ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವ ಡಾಕ್ಟರೇಟ್‌ ನೀಡಿಕೆಯಲ್ಲೂ ಜಾತಿ ವಾಸನೆ

Last Updated 27 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುಮಕೂರು: ಡಾ.ಶರ್ಮಾ ಕುಲಪತಿ ಅವಧಿಯಲ್ಲಿ ತಮಗೆ ಬೇಕಾದವರಿಗೆ ಗೌರವ ಡಾಕ್ಟರೇಟ್‌, ಡಿ.ಲಿಟ್‌, ಡಿ.ಎಸ್ಸಿ ಪದವಿ ನೀಡಿದ್ದಾರೆ.
ರಾಜ್ಯದ ಯಾವ ವಿಶ್ವ­ವಿದ್ಯಾಲಯವೂ ಕೊಡ­ದಷ್ಟು ಸಂಖ್ಯೆ­ಯಲ್ಲಿ ಗೌರವ ಡಾಕ್ಟರೇಟ್‌ ನೀಡ­ಲಾಗಿದೆ. ಇದನ್ನೂ ಅನುಕೂಲಕ್ಕೆ ತಕ್ಕಂತೆ ಬಳಸಿ­ಕೊಂಡಿರುವ ಶರ್ಮಾ ಅವರು ತಮ್ಮ ಸಮುದಾ­ಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೀಡಿದ್ದಾರೆ.

ಶರ್ಮಾ ಅವಧಿಯಲ್ಲಿ (ಮೇ 3, 2009­ರಿಂದ ಮೇ 3, 2013) ಒಟ್ಟು ನಾಲ್ಕು ಘಟಿ­ಕೋತ್ಸವ ನಡೆದಿವೆ. ಮೊದಲನೆಯದರಲ್ಲಿ ಹೊಟೇಲ್ ಉದ್ಯಮಿ ಸದಾನಂದ ಮಯ್ಯ, ಟಿ.ಎ.­ದಾಸಪ್ಪ, ಯಾದಲಂ ಎನ್.­ಗಂಗಾಧರ ಶೆಟ್ಟಿ, ಶತಾವಧಾನಿ ಆರ್.ಗಣೇಶ್, ಸಂತೋಷ್ ಹೆಗ್ಡೆ, ಇನ್ಫೋಸಿಸ್‌ನ ಸುಧಾಮೂರ್ತಿ, ಕೆ.ರಾಧಾಕೃಷ್ಣನ್‌ ಅವರಿಗೆ ಡಿ.ಲಿಟ್, ಡಿ.ಎಸ್‌ಸಿ ಪದವಿ ನೀಡಲಾಗಿದೆ.

ಎರಡನೇ ಘಟಿಕೋತ್ಸವದಲ್ಲಿ ಉಡುಪಿ ಪೇಜಾವರ ಮಠದ  ವಿಶ್ವೇಶ­ತೀರ್ಥ ಸ್ವಾಮೀಜಿ, ಲಕ್ಷ್ಮಣ್ ದಾಸ್, ದಲ್‌ವೀರ್ ಭಂಡಾರಿ, ವಿ.ಕೆ.ಸಾರಸ್ವತ್, ಸೀತಾರಾಂ ಜಿಂದಾಲ್, ನೀಲೋಫರ್ ಆದಿಲ್ ಖಾಜ್ಮಿ ಅವರಿಗೆ ಡಿ.ಲಿಟ್, ಡಿ.ಎಸ್‌ಸಿ ಪದವಿ ಕೊಡಲಾಗಿದೆ.

ಮೂರನೇ ಘಟಿಕೋತ್ಸವದಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ. ಗಣ್ಯರಾದ ರಿಚರ್ಡ್ ಆರ್.ಅರ್ನ್‌ಸ್ಟ್, ಸಿ.ಎನ್.ಆರ್.ರಾವ್, ಆಂಥೋಣಿ ಕೆ.ಚೀತಮ್, ಆರ್.ಎಂ.ಬ್ಯಾಥ್ಯೂ, ವಿದ್ವಾನ್ ಎಂ.ಚಂದ್ರಶೇಖರನ್, ಮುಮ್ತಾಜ್ ಅಹಮದ್ ಖಾನ್, ಜಯಂತ್ ಕಾಯ್ಕಿಣಿ, ಲಾಲ್ಗುಡಿ ಜಯರಾಮನ್, ಪಾವಗಡ ಪ್ರಕಾಶ್ ರಾವ್, ಆಚಾರ್ಯ ಬುದ್ಧರಕ್ಕಿತ ಭಂತೇಜಿ, ವೀರೇಶಾನಂದ ಸರಸ್ವತಿ, ಬಾಬು ಕೃಷ್ಣಮೂರ್ತಿ– ಹೀಗೆ ಒಟ್ಟು 12 ಜನರಿಗೆ ಡಿ.ಲಿಟ್, ಡಿ.ಎಸ್‌ಸಿ ಪದವಿ ನೀಡಲಾಗಿದೆ. ಇದೇ ಘಟಿಕೋತ್ಸವದಲ್ಲಿ ಪ್ರಬಂಧ ಸಲ್ಲಿಸಿ ಡಿ.ಲಿಟ್, ಡಿ.ಎಸ್‌ಸಿ ಪದವಿ ಸ್ವೀಕರಿಸಬಹುದೆಂಬ ವಿಶ್ವವಿದ್ಯಾಲಯದ ತೀರ್ಮಾ­ನ­ದ ಮೇರೆಗೆ ಎಸ್.ಕೆ.ಮೂರ್ತಿ, ಎಂ.ಪಿ.ಶ್ಯಾಮ್, ಶ್ರೀಪಾದ ತಮ್ಮಯ್ಯ ಭಟ್ಟ ಅವರಿಗೆ ಪದವಿ ನೀಡಲಾಗಿದೆ.

ನಾಲ್ಕನೇ ಘಟಿಕೋತ್ಸವದಲ್ಲಿ ಒಟ್ಟು 25 ಜನ­ರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಸಾಮಾ­ನ್ಯ­­ವಾಗಿ ಯಾವ ವಿ.ವಿ.ಯೂ ತನ್ನ ಕ್ಯಾಂಪಸ್‌­ನಿಂದ ಹೊರಗಡೆ ಘಟಿಕೋತ್ಸವ ನಡೆಸು­­ವುದಿಲ್ಲ. ಆದರೆ 4ನೇ ಘಟಿ­ಕೋತ್ಸವವನ್ನು ರಾಜಭವನದ ಗ್ಲಾಸ್ ಹೌಸ್‌ನಲ್ಲಿ ನಡೆಸುವ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕ­ಲಾಯಿತು. 25 ಮಂದಿ­ಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಶೈಕ್ಷಣಿಕ ವಲಯದಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟಿಕೋತ್ಸವ ಸಮಾ­ರಂಭವನ್ನೇ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.

ರುಡಾಲ್ಫ್ ಮಾರ್ಕಸ್, ಎರಿಕ್ ಮಸ್ಕಿನ್, ಗೋಪಾಲಕೃಷ್ಣ ಗಾಂಧಿ, ಷಡಕ್ಷರ ಸ್ವಾಮಿ, ಎನ್.­ಆರ್.­ಶೆಟ್ಟಿ, ಜಸ್ಟೀಸ್ ಜಾವೆದ್ ರಹೀಮ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ.­ಸುಬ್ರಹ್ಮಣ್ಯ, ರಾಧಾ ವಿಶ್ವನಾಥನ್, ಅಂಬಿಕಾ ದೇವಿ, ಆರ್.ವೇದವಲ್ಲಿ, ದಿಲೀಪ್ ಮಾವಿನ­ಕುರ್ವೆ, ಜಪಾನಂದಜೀ, ಭೀಮೇಶ್ವರ ಜೋಷಿ, ರಾಗಿಣಿ ನಾರಾಯಣ್, ಆರ್.ನಾಗರತ್ನ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

ಜಯಾ­ರಾಜಶೇಖರ್, ವೆಂಕಟಸ್ವಾಮಿ, ಸುಂದರ­ರಾಜನ್, ಅಪ್ಪಣ್ಣಯ್ಯ, ಜಗನ್ನಾಥನ್, ಸುಧಾ­ಮೂರ್ತಿ (ಮತ್ತೊಮ್ಮೆ), ಟಿ.ಟಿ.­ಶ್ರಿನಿವಾಸನ್, ಕಲ್ಲೂರಿ ರಾಮಕೃಷ್ಣ ಪರಮಹಂಸ, ಶಿವತನು ಪಿಳ್ಳೈ, ಮಲ್ಲೇಪುರಂ ಜಿ.ವೆಂಕಟೇಶ್‌ ಅವರ ಸಂಶೋಧನಾ ಪ್ರಬಂಧಗಳಿಗೆ ಡಿ.ಲಿಟ್, ಡಿ.ಎಸ್‌ಸಿ ಪದವಿ ನೀಡಲಾಗಿದೆ. ಆದರೆ ಗೋಪಾಲಕೃಷ್ಣ ಗಾಂಧಿ ಇನ್ನೂ ಸ್ವೀಕರಿಸಿಲ್ಲ.

ಅಧಿಕಾರದಿಂದ ಕೆಳಗೆ ಇಳಿಯುವ ಮುನ್ನ ಶರ್ಮಾ ಅವರು 23 ಮಂದಿಗೆ ಡಿ.ಲಿಟ್, ಡಿ.ಎಸ್‌ಸಿ ಪದವಿಗೆ ತಾತ್ಪೂರ್ತಿಕ ಪದವಿ ಪ್ರದಾನ ಮಾಡಿ­ದ್ದಾರೆ. ಅದಕ್ಕೆ ಸಿಂಡಿಕೇಟ್ ಮತ್ತು ರಾಜ್ಯ­ಪಾಲರ ಒಪ್ಪಿಗೆಯನ್ನು ಪಡೆದು­ಕೊಂಡಿದ್ದಾರೆ. ಜನವರಿಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ.

ತಾತ್ಪೂರ್ತಿಕ ಡಿ.ಲಿಟ್‌, ಡಿ.ಎಸ್‌ಸಿ ಪದವಿ ಪತ್ರ ಪಡೆದವರ ಪಟ್ಟಿಯಲ್ಲಿ ಜಿ.ಎಸ್.­ಮುಡಂಬ­ಡಿತ್ತಾಯ, ರಾಮಚಂದ್ರ ಜಿ. ಭಟ್, ಮೈಸೂರು ನಾಗಮಣಿ ಶ್ರೀನಾಥ್, ಪಪ್ಪು ವೇಣು­ಗೋಪಾಲ­ರಾವ್,  ಜಿ.ಎನ್.­ಶ್ರೀಕಂಠಯ್ಯ, ಸೂರ್ಯ­­ಪ್ರಕಾಶ್‌ರಾವ್ ಮೊದಲಾ­ದವರಿದ್ದಾರೆ.

ಜನವರಿಯಲ್ಲಿ ನೀಡಲಿರುವ  ಪಟ್ಟಿಯಲ್ಲಿ ವಿಶ್ವ­ವಿದ್ಯಾಲಯದ ಕೆಲ ಸಹ ಪ್ರಾದ್ಯಾಪಕರು ಸೇರಿ­ದ್ದಾರೆ. ಸಾಮಾನ್ಯವಾಗಿ ಪಿಎಚ್‌.ಡಿ ಪಡೆದ ಬಳಿಕ ಡಿ.ಎಸ್‌ಸಿ, ಡಿ.ಲಿಟ್‌ ಪದವಿ ಪಡೆಯು­ವುದು ವಾಡಿಕೆ. ಆದರೆ ಇಲ್ಲಿ ಪಿಎಚ್‌.ಡಿ ಪಡೆಯ­ದವರಿಗೂ ಡಿ.ಲಿಟ್‌ ನೀಡಲಾಗಿದೆ. ವಿಜ್ಞಾನ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಚ್‌.ವೈ.­ಈಶ್ವರ್‌, ಉಪ ಕುಲಸಚಿವ ಎನ್‌.ಪ್ರಸನ್ನ ಕುಮಾರ್ ಅವರಿಗೂ ನೀಡಲಾಗಿದೆ. ಉನ್ನತ ಅಧಿಕಾರ ಸ್ಥಾನದಲ್ಲಿರುವ ವಿ.ವಿ. ಉಪ ಕುಲ­ಸಚಿವರು ತಮ್ಮದೇ ವಿ.ವಿ.ಯಲ್ಲಿ ಮಹತ್ವದ ಪದವಿ ಪಡೆದಿದ್ದಾರೆ.

ವಿ.ವಿ. ಹಣಕಾಸು ಅಧಿಕಾರಿ ಬಿ.ಕೆ.ಸುರೇಶ್‌ ಸುತ್ತಲೂ ವಿವಾದ ಸುತ್ತಿಕೊಂಡಿದೆ. ೨೦೧೦ರಲ್ಲಿ ವಿ.ವಿ. ಎಂ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾ­ಪ­ಕ­ರಾಗಿ ಬಂದ ಬಿ.ಕೆ.ಸುರೇಶ್‌ ಅವರ­ನ್ನು ಪ್ರೊಬೆಷನರಿ ಅವಧಿ ಮುಗಿಯುವ ಮುನ್ನವೇ ಹಣ­­ಕಾಸು ಅಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ.

ಶರ್ಮಾ ಕುಲಪತಿ ಹುದ್ದೆಯಿಂದ ನಿರ್ಗಮಿ­ಸುವ ವೇಳೆಗೆ ಡಿ.ಲಿಟ್ ಕೊಡುವ ಪ್ರಯತ್ನ ನಡೆಸಿ­ದ್ದರು. ಇದೇ ಸಮಯದಲ್ಲಿ ಸುರೇಶ್‌ ಸಂಶೋಧ­ನೆ­­ಗೂ ವಿ.ವಿ.ಯಲ್ಲಿ ಹೆಸರು ನೋಂದಾ­ಯಿಸಿ­ಕೊಂಡಿ­­ದ್ದರು. ಒಂದು ಕೈಯಲ್ಲಿ ಪಿಎಚ್.ಡಿ ಸಂಶೋಧನೆ, ಮತ್ತೊಂದು ಕೈಯಲ್ಲಿ ಡಿ.ಲಿಟ್ ಪದವಿ­­ಗೆ ಪ್ರಬಂಧ ಸಲ್ಲಿಕೆಗೆ ತಯಾರಿ. ಜತೆಗೆ ಮಹತ್ವ­ದ ಹಣಕಾಸು ಹುದ್ದೆ ನಿರ್ವಹಣೆ. ಒಟ್ಟಿಗೆ ಮೂರು ಕೆಲಸ ನಿರ್ವಹಿಸಿದ್ದಾರೆ.

ಬಿ.ಕೆ.ಸುರೇಶ್‌ ಅವರಿಗೆ ಡಿ.ಲಿಟ್‌ ನೀಡುವ ಕಡತ ಸಿಂಡಿಕೇಟ್‌ ಸಭೆಗೆ ೨೦೧೩ರ ಏಪ್ರಿಲ್  3­ರಂದು ಮಂಡನೆಯಾಗಿದೆ. ಆದರೆ ನೂತನ ಕುಲ­ಪತಿ ಡಾ.ರಾಜಾಸಾಬ್‌ ಈಗ ತಡೆ ನೀಡಿದ್ದಾರೆ.

ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎರಡು ಸಾವಿರ­ಕ್ಕೂ ಹೆಚ್ಚಿದ್ದ ವಿದ್ಯಾರ್ಥಿಗಳ ಸಂಖ್ಯೆ ಕಡಿತ­ಗೊಳಿಸುವಂತೆ ಕೋರಿ ವಿ.ವಿ ವಿರುದ್ಧ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದ ಎಸ್.ಕೆ.­ಮೂರ್ತಿ ಅವರಿಗೂ ಎರಡನೇ ಘಟಿಕೋತ್ಸ­ವದಲ್ಲಿ ಡಿ.ಎಸ್‌ಸಿ ಪದವಿ ನೀಡಲಾಗಿದೆ.

ಎಸ್.ಕೆ.ಮೂರ್ತಿ ಸಹೋದರ ಕೇಶವ ಪ್ರಸನ್ನ ಎಂಟು ತಿಂಗಳಲ್ಲಿ ಪಿಎಚ್.ಡಿ ಪದವಿ ಪಡೆದವರ ಪಟ್ಟಿಯಲ್ಲಿ ಸೇರಿದ್ದಾರೆ. ಕುಲಪತಿ ಸ್ಥಾನದಿಂದ ನಿವೃತ್ತಿ ಹೊಂದಿದ ನಂತರ ಶರ್ಮಾ ಅವರು ಕೆಲಸ ಮಾಡುತ್ತಿರುವ ಬಿ.ಎಂ.ಎಸ್ ಎಂಜಿನಿಯ­ರಿಂಗ್ ಕಾಲೇಜಿನಲ್ಲಿ ಕೇಶವ ಪ್ರಸನ್ನ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಿದೇಶಗಳಿಂದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳನ್ನು ಘಟಿಕೋತ್ಸವಗಳಿಗೆ ಶರ್ಮಾ ಕರೆಸಿ­ದ್ದಾರೆ. ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದ ಪ್ರೊ.ಎರಿಕ್ ಎಸ್.ಮಸ್ಕಿನ್‌ ಅವರು 2012ರ ಡಿಸೆಂಬರ್‌ 9ರಂದು ವಿ.ವಿ.ಗೆ ಭೇಟಿ ಕೊಟ್ಟಿದ್ದರು.

ಪ್ರೊ.ಎರಿಕ್‌ ಅವರನ್ನು ಸಹ ಲೇಖಕ­ರಾಗಿಸಿಕೊಂಡು ಶರ್ಮಾ  ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಎರಡು ಕೃತಿಗಳನ್ನು ರಚಿಸಿದ್ದಾರೆ. (ಕೃತಿ– ನ್ಯಾಚುರಲ್‌ ಡಿಸಾಸ್ಟರ್‌ ಆ್ಯಂಡ್‌ ಪಾವರ್ಟಿ: ಆ್ಯನ್‌ ಓವರ್ಸೀಸ್‌, ಅಭಿಜಿತ್‌ ಪ್ರಕಾಶನ, ನವದೆಹಲಿ. ಲೇಖಕರು: ಎಸ್‌.ಸಿ.ಶರ್ಮಾ, ಎರಿಕ್‌ ಮಸ್ಕಿನ್‌, ವಿಲಾಸ್‌ ಎಂ, ಕದ್ರೋಲ್‌ಕರ್) ಹಾಗೂ (ಕೃತಿ– ಮೆಕಾನಿಸಂ ಫಾರ್‌ ಸಸ್ಟೇನಬಲ್‌ ಡೆವಲಪ್‌ಮೆಂಟ್‌: ಇಸ್ಸ್ಯೂ ಆ್ಯಂಡ್‌ ಪ್ರಾಸ್ಪೆಕ್ಟೀವೀಸ್‌. ಲೇಖಕರು: ಎಸ್‌.ಶರ್ಮಾ, ಎರಿಕ್‌ ಮಸ್ಕಿನ್‌, ವಿಲಾಸ್‌ ಎಂ.ಕದ್ರೋಲ್‌ಕರ್, ರವೀಂದ್ರಕುಮಾರ್‌, ಎನ್‌.ಟಿ.ನೀಲಕಂಠ).

ಈ ಎರಡೂ ಕೃತಿಗಳಲ್ಲಿ ಉಳಿದ ಸಹಲೇಖಕರಾದ ವಿಲಾಸ್ ಕದ್ರೋಲ್‌ಕರ್, ರವೀಂದ್ರ ಕುಮಾರ್, ನೀಲಕಂಠ ಅವರು ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು.
ಮುಂದಿನ ಸಂಚಿಕೆಯಲ್ಲಿ: ಸಣ್ಣ ವಿ.ವಿ.ಗೆ 25 ಗೌರವ ಪ್ರಾಧ್ಯಾಪಕರ ಹೊರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT