ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಹೊಣೆ ಹೊತ್ತ ಡಾ. ನಸೀಮ್ ಜೈದಿ

ವ್ಯಕ್ತಿ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಳೆದ ಭಾನುವಾರ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಡಾ. ಸಯ್ಯದ್ ನಸೀಮ್ ಅಹಮದ್ ಜೈದಿ ನೇಮಕವಾಗಿದ್ದಾರೆ. ಹಿಂದಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಚ್.ಎಸ್.ಬ್ರಹ್ಮ ಶನಿವಾರ ನಿವೃತ್ತರಾದರು. ಸಂಪ್ರದಾಯದಂತೆ ಆಯೋಗದ ಅತ್ಯಂತ ಹಿರಿಯ ಆಯುಕ್ತರನ್ನು ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿದೆ. ಬ್ರಹ್ಮ ಅವರು ನಿವೃತ್ತರಾದ ನಂತರ ಆಯೋಗದಲ್ಲಿ ಆಯುಕ್ತರಾಗಿ ಇದ್ದದ್ದು ಜೈದಿ ಮಾತ್ರ. ಈಗ ಉಳಿದ ಎರಡು ಆಯುಕ್ತರ ಹುದ್ದೆಗಳು ಖಾಲಿ ಇವೆ.

1976ರ ತಂಡದ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದ ಜೈದಿ ಸುದೀರ್ಘ 36 ವರ್ಷಗಳ ಸೇವೆಯ ನಂತರ 2012ರ ಜುಲೈಯಲ್ಲಿ ನಾಗರಿಕ ವಿಮಾನಯಾನ  ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದರು. 2012ರ ಆಗಸ್‌್ಟನಲ್ಲಿ ಹಿಂದಿನ ಯುಪಿಎ ಸರ್ಕಾರ ಅವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡಿತು. ಮುಖ್ಯ ಚುನಾವಣಾ ಆಯುಕ್ತರಾಗಿ ಅವರು 2017ರ ಜುಲೈವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಜೈದಿ, ಸಮಾಜದ ಎಲ್ಲ ವರ್ಗಗಳ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವುದು, ಮತದಾರರ ಪಟ್ಟಿಯಲ್ಲಿ ನೋಂದಣಿಯನ್ನು ಸುಲಭವಾಗಿಸುವಂತಹ ಮತದಾರ ಕೇಂದ್ರಿತ ಕ್ರಮಗಳಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ತಮ್ಮ ಹಿಂದಿನವರು ಆರಂಭಿಸಿರುವ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು, ಚುನಾವಣಾ ಆಯೋಗವನ್ನು ಇನ್ನಷ್ಟು ಪಾರದರ್ಶಕ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ 10-15 ವರ್ಷಗಳ ದೀರ್ಘಾವಧಿ ಯೋಜನೆ ರೂಪಿಸಬೇಕು ಎಂಬ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ. ಈ ಕನಸುಗಳನ್ನು ಸಾಕಾರಗೊಳಿಸುವುದಕ್ಕೆ ಬೇಕಾದ ಬದ್ಧತೆ, ಅನುಭವ ಮತ್ತು ಬುದ್ಧಿವಂತಿಕೆ ಅವರಲ್ಲಿದೆ. ಆಯುಕ್ತರಾಗಿ 15 ರಾಜ್ಯಗಳ ವಿಧಾನ ಸಭೆಗಳು ಮತ್ತು 2014ರ ಲೋಕಸಭೆ ಚುನಾವಣೆ ನಡೆಸಿದ ಅಪಾರ ಅನುಭವ ಜೈದಿ ಅವರಿಗೆ ಇದೆ.

ಆಯುಕ್ತರಾಗುವುದಕ್ಕೆ ಮೊದಲು ಅವರು ದೀರ್ಘ ಕಾಲ ವಿಮಾನಯಾನ  ಸಚಿವಾಲಯದಲ್ಲಿ ಕೆಲಸ ಮಾಡಿದ್ದಾರೆ. ಏರ್ ಇಂಡಿಯಾ ಪುನರ್ರಚನೆ ಮತ್ತು ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಏರ್ ಇಂಡಿಯಾ ವಿಲೀನವನ್ನು ಸುಗಮಗೊಳಿಸುವುದಕ್ಕಾಗಿ ಧರ್ಮಾಧಿಕಾರಿ ಸಮಿತಿ ರಚನೆಗೂ ಅವರೇ ಕಾರಣ. ಹಾಗೆಯೇ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ವಿಮಾನಯಾನ ಕ್ಷೇತ್ರಕ್ಕೆ 70 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕಾಗಿ ಕಾರ್ಯಪಡೆ ರಚಿಸಿದ್ದರು. ಇದರಲ್ಲಿ ಅವರಿಗೆ ದೊಡ್ಡ ಮಟ್ಟದ ಯಶಸ್ಸು ದೊರೆತಿದೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಅತ್ಯಾಧುನಿಕವಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಸ್ಥಾಪನೆ ಜೈದಿ ಅವರ ವೃತ್ತಿ ಜೀವನದ ಅತ್ಯಂತ ಸಂತೃಪ್ತ ಸಾಧನೆಗಳಲ್ಲಿ ಕೆಲವು ಮಾತ್ರ.

ವಿಮಾನಯಾನ ಕ್ಷೇತ್ರಕ್ಕೆ ಆರ್ಥಿಕ ನಿಯಂತ್ರಣ ಚೌಕಟ್ಟು, ನಾಗರಿಕ ವಿಮಾನಯಾನ  ಪ್ರಾಧಿಕಾರ, ಸ್ವತಂತ್ರ ವಿಮಾನ ಅಪಘಾತ ತನಿಖಾ ಮಂಡಳಿ, ರಾಷ್ಟ್ರೀಯ ವಿಮಾನಯಾನ ವಿಶ್ವವಿದ್ಯಾಲಯ ಗಳ ಸ್ಥಾಪನೆ ಅವರು ಆರಂಭಿಸಿದ ಉಪಕ್ರಮಗಳು. 2010ರ ಮೇಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತವಾಗಿ 150 ಜನ ಬಲಿಯಾದದ್ದು ಅವರನ್ನು ಸದಾ ಕಾಡುತ್ತಿರುವ ದುರಂತ.

ಜೈದಿ ಅವರ ವಿಮಾನಯಾನ ಕ್ಷೇತ್ರದ ವೃತ್ತಿ ಜೀವನ ಕಪ್ಪು ಚುಕ್ಕೆಯೇ ಇಲ್ಲದ್ದೇನಲ್ಲ. 2012ರ ಜೂನ್‌ನಲ್ಲಿ ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ನಡೆಸಿದ ಕೆಲವು ನೇಮಕಗಳಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ನಿರ್ದೇಶನಾಲಯದ ಹಾರಾಟ ತರಬೇತಿ ವಿಭಾಗದ ನಿರ್ದೇಶಕರಾಗಿ ಯಶ್ ರಾಜ್ ಟೊಂಗಾನಿಯ ಅವರನ್ನು ನೇಮಕ ಮಾಡಿದ್ದರು. ಟೊಂಗಾನಿಯ ಅವರು ಖಾಸಗಿ ಹಾರಾಟ ತರಬೇತಿ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದರು. ಅವರ ನೇಮಕದಲ್ಲಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಜಾಗೃತಿ ನಿರ್ದೇಶನಾಲಯವು ಪ್ರಕರಣದ ಬಗ್ಗೆ ಕಟುವಾದ ವರದಿಯನ್ನು ನೀಡಿತ್ತು. ಟೊಂಗಾನಿಯ ಅವರು ತಮ್ಮ ಪ್ರೊಬೇಷನ್ ಅವಧಿ ಮುಗಿಯುವ ಮುನ್ನವೇ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

ಸಂಬಂಧಪಟ್ಟ ವ್ಯಕ್ತಿಯನ್ನು ನೇಮಕ ಮಾಡುವುದಕ್ಕಾಗಿ ನಿಯಮಗಳನ್ನು ಉಲ್ಲಂಘಿಸಬೇಕು ಎಂದು ಸಚಿವಾಲಯವು ವಿಮಾನಯಾನ ನಿರ್ದೇಶನಾಲಯದ ಮೇಲೆ ಒತ್ತಡ ಹೇರಿರಲಿಲ್ಲ. ನೇಮಕ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ನಿಗದಿಪಡಿಸಿದ ವೈದ್ಯಕೀಯ, ನಡತೆ ಮತ್ತಿತರ ದೃಢೀಕರಣಗಳನ್ನು ಕೈಬಿಡಬೇಕು ಎಂದು ಸಚಿವಾಲಯ ಹೇಳಿಲ್ಲ ಎಂದು ನಂತರ ಪತ್ರಿಕೆಯೊಂದಕ್ಕೆ ಜೈದಿ ಅವರು ಸ್ಪಷ್ಟನೆ ನೀಡಿದ್ದರು.

ಆದರೆ, ಟೊಂಗಾನಿಯ ಅವರ ನೇಮಕ ಪ್ರಕ್ರಿಯೆಯ ಆರಂಭಿಕ ಹಂತದಲ್ಲಿ ಜೈದಿ ಅವರ ಪಾತ್ರವೂ ಇತ್ತು ಎಂದು ಜಾಗೃತಿ ಆಯೋಗದ ವರದಿ ಹೇಳಿದೆ.
ಆಯುಕ್ತರಾಗಿ ಕೆಲಸ ಮಾಡಿದ ಅವಧಿಯಲ್ಲಿ ಜೈದಿ ಅವರು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿ ಕೆಲಸ ಮಾಡಿದ್ದರು. ಹಾಗೆಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ ಮಾದರಿ ಮತಗಟ್ಟೆಗಳು ಅವರ ಕನಸಿನ ಕೂಸು. ಜನರನ್ನು ಮತಗಟ್ಟೆಗೆ ಆಕರ್ಷಿಸುವುದಕ್ಕಾಗಿ ಜನಸ್ನೇಹಿಯಾದ ಮತ್ತು ಸಿಂಗರಿಸಿದ  ಮತಗಟ್ಟೆಗಳನ್ನು ಅವರು ರೂಪಿಸಿದ್ದರು.

ಮುಖ್ಯ ಆಯುಕ್ತರಾಗಿ ಅವರು ಬಿಹಾರದಂತಹ ದೊಡ್ಡ ಮತ್ತು ಅತ್ಯಂತ ಸಂಕೀರ್ಣ ರಾಜ್ಯದಲ್ಲಿ ಚುನಾವಣೆ ನಡೆಸಬೇಕಿದೆ. ತಮ್ಮ ಅವಧಿ ಕೊನೆಗೊಳ್ಳುವ ಹೊತ್ತಿಗೆ ಉತ್ತರ ಪ್ರದೇಶದ ಚುನಾವಣೆಯ ಸವಾಲಿಗೂ ಸಿದ್ಧರಾಗಬೇಕಿದೆ. ಭಾರತೀಯ ಆಡಳಿತ ಸೇವೆಯಲ್ಲಿನ ಅವರ ಸುದೀರ್ಘ ಸೇವೆಯನ್ನು ಗಮನಿಸಿದರೆ ಇದಕ್ಕೆ ಅಗತ್ಯವಾದ ದಕ್ಷತೆ ಅವರಲ್ಲಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಹತ್ತಿರದಿಂದ ಬಲ್ಲವರು ಹೇಳುವಂತೆ ಜೈದಿ ಬಹುಮುಖ ಪ್ರತಿಭಾವಂತ. ಅವರ ಶೈಕ್ಷಣಿಕ ಅರ್ಹತೆ ಇದಕ್ಕೆ ಪ್ರಮಾಣಪತ್ರದಂತೆ ಇದೆ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್‌ನಿಂದ ಅವರು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಾರ್ವರ್ಡ್‌ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ಮೇಸನ್ ಫೆಲೊ ಕೂಡ ಹೌದು. ವ್ಯವಹಾರ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಲ್ಲದೆ ಬಯೊ ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಕೂಡ ಹೊಂದಿದ್ದಾರೆ. ಬಯೊ ಕೆಮಿಸ್ಟ್ರಿ ಅವರ ನೆಚ್ಚಿನ ವಿಷಯ. ಈ ವಿಷಯಕ್ಕೆ ಸಂಬಂಧಿಸಿ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ‘ಗ್ರೀನ್ ಏವಿಯೇಷನ್’ ವಾಯುಯಾನ ಕ್ಷೇತ್ರದ ಬಗ್ಗೆ ಅವರು ಬರೆದ ಪುಸ್ತಕ. 

ಕೆಲಸದ ಜತೆಗೆ ತಮಗೆ ಆಸಕ್ತಿ ಇರುವ ವಿಷಯಗಳನ್ನು ಆನಂದಿಸುವ ವ್ಯಕ್ತಿ. ಸಸ್ಯಾಹಾರಿಯಾಗಿರುವ ಅವರಿಗೆ ಸಿಹಿ ತಿನಿಸೆಂದರೆ ಪ್ರಾಣ. ತಾವು ಇದ್ದಲ್ಲಿ ಆತ್ಮೀಯತೆಯ ಭಾವ ಮೂಡಿಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಒಮ್ಮೆ ಕಂಡ ವ್ಯಕ್ತಿಯನ್ನು ಮತ್ತೆ ಎಂದು ಕಂಡರೂ ಗುರುತಿಸಿ ಮಾತನಾಡಿಸುವ ವಿಶಿಷ್ಟ ಸಾಮರ್ಥ್ಯ ಮತ್ತು ಸರಳತೆಯೂ ಇದೆ. ವಿಐಪಿ ಸಂಸ್ಕೃತಿಯಿಂದ ಅವರು ಮಾರು ದೂರ. ಹಾಗಾಗಿಯೇ ಜಗತ್ತಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ಸಂಕೀರ್ಣ ಪ್ರಜಾಸತ್ತೆಯ ಚುನಾವಣಾ ಆಯೋಗದಲ್ಲಿ ಅವರು ಸರಳತೆ, ಆತ್ಮೀಯತೆ, ಪಾರದರ್ಶಕತೆ ತರಬಲ್ಲರು ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT