ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನಿಗೆ ಮುಂಜಿ ಮಾಡಿಸಿ!

‘ಬೀcchi’ 103ನೇ ಜನ್ಮ ದಿನಾಚರಣೆ; ನೆನಪಿನ ಕಾರ್ಯಕ್ರಮದಲ್ಲಿ ಹಾಸ್ಯದ ಮೋಡಿ
Last Updated 26 ಏಪ್ರಿಲ್ 2015, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಗಣೇಶನ ಮೂರ್ತಿಗೆ ಬ್ರಾಹ್ಮಣರು ಜನಿವಾರ ಹಾಕಬೇಕೆಂದು, ಲಿಂಗಾಯತರು ಲಿಂಗವನ್ನು ಹಾಕಬೇ ಕೆಂದು ಎಂಬ ವಿವಾದ ಉಂಟಾಗಿತ್ತು. ಆಗ ಬೀchi ಅವರು, ‘ವಿಗ್ರಹ ಖರೀದಿಗೆ ಮುಸ್ಲಿಮರು ಹಣ ನೀಡಿದ್ದಾರೆ. ಹಾಗಾಗಿ ಮೊದಲು ಗಣೇಶನಿಗೆ ಮುಂಜಿ ಮಾಡಿಸಿ, ಆನಂತರ ಏನು ಬೇಕಾದರೂ ಹಾಕಿಕೊಳ್ಳಿ’ ಎಂದಿದ್ದರು.

ಬೀchi ಅವರ ಮಾತನ್ನು ನೆನಪಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದವರು ಹಾಸ್ಯ ಲೇಖಕ ಎನ್‌.ರಾಮನಾಥ.

ಹಾಸ್ಯ ತರಂಗ ಕಲಾಸಂಸ್ಥೆ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ‘ಬೀchi’ 103ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಬೀchi’ ಒಂದು ನೆನಪು – ‘ಹಾಸ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೀchi ಪ್ರತಿಯೊಂದು ವಿಷಯದಲ್ಲಿ ಹಾಸ್ಯವನ್ನು ಹುಡುಕುವ ಸ್ವಭಾವದವರಾಗಿದ್ದರು. ಅವರ ಹಾಸ್ಯದಲ್ಲಿ ಗಂಭೀರವಾಗಿ ಯೋಚಿಸಬೇಕಾದ ಹಲವಾರು ಅಂಶಗಳು ಇರುತ್ತಿದ್ದವು’ ಎಂದು ಹೇಳಿದರು.

‘ಜೀವನದಲ್ಲಿ ಕಂಡ ಕಷ್ಟ, ನೋವುಗಳನ್ನು ತಾಳಲಾರದೆ, ಎಲ್ಲವೂ ತ್ಯಜಿಸಿ ಆಶ್ರಮ ಸೇರಿದ ಹೆಣ್ಣಿಗೆ ಅಲ್ಲಿಯೂ ಹೆರಿಗೆ ನೋವು ತಪ್ಪಲಿಲ್ಲವೋ ತಿಮ್ಮ’ ಎಂಬ ಹಾಸ್ಯದ ಮೂಲಕ ಮಠಗಳಲ್ಲಿ ಸನ್ಯಾಸಿ ಎಂಬ ಮುಖವಾಡ ಧರಿಸಿ ಸ್ವಾಮೀಜಿ ಗಳು ಮಾಡುವ ಲೀಲೆಗಳ ಕುರಿತು ವ್ಯಂಗ್ಯ ವಾಗಿ ತಿಳಿಸಿದ್ದರು’ ಎಂದು ಹೇಳಿದರು.

‘ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬೀchi ಭಾಷಣದ ಮಧ್ಯೆ ಪದೇ ಪದೇ  ನೀರು ಕುಡಿಯುತ್ತಿದ್ದರು. ಸಭಿಕರೊಬ್ಬರು  ರೀ ಸ್ವಾಮಿ ಮಾತಾಡಿ ಅಂದ್ರೆ  ಬರೀ ನೀರು ಕುಡಿತಿದಿರಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಬೀchi  ಆಯ್ತು ಬೀಡೋ ತಮ್ಮ ನಿಮ್ಮ ಊರಿನ ನೀರನ್ನು ಇಲ್ಲೇ ಬಿಟ್ಟು ಹೋಗ್ತೀನಿ ಎಂದು ಉತ್ತರಿಸಿದ್ದರು’ ಎಂದರು.

ನಂತರ ‘ಬೀchi’ ಅವರ ಮೊಮ್ಮಗ ಉಲ್ಲಾಸ್‌ ರಾಯಸಂ ಮಾತನಾಡಿ, ‘ಹಲ್ಲು ಕಿರಿಯುವ ಹಾಸ್ಯಕ್ಕಿಂತ, ಮನ ಮುಟ್ಟುವ ಹಾಸ್ಯ ಒಳಿತು. ಹಾಸ್ಯ ಸಮಸ್ಯೆಗಳನ್ನು ಮರೆಸುವ ಮದ್ದಾಗಬೇಕು ಎಂಬುದು ತಾತನ ನಿಲುವಾಗಿತ್ತು’ ಎಂದು ಹೇಳಿದರು.

‘ಬೀchi ಮೊದಲಿಗೆ ಪುಸ್ತಕಗಳನ್ನು ಓದುವುದು ಅವಮಾನ ಎಂದು ಭಾವಿಸಿ, ಕನ್ನಡ ಪುಸ್ತಕಗಳನ್ನು ಓದಲು ಹಿಂಜರಿಯುತ್ತಿದ್ದರು. ಇಂಗ್ಲಿಷ್‌ ಬರದವರು ಮಾತ್ರ ಕನ್ನಡ ಪುಸ್ತಕಗಳನ್ನು ಓದುತ್ತಾರೆ ಎಂದು ತಾತ ತಿಳಿದ್ದರು’ ಎಂದರು.

‘ತಾತನನ್ನು ಕನ್ನಡ ಸಾಹಿತ್ಯದ ಕಡೆ ಮುಖ ಮಾಡುವಂತೆ ಮಾಡಿದ್ದು, ಅನಕೃ ಅವರ ಸಂಧ್ಯಾರಾಗ ಪುಸ್ತಕ. ಅದನ್ನು ಓದಿದ ನಂತರ ಬರೆದರೆ ಕನ್ನಡದಲ್ಲೇ ಬರೆಯಬೇಕೆಂದು ತಾತ ಸಂಕಲ್ಪ ಮಾಡಿದರು. ಆ ಪುಸ್ತಕವನ್ನು ತಾತನಿಗೆ ನೀಡಿದ್ದು ನಮ್ಮ ಅಜ್ಜಿ. ಹೀಗಾಗಿ ಬಳ್ಳಾರಿ ಭೀಮಸೇನರಾವ್‌ ಅವರು ಬೀchi ಆಗಲು  ಅಜ್ಜಿಯೇ ಕಾರಣರಾದರು’ ಎಂದು ತಿಳಿಸಿದರು.

ಹಾಸ್ಯ ತರಂಗ ಕಲಾ ಸಂಸ್ಥೆ ಅಧ್ಯಕ್ಷ ಎಸ್‌.ಎಸ್‌.ಪಡಶೆಟ್ಟಿ ಮಾತನಾಡಿ ‘ಒಮ್ಮೆ ಬಳ್ಳಾರಿಯಲ್ಲಿ ಭಾಷಣದ ವೇಳೆಯಲ್ಲಿ ಸಭಿಕರೊಬ್ಬರು ನೀವು ಜಾತಿ ವ್ಯವಸ್ಥೆಯ ವಿರುದ್ಧವಾಗಿ ಮಾತನಾಡುತ್ತೀರಿ. ಆದರೆ, ನೀವು ಜನಿವಾರ ಧರಿಸುತ್ತಿರಾ.. ಎಂದು ಕೇಳಿದ ಪ್ರಶ್ನೆಗೆ ಬಿchi, ಶರ್ಟ್‌ ಮತ್ತು ಬನಿಯನ್‌ ಬಿಚ್ಚಿ ತಮ್ಮ ಮಾತುಗಳನ್ನು ಮುಂದುವರಿಸಿದರು. ಭಾಷಣದ ಕೊನೆಯಲ್ಲಿ ನೀನು ಪ್ರಶ್ನೆ ಕೇಳಿದ್ದು, ಒಳ್ಳೆಯದೇ ಆಯಿತು ಸೆಕೆಗೆ ತಾಳಲಾಗುತ್ತಿರಲಿಲ್ಲ.  ನೀನು ಪ್ರಶ್ನೆ ಕೇಳಿ ಮೈ ತಂಪು ಮಾಡಿದೆ ಎಂದು ಚಟಾಕಿ ಹಾರಿಸಿದ್ದರು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಗುರುರಾಜ ಪ್ರಕಾಶನದ ತೆಲುಗು ಅನುವಾದಿತ ‘ಕಥೆಗಾರನ ಕಥೆ’ ಹಾಗೂ ‘ನಗುವ ದೀಪ’ ಪುಸ್ತಕಗಳು ಬಿಡುಗಡೆಗೊಂಡವು.

ಊರು ಮೇಯುವ ಎಂಎಲ್‌ಎ!
‘ಸುಧಾ ವಾರಪತ್ರಿಕೆಯಲ್ಲಿ ‘ನೀವು ಕೇಳಿದಿರಿ’ ಅಂಕಣದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಬೀchi ಅವರಿಗೆ ಎಂಎ ಮತ್ತು ಎಂಎಲ್‌ಎ ಗಳ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರ, ‘ಎಮ್ಮೆ ನಿಂತಲ್ಲೇ ಮೇಯುತ್ತದೆ, ಎಂಎಲ್‌ಎ ಊರೆಲ್ಲ ಮೇಯುತ್ತಾನೆ’ ಎಂದಿದ್ದರು. ಇಲ್ಲಿ ರಾಜಕಾರಣಿಗಳು ಮಾಡುವ ಭ್ರಷ್ಟಾಚಾರದ ಕುರಿತು ಅವರು ಸೂಕ್ಷ್ಮವಾಗಿ ಹೇಳಿದ್ದರು’ ಎಂದು ರಾಮನಾಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT