ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ಬೇಗ ಮುಗಿಸಿ ಅನುಮಾನ ಪರಿಹರಿಸಿ

Last Updated 17 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವು ನಾನಾ ಅನುಮಾನಗಳಿಗೆ ಕಾರಣವಾಗಿರುವುದು ಸಹಜ. ಏಕೆಂದರೆ ಅವರೊಬ್ಬ ದಕ್ಷ ಅಧಿಕಾರಿ. ಸೂಕ್ಷ್ಮ ಸಂವೇದನೆ, ಜನಪರ ಕಾಳಜಿಯಿದ್ದ ಸ್ನೇಹಜೀವಿ. ಸಣ್ಣ ವಯಸ್ಸು. 36,  ಸಾಯುವ ವಯಸ್ಸಂತೂ ಅಲ್ಲ. ಇನ್ನೂ ಸುದೀರ್ಘ ಕಾಲದ ವೃತ್ತಿಜೀವನದ ಭವಿಷ್ಯ ಇದ್ದಂತಹವರು.

ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಲ್ಲ. ಭ್ರಷ್ಟರನ್ನು, ಭೂಗಳ್ಳರನ್ನು, ಮರಳು ಮಾಫಿಯಾವನ್ನು, ತೆರಿಗೆ ವಂಚಕರನ್ನು ಪ್ರಜ್ಞಾಪೂರ್ವಕವಾಗಿಯೇ ಎದುರು ಹಾಕಿ ಕೊಂಡಿದ್ದರು. ಕೆಲ ರಿಯಲ್ ಎಸ್ಟೇಟ್ ಕಂಪೆನಿಗಳ ತೆರಿಗೆ ವಂಚನೆ ಬಯಲಿಗೆ ಎಳೆದು ಸುಮಾರು ರೂ. 125 ಕೋಟಿಯಷ್ಟು ದೊಡ್ಡ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಬರುವಂತೆ ಮಾಡಿದ್ದರು. ಕೆಲಸ ಮಾಡಿದ ಸ್ಥಳಗಳಲ್ಲೆಲ್ಲ ವಿಶೇಷವಾಗಿ ದುರ್ಬಲರು, ದೀನ ದಲಿತರ ಪ್ರೀತಿ ವಿಶ್ವಾಸ ಗಳಿಸಿದ್ದರು.

ಅವರ ಅಸಹಜ ಸಾವಿನಿಂದ ಆಘಾತಗೊಂಡಿರುವ ಜನರು ಅನೇಕ ಕಡೆ ಸ್ವಯಂಪ್ರೇರಿತರಾಗಿ ಪ್ರತಿಭಟನೆಗಳನ್ನು ನಡೆಸಿರುವುದು ಇದಕ್ಕೆ ಸಾಕ್ಷಿ. ಅಂಥವರು, ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ದುರದೃಷ್ಟಕರ. ದಕ್ಷ ಹಾಗೂ ಜನಾನುರಾಗಿ ಅಧಿಕಾರಿಯೊಬ್ಬರ ಬದುಕು ಹೀಗೆ ದುರಂತದಲ್ಲಿ ಅಂತ್ಯವಾಗಿರುವ ಬಗ್ಗೆ  ಜನರು ಭಾವನಾತ್ಮಕವಾಗಿ ಸ್ಪಂದಿಸುತ್ತಿರುವುದು ಸಹಜವಾದದ್ದೇ. ರಾಜ್ಯ ವಿಧಾನಮಂಡಲ ಹಾಗೂ ಲೋಕಸಭೆಯಲ್ಲೂ ರವಿ ಅವರ ಅಸಹಜ ಸಾವಿಗೆ ಆತಂಕ ವ್ಯಕ್ತವಾಗಿದೆ.

ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಅಸಹಜ ಸಾವಿನ ಬಗ್ಗೆ ಜನರಲ್ಲಿ ಸ್ವಾಭಾವಿಕವಾಗಿಯೇ ಶಂಕೆಗಳೂ  ಮೂಡಿವೆ. ಬಗೆಬಗೆಯ ವದಂತಿಗಳು ಹರಿದಾಡಲಾರಂಭಿಸಿವೆ. ಆದರೆ ಇದು, ಭಾವೋದ್ವೇಗದಿಂದ ಅಥವಾ ಪೂರ್ವಗ್ರಹದಿಂದ ಯಾವುದೇ ನಿರ್ಣಯಕ್ಕೆ ಬರುವಂಥ ವಿಚಾರ ಅಲ್ಲ, ಸಂದರ್ಭವೂ ಅಲ್ಲ.   ಇಂಥ ವಿಷಯಗಳಲ್ಲಿ ರಾಜಕಾರಣಿಗಳಂತೂ ಹೆಚ್ಚು ವಿವೇಚನೆಯಿಂದ, ಪ್ರೌಢಿಮೆಯಿಂದ ನಡೆದುಕೊಳ್ಳಬೇಕು.

ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಂತಹ  ಯಾವುದಾದರೂ ಬೆದರಿಕೆಗಳು ಅವರಿಗೆ ಇದ್ದವೆ ಎಂಬಂಥ  ವಿಚಾರದ ಬಗ್ಗೆ ತನಿಖೆಯಾಗಬೇಕು.  ಈ ಸಂಬಂಧದಲ್ಲಿ ಅವರು ಮೇಲಧಿಕಾರಿಗಳಿಗೆ ಯಾವುದೇ ದೂರು ನೀಡಿರಲಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗೆಯೇ  ರವಿ ಅವರು ಇಂಥ ಯಾವುದೇ ದೂರು ಕೊಟ್ಟಿರಲಿಲ್ಲ ಎಂದು ಪೊಲೀಸರೂ ಹೇಳಿದ್ದಾರೆ. ರವಿ ಅವರನ್ನು ಕೋಲಾರದಿಂದ ಬೆಂಗಳೂರಿಗೆ ವರ್ಗಾಯಿಸಿದಾಗ, ‘ಭೂಗಳ್ಳರು, ಮರಳು ಮಾಫಿಯಾ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಆರೋಪ ಹೊರಿಸಲಾಗಿತ್ತು.

ಆದರೆ ‘ರವಿ ಅವರ ಮಾವನ ಕೋರಿಕೆಯಂತೆ ವರ್ಗಾವಣೆ ಮಾಡಲಾಯಿತು’ ಎಂದು ಸ್ವತಃ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಅಸ್ವಾಭಾವಿಕ ಸಾವಿನ ಕುರಿತಂತೆ ಎಲ್ಲಾ ಕೋನಗಳಲ್ಲಿಯೂ ತನಿಖೆ ನಡೆಯುವುದು ಅಗತ್ಯ. ಕಚೇರಿಗೆ ಬಂದು ಕೆಲ ಹೊತ್ತು ಇದ್ದು ಏಕಾಏಕಿ ಮನೆಗೆ ಮರಳಿದ ಉನ್ನತ ಅಧಿಕಾರಿಯೊಬ್ಬರ ಅಸ್ವಾಭಾವಿಕ ಸಾವಿನ ಬಗ್ಗೆ  ಪೊಲೀಸರು ಹೆಚ್ಚು ಎಚ್ಚರದಿಂದ, ದಕ್ಷತೆಯಿಂದ ತನಿಖೆ ನಡೆಸಬೇಕಿದೆ. ಯಾವುದೇ ಪ್ರಭಾವಗಳಿಗೆ ಮಣಿಯದಂತಹ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗಬೇಕು.

ಅತ್ಯಂತ ದುಃಖಕರವಾದ ಪ್ರಕರಣ ಇದು. ಆದಷ್ಟು ಬೇಗ ಈ ದುರಂತದ ಸತ್ಯಾಂಶ ಹೊರತಂದು ಜನರ ಅನುಮಾನ ದೂರ ಮಾಡಬೇಕಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆದು ನ್ಯಾಯ ದೊರಕಿಸಿಕೊಡುವುದು ಆದ್ಯತೆಯಾಗಬೇಕು. ಕರ್ತವ್ಯನಿಷ್ಠ ಹಾಗೂ  ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಮುಕ್ತ ಅವಕಾಶಗಳಿವೆ ಎಂಬಂತಹ ಸಂದೇಶ ಹೊರಹೊಮ್ಮಬೇಕು.

ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವ ಹೊಣೆಗಾರಿಕೆ ಸರ್ಕಾರದ್ದು. ಈ ಪ್ರಕರಣ ಕುರಿತಂತೆ ಸತ್ಯ ಹೊರಬರುವವರೆಗೆ ಎಲ್ಲರೂ ಸಂಯಮ ವಹಿಸಬೇಕು. ಭಾವೋದ್ರೇಕದಿಂದ ಸಮಸ್ಯೆಗೆ ಪರಿಹಾರ ದೊರೆಯದು. ಉನ್ನತ ಅಧಿಕಾರಿಯೊಬ್ಬರು ಇಂತಹ ಅಸಹಜ ಸಾವಿಗೀಡಾಗುವಂತಹ ನಮ್ಮ ಸಾಮಾಜಿಕ ವ್ಯವಸ್ಥೆಯ ಬಗ್ಗೆ ವಸ್ತುನಿಷ್ಠ ನೆಲೆಯಲ್ಲಿ ವಿಶ್ಲೇಷಣೆಗಳಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT