೆಯೊಂದು ಹೇಳಿದೆ.  2011ರಲ್ಲಿ ಈ ಶಿಲ್ಪ ಕೆನಡಾದ ಖಾಸಗಿ ವ್ಯಕ್ತಿಯೊಬ್ಬರ ಬಳಿ ಹೇಗೋ ಸೇರಿಕೊಂಡಿತ್ತು. ಅದಕ್ಕೆ ಯಾವುದೇ ದಾಖಲೆಗಳೂ ಇರಲಿಲ್ಲ. ಸಾಂಸ್ಕೃತಿಕ ಆಮದು, ರಫ್ತು ನೀತಿ ಅನ್ವಯ ಇದನ್ನು ಕೆನಡಾ ಸರ್ಕಾರ ವಶಪಡಿಸಿಕೊಂಡಿತ್ತು.

ಈ ಹಿಂದೆ ಪುರಾತತ್ವ ಸರ್ವೇಕ್ಷಣಾಲಯದ ಕೆಲ ಅಧಿಕಾರಿಗಳು ಕೆನಡಾಕ್ಕೆ ತೆರಳಿ ಅದನ್ನು ಭಾರತಕ್ಕೆ ವಾಪಸು ತರುವ ಕುರಿತು ಸಮಾಲೋಚನೆ ನಡೆಸಿದ್ದರು.

1970ರ ಯುನೆಸ್ಕೊ ಒಪ್ಪಂದದ ಅನ್ವಯ ಈ ಶಿಲ್ಪವನ್ನು ನಮಗೆ ಹಿಂದಿರುಗಿಸಲಾಗಿದೆ ಎಂದು ವಿದೇಶಾಂಗ ವಕ್ತಾರ ಸೈಯದ್‌ ಅಕ್ಬರುದ್ದೀನ್‌ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಜೈಪುರದ ಕಲಾವಿದ ವಿರೇಂದ್ರ ಬನ್ನು  ರಚಿಸಿದ ಸಿಖ್‌ ಧರ್ಮಗುರು ಗುರು ನಾನಕ್‌ ದೇವ್‌ ಇರುವ ಪುಟ್ಟ ಕಲಾಕೃತಿಯನ್ನು ಹಾರ್ಪರ್‌ ಅವರಿಗೆ ನೀಡಿದ್ದಾರೆ.

ಮೋದಿಗೆ ರಾಕ್‌ಸ್ಟಾರ್‌ ಸ್ವಾಗತ
ಟೊರಾಂಟೊ(ಐಎಎನ್‌ಎಸ್‌): ಇಲ್ಲಿನ ‘ರಿಕೊ ಕೊಲೆಸಂ’ನಲ್ಲಿ (ಬಯಲು ಸಭಾಂಗಣ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆನಡಾ ಪ್ರಧಾನಿ ಸ್ಟೀಫನ್‌ ಹಾರ್ಪರ್‌ ಆಯೋಜಿಸಿದ್ದ ಸ್ವಾಗತ ಸಮಾರಂಭ ರಾಕ್‌ಸ್ಟಾರ್‌ಗಳಿಗೆ ನೀಡುವ ಸ್ವಾಗತದಷ್ಟೇ ಭವ್ಯವಾಗಿತ್ತು.

ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರ ಜಯಕಾರಗಳ ನಡುವೆ ಬಾಲಿವುಡ್‌ ಗಾಯಕ ಸುಖ್ವಿಂದರ್‌ ಸಿಂಗ್‌ ಸಂಗೀತ ಕಾರ್ಯಕ್ರಮ ನೀಡಿದರು. ಶಾಮಕ್‌ ದವರ್‌ ತಂಡದವರು ಮನಸೆಳೆಯುವ ನೃತ್ಯ ಕಾರ್ಯಕ್ರಮ ನೀಡಿದರು.

ಮೋದಿ ಅವರು ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾತನಾಡುತ್ತಿದ್ದಂತೆಯೇ ಸಭಾಂಗಣದಲ್ಲಿ ನೆರೆದಿದ್ದ  ಭಾರತೀಯರು, ‘ಮೋದಿ.. ಮೋದಿ’ ಎಂದು ಘೋಷಣೆ ಕೂಗಿದರು.

ಕೆನಡಾ ಪ್ರಧಾನಿ ಸ್ಟೀಫನ್‌ ಹಾರ್ಪರ್‌ ಹಾಗೂ ಅವರ ಪತ್ನಿ ಮೋದಿ ಅವರ ಜತೆಗಿದ್ದರು. ಹಾರ್ಪರ್ ಪತ್ನಿ ಗಾಢ ನೀಲಿ ಬಣ್ಣದ ಸೀರೆ ಉಟ್ಟಿದ್ದರು.

ಕಾರ್ಯಕ್ರಮದ ಉದ್ದಕ್ಕೂ ಹಿಂದಿ ಭಾಷೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ಗಳಂತಹ ದೈತ್ಯ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಭಾರತೀಯ ತಂತ್ರಜ್ಞರ ಕೊಡುಗೆ ಹೆಚ್ಚಿರುವಾಗ ಭಾರತದಲ್ಲಿ ಇಂತಹ ಕಂಪೆನಿಗಳನ್ನು ಏಕೆ ಹುಟ್ಟುಹಾಕಲಾಗದು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT