ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ: ಪುನಶ್ಚೇತನಕ್ಕೆ ನಿರ್ಣಯ

Last Updated 19 ಏಪ್ರಿಲ್ 2015, 20:31 IST
ಅಕ್ಷರ ಗಾತ್ರ

ಬದನವಾಳು (ಮೈಸೂರು):  ಬದನವಾಳು ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಗಳನ್ನು ಸರ್ಕಾರವು ಪುನಶ್ಚೇತನಗೊಳಿಸಬೇಕು. ಈ ಕಾರ್ಯಕ್ಕಾಗಿ ಸರ್ಕಾರ ದೊಡ್ಡ ಮೊತ್ತದ ಅನುದಾನ ಮೀಸಲಿರಿಸಬೇಕು ಎಂದು ಭಾನುವಾರ ಇಲ್ಲಿ ನಡೆದ ‘ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ’ ನಿರ್ಣಯ ಕೈಗೊಂಡಿತು.

ಬದನವಾಳು ಖಾದಿ ಕೇಂದ್ರ 1922ಕ್ಕೂ ಹಿಂದೆಯೇ ಆರಂಭವಾಯಿತು. ಸ್ವಾತಂತ್ರ್ಯಪೂರ್ವದಲ್ಲಿ ಬದನವಾಳು ಹಳೆಯ ಮೈಸೂರು ಸಂಸ್ಥಾನದ ಖಾದಿ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿತ್ತು. ಕೋಲಾರ, ಚಿತ್ರದುರ್ಗ, ಹಾಸನ, ಶಿವಮೊಗ್ಗ ಸೇರಿದಂತೆ ಮೈಸೂರು ಸಂಸ್ಥಾನದ ಇತರೆಡೆಗಳಲ್ಲಿ ಇರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಗಳನ್ನು ಬದನವಾಳು ಉಪ ಶಾಖೆಗಳು ಎಂದೇ ಭಾವಿಸಲಾಗುತ್ತಿತ್ತು. ಬದನವಾಳು ಗ್ರಾಮಕ್ಕೆ ಮಹಾತ್ಮ ಗಾಂಧಿ 1927 ಮತ್ತು 1934ರಲ್ಲಿ ಎರಡು ಬಾರಿ ಭೇಟಿ ನೀಡಿ ಇಲ್ಲಿಯ ಚಟುವಟಿಕೆಗಳನ್ನು ನಿರ್ದೇಶಿಸಿದ್ದರು. ಆದರೆ, ಇಂದು ಇಡೀ ಕೇಂದ್ರವು ನೆಲಕ್ಕುರುಳಿದೆ. ಹೀಗಾಗಿ, ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಪುನರುಜ್ಜೀವನ ಅತ್ಯಗತ್ಯ ಎಂದು ಚಳವಳಿಯ ನೇತಾರ ಪ್ರಸನ್ನ ಮಂಡಿಸಿದ ನಿರ್ಣಯವನ್ನು ಚಪ್ಪಾಳೆ ತಟ್ಟಿ ಚಳವಳಿಗಾರರು ಅನುಮೋದಿಸಿದರು.

ಈ ಕೇಂದ್ರವನ್ನು ರಾಷ್ಟ್ರೀಯ ಸ್ಮಾರಕ ಎಂದು ಪರಿಗಣಿಸಬೇಕು. ವಾಧ್ರಾದಲ್ಲಿರುವ ಸೇವಾಗ್ರಾಮವನ್ನು ನಿರ್ವಹಿಸುತ್ತಿ
ರುವ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಬೇಕು. ವಿವಿಧ ರೀತಿಯ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಉನ್ನತಮಟ್ಟದ ಸಮಿತಿಯನ್ನು ಸರ್ಕಾರ ರಚಿಸಬೇಕು. ಸಮಿತಿಯ ಸಲಹೆ, ಸೂಚನೆಗಳನ್ನು ಆಧರಿಸಿ ರಾಜ್ಯದ ಇನ್ನಿತರ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಗಳನ್ನು ಪುನಶ್ಚೇತನಗೊಳಿಸಬೇಕು ಎಂದು ನಿರ್ಣಯದಲ್ಲಿ ಒತ್ತಿ ಹೇಳಲಾಯಿತು.

ಬದನವಾಳು ಸತ್ಯಾಗ್ರಹವು ರೂಪಿಸಿದ ಸುಸ್ಥಿರ ಬದುಕಿನ ಚಳವಳಿಯನ್ನು ಮುಂದುವರಿಸಬೇಕು. ತಾಲ್ಲೂಕು, ಗ್ರಾಮಗಳಿಗೆ ಇದನ್ನು ವಿಸ್ತರಿಸುವ ಅಗತ್ಯವಿದ್ದು, ಈ ಚಳವಳಿಯಲ್ಲಿ ತೊಡಗಿಕೊಂಡ ವಿವಿಧ ಸಂಘಟನೆಗಳು ಹಾಗೂ ಜನವರ್ಗಗಳ ಏಕತೆಯನ್ನು ಗಟ್ಟಿಗೊಳಿಸಬೇಕು ಎಂದು ಸಮ್ಮೇಳನ ನಿರ್ಣಯಿಸಿತು.

ಚಳವಳಿ ಎಂದರೆ ಆತ್ಮವಿಮರ್ಶೆ: ಪ್ರಸನ್ನ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ‘ಒಂದು ಚಳವಳಿ ಎಂದರೆ ಅದು ಕ್ರೋಧದ ನುಡಿಯಲ್ಲ. ಹಟ ಹಿಡಿಯವುದೂ ಅಲ್ಲ. ಸಂತೋಷದಿಂದಲೇ ಆತ್ಮವಿಮರ್ಶೆ ಮಾಡಿಕೊಳ್ಳುವುದು. ನನ್ನನ್ನು ಬದಲಿಸಿಕೊಳ್ಳುತ್ತಲೇ ಜಗತ್ತನ್ನು ಬದಲಿಸಬೇಕಾದ ಪ್ರಕ್ರಿಯೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT