ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರನಿದ್ರೆಗೆ ಜಾರಿದ ಕನ್ನಡ ಹೋರಾಟದ ಕೊಂಡಿ

Last Updated 28 ಜೂನ್ 2014, 11:07 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡಪರ ಹೋರಾಟ ಗಾರ್ತಿ, ಪತ್ರಿಕೋದ್ಯಮಿ ಉಮಾದೇವಿ ಟೋಪಣ್ಣವರ ಅವರು ಗಡಿಭಾಗದಲ್ಲಿ ‘ಕನ್ನಡದ ಅಮ್ಮ’ ಎಂದೇ ಚಿರಪರಿಚಿತ. ವಯಸ್ಸು 70ರ ಗಡಿ ದಾಟಿದ್ದರೂ ಕನ್ನಡ ಕಟ್ಟುವ ಕೆಲಸದಲ್ಲಿ ಸಕ್ರಿಯ ವಾಗಿದ್ದ ಅವರು, ಉತ್ಸಾಹದ ಚಿಲುಮೆ ಯಾಗಿದ್ದರು. ಕಳೆದ 2 ದಶಕಗಳಿಂದ ‘ಕನ್ನಡಮ್ಮ’ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಅವರು ಅನಾರೋಗ್ಯದಿಂದ ಗುರುವಾರ ಇಹಲೋಕ ತ್ಯಜಿಸಿದರು.

ಕಳೆದ 20 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ನಡೆಯುತ್ತಿರುವದರ ಸಮ ರದ ನಡುವೆಯೂ ತಮ್ಮ ಪತ್ರಿಕೆಯ ಅಸ್ತಿತ್ವ ಕಾಪಾಡಿಕೊಂಡು ಬಂದಿದ್ದ ಅವರು, ನಾಡು, -ನುಡಿಗಾಗಿ ಸಲ್ಲಿಸಿದ ಸೇವೆ ಅನನ್ಯ, ಅವಿಸ್ಮರಣೀಯ...!

ಕಪ್ಪು–ಬಿಳುಪು ಬಣ್ಣದಲ್ಲಿ ಪ್ರಕಟವಾಗುತ್ತಿದ್ದ ಕನ್ನಡಮ್ಮ ದಿನಪತ್ರಿಕೆಯನ್ನು ವರ್ಣರಂಜಿತ ವಿನ್ಯಾಸದಲ್ಲಿ ಪ್ರಕಟಿಸುವ ಮೂಲಕ ಪ್ರಾದೇಶಿಕ ಪತ್ರಿಕಾ ವಲಯದಲ್ಲಿ ವಿನೂತನ ಸಾಧನೆ ಮಾಡಿದ ಶ್ರೇಯಸ್ಸು ಉಮಾದೇವಿ ಅವರದ್ದು.

1990ರ ಆಗಸ್ಟ್‌ 3ರಂದು ಕನ್ನಡಮ್ಮ ದಿನಪತ್ರಿಕೆಯ ಸಂಸ್ಥಾಪಕ ರಾಗಿದ್ದ ಮಹಾದೇವ ಟೋಪಣ್ಣವರ ಅವರು ನಿಧನ ಹೊಂದಿದರು. ಅಂದು ಮಹಿಳಾ ಸಂಪಾದಕಿಯಾಗಿ ಪತ್ರಿಕಾ ರಂಗಕ್ಕೆ ಕಾಲಿಟ್ಟ ಉಮಾದೇವಿ ಅವರು  ಪತ್ರಿಕಾರಂಗದಲ್ಲಿ ಶಾಶ್ವತ ನೆಲೆ ಕಂಡು ಕೊಳ್ಳುವಲ್ಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಕನ್ನಡ ಹೋರಾಟಗಳಲ್ಲೂ ಭಾಗಿ: ಉಮಾದೇವಿ ಟೋಪಣ್ಣವರ ಅವರ ಸೇವೆ ಪತ್ರಿಕಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಚಳವಳಿ, ಕನ್ನಡಪರ ಚಟುವಟಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಅವರು ಮರಾಠಿಗರ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದ್ದಾರೆ. ಈ ಮೂಲಕ ಗಡಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ್ದಾರೆ.

ಸಂದ ಪ್ರಶಸ್ತಿಗಳು: ಪತ್ರಿಕಾರಂಗದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಉಮಾ ದೇವಿ ಟೋಪಣ್ಣವರ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಣಿ ಚನ್ನಮ್ಮ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.

ಕಳಚಿ ಬಿದ್ದ ಹೋರಾಟದ ಕೊಂಡಿ: ಗಡಿನಾಡು ಬೆಳಗಾವಿಯಲ್ಲಿ ಕನ್ನಡ–-ಮರಾಠಿ ಭಾಷಾ ವಿವಾದ ನಡೆಯುತ್ತಿ ದ್ದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದದ್ದು ಟೋಪಣ್ಣವರ ಮನೆತನ. ಗಡಿಭಾಗದಲ್ಲಿ ಭಾಷಾ ವಿವಾದ ವಿಕೋಪಕ್ಕೆ ತಿರುಗಿ ದಾಗಲೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ ಮಹಿಳೆ ಉಮಾದೇವಿ ಟೋಪಣ್ಣವರ. ಅವರ ನಿಧನದಿಂದ ಗಡಿಯಲ್ಲಿ ಕನ್ನಡದ ಹೋರಾಟದ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.

ಅಂತ್ಯಕ್ರಿಯೆ: ಉಮಾದೇವಿ ಟೋಪಣ್ಣ ವರ ಅವರ ಪಾರ್ಥಿವ ಶರೀರವನ್ನು ಅವರ ಸ್ವಗೃಹದಲ್ಲಿ ಮಧ್ಯಾಹ್ನದ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕಿಡ ಲಾಗಿತ್ತು. ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಸದಾಶಿವ ನಗರದ ಸ್ಮಶಾನಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.

ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ, ಎ.ಬಿ.ಪಾಟೀಲ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ವಿ. ಗುಳೇದ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪತ್ರಕರ್ತರು, ಸಾಹಿತಿಗಳು, ಅವರ ಅಭಿಮಾನಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿ ಕಂಬನಿ
ಉಮಾದೇವಿ ಮಹಾದೇವ ಟೋಪಣ್ಣವರ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ.
ಉಮಾದೇವಿ ಟೋಪಣ್ಣವರ ಅವರು ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡಮ್ಮ ಕನ್ನಡ ದಿನಪತ್ರಿಕೆಯನ್ನು ಒಂದೂವರೆ ದಶಕಗಳ ಕಾಲ ಸಮರ್ಥ ವಾಗಿ ಮುನ್ನಡೆಸಿ, ಆ ಭಾಗದಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಅಧಿಕ ಪುಟಗಳ ಹೊತ್ತ ಆಕರ್ಷಕ ವಿನ್ಯಾಸದ ಪ್ರಥಮ ಸ್ಥಳೀಯ ಕನ್ನಡ ದಿನ ಪತ್ರಿಕೆಯಾಗಿ ರೂಪುಗೊಂಡ ಕನ್ನಡಮ್ಮ ಪತ್ರಿಕೆಯ ಜೀವಾಳವೇ ಆಗಿದ್ದ  ಉಮಾ ದೇವಿ ಟೋಪಣ್ಣವರ ಅವರು ಪತ್ರಿಕೋದ್ಯಮದ ಜೊತೆಗೆ ಹಲವಾರು ಸಾಮಾಜಿಕ ಚಟುವಟಿಕೆಯಲ್ಲೂ ಗುರುತಿಸಿಕೊಂಡಿದ್ದು ಇದೀಗ ಇತಿಹಾಸ ವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಶೋಕ: ಎರಡು ದಶಕಗಳಿಂದ ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾಗಿ ಪತ್ರಿಕೋ ದ್ಯಮಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಉಮಾದೇವಿ ಟೋಪಣ್ಣವರ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ.


ವಾರ್ತಾ ಸಚಿವರ ಸಂತಾಪ: ಉಮಾ ದೇವಿ ಟೋಪಣ್ಣವರ ನಿಧನಕ್ಕೆ ವಾರ್ತಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ರೋಷನ್ ಬೇಗ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ ಶೋಕ ವ್ಯಕ್ತಪಡಿಸಿದ್ದಾರೆ.

ಗಣ್ಯರ ಕಂಬನಿ:  ಕನ್ನಡಪರ ಹೋರಾಟಗಾರರಾಗಿದ್ದ ಉಮಾದೇವಿ ಟೋಪಣ್ಣವರ ಅವರ ನಿಧನಕ್ಕೆ ವಿವಿಧ ಸಂಘ–ಸಂಸ್ಥೆಗಳ ಮುಖಂಡರು, ಗಣ್ಯರು ಮತ್ತು ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ.

ಸಂಸದ ಸುರೇಶ ಅಂಗಡಿ, ಶಾಸಕ ಸಂಭಾಜಿ ಪಾಟೀಲ, ಪ್ರೊ. ಎಂ.ಎಸ್. ಇಂಚಲ, ಬಿ.ಎಸ್.ಗವಿಮಠ, ಡಾ. ಬಸವರಾಜ ಜಗಜಂಪಿ, ಸುಭಾಶ ಏಣಗಿ, ಡಾ. ರಾಮಕೃಷ್ಣ ಮರಾಠೆ, ಡಿ.ಎಸ್.ಚೌಗಲೆ, ಬಸವರಾಜ ನರೇಗಲ್ಲ, ಲೇಖಕಿ ನೀಲಗಂಗಾ ಚರಂತಿ ಮಠ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಯ.ರು.ಪಾಟೀಲ, ಗೌರವ ಕಾರ್ಯದರ್ಶಿ ಬಸವರಾಜ ಗಾರ್ಗಿ, ಅ.ಬ.ಕೊರಬು, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ, ಪ್ರಕಾಶ ಗಿರಿಮಲ್ಲಣ್ಣವರ, ಮಾಜಿ ಮೇಯರ್‌ ಡಾ. ಸಿದ್ಧನಗೌಡ ಪಾಟೀಲ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದ ರಗಿ, ಸಾಹಿತಿ ಚಂದ್ರಕಾಂತ ಕೂಸ ನೂರು, ಜಿನದತ್ತ ದೇಸಾಯಿ, ಪತ್ರಕರ್ತ ಡಾ. ಸರಜೂ ಕಾಟ್ಕರ್, ರಾಘವೇಂದ್ರ ಜೋಶಿ, ಡಾ. ರಾಮಕೃಷ್ಣ ಮರಾಠೆ, ಶಿರೀಷ ಜೋಶಿ, ಏಣಗಿ ಬಾಳಪ್ಪ,  ಎಲ್.ಎಸ್.ಶಾಸ್ತ್ರಿ, ಪ್ರೊ. ಜ್ಯೋತಿ ಹೊಸೂರ ಸಂತಾಪ ಸೂಚಿಸಿದ್ದಾರೆ.

ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಕಿತ್ತೂರ ರಾಜ ಗುರು ಮಡಿವಾಳೇಶ್ವರ ಸ್ವಾಮೀಜಿ, ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ಎಲ್ಲ ಮಠಗಳ ಶ್ರೀಗಳು ಉಮಾದೇವಿಯವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಶಾಸಕ ಸಂಭಾಜಿ ಸಂತಾಪ:  ಉಮಾದೇವಿ ಟೋಪಣ್ಣವರ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಶಾಸಕ ಸಂಭಾಜಿ ಪಾಟೀಲ ಅವರು ಶೋಕ ವ್ಯಕ್ತಪಡಿಸಿದ್ದಾರೆ. 

ಪತ್ರಕರ್ತರಾದ ಡಾ.ಭೀಮಶಿ ಜಾರಕಿಹೊಳಿ, ಅಶೋಕ ಜೋಶಿ, ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ, ದಿಲೀಪ ಕುರಂದವಾಡಿ, ಶ್ರೀಕಾಂತ ಕುಬಕಡ್ಡಿ, ಚಂದ್ರು ಶ್ರೀರಾಮುಡು, ಮಹಾಂತೇಶ ಬಾಳಿಕಾಯಿ, ಬಸವಣೆಪ್ಪ ಉಳ್ಳೇಗಡ್ಡಿ, ಪುಂಡಲೀಕ ಬಾಳೋಜಿ, ಜಿಲ್ಲಾ ಸಂಪಾದಕರ ಸಂಘದ ಸದಸ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT