ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿ ತಂಡಕ್ಕೆ ವಿಶ್ವಕಪ್‌ ಕಿರೀಟ

ಮಾರಿಯೊ ಗೋಟ್ಜೆ ಗೆಲುವಿನ ರೂವಾರಿ; ಫೈನಲ್‌ನಲ್ಲಿ ಎಡವಿದ ಅರ್ಜೆಂಟೀನಾ
Last Updated 13 ಜುಲೈ 2014, 21:55 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ (ರಾಯಿಟರ್ಸ್‌): ರೋಚಕ ಹೋರಾಟ ಕಂಡುಬಂದ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 1–0 ಗೋಲಿನಿಂದ ಮಣಿಸಿದ ಜರ್ಮನಿ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.

ಮರಕಾನಾ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಪಂದ್ಯದ 113ನೇ ನಿಮಿಷದಲ್ಲಿ ಮಾರಿಯೊ ಗೋಟ್ಜೆ ಅವರು ಗೋಲು ಗಳಿಸಿ ಜರ್ಮನಿ ತಂಡವನ್ನು ಫುಟ್‌ಬಾಲ್‌ ಜಗತ್ತಿನ ಉತ್ತುಂಗದ ಶಿಖರಕ್ಕೆ ಕೊಂಡೊಯ್ದರು.

ಯೂರೋಪಿನ ತಂಡಕ್ಕೆ ಒಲಿದ ನಾಲ್ಕನೇ ವಿಶ್ವಕಪ್‌ ಟ್ರೋಫಿ ಇದಾಗಿದೆ. ಈ ತಂಡ ಇದಕ್ಕೂ ಮುನ್ನ 1954, 1974 ಮತ್ತು 1990 ರಲ್ಲಿ ಚಾಂಪಿಯನ್‌ ಆಗಿತ್ತು.

ಸೋಲು ಅನುಭವಿಸಿದ ಕಾರಣ ಅರ್ಜೆಂಟೀನಾ ಮತ್ತು ಲಯೊನೆಲ್‌ ಮೆಸ್ಸಿ ಅವರ ಅಭಿಮಾನಿಗಳು ನಿರಾಸೆಯ ಕಡಲಲ್ಲಿ ಮುಳುಗಿದರು.
ರೋಚಕ ಹೋರಾಟ ಕಂಡುಬಂದ ಪಂದ್ಯದ ನಿಗದಿತ ಅವಧಿಯಲ್ಲಿ ಯಾವುದೇ ಗೋಲುಗಳು ಬರಲಿಲ್ಲ. ಇದರಿಂದ ಹೆಚ್ಚುವರಿ ಅವಧಿಯ ಮೊರೆಹೋಗಲಾಯಿತು. ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಹೋಗುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದರು. ಆದರೆ ಶುಯೆರ್ಲೆ ನೀಡಿದ ಪಾಸ್‌ನಲ್ಲಿ ಚೆಂಡನ್ನು ಆಕರ್ಷಕವಾಗಿ ನಿಯಂತ್ರಿಸಿದ ಗೋಟ್ಜೆ ಗುರಿ ಸೇರಿಸುವಲ್ಲಿ ಯಶಸ್ವಿಯಾದರು.  ಕ್ರೀಡಾಂಗಣದಲ್ಲಿ ನೆರೆದಿದ್ದ ಜರ್ಮನಿ ಅಭಿಮಾನಿಗಳು ಹುಚ್ಚೆದ್ದು ಕುಣಿದರೆ, ಅರ್ಜೆಂಟೀನಾದ ಅಭಿಮಾನಿಗಳಿಗೆ ಹೃದಯವೇ ಒಡೆದು ಹೋದಂತಹ ಅನುಭವ ಉಂಟಾಯಿತು.

ಪ್ರಬಲ ಪೈಪೋಟಿ: ನಿಗದಿತ ಅವಧಿಯಲ್ಲಿ ಪ್ರಬಲ ಹೋರಾಟ ಕಂಡುಬಂತು.  ಚೆಂಡಿನೊಂದಿಗೆ ಪದೇ ಪದೇ ಎದುರಾಳಿ ಆವರಣದೊಳಗೆ ನುಗ್ಗುತ್ತಿದ್ದ ಅರ್ಜೆಂಟೀನಾ ತಂಡದವರು ಕೊಂಚದರಲ್ಲಿ ಗೋಲು ಗಳಿಸುವ ಅವಕಾಶ ತಪ್ಪಿಸಿಕೊಂಡರು. ಜರ್ಮನಿ ತಂಡದವರು ತಮ್ಮ ಎಂದಿನ ಆಟದ ಮೂಲಕ ಗಮನ ಸೆಳೆದರು.

20ನೇ ನಿಮಿಷದಲ್ಲಿಯೇ ಅರ್ಜೆಂಟೀನಾ ಸುಂದರ ಅವಕಾಶವೊಂದನ್ನು ಹಾಳು ಮಾಡಿಕೊಂಡಿತು. ಹಿಗ್ವಿನ್‌ ಚೆಂಡನ್ನು ಹಿಡಿತಕ್ಕೆ ಪಡೆದು ಮುನ್ನುಗ್ಗಿದರು. ಅವರ ಎದುರು ಗೋಲ್‌ ಕೀಪರ್ ಹೊರತುಪಡಿಸಿದರೆ ಮತ್ತೊಬ್ಬರು ಇರಲಿಲ್ಲ. ಆದರೆ ಹಿಗ್ವಿನ್‌ ಒದ್ದ ಚೆಂಡು ಗೋಲು ಪೆಟ್ಟಿಗೆ ಎಡಭಾಗದಲ್ಲಿ ಹೋಯಿತು. ಅದಕ್ಕೂ ಮೊದಲು ಲಯೊನೆಲ್‌ ಮೆಸ್ಸಿ ಎರಡು ಅದ್ಭುತ ಪಾಸ್‌ ನೀಡಿದ್ದರು. ಆಗಲೂ ಅವಕಾಶ ತಪ್ಪಿ ಹೋಗಿತ್ತು.

31ನೇ ನಿಮಿಷದಲ್ಲಿ ಹಿಗ್ವಿನ್‌ ಚೆಂಡು ಗುರಿ ಸೇರಿಸಿದ್ದರು. ಆದರೆ ಅದು ಆಫ್‌ ಸೈಡ್‌ ಆಗಿತ್ತು. 40ನೇ ನಿಮಿಷದಲ್ಲಿ ಮತ್ತೆ ಮೆಸ್ಸಿ ಚೆಂಡಿನೊಂದಿಗೆ ಪೆನಾಲ್ಟಿ ಆವರಣದೊಳಗೆ  ನುಗ್ಗಿದ್ದರು.  ಆಗಲೂ   ಗೋಲು ಗಳಿಸುವ ಅವಕಾಶವನ್ನು ಕೊಂಚದರಲ್ಲಿ ಕಳೆದುಕೊಂಡರು. ಜರ್ಮನಿಯ ಗೋಲ್‌ ಕೀಪರ್‌ ಮ್ಯಾನುಯೆಲ್‌ ನೆಯೊರ್‌ ಕೂಡ ಚೆಂಡನ್ನು ಸೊಗಸಾಗಿ ತಡೆದರು. ಮೊದಲಾರ್ಧದ ಕೊನೆಯ ಐದು ನಿಮಿಷ ಜರ್ಮನಿ ಪಾರಮ್ಯ ಸಾಧಿಸಿತ್ತು.

ಎರಡನೇ ಅವಧಿಯಲ್ಲೂ ತುರುಸಿನ ಹೋರಾಟ ಕಂಡುಬಂತು. ಆದರೆ ಗೋಲುಗಳು ಮಾತ್ರ ಬರಲಿಲ್ಲ.

ನಿಖರ ಪಾಸ್‌ಗಳು ಮೂಲಕ ಎರಡೂ ತಂಡದವರು ಹಲವು ಅವಕಾಶಗಳನ್ನು ಸೃಷ್ಟಿಸಿದವು. 90 ನಿಮಿಷಗಳ ಪಂದ್ಯದಲ್ಲಿ ಗೋಲು ಬರದ ಕಾರಣ 30 ನಿಮಿಷಗಳ ಹೆಚ್ಚುವರಿ ಆಟದ ಮೊರೆ ಹೋಗಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT