ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡ್ಡು ನೆನಪಿನಲ್ಲಿ...

Last Updated 28 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಜಿಡ್ಡು ಕೃಷ್ಣಮೂರ್ತಿ ಹುಟ್ಟಿದ್ದು (1895, ಮೇ 11) ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ. ಚಿಕ್ಕಂದಿನಲ್ಲೇ ಜಿಡ್ಡು ಕೃಷ್ಣಮೂರ್ತಿ ಮತ್ತು ಅವರ ಸಹೋದರ ಇಬ್ಬರನ್ನು ಡಾ. ಆ್ಯನಿಬೆಸೆಂಟ್ ಅವರು ದತ್ತು ತೆಗೆದುಕೊಂಡಿದ್ದರು.

ಅತೀಂದ್ರಿಯ ಯೋಗದ ಮೂಲಕ ಬ್ರಹ್ಮಜ್ಞಾನ ಗಳಿಸಲು ಸಾಧ್ಯವೆಂದು ನಂಬುವ, ವಿಶ್ವಭ್ರಾತೃತ್ವವನ್ನು ಪ್ರತಿಪಾದಿಸುವ (ಥಿಯೋಸಫಿಕಲ್) ಆ್ಯನಿಬೆಸೆಂಟ್ ಅವರ ಬಳಿ ಜಿಡ್ಡು ಕೃಷ್ಣಮೂರ್ತಿ ಪಳಗುತ್ತಾ ಹೋದರು.
 
ಇವರ ಚುರುಕುತನ ಹಾಗೂ ವಿಷಯ ಗ್ರಹಿಸುವ ಪರಿ ಕಂಡು ಆ್ಯನಿಬೆಸೆಂಟ್ ಮತ್ತು ಇತರರು ಜಿಡ್ಡು ಕೃಷ್ಣಮೂರ್ತಿ ಅವರ ಮೇಲೆ ಅಪಾರ ಭರವಸೆಯನ್ನು ಇರಿಸಿಕೊಂಡಿದ್ದರು. ಇವರ ನಿರೀಕ್ಷೆ ಹುಸಿಯಾಗಲಿಲ್ಲ. ಜಿಡ್ಡು ಕೃಷ್ಣಮೂರ್ತಿ ಮುಂದೆ ಒಬ್ಬ ಅದ್ಭುತ ಚಿಂತಕರಾಗಿ ಬೆಳೆದರು.

ಜಿಡ್ಡು ಕೃಷ್ಣಮೂರ್ತಿ ಉತ್ತಮ ವಾಗ್ಮಿ, ಲೇಖಕ ಹಾಗೂ ದಾರ್ಶನಿಕ. ವಿಶ್ವ ಪ್ರಮುಖ ಚಿಂತಕರಲ್ಲಿ ಇವರು ಕೂಡ ಒಬ್ಬರು. ಇವರು ಯಾವುದೇ ಒಂದು ತತ್ವಶಾಸ್ತ್ರ ಅಥವಾ ಧರ್ಮವನ್ನು ಪ್ರತಿಪಾದಿಸಲಿಲ್ಲ. ಆದರೆ ಅವರು ಜೀವನಕ್ಕೆ ಸಂಬಂಧಿಸಿದ ವಿಚಾರಗಳು, ಸಾಮಾಜಿಕ ತೊಡಕುಗಳು.

ಭ್ರಷ್ಟಾಚಾರ, ಸಾಮಾನ್ಯ ಮನುಷ್ಯನ ಮನೋ ತುಮುಲಗಳು, ಕೋಪ, ಹಸಿವು ಇವೆಲ್ಲವುಗಳ ಬಗ್ಗೆ ಕರಾರುವಕ್ಕಾಗಿ ತಿಳಿಸುತ್ತಿದ್ದ ಪರಿ ಇವರನ್ನು ಉತ್ತುಂಗಕ್ಕೆ ಕೊಂಡೊಯ್ಯಿತು. ಇವೆಲ್ಲವುಗಳ ನಿವಾರಣೆಗೆ, ಮನಃ ಶಾಂತಿಗೆ ಅಧ್ಯಾತ್ಮ ಪ್ರಮುಖ ಎಂಬುದನ್ನು ತಿಳಿಸಿದರು. ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡಬೇಕು ಎಂಬ ಆಶಯ ಇವರ ಪ್ರತಿ ಮಾತಿನಲ್ಲೂ ಒಸರುತ್ತಿತ್ತು.

ಜಿಡ್ಡು ಕೃಷ್ಣಮೂರ್ತಿ ಅವರು ಮನುಷ್ಯ ನಿರ್ಮಿತ ಕಟ್ಟುಪಾಡುಳ್ಳ ಸಾಮಾಜಿಕ ವ್ಯವಸ್ಥೆ, ರಾಷ್ಟ್ರೀಯತಾವಾದ, ಪಂಥೀಯತೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ. ಇದರ ಜತೆ ಜತೆಗೆ ಅವರು ಜೀವನದ ಸತ್ಯಾನ್ವೇಷಣೆ ಕುರಿತು ಮಾರ್ಗದರ್ಶಿ ಮಾತುಗಳನ್ನು ಹೇಳಿದ್ದಾರೆ.

ಇವರ ಎಲ್ಲ ಮಾತುಗಳು ಇಂದಿಗೂ ಕೂಡ ಸಾರ್ವತ್ರಿಕ. ಇವರು ಗುರುವಾಗಿ ಯಾವುದೇ ಮಾತುಗಳನ್ನು ಹೇಳಿಲ್ಲ. ಒಬ್ಬ ಸ್ನೇಹಿತನಾಗಿ ಇತರರಿಗೆ ತಮ್ಮ ನಿಲುವುಗಳನ್ನು ದಾಟಿಸಿದ್ದಾರೆ. ಇವರ ಪ್ರತಿ ಮಾತುಗಳು ಕೂಡ ಒಳವುಗಳಿಂದ ಕೂಡಿದವು. ಇವರ ಮಾತಿಗೆ ಯಾವುದೇ ಆಚರಣೆ, ಸಂಪ್ರದಾಯದ ಲೇಪ ಇರುತ್ತಿರಲಿಲ್ಲ. ಹಾಗಾಗಿಯೇ ಇವರ ಮಾತುಗಳು ಎಲ್ಲರಿಗೂ ಇಷ್ಟವಾಗುತ್ತಿದ್ದವು.

ಜಿಡ್ಡು ಕೃಷ್ಣಮೂರ್ತಿ ದೇಶದ ಪ್ರಮುಖ ಬರಹಗಾರರಲ್ಲಿ ಒಬ್ಬರು. ತತ್ವಶಾಸ್ತ್ರ ಹಾಗೂ ಅಧ್ಯಾತ್ಮದಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲ ಅತ್ಯುತ್ತಮ ವಾಗ್ಮಿ. ಇವರು ಮನಶಾಸ್ತ್ರ, ಮಾನವೀಯ ಸಂಬಂಧಗಳು, ಧ್ಯಾನ, ನಿಸರ್ಗ ಇವೆಲ್ಲದರ ಜತೆಗೆ ಸಮಾಜವನ್ನು ಯಾವ ರೀತಿ ಒಳ್ಳೆ ಮಾರ್ಗದಲ್ಲಿ ಸುಧಾರಣೆ ಮಾಡಬೇಕು ಎಂಬುದರ ಬಗ್ಗೆ ತಮ್ಮದೇ ಸಿದ್ದಾಂತವನ್ನು ಮಂಡಿಸಿದ್ದಾರೆ.

ಇವರು ತಮ್ಮ ಪ್ರತಿ ಮಾತಿನಲ್ಲೂ ಮನುಷ್ಯನ ಆತ್ಮ ಚೈತನ್ಯದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.  ಕ್ರಾಂತಿ ಎಂಬುದು ಹೊರಗಿನಿಂದ ಆಗುವಂತಹುದಲ್ಲ, ಅದು ಸಾಮಾಜಿಕವಾಗಿ ಆಗುವ ಬದಲಾವಣೆ ಎಂಬುದನ್ನು ಹೇಳುತ್ತಿದ್ದರು.

ಕೃಷ್ಣಮೂರ್ತಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಆದರೆ ಯುವಕನಾಗಿದ್ದಾಗಲೇ ಇವರು ಜಾತಿ ಮತ ಒಟ್ಟನ್ನೆಲ್ಲಾ ತೂರಿದವರು. ಇವರು ತತ್ವಜ್ಞಾನವನ್ನು ಪಸರಿಸುವ ಸಲುವಾಗಿ ಇಡೀ ಪ್ರಪಂಚವನ್ನು ಸುತ್ತಿದರು. ಜತೆಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ಇವರ ಎಲ್ಲ ಭಾಷಣಗಳು ಹಾಗೂ ಚರ್ಚೆಗಳು ಇಂದು ಅಕ್ಷರರೂಪ ಪಡೆದುಕೊಂಡಿದೆ. ಇವರು 1986ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಅಸ್ತಂಗತರಾದರು.

ಜಿಡ್ಡು ಕೃಷ್ಣಮೂರ್ತಿ ಅನುಯಾಯಿಗಳು ಭಾರತ ಸೇರಿದಂತೆ ಗ್ರೇಟ್ ಬ್ರಿಟನ್, ಯನೈಟೆಡ್ ಸ್ಟೇಟ್ಸ್ ಮೊದಲಾದೆಡೆ ಎನ್‌ಜಿಒಗಳನ್ನು ಸ್ಥಾಪಿಸಿಕೊಂಡು ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ಜತೆಗೆ ಅವರ ಭಾಷಣ ಹಾಗೂ ವಿಚಾರಧಾರೆಗಳನ್ನು ಭಾಷಾಂತರಿಸಿ ವಿತರಣೆ ಮಾಡುವ ಕಾರ್ಯದಲ್ಲೂ ನಿರತರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಜಿಡ್ಡು ಕೃಷ್ಣಮೂರ್ತಿ ಫೌಂಡೇಷನ್ ಏಪ್ರಿಲ್ 7ರಿಂದ 9ರವರೆಗೆ `ವಾಟ್ ಈಸ್ ರಿಲೀಜಿಯಸ್ ಮೈಂಡ್~ ಎಂಬ ವಿಷಯ ಕುರಿತು ಕಾರ್ಯಾಗಾರ ಏರ್ಪಡಿಸಿದೆ. ಇಲ್ಲಿ ಪಾಲ್ಗೊಳ್ಳುವವರಿಗೆ ಜೀವನದ ಹೊಸ ಹೊಳಹುಗಳು ಸಿದ್ಧಿಸಲಿವೆ.

ಸೌಮ್ಯ ಅವರು ಹೇಳುವಂತೆ, ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವುದರಿಂದ ನಮ್ಮನ್ನು ನಾವು ಅರಿತುಕೊಳ್ಳಬಹುದು. ಜತೆಗೆ ನಮ್ಮ ಸುತ್ತಲಿನ ಪ್ರಪಂಚವನ್ನು ಅರಿಯಬಹುದು. ನಮ್ಮ ಅರಿವಿಗೆ ಬಾರದಿರುವ ಅದೆಷ್ಟೋ ಸಂಗತಿಗಳು ಇವೆ. ಆ ಬಗ್ಗೆ ನಾವು ಜಾಗೃತರಾಗಲು ಇದೊಂದು ಅತ್ಯುತ್ತಮ ಅವಕಾಶ ಎನ್ನುತ್ತಾರೆ ಅವರು.

ಕಾರ್ಯಾಗಾರದಲ್ಲಿ ಖ್ಯಾತ ಬರಹಗಾರರು, ಸ್ಕಾಲರ್ಸ್‌ಗಳ ಜತೆ ಸಂವಾದ ಚರ್ಚೆಗಳು ಇರುತ್ತವೆ. ಜತೆಗೆ ಜಿಡ್ಡು ಕೃಷ್ಣಮೂರ್ತಿ ಅವರು ಭಾಷಣದ ವಿಡಿಯೋಗಳನ್ನು ನೋಡುವ ಅವಕಾಶ ಕೂಡ ಲಭ್ಯವಿದೆ. ಇವೆಲ್ಲದರ ಜತೆಗೆ `ಸೈಲೆಂಟ್ ನೇಚರ್ ವಾಕ್~ ಕೂಡ ಏರ್ಪಡಿಸಲಾಗಿದೆ. ಇವೆಲ್ಲ ಚರ್ಚೆಗಳು ಕನ್ನಡದಲ್ಲಿಯೇ ನಡೆಯಲಿವೆ ಎಂಬುದು ಕೂಡ ವಿಶೇಷ.

ಸ್ಥಳ ವ್ಯಾಲಿ ಸ್ಕೂಲ್ ಕ್ಯಾಂಪಸ್, ಕನಕಪುರ ರಸ್ತೆ, ಮಾಹಿತಿಗೆ 2843 5243. www.kfistudy.org email : kfistudy@ gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT