ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡರ ಕೋಟೆ ‘ಕೈ’ ವಶ ಅನುಮಾನ

Last Updated 14 ಏಪ್ರಿಲ್ 2014, 15:55 IST
ಅಕ್ಷರ ಗಾತ್ರ

ಹಾಸನ: ಮಾಜಿ ಪ್ರಧಾನಿಯೊಬ್ಬರು ಸ್ಪರ್ಧಿಸಿ­ರುವ ‘ದೇಶದ ಏಕಮೇವ ಕ್ಷೇತ್ರ’ ಹಾಸನ. ವ್ಯಕ್ತಿ ಹಾಗೂ ಪಕ್ಷಗಳ ಪ್ರತಿಷ್ಠೆಯಿಂದಾಗಿ ಗಮನ ಸೆಳೆದಿರುವ ಈ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಜೆಡಿಎಸ್–ಕಾಂಗ್ರೆಸ್ ನಡುವೆಯೇ. ಹಾಲಿ ಸಂಸದ ಎಚ್.ಡಿ. ದೇವೇಗೌಡ ಅವರು ೨೦೦೯ರ ಚುನಾವಣೆಯಲ್ಲಿ ೨.೯೧ ಲಕ್ಷ ಮತಗಳ ಭಾರಿ ಅಂತರದಿಂದ ಜಯ ಸಾಧಿಸಿ, ಬೀಗಿದ್ದರು. ಈಗ ಅವರು ಮರುಆಯ್ಕೆ ಬಯಸಿ ಐದನೇ ಬಾರಿಗೆ ‘ಹಾಸನ ಅಖಾಡ’ಕ್ಕೆ ಧುಮುಕಿದ್ದಾರೆ.

ಈ ಕ್ಷೇತ್ರದಿಂದ ೩ ಬಾರಿ ಗೆದ್ದು, ಒಂದು ಬಾರಿ ಸೋಲಿನ ರುಚಿ ಕಂಡಿರುವ ೮೨ ವರ್ಷ ವಯಸ್ಸಿನ ದೇವೇಗೌಡರಿಗೆ, ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಕಾಂಗ್ರೆಸ್‌ ಪಕ್ಷದ ಎದುರಾಳಿ. ಇವರಿಬ್ಬರ ನಡುವೆ ‘ಒಲ್ಲದ ಮನಸ್ಸಿ­ನಿಂದ’ ಹಾಸನಕ್ಕೆ ಬಂದಿರುವ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್‌ ಬಿಜೆಪಿ ಹುರಿಯಾಳು. ಕಣದಲ್ಲಿ ಕರುನಾಡ ಪಕ್ಷದ ಎಚ್.ಡಿ. ರೇವಣ್ಣ ಎಂಬ ಹೆಸರಿನ ವ್ಯಕ್ತಿಯೂ ಸೇರಿದಂತೆ, ಬಿಎಸ್‌ಪಿಯ ಎ.ಪಿ. ಅಹಮದ್, ಆಮ್‌ ಆದ್ಮಿ ಪಕ್ಷದ ಸಂತೋಷ್ ಮೋಹನ್,  ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಪಕ್ಷದ ಮಂಜುನಾಥ್ ಒಳಗೊಂಡಂತೆ ೧೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಕ್ಷೇತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದೇವೇಗೌಡ ಅವರ ಜಿದ್ದಾಜಿದ್ದಿನ ಕ್ಷೇತ್ರವಾಗಿಯೂ ಮತದಾರರು ನೋಡುತ್ತಿದ್ದಾರೆ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ‘ನಮ್ಮ ಮುಂದಿನ ಗುರಿ ಹಾಸನ’ ಎಂದು ಸಿದ್ದರಾಮಯ್ಯ ಗುಡು­ಗಿದ್ದರು. ಅಂದಿನಿಂದಲೇ ಹಾಸನದಲ್ಲಿ ಚುನಾವಣೆಯ ಬಿಸಿಗಾಳಿ ಬೀಸಲು ಆರಂಭವಾಗಿತ್ತು.

ಆಕಾಂಕ್ಷಿಗಳು ಸಾಕಷ್ಟು ಇದ್ದರೂ, ಒಕ್ಕಲಿಗ ಸಮು­ದಾಯದ ಎ. ಮಂಜು ಅವರಿಗೇ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ ಗೌಡರ ವಿರುದ್ಧ ತೊಡೆ ತಟ್ಟಿ ಸಡ್ಡು ಹೊಡೆದಿದೆ. ಒಡೆದು ಚೂರಾಗಿದ್ದ ಜಿಲ್ಲಾ ಕಾಂಗ್ರೆಸ್‌, ಮಂಜು ಹೆಸರು ಘೋಷಣೆ­ಯಾಗುತ್ತಿದ್ದಂತೆ ಒಗ್ಗಟ್ಟಾಯಿತು.

ಸ್ವತಃ ಸಿದ್ದರಾಮಯ್ಯ ಹಾಸನ, ಕಡೂರು, ಅರಸೀಕೆರೆ ಹಾಗೂ ಹೊಳೆನರ­ಸೀಪುರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ದೇವೇಗೌಡರ ಕುಟುಂಬದ ಎದುರಾಳಿ ಎಂದೇ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಕ್ಷೇತ್ರದ ಉಸ್ತುವಾರಿ ನೀಡುವ ಮೂಲಕ ‘ಗೌಡರ ಕುಟುಂಬ’ದ ಗಂಟಲಿಗೆ ಕಾಂಗ್ರೆಸ್‌ ಬಿಸಿತುಪ್ಪ ಸುರಿದಿದೆ. ಸಿಂಹವನ್ನು ಅದರ ಗುಹೆಯಲ್ಲೇ ಹಣಿಯುವ ಹಟಕ್ಕೆ ಬಿದ್ದಂತಿರುವ ಕಾಂಗ್ರೆಸ್‌, ಮತದಾ­ರರನ್ನು ಓಲೈಸುವ ಯಾವ ಅವಕಾಶ­ವನ್ನೂ ಬಿಟ್ಟುಕೊಡುತ್ತಿಲ್ಲ.

ಸಮುದಾಯಗಳ ಓಲೈಕೆ: ಕ್ಷೇತ್ರದಲ್ಲಿ ಐದು ಲಕ್ಷದಷ್ಟಿ­ರುವ ಒಕ್ಕಲಿಗ ಮತದಾರರೇ ದೇವೇಗೌಡ ಅವರ ದೊಡ್ಡ ಶಕ್ತಿ. ಮಂಜು ಅವರೂ ಅದೇ ಸಮುದಾಯ­ದವರಾಗಿದ್ದರೂ, ಅವರು ದೇವೇಗೌಡರ ಎತ್ತರಕ್ಕೆ ತಲುಪಿಲ್ಲ ಎಂಬ ಭಾವನೆ ಇದೆ. ಆದ್ದರಿಂದ ಒಕ್ಕಲಿಗರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಬೆಂಬಲಿಸುವುದು ಅನು­ಮಾನ.

ಈಚಿನವರೆಗೂ ಜೆಡಿಎಸ್‌ ಬೆಂಬಲಿಸುತ್ತಿದ್ದ, ಅಂದಾಜು ೮೦ ಸಾವಿರದಷ್ಟಿರುವ ಮುಸ್ಲಿಂ ಮತ­ದಾರರು ಸ್ವಲ್ಪಮಟ್ಟಿಗೆ ಬದಲಾಗಿದ್ದಾರೆ. ಹೆಚ್ಚಿನವರು ನಮ್ಮ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಮುಖಂಡರದ್ದು. ಕುರುಬ ಸಮುದಾಯದ ಮತಗಳೂ ಸುಮಾರು ಎರಡೂವರೆ ಲಕ್ಷದಷ್ಟಿವೆ. ಸಿದ್ದರಾಮಯ್ಯ ‘ಫ್ಯಾಕ್ಟರ್‌’ನಿಂದಾಗಿ ಈ ಮತಗಳು ನಮಗೇ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ನವರಿದ್ದಾರೆ.

ಲಿಂಗಾಯತರಿಗೆ ಗಾಳ: ಬಿಜೆಪಿಯನ್ನು ಕಟ್ಟಿ ಬೆಳೆಸಿ­ದವರು ಬಿ.ಬಿ. ಶಿವಪ್ಪ. ಇಡೀ ಲಿಂಗಾಯತ ಸಮು­ದಾಯ ಅಂದಿನಿಂದಲೇ ಬಿಜೆಪಿ ಜೊತೆ ಗುರುತಿಸಿ­ಕೊಂಡಿದೆ. ಮೋದಿ ಅಲೆ ಇರುವುದರಿಂದ ಈ ಬಾರಿ ಶಿವಪ್ಪ ಅವರಿಗೆ ಟಿಕೆಟ್‌ ನೀಡಬೇಕು ಎಂದು ಸಮುದಾಯದ ಮುಖಂಡರು ಬಿಜೆಪಿ ಹೈಕಮಾಂಡ್‌ ಅನ್ನು ಒತ್ತಾಯಿಸಿದ್ದರು. ಶಿವಪ್ಪ ಅವರಿಗೆ ‘ವಯಸ್ಸಾಗಿದೆ’ ಎಂಬ ನೆಪ ಹೇಳಿ ವಿಜಯಶಂಕರ್‌ ಅವರನ್ನು ನೆರೆಯ ಮೈಸೂರು ಕ್ಷೇತ್ರದಿಂದ ‘ಬಲವಂತ’ವಾಗಿ ತಂದು ನಿಲ್ಲಿಸಿದೆ. ಇದರಿಂದಾಗಿ ಈ ಬಾರಿ ಲಿಂಗಾಯತ ಮತಗಳು ವಿಭಜನೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ.

ಮಂಜು ನಾಮಪತ್ರ ಸಲ್ಲಿಕೆಗೂ ಒಂದೆರಡು ದಿನಗಳ ಹಿಂದೆ ಶಿವಪ್ಪ ಅವರ ಮನೆಗೆ ಹೋಗಿ ಬೆಂಬಲ ಯಾಚಿಸಿದ್ದರು. ವಿವಿಧ ಕಾರಣಗಳಿಗೆ ಈ ಸಮುದಾಯ ದೇವೇಗೌಡರ ಮೇಲೆ ಮುನಿಸಿಕೊಂಡಿದ್ದು, ಆ ಮತಗಳು ಕಾಂಗ್ರೆಸ್‌ಗೆ ಬರುತ್ತವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಈ ಕಾರಣಕ್ಕಾಗಿಯೇ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಲಿಂಗಾಯತ ಸಮಾವೇಶ­ಗಳನ್ನೂ ಆಯೋಜಿಸಿ ಮನ ಒಲಿಸುವ ಕೆಲಸ ಮಾಡಿವೆ. ಏನೇ ಇದ್ದರೂ ಈ ಮತಗಳು ಒಂದೇ ಕಡೆಗೆ ವಾಲುವ ಲಕ್ಷಣ ಕಾಣಿಸುತ್ತಿಲ್ಲ. ದೇವೇಗೌಡರಿಗೆ ವಿರೋಧ ಇದ್ದರೂ ಈ ಸಮುದಾಯ­ದಲ್ಲಿ ಒಂದು ವರ್ಗ ಮಂಜು ಅವರನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.

ಮೈಸೂರು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ, ಈ ಬಾರಿಯೂ ಅದೇ ಕ್ಷೇತ್ರದ ಟಿಕೆಟ್‌ ನಿರೀಕ್ಷೆಯಲ್ಲಿದ್ದ ವಿಜಯಶಂಕರ್‌ ಹಾಸನದಿಂದ ಸ್ಪರ್ಧಿ­ಸಲು ಹಿಂದೇಟು ಹಾಕಿದ್ದರು. ಕೊನೆಗೆ ವಿಧಿ ಇಲ್ಲದೆ ಕಣಕ್ಕೆ ಇಳಿದಿದ್ದಾರೆ. ಮೊದಲೇ ‘ಮೋದಿ ಅಲೆ’ಯ ಸದ್ದೇ ಇಲ್ಲದ ಕ್ಷೇತ್ರ. ಜತೆಗೆ, ಕ್ಷೇತ್ರ ಪರಿಚಯವಾಗಲಿ, ಕಾರ್ಯಕರ್ತರ ದೊಡ್ಡ ಪಡೆಯಾಗಲಿ ಇಲ್ಲ. ಆದರೂ, ವಿಜಯಶಂಕರ್‌ ಹಳ್ಳಿ ಹಳ್ಳಿ ಸುತ್ತಾಡು­ತ್ತಿದ್ದಾರೆ.

ವಿಶೇಷವೆಂದರೆ ವಿಜಯಶಂಕರ್‌ ಪ್ರವೇಶದ ನಂತರವೇ ಲಿಂಗಾಯತರು ಗೊಂದಲಕ್ಕೆ ಬಿದ್ದಿದ್ದಾರೆ. ಒಂದೊಮ್ಮೆ ಮನಸ್ಸು ಬದಲಿಸಿದ್ದ ಮೂಲ ಬಿಜೆಪಿ ಮತದಾರರು ವಿಜಯಶಂಕರ್‌ ‘ಸಜ್ಜನ ಮತ್ತು ಒಳ್ಳೆಯ ಅಭ್ಯರ್ಥಿ’ ಎಂಬ ಕಾರಣಕ್ಕೆ ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾತಿದೆ. ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದ ಕೆಲವು ಮುಖಂಡರು ನಾಲ್ಕೈದು ದಿನಗಳಲ್ಲಿ ಮರಳಿ ಬಿಜೆಪಿಗೆ ಬಂದಿದ್ದಾರೆ. ಒಂದಷ್ಟು ಯುವಮತ­ಗಳನ್ನೂ ಕಸಿಯಬಹುದು ಎಂಬ ಲೆಕ್ಕಾಚಾರವಿದೆ. 

ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ನ ಮುಖಂಡ, ಕೇಂದ್ರದ ಮಾಜಿ ಸಚಿವ ಜಾಫರ್‌ ಷರೀಫ್‌, ‘ದೇವೇಗೌಡರಂಥ ಅನುಭವಿಗಳ ಎದುರು ಪಕ್ಷ ಅಭ್ಯರ್ಥಿಯನ್ನು ಇಳಿಸಬಾರದು’ ಎಂಬ ಹೇಳಿಕೆ ನೀಡಿದ್ದರು. ಅತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ‘ದೇವೇಗೌಡ ಅಂಥವರು ಸಂಸತ್ತಿನಲ್ಲಿ ಇರಬೇಕು’ ಎಂದಿದ್ದರು. ಹಾಸನದಲ್ಲಿ ಈ ಬಾರಿ ಮುಸ್ಲಿಂ ಮತ್ತು ಲಿಂಗಾಯತ ಮತಗಳು ನಿರ್ಣಾಯಕ ಪಾತ್ರ ವಹಿಸಲಿರುವುದರಿಂದ ಈ ಇಬ್ಬರೂ ಹಿರಿಯ ನಾಯಕರ ‘ಆಂತರ್ಯ’ದ ಮಾತುಗಳು ಎಷ್ಟರಮಟ್ಟಿಗೆ ದೇವೇ­ಗೌಡರಿಗೆ ನೆರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕೊನೆಯ ಎರಡು ದಿನದ ಆಟ: ಕಾಂಗ್ರೆಸ್‌ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದರೂ ದೇವೇಗೌಡರು ಜಿಲ್ಲೆಗೆ ಕಾಲಿಟ್ಟದ್ದು ಏ. 13ರಂದು. ನಾಮಪತ್ರ ಸಲ್ಲಿಸಿ ಕ್ಷೇತ್ರ ಬಿಟ್ಟಿದ್ದ ಅವರು, ಮಧ್ಯೆ ಒಮ್ಮೆ ರಾತ್ರಿ ಬಂದು ಮರುದಿನ ಬೆಳಿಗ್ಗೆ ಬೆಂಗಳೂರಿಗೆ ಹೋಗಿದ್ದು ಬಿಟ್ಟರೆ, ಸ್ವತಃ  ಇಲ್ಲಿ ಪ್ರಚಾರ ಮಾಡಿಲ್ಲ. ಕ್ಷೇತ್ರದಲ್ಲಿರುವ ಎಂಟು ಶಾಸಕರಲ್ಲಿ ಆರು ಮಂದಿ ಜೆಡಿಎಸ್‌ನವರೇ ಇದ್ದಾರೆ. ಉಳಿದಂತೆ ಬೇರುಮಟ್ಟದಲ್ಲಿರುವ ಬಲಿಷ್ಠ ಕಾರ್ಯಕರ್ತರ ಪಡೆ ದೇವೇಗೌಡರ ಪರ ಪ್ರಚಾರ ಮಾಡುತ್ತಿದೆ.

ಪುತ್ರ ರೇವಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಸೊಸೆ ಭವಾನಿ ಹಾಗೂ ಮೊಮ್ಮಗ ಪ್ರಜ್ವಲ್‌ ಅವರೂ ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ಕೊನೆಯ ಎರಡು ದಿನಗಳಲ್ಲಿ ಕ್ಷೇತ್ರದಾದ್ಯಂತ ಸುತ್ತಾಡಿ ತನ್ನ ಹಳೆಯ ಮತಗಳನ್ನು ಭದ್ರಪಡಿಸುವ ಶಕ್ತಿ ದೇವೇಗೌಡರಿಗೆ ಈಗಲೂ ಇದೆ. ‘ಗೌಡರು ಒಂದು ಸುತ್ತು ಹೊಡೆದರೆ ಕಾಂಗ್ರೆಸ್‌ ಈವರೆಗೆ ಮಾಡಿದ ಪ್ರಚಾರವೆಲ್ಲ ವ್ಯರ್ಥವಾಗುತ್ತದೆ’ ಎಂದು ಜೆಡಿಎಸ್‌ ಮುಖಂಡರು ನಂಬಿದ್ದಾರೆ.

ಎಚ್‌.ಸಿ. ಶ್ರೀಕಂಠಯ್ಯ, ಪುಟ್ಟಸ್ವಾಮಿ­ಗೌಡ, ಹನುಮೇಗೌಡ ಅವರಂತಹ ಸರಿಸಮ ಎದುರಾಳಿಗಳು ಇಲ್ಲದಿರು­ವುದು ದೇವೇಗೌಡರಿಗೆ ವರವಾಗಿದೆ. ಹೀಗಾಗಿ, ಜೆಡಿಎಸ್‌ನಲ್ಲಿ ನಿರಾತಂಕ ಭಾವನೆ ಇದೆ. ಒಂದು ರೀತಿಯಲ್ಲಿ ಗೆಲುವಿನ ಬಗ್ಗೆ ಜೆಡಿಎಸ್‌ನವರು ತಲೆಕೆಡಿಸಿಕೊಂಡಂತಿಲ್ಲ. ಅವರಿಗೆ ‘ಲೀಡ್’ ಎಷ್ಟು ತಗ್ಗುತ್ತದೆ ಎಂಬುದರ ಬಗ್ಗೆಯೇ ಚಿಂತೆ.

ಸುಮಾರು ಮೂರು ಲಕ್ಷದಷ್ಟಿದ್ದ ಲೀಡ್, ಸಾವಿರಗಳ ಲೆಕ್ಕಕ್ಕೆ ಇಳಿಯಲಿದೆ ಎಂಬ ಕಳವಳವೇ ಅವರನ್ನು ‘ಸೋಲಿನ ಮನಸ್ಥಿತಿ’ಗೆ ತಳ್ಳಿದಂತಿದೆ. ಹಾಗಾಗಿ, ಅವರು ‘ಗೌಡರು ಗೆಲ್ಲುತ್ತಾರೆ’ ಎಂಬುದನ್ನು ‘ಸೋತ ದನಿ’ಯಲ್ಲಿ ಹೇಳುತ್ತಾರೆ.

ಎಲ್ಲ ಸಮೀಕ್ಷೆಗಳು ಜೆಡಿಎಸ್‌ಗೆ ರಾಜ್ಯದಲ್ಲಿ 1ರಿಂದ 3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿವೆ. ಈ ಪೈಕಿ 2, 3ನೇ ಕ್ಷೇತ್ರಗಳು ಬೇರೆ ಬೇರೆ ಸಮೀಕ್ಷೆಗಳಲ್ಲಿ ಬೇರೆ ಬೇರೆ ಆಗಿರಬಹುದು. ಆದರೆ, ಎಲ್ಲ ಸಮೀಕ್ಷೆಗಳ ಆ ‘ಒಂದು’ ಸ್ಥಾನ ಹಾಸನ ಕ್ಷೇತ್ರವೇ ಆಗಿರುವುದು ಗಮನಾರ್ಹ.

ವಿರೋಧವಿದ್ದರೂ ಗೌಡರಿಗೇ ಮತ: ಇದು ಹಾಸನ ಕ್ಷೇತ್ರದ ವಿಶೇಷತೆ. ದೇವೇಗೌಡರು ಏನೂ ಮಾಡಿಲ್ಲ, ಈ ಬಾರಿ ಅವರನ್ನು ಜನರು ಸೋಲಿಸುತ್ತಾರೆ ಎಂಬ ವಾತಾವರಣ ಚುನಾವಣೆವರೆಗೂ ಇರುತ್ತದೆ. ಆದರೆ, ಫಲಿತಾಂಶ ಮಾತ್ರ ಇದಕ್ಕೆ ವಿರುದ್ಧವಾಗಿರುತ್ತದೆ.

‘ದುದ್ದ ರಸ್ತೆಯತ್ತ ಯಾರೂ ಗಮನಹರಿಸಿಲ್ಲ ಎಂಬುದೂ ನಿಜ. ಆದರೆ, ಭಾವನಾತ್ಮಕ ಸಂಬಂಧದಿಂದ ದೇವೇಗೌಡರಿಗೇ ಮತ ಹಾಕುತ್ತೇವೆ’ ಎಂದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ವಿದ್ಯಾರ್ಥಿಗಳು ಹೇಳುತ್ತಾರೆ.

ಇಂಥ ಮತಗಳೇ ದೇವೇಗೌಡರ ಶಕ್ತಿ. ದೇವೇಗೌಡರಿಗೆ ಇದು ಕೊನೆಯ ಚುನಾವಣೆ, ಗೆಲ್ಲಿಸಿ ಬಿಡೋಣ ಎನ್ನುವವ­ರಿದ್ದಾರೆ. ಮಾಜಿ ಪ್ರಧಾನಿಯನ್ನು ಸೋಲಿಸೋದು ಸರಿಯೇ? ಎಂದು ಕೇಳುವವರೂ ಇದ್ದಾರೆ. ಅವರಿಗೆ  ಓಟ್‌ ಹಾಕುವುದು ನಮ್ಮ ‘ಕರ್ತವ್ಯ’ ಎಂಬ ಭಾವನೆ ಇಟ್ಟುಕೊಂಡವರೂ ಇದ್ದಾರೆ. ಇಡೀ ಜಿಲ್ಲೆಯಲ್ಲಿ ಇಂತಹ ಹಲವು ಅಚ್ಚರಿಗಳು ಚಲಾವಣೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT