ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ: ‘ಹೊಸ’ ಆವೃತ್ತಿಗಳು

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಗಾಂಧೀಜಿ, ದೆಹಲಿಯ ರಾಜಕೀಯ ವಲಯದಲ್ಲಿ ಮತ್ತೆ ಮತ್ತೆ ‘ಕಾಣಿಸಿಕೊಳ್ಳು’ತ್ತಿದ್ದಾರೆ. ಗಾಂಧಿ ಕನ್ನಡಕ  ಪ್ರಧಾನಿ ಮೋದಿ ಅವರಿಗೆ ಗಾಂಧಿ ಜಯಂತಿಯಂದು ‘ಸ್ವಚ್ಛ ಭಾರತ ಅಭಿಯಾನ’ ಆರಂಭಿಸುವಾಗ ಸಂಕೇತವಾಯಿತು. ಬಿಜೆಪಿ ಜತೆ ನಂಟು ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿಯಾದ ‘ಆರ್ಗನೈಸರ್’ ವಾರಪತ್ರಿಕೆಯ ಮುಖಪುಟದಲ್ಲಿ ಪೊರಕೆ ಹಾಗೂ ಬುಟ್ಟಿಯೊಂದನ್ನು ಹಿಡಿದುಕೊಂಡು ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಚಿತ್ರ ಪ್ರಕಟವಾಯಿತು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದಾಗ, ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡಿದ್ದು ಗುಜರಾತ್‌ನ ಗಾಂಧೀಜಿ ಆಶ್ರಮದಲ್ಲಿ. ಬಳಿಕ ಅಮೆರಿಕಕ್ಕೆ ತೆರಳಿದ ಮೋದಿ, ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಉಡುಗೊರೆಯಾಗಿ ಗಾಂಧೀಜಿ ಅನುವಾದಿಸಿದ್ದ ‘ಭಗವದ್ಗೀತೆ’ ಗ್ರಂಥದ ಪ್ರತಿಯೊಂದನ್ನು ನೀಡಿದರು.

ಮಹಾನ್ ನೇತಾರ ಮಹಾತ್ಮ ಗಾಂಧೀಜಿ ಭಾರತದ ಹೆಮ್ಮೆಯ ವ್ಯಕ್ತಿ. ಕಳೆದ ಶತಮಾನದವರೆಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸಾಂಕೇತಿಕ ನಾಯಕರಂತೆ ಅವರು ಇದ್ದರು. ಈ ವರ್ಷ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಕೆಳಗಿಳಿಸಿ ಮೋದಿ, ತಾವು ಅಧಿಕಾರದ ಚುಕ್ಕಾಣಿ ಹಿಡಿದರು. ಗಾಂಧೀಜಿಯ ದೃಷ್ಟಿ ಮೂಲಭೂತವಾಗಿ ಬಂಡವಾಳಶಾಹಿ ವಿರೋಧಿಯಾಗಿತ್ತು. ಗ್ರಾಮಗಳ ಅಭಿವೃದ್ಧಿಯಿಂದಲೇ ಪ್ರಗತಿ ಸಾಧ್ಯ ಎಂದು ಅವರು ನಂಬಿದ್ದರು. ಕೈಗಾರಿಕೀಕರಣವನ್ನು ‘ಮಾನವ ಕುಲದ ಶಾಪ’ ಎಂದು ಅವರು ಟೀಕಿಸುತ್ತಿದ್ದರು. ಭಾರತದ ಮುಸ್ಲಿಮರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದ ಗಾಂಧೀಜಿ, ಈ ಕಾರಣದಿಂದಾಗಿಯೇ ಯಾವಾಗಲೂ ಬಲಪಂಥೀಯರಿಂದ ಟೀಕೆಗೆ ಒಳಗಾಗುತ್ತಿದ್ದರು.

ನರೇಂದ್ರ ಮೋದಿಯವರು ಗಾಂಧೀಜಿ ಕುರಿತು ಸದಾ ಗೌರವಯುತವಾಗಿ ಮಾತಾಡುತ್ತಾರಾದರೂ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಓಲೈಸುವ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ೨೦೦೨ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಮೋದಿಯವರು ಉಗ್ರ ಟೀಕೆ ಎದುರಿಸಬೇಕಾಯಿತು. ೧,೨೦೦ ಜನರ ಕಗ್ಗೊಲೆಗೆ ಕಾರಣವಾದ ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯವೂ ಅವರನ್ನು ತಪ್ಪಿತಸ್ಥ ಎಂದು ಘೋಷಿಸಲಿಲ್ಲ. ಈಗ ಮೋದಿಯವರು, ಗಾಂಧೀಜಿ ಹೊಸ ಆವೃತ್ತಿಯನ್ನು  ಅಪ್ಪಿಕೊಂಡಿದ್ದಾರೆ. ಗಾಂಧೀಜಿ ಎಂದರೆ ಮೊತ್ತಮೊದಲಿಗೆ ನೆನಪಿಗೆ ಬರುವುದು ಅವರೊಬ್ಬ ನೈರ್ಮಲ್ಯದ ಪ್ರತಿಪಾದಕ. ತಮ್ಮ ಶೌಚಾಲಯವನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳುತ್ತಿದ್ದವರು ಗಾಂಧೀಜಿ. ಗಾಂಧೀಜಿಯ ಚಿಂತನೆಗಳನ್ನು ಮೋದಿಯವರು ಈಗ ಹೆಚ್ಚೆ ಹೆಚ್ಚು ಪ್ರಚುರಪಡಿಸುತ್ತಿದ್ದಾರೆ. ಆಮದು ಮಾಡಿಕೊಳ್ಳುವ ವಸ್ತ್ರಕ್ಕಿಂತ ಸ್ವದೇಶಿ ಬಟ್ಟೆ ಧರಿಸುವಂತೆ ಗ್ರಾಹಕರನ್ನು ಪ್ರೇರೇಪಿಸುತ್ತಿದ್ದಾರೆ.

‘ಭಾರತದ ಭವಿಷ್ಯ ಇರುವುದು ಹಳ್ಳಿಗಳಲ್ಲಿ’ ಎಂದು ಗಾಂಧೀಜಿ ಪದೇ ಪದೇ ಹೇಳುತ್ತಿದ್ದರು. ಈ ತಿಂಗಳು ಅಮೆರಿಕಕ್ಕೆ ತೆರಳಿ, ನ್ಯೂಯಾರ್ಕ್‌ನಲ್ಲಿ ನೆರೆದಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಗಾಂಧೀಜಿ ಅಂದರೆ ವಿದೇಶಕ್ಕೆ ಹೋಗಿ, ಬ್ಯಾರಿಸ್ಟರ್ ಆಗಿ, ಅವಕಾಶವಿದ್ದರೂ ಅವನ್ನೆಲ್ಲ ಬಿಟ್ಟು ಬಂದು ಭಾರತ ದೇಶದ ಸೇವೆಗೆ ನಿಂತ ಮಹಾನ್ ಸಂತ’ ಎಂದು ಬಣ್ಣಿಸಿದ್ದರು.

ಗಾಂಧೀಜಿಯ ಹಿರಿಯ ಮೊಮ್ಮಗ ತುಷಾರ್ ಗಾಂಧಿ ಇದನ್ನೆಲ್ಲಾ ಗಮನಿಸಿದ್ದಾರೆ. ಅವರು ವಿಶ್ಲೇಷಿಸುವ ಹಾಗೆ, ‘ಗುಜರಾತ್‌ನಲ್ಲಿ ಆಡಳಿತ ನಡೆಸಿದ ೧೨ ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರಲ್ಲಿ ಯಾವತ್ತೂ ಗಾಂಧೀಜಿ ಬಗ್ಗೆ ಇಷ್ಟೊಂದು ಉತ್ಸಾಹ ಕಾಣಿಸಿರಲಿಲ್ಲ. ಪ್ರಧಾನಿಯಾದ ಬಳಿಕ ನೂರು ದಿನಗಳ ಅವಧಿಯಲ್ಲಿ ಅವರು ಬಾಪು ಅವರಿಂದ ಮತ್ತೆ ಮತ್ತೆ ಮಾರ್ಗದರ್ಶನ ಪಡೆಯುತ್ತಿರುವಂತೆ ಭಾಸವಾಗುತ್ತಿದೆ’ ಎನ್ನುತ್ತಾರೆ ತುಷಾರ್ ಗಾಂಧಿ. ಸದ್ಯದ ಮಟ್ಟಿಗೆ ಹೇಳುವುದಾದರೆ ಮೋದಿಯವರ ನಡವಳಿಕೆಯಲ್ಲಿ ನಮ್ರತೆ ಕಾಣಿಸುತ್ತಿದೆ ಎಂದೂ ತುಷಾರ್ ಹೇಳುತ್ತಾರೆ.

ಪ್ರಧಾನಿ ಪಟ್ಟಕ್ಕೇರುವ ಉತ್ಸಾಹದಲ್ಲಿದ್ದ ಮೋದಿಯವರು, ಅದಕ್ಕಿಂತ ಮೊದಲು ಹಿಂದೂ ಬಲಪಂಥೀಯ ಪ್ರಭಾವದ ಆಚೆಯೂ ರಾಜಕೀಯವಾಗಿ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದು ಉಲ್ಲೇಖನೀಯ. ಸ್ವಾತಂತ್ರ್ಯಯೋಧ, ಉಕ್ಕಿನ ಮನುಷ್ಯ ಹಾಗೂ ಮಾಜಿ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೫೯೭ ಅಡಿ ಎತ್ತರದ ಪುತ್ಥಳಿ ಸ್ಥಾಪನೆ ಅಂಥದ್ದೊಂದು ಪ್ರಯತ್ನ. ಇದು ಗಿನ್ನೆಸ್ ದಾಖಲೆಯೂ ಆಗಲಿದೆ.

ಸರ್ದಾರ್ ಪಟೇಲ್ ಅವರೊಂದಿಗೆ ಮೋದಿ ಯಾಕೆ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ನಿಗೂಢ ಸಂಗತಿ ಈವರೆಗೆ ಬಯಲಾಗಿಲ್ಲ. ಹಾಗೆ ನೋಡಿದರೆ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಪಟೇಲ್  ಪ್ರತಿಸ್ಪರ್ಧಿ ಆಗಿದ್ದರು. ಜವಹರಲಾಲ್ ನೆಹರೂ ಅವರನ್ನು ‘ಚಾಚಾ ನೆಹರೂ’ ಅಥವಾ ‘ಅಂಕಲ್ ನೆಹರೂ’ ಎಂದು ಕರೆದ ಮೋದಿ, ಅವರ ಜನ್ಮದಿನ ನವೆಂಬರ್ ೧೪ ಅನ್ನು ರಾಷ್ಟ್ರವ್ಯಾಪಿಯಾಗಿ ನೈರ್ಮಲ್ಯ ಹಾಗೂ ಶುದ್ಧತೆ ಆಚರಣೆಯ ದಿನವೆಂದು ಆಚರಿಸುವಂತೆ ಘೋಷಣೆ ಮಾಡಿದ್ದಾರೆ. ‘ನೆಹರೂ ಅವರನ್ನು ಒಳಗೆ ಹಾಕಿಕೊಳ್ಳುವುದರ ಮೂಲಕ ಮೋದಿ ಕಾಂಗ್ರೆಸ್‌ನ ‘ಹೀರೋ’ಗಳನ್ನೆಲ್ಲ ತಮ್ಮ ಬುಟ್ಟಿಗೆ ಹಾಕಿಕೊಂಡಂತಾಗಿದೆ’ ಎಂದು ಚಿಂತಕ ಶಿವ ವಿಶ್ವನಾಥನ್ ವಿಶ್ಲೇಷಿಸಿದ್ದಾರೆ. ‘ಈಗ ಕಾಂಗ್ರೆಸ್ ಬಳಿ ಉಳಿದುಕೊಂಡಿರುವುದು ಕೆಲವೇ ಕೆಲವು ಮಂದಿ. ಇದು ಬೌದ್ಧಿಕ ಆಸ್ತಿ ಕಳವಿನಂತೆ ಅಲ್ಲವೇ?’ ಎಂದೂ ಅವರು ಪ್ರಶ್ನಿಸಿದ್ದಾರೆ.

ಇದನ್ನು ಮೋದಿಯವರ ಸೈದ್ಧಾಂತಿಕ ಬದಲಾವಣೆ ಎಂದು ಭಾವಿಸಬಹುದೇ? ಆ ಬಗ್ಗೆ ನಿಖರವಾಗಿ ಏನನ್ನೂ ಹೇಳುವಂತಿಲ್ಲ. ಭಾರತದ ಇತ್ತೀಚಿನ ನಾಯಕರ ಪೈಕಿ ಮೋದಿಯವರದು ಅತಿ ಜಾಣ್ಮೆಯ ನಡೆ. ಒಂದೇ ಸಲಕ್ಕೆ ಎಲ್ಲ ದಿಕ್ಕುಗಳಿಗೂ ಸಂಕೇತಗಳನ್ನು ಪ್ರಸಾರ ಮಾಡುವ ಬುದ್ಧಿವಂತಿಕೆ ಅವರದು. ನೇಪಾಳಕ್ಕೆ ಎರಡು ದಿನಗಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ, ಅವರು ಅಲ್ಲಿನ ಪ್ರಖ್ಯಾತ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ಹೋದರು. ಅಮೆರಿಕ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ನವರಾತ್ರಿ ಉಪವಾಸ ವ್ರತ ಆಚರಿಸುತ್ತಿದ್ದುದರಿಂದ ಬಿಸಿನೀರಿನ ಹೊರತಾಗಿ ಅವರು ಏನನ್ನೂ ಸೇವಿಸಲಿಲ್ಲ.

ಗಾಂಧೀಜಿಗೆ ಕನಸು ಕಾಣುತ್ತಿದ್ದ ಹೆಚ್ಚು ಉಗ್ರವಲ್ಲದ ‘ಕೋಮಲ’ ಸ್ವಭಾವದ  ಹಿಂದೂಧರ್ಮ ಹಾಗೂ ಭಾರತೀಯ ಮುಸ್ಲಿಮರ ಬಗೆಗಿನ ಪ್ರೇಮ ಇತ್ಯಾದಿಗಳು ವರ್ತಮಾನದಲ್ಲಿ ಪಕ್ಕಕ್ಕೆ ಸರಿದಿದ್ದು ಇದೂ ಅಸಹಜವೇನಲ್ಲ ಎನ್ನುತ್ತಾರೆ ಬ್ರೌನ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ, ಆಶುತೋಷ್‌ ವಾರ್ಶ್ನೆ. ‘ಕಾಂಗ್ರೆಸ್ ಸೇರಿದಂತೆ ಯಾರೊಬ್ಬರೂ ಗಾಂಧೀಜಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ. ‘ಗಾಂಧೀಜಿ ರಾಷ್ಟ್ರಪಿತ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಅವರೊಬ್ಬ ಕಠಿಣ ತಂದೆ’ ಎನ್ನುತ್ತಾರೆ ವಾರ್ಶ್ನೆ.

ಮೋದಿಯವರು ಪ್ರತಿಪಾದಿಸುವ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಯಾರದೂ ತಕರಾರು ಇರಲಿಕ್ಕಿಲ್ಲ. ಆದರೆ ಗಾಂಧೀಜಿ ಮೊಮ್ಮಗ ರಾಜಮೋಹನ ಗಾಂಧಿ ಅವರು ಹೇಳುವ ಹಾಗೆ, ‘ಅದು ಗಾಂಧೀಜಿ ಚಿಂತನೆಗಳ ಅಪೂರ್ಣ ಪ್ರತೀಕವಷ್ಟೇ ಆಗಿದೆ’.

‘ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳಲು ಗಾಂಧೀಜಿ ಎಲ್ಲರಿಗೂ ಸುಲಭವಾಗಿ ಸಿಗುವಂಥವರು. ನನ್ನ ಆಕ್ಷೇಪದಿಂದ ಏನೂ ಬದಲಾಗಲಿಕ್ಕಿಲ್ಲ. ಆದರೆ ಗಾಂಧೀಜಿಯನ್ನು ದುರ್ಬಳಕೆ ಮಾಡಿಕೊಳ್ಳುವವರು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸುತ್ತಾರೆ’ ಎಂದು ರಾಜಮೋಹನ ಗಾಂಧಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT