ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ರವಿ ಪ್ರಕರಣ ತನಿಖೆ ಸಿಬಿಐಗೆ: ಸಿದ್ದರಾಮಯ್ಯ

Last Updated 23 ಮಾರ್ಚ್ 2015, 7:26 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

‘ರವಿ ಅವರ ತಂದೆ – ತಾಯಿ ಭಾವನೆಗೆ ಬೆಲೆಕೊಟ್ಟು, ರಾಜ್ಯದ ಜನತೆಯ ಭಾವನೆಗೆ ಬೆಲೆಕೊಟ್ಟು ಈ ಪ್ರಕರಣವನ್ನು ಸಿಬಿಐಗೆ ವಹಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಶೆಟ್ಟರ್ ಸ್ವಾಗತ: ‘ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದ್ದನ್ನು ಸ್ವಾಗತಿಸುತ್ತೇವೆ’ ಎಂದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಇದನ್ನು ಒಂದು ವಾರದ ಹಿಂದೆಯೇ ಮಾಡಬೇಕಿತ್ತು ಎಂದು ಆಕ್ಷೇಪಿಸಿದರು. ಸರ್ಕಾರ ತಡವಾಗಿ ನಿರ್ಧಾರ ಕೈಗೊಂಡಿದೆ ಎಂದು ಆಕ್ಷೇಪಿಸಿದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ ಸದನದಿಂದ ಹೊರ ನಡೆದರು.

ಬೆಳಿಗ್ಗೆ ಸದನದ ಕಲಾಪ ಆರಂಭವಾಗುವುದಕ್ಕೂ ಮೊದಲೇ ವಿರೋಧ ಪಕ್ಷದ ಸದಸ್ಯರು ಸದನದ ಭಾವಿಗಿಳಿದಿದ್ದರು. ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಆಗಮಿಸಿ ಆಸೀನರಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುತ್ತಾ ಗದ್ದಲ ಎಬ್ಬಿಸಿದರು.

ವಿರೋಧ ಪಕ್ಷಗಳು ಹೆಚ್ಚಿನ ಗದ್ದಲ ನಡೆಸಲು ಅವಕಾಶ ಮಾಡಿಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎದ್ದು ನಿಂತು ಪ್ರಕರಣದ ಕುರಿತು ಮಾತು ಆರಂಭಿಸಿದರು. ಪ್ರಕರಣ ನಡೆದ ದಿನದಿಂದ ಇಲ್ಲಿಯ ವರೆಗಿನ ಮಾಹಿತಿ ನೀಡಿದರು. ಜತೆಗೆ, ಪ್ರಕರಣವನ್ನು ಸಿಐಡಿಗೆ ವಹಿಸಿದ್ದನ್ನು ಸಮರ್ಥಿಸಿಕೊಂಡರು.

ರಾಜ್ಯ ಪೊಲೀಸರ ಆತ್ಮ ಸ್ಥೈರ್ಯ ಕುಗ್ಗುತ್ತದೆ: ‘ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದಂತೆ ಆಗುತ್ತದೆ. ಹಾಗಾಗಿ, ಈ ಪ್ರಕರಣವನ್ನು ಮೊದಲಿಗೆ ಸಿಐಡಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸದನ ಮುಗಿಯುವುದರೊಳಗೆ ಸಿಐಡಿ ನೀಡುವ ‘ಸ್ಟೇಟಸ್ ವರದಿ’ ನೀಡುತ್ತೇವೆ ಎಂದು ಹೇಳಿದ್ದೆವು. ಅದರ ಮೇಲೂ ವಿರೋಧ ಪ್ರಕ್ಷಕ್ಕೆ ತೃಪ್ತಿ ಆಗದಿದ್ದರೆ ಸಿಬಿಐಗೆ ವಹಿಸುವ ಬಗ್ಗೆ ಚರ್ಚಿಸೋಣ ಎಂದು ಹೇಳಿದ್ದೆವು ಎಂದು ತಿಳಿಸಿದರು.

ರಕ್ಷಣೆ ಉದ್ದೇಶ ಇಲ್ಲ: ಸರ್ಕಾರ ಕೆಲವರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಸಿದ್ದರಾಮಯ್ಯ ಅವರು, ‘ಸರ್ಕಾರಕ್ಕೆ ಯಾರ ರಕ್ಷಣೆ ಮಾಡುವ ಉದ್ದೇಶ ಇಲ್ಲ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಅಧಿಕಾರಿಗಳು ಭದ್ರತೆ ಮತ್ತು ಮುಕ್ತ ವಾತಾವರಣದಲ್ಲಿ ಕೆಲಸ ಮಾಡಬೇಕು ಎಂಬುದು ಸರ್ಕಾರದ ಆಶಯ. ಯಾವುದೇ ಅಧಿಕಾರಿಗೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಕೆಲಸದಲ್ಲಿ ಒತ್ತಡ ಹೇರುವುದಿಲ್ಲ. ಇದು ಸರ್ಕಾರದ ನಿಲುವು’ ಎಂದು ಸದನಕ್ಕೆ ತಿಳಿಸಿದರು.

‘ನಮ್ಮ ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ. ಸಿಬಿಐ ಬಗ್ಗೆ ನಾವು ಯಾವುದೇ ಸಲ್ಲದ ಮಾತನಾಡಿಲ್ಲ. ‘ಸಿಬಿಐ ಚೋರ್ ಬಚಾವ್ ಹಾಗೂ ಕಾಂಗ್ರೆಸ್ ಬಚಾವ್ ಸಂಸ್ಥೆ’ ಎಂದು ಆರೋಪ ಮಾಡುತ್ತಿದ್ದುದನ್ನು ನೀವು ಕೇಳಿದ್ದೀರಿ. ಆದರೆ, ಸಿಬಿಐ ಬಗ್ಗೆ ನಮಗೆ ನಂಬಿಕೆ ಇದೆ’ ಎಂದರು.

ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ಕೆಲ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದೇವೆ. ಆದರೆ, ಯಾವುದೇ ಪ್ರಕರಣ ನಡೆದ ತಕ್ಷಣ ಸಿಬಿಐ ತನಿಖೆ ಆಗಲೇಬೇಕು ಎಂಬ ಒತ್ತಾಯ ಸಲ್ಲ. ಯಾವುದೇ ರಾಜ್ಯದಲ್ಲಿ ಘಟನೆ ನಡೆದ ತಕ್ಷಣ ಸಿಬಿಐಗೆ ವಹಿಸಿದ ನಿದರ್ಶನ ಇಲ್ಲ. ಸಿಬಿಐನಲ್ಲೂ ಕರ್ನಾಟಕ ಮತ್ತು ಬೇರೆ ರಾಜ್ಯದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದ ಸಿಐಡಿ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸರ್ಕಾರ ಕಾನೂನು ವ್ಯವಸ್ಥೆ ಮತ್ತು ನ್ಯಾಯಾಂಗಕ್ಕೆ ಅಗೌರವ ತೋರುವ ಕೆಲಸ ಮಾಡುವುದಿಲ್ಲ. ನೋವಿನ ಸಂಗತಿ ಎಂದರೆ, ರವಿ ಸಾವಿನ ಮರು ದಿನ ಅವರ ಪೋಷಕರನ್ನು ಕರೆ ತಂದು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವುದು ಸಲ್ಲ. ಸಾವಿನಲ್ಲಿ ರಾಜಕೀಯ ಮಾಡುವುದು ಸಲ್ಲದು. ಈ ಕಾರ್ಯವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಸಿಎಂ ಆರೋಪಿಸಿದರು.

ಈ ವೇಳೆ ಸಿಎಂ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಗೂ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಸಿಡಿದರು. 
ಸಾವಿನಲ್ಲಿ ರಾಜಕೀಯ ಅಗತ್ಯ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ನಂಬಿಕೆ ಇದೆ. ಐದು ವರ್ಷದಲ್ಲಿ ನೀವು ಒಂದು ಪ್ರಕರಣವನ್ನೂ ಸಿಬಿಐಗೆ ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳತ್ತ ಬೊಟ್ಟು ಮಾಡಿದರು. 

ಮಧ್ಯಾಂತ ವರದಿ ಇಲ್ಲ: ಹೈಕೋರ್ಟ್ ಸಿಐಡಿ ತನಿಖೆಯ ಮಧ್ಯಾಂತರ ವರದಿ ನೀಡದಂತೆ ತಡೆ ನೀಡಿರುವುದರಿಂದ ಸದನಲ್ಲಿ ಮಧ್ಯಂತರ ವರದಿ ನೀಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.

ಸಿಬಿಐ ತನಿಖೆ ಘೋಷಣೆ: ‘ರವಿ ಅವರ ತಂದೆ ತಾಯಿಗಳ ಭಾವನೆ ಅರ್ಥಮಾಡಿಕೊಂಡಿದ್ದೇನೆ. ಪೋಷಕರ ಮಾತು, ಭಾವನೆ ಮತ್ತು ಜನರ ಭಾವನೆಗಳ ಬಗ್ಗೆ ನಮಗೆ ಗೌರವ ಇದೆ. ಜತೆಗೆ, ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ. ಎಲ್ಲರ ಭಾವನೆಗೆಳಿಗೆ ಬೆಲೆಕೊಟ್ಟು ಪ್ರಕರಣನವನ್ನು ಸಿಬಿಐಗೆ ವಹಿಸಲು ಸರ್ಕಾರ ತೀರ್ಮಾನ ಮಾಡಿದೆ’ ಎಂದು ಸದನದಲ್ಲಿ ಘೋಷಿಸುವ ಮೂಲಕ ಸಿದ್ದರಾಮಯ್ಯ ಅವರು ಗೊಂದಲಕ್ಕೆ ತೆರೆ ಎಳೆದರು.

ಸದನದಿಂದ ಹೊರಕ್ಕೆ: ‘ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದ್ದನ್ನು ಸ್ವಾಗತಿಸುತ್ತೇವೆ’ ಎಂದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಇದನ್ನು ಒಂದು ವಾರದ ಹಿಂದೆಯೇ ಮಾಡಬೇಕಿತ್ತು ಎಂದು ಆಕ್ಷೇಪಿಸಿದರು. ಸರ್ಕಾರ ತಡವಾಗಿ ನಿರ್ಧಾರ ಕೈಗೊಂಡಿದೆ ಎಂದು ಆಕ್ಷೇಪಿಸಿದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ ಸದನದಿಂದ ಹೊರ ನಡೆದರು.

ಸ್ವಾಗತ: ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಡಿ.ಕೆ.ರವಿ ಅವರ ಮಾವ ಹನುಮಂತರಾಯಪ್ಪ ಅವರು ಸ್ವಾಗತಿಸಿದ್ದಾರೆ. ‘ಆದಷ್ಟು ಬೇಗ ತನಿಖೆ ನಡೆದು ಸತ್ಯ ಹೊರಬರಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT