ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಸಾನದಿ ದಾಟಿದ ಕವಿಜೀವ

Last Updated 21 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ಅಕಬರ ಅಲಿ ಕನ್ನಡ ಸಾಹಿತ್ಯದ ಗಂಭೀರ ಓದುಗರಾಗಿದ್ದರು. ವಿಮರ್ಶಕರೂ ಹೌದು. ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯ ಎಲ್ಲ ಪಂಥಗಳೊಂದಿಗೆ ಹಾಯ್ದು ಬಂದ ಇವರು ಈ ಪಂಥಗಳೊಂದಿಗೆ ಪ್ರತಿಕ್ರಿಯಿಸಲು ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿಸಿಕೊಂಡಿದ್ದರು.

ಹೀಗಾಗಿ, ಅವರ ಕಾವ್ಯದಲ್ಲಿ ಈ ಎಲ್ಲ ಪಂಥಗಳ ವಿಚಾರದ ಮಾದರಿಗಳನ್ನು ಕಾಣಲು ಸಾಧ್ಯ. ಪ್ರಗತಿಶೀಲ ಪಂಥದ ಮೌಲ್ಯಗಳ ಹರಿಕಾರರಾಗಿ ಅಕಬರ ಅಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೆಂದು ಅವರನ್ನು ಆ ಪರಿಧಿಯಲ್ಲಿಯೇ ಇಟ್ಟು ನೋಡಬೇಕಾಗಿಲ್ಲ. ಏಕೆಂದರೆ ಆ ಪರಿಧಿಯನ್ನು ಮೀರಿ ನಿಲ್ಲುವ ಸಾಹಿತ್ಯ ಕೃಷಿ ಅವರದ್ದು.

1946ರಿಂದ ಅವರು ಕಾವ್ಯ ಕ್ಷೇತ್ರವನ್ನು ಪ್ರವೇಶ ಮಾಡಿದರೆಂದು ತೋರುತ್ತದೆ. ವಿಷಸಿಂಧು (1951) ಅವರ ಮೊದಲ ಸ್ವತಂತ್ರ ಕವನ ಸಂಕಲನ. ಇದಾದ ನಂತರ ನವಚೇತನ (1961), ಸುಮನಸೌರಭ (1965), ಗಂಧಕೇಶರ (1972) ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಆನಂತರ ‘ತಮಸಾನದಿಯ ಎಡಬಲದಿ’ ಶೀರ್ಷಿಕೆಯಲ್ಲಿ ಅವರ ಎಲ್ಲ ಕವನ ಸಂಕಲನಗಳನ್ನು ಸೇರಿಸಿ ಪ್ರಕಟಿಸುವುದರೊಂದಿಗೆ ಕೆಲವಷ್ಟು ಹೊಸಕವನಗಳನ್ನು ಒಂದು ಭಾಗವಾಗಿ ಸೇರಿಸಿ ಪ್ರಕಟಿಸಿದ್ದಾರೆ. 1989ರಲ್ಲಿ ‘ಅಕಬರ ಅಲಿಯವರ ಚುಟುಕುಗಳು’ ಕವನ ಸಂಕಲನ ಪ್ರಕಟವಾಗಿದೆ. 

ಪ್ರಗತಿಶೀಲ ಕವಿಗಳ ಪ್ರಧಾನ ಕಾವ್ಯಾಭಿವ್ಯಕ್ತಿ ಮಾರ್ಗವಾಗಿಯೇ ಇವರ ಚುಟುಕುಗಳು ಕನ್ನಡದಲ್ಲಿ ಅನಾವರಣಗೊಂಡಿವೆ. ಇವರಿಗೆ ಉಮ್ಮರ್‌ ಖಯ್ಯಾಮರ ಮುಕ್ತಕಗಳು ಪ್ರೇರಕಶಕ್ತಿಯಾಗಿದ್ದು ಕಂಡು ಬರುತ್ತದೆ. 

ಚುಟುಕು ಸಾಹಿತ್ಯದಲ್ಲಿ ತಕ್ಷಣವೇ ಗಮನಕ್ಕೆ ಬರುವ ಹೆಸರು ನಾಲ್ಕು. ದಿನಕರ ದೇಸಾಯಿ, ಅಕಬರ ಅಲಿ, ವಿ.ಜಿ. ಭಟ್ಟ ಮತ್ತು ಡಿವಿಜಿ ಅವರನ್ನು ‘ಚುಟುಕು ಬ್ರಹ್ಮ’ ಎಂದು ಕರೆಯಲಾಗಿದೆ. ಆದರೆ, ಈ ನಾಲ್ವರೂ ಚತುರ್ಮುಖನ ನಾಲ್ಕು ಮುಖಗಳಂತೆ ಕಾಣುತ್ತಾರೆ.

ನಡುವಿನ ಮುಖಗಳು ದಿನಕರ ದೇಸಾಯಿ ಮತ್ತು ಡಿವಿಜಿ ಅವರದ್ದಾದರೆ, ಎಡಬಲದ ಮುಖಗಳು ಅಕಬರ ಅಲಿ ಹಾಗೂ ವಿ.ಜಿ. ಭಟ್ಟರದ್ದು. ಡಿವಿಜಿಯವರು ವಚನ ಮಾದರಿಯನ್ನು ಅನುಸರಿಸಿದ್ದರಿಂದ ಎಲ್ಲರ ನಾಲಿಗೆಯಲ್ಲಿ ಉಳಿದರು.

ಅಕಬರ ಅಲಿ ಅವರ ಚುಟುಕುಗಳಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದವೇ ಅಧಿಕವಾಗಿವೆ. ಕ್ಷುದ್ರನಾಯಕರು, ಸ್ತ್ರೀಯರು, ಭಾರತೀಯ ಕ್ಷುದ್ರತನ, ವಿಶ್ವಶಾಂತಿಯ ಕುರಿತು ಸುಧಾರಣವಾದಿ ನಾಯಕರ ಕುರಿತು ಬರೆಯುತ್ತ ಹೋಗಿದ್ದಾರೆ.

ಜನಸಾಮಾನ್ಯರ ಜೀವನದ ದುರಂತ ಧ್ವನಿಯಾಗಿಯೇ ಇವರ ಚುಟುಕು ಮತ್ತು ಕಾವ್ಯ ಪ್ರಸ್ತುತಗೊಂಡಿವೆ. ಚುಟುಕಿನಲ್ಲಿಯೇ ಹೆಚ್ಚು ಮಾತುಮಾಡಿದ ಈ ಕವಿ ಚುಟುಕಿಗೆ ‘ವಾಮನರೂಪಿ ಕಾವ್ಯ’, ‘ಸಮಾಜದ ಪರಮೌಷಧಿ’ ಎಂದು ಕರೆದಿದ್ದಾರೆ.

ಅಕಬರ ಅಲಿ ಅವರು ಕನ್ನಡದ ಸತ್ವಶಾಲಿ ಕವಿಗಳಲ್ಲಿ ಒಬ್ಬರು. ಅವರ ಕಾವ್ಯ ಪ್ರಗತಿಶೀಲತೆಯ ಗುಣವನ್ನು ಮೀರಿ ಬೆಳೆದಿದೆ. ಇವರ ಕಾವ್ಯದಲ್ಲಿ ವಿಶೇಷವಾಗಿ ಗಮನ ಸೆಳೆಯುವ ಸಂಗತಿ ಎಂದರೆ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗುವಾಗಿನ ಮನಸ್ಥಿತಿಯ ಕುರಿತು ಬರೆದ ‘ಅವಳೀರುವಳಿ’ಯಂಥ ಕವನಗಳು.

ಈ ವಸ್ತುವಿನ ಇವರ ಕವನಗಳು ತುಂಬ ವಸ್ತುನಿಷ್ಠವಾಗಿವೆ. ಆದರ್ಶದೊಂದಿಗಿನ ದ್ವಂದ್ವ ಮನಸ್ಥಿತಿಯನ್ನು ನಿರಾಳವಾಗಿ ಬಿಚ್ಚಿಡುತ್ತವೆ. ಈ ಸ್ವರೂಪದ ವಸ್ತುವಿಚಾರದ ಕವಿತೆಗಳನ್ನು ಬೇರೆ ಕವಿಗಳಲ್ಲಿ ಕಾಣುವುದು ದುರ್ಲಭ. ಇಂತಹ ವಸ್ತು ಸಾಹಿತ್ಯ ಉತ್ತರ ಭಾರತದಲ್ಲಿ  ಅಧಿಕವಾಗಿ ಹರಿದಾಡಿದೆ.

ಅಕಬರ ಅಲಿ ಅವರ ಕಾವ್ಯವಾಗಲಿ, ಚುಟುಕುಗಳಾಗಲಿ ಅವುಗಳ ಪ್ರಧಾನ ಲಕ್ಷಣವೇ ಹದಹರಿತವಾದ ವಿಡಂಬನೆ ಮತ್ತು ವ್ಯಂಗ್ಯ. ಕೊನೆಯಲ್ಲಿ ವಿಷಾದದ ಧ್ವನಿಯಿಂದ ಮುಕ್ತಾಯಗೊಳ್ಳುವುದೇ ಅಧಿಕ. ಧರ್ಮಾತೀತ, ಜಾತ್ಯತೀತ ವಿಚಾರಗಳನ್ನು ಹೇಳುವಾಗ ಪ್ರತಿಮಾತ್ಮಕ ಪರಿಭಾಷೆಯಲ್ಲಿ ಅಭಿವ್ಯಕ್ತಿಸಿದ್ದೇ ಅಧಿಕ. ಇವರ ಚಿಂತನೆಗಳಲ್ಲಿ ಉತ್ಪ್ರೇಕ್ಷೆ ಕಾಣುವುದಿಲ್ಲ.

ಕನ್ನಡದಲ್ಲಿ ನೆಹರೂ ಅವರ ಕುರಿತು ಅಡಿಗರು ಮಾತ್ರ ಬರೆದಿದ್ದಾರೆಂದು ಹೇಳುವುದಿದೆ. ದಿನಕರ ದೇಸಾಯಿ, ಅಕಬರ ಅಲಿಯಂಥವರು ನೆಹರೂ ಅವರನ್ನು ಕುರಿತು ಭಾವನಾತ್ಮಕವಾಗಿ ಮತ್ತು ಅಷ್ಟೇ ಗಂಭೀರವಾದ ರಾಜಕೀಯ ಚಿಂತನೆಯೊಂದಿಗೆ ಚರ್ಚಿಸಿದ್ದಾರೆ.

ಅಕಬರ ಅಲಿ ಅವರು ಕೇವಲ ಕವಿಯಾಗಿ ಮಾತ್ರ ಬಿಂಬಿಸಿಕೊಂಡವರಲ್ಲ. ಸಂಶೋಧನೆ, ವಿಮರ್ಶೆ ಕ್ಷೇತ್ರದಲ್ಲಿಯೂ ಅಷ್ಟೇ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. 1942ರಲ್ಲಿ ‘ನಿರೀಕ್ಷೆಯಲ್ಲಿ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇದು ಅಂತರ್ಜಾತಿಯ ವಿವಾಹದ ಸಮಸ್ಯೆಯನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ಕೃತಿ.

ಕನ್ನಡದ ಸತ್ವಶಾಲಿ ಬರಹಗಾರರಾದ ಅಕಬರ ಅಲಿ ಅವರನ್ನು ಕನ್ನಡದ ವಿಮರ್ಶಾಲೋಕ ಮುಕ್ತಮನಸ್ಸಿನಿಂದ ನೋಡದೆ ಕಡೆಗಣಿಸಿದೆ ಎಂದು ವಿಷಾಧದಿಂದಲೇ ಹೇಳಬೇಕಾಗಿದೆ. ನವ್ಯಸಾಹಿತ್ಯ ಕೂಟದಲ್ಲಿ ನಿಸಾರ್‌ ಅಹಮದ್‌ ಅವರು ವಿಮರ್ಶಕರೊಂದಿಗೆ ಗೆದ್ದಂತೆ ಇವರಿಗೆ ಗೆಲುವು ಒಲಿಯಲಿಲ್ಲ. ತಮಸಾ ನದಿ ದಾಟಿದ ಈ ಕವಿ ಜೀವದ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಒಳಪಡಿಸಬೇಕಿದೆ.

ಅಲಿ ಹುಟ್ಟೂರು ಖಾನಾಪುರ
ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದವರು. ಹುಟ್ಟೂರಿನಲ್ಲಿ  ಪ್ರಾಥಮಿಕ, ಬೆಳಗಾವಿಯಲ್ಲಿ ಪ್ರೌಢಶಾಲೆ, ಕಾಲೇಜು, ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಎ (ಆನರ್ಸ್‌) ಮುಗಿಸಿದರು. ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ  ‘ಸರ್ವಜ್ಞನ ಸಮಾಜದರ್ಶನ ಮತ್ತು ಸಾಹಿತ್ಯ ಸತ್ವ’ ಕುರಿತು ಪಿಎಚ್‌.ಡಿ ಪಡೆದರು.

ಪ್ರೌಢಶಾಲೆಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳವರೆಗೆ ನಾಡಿನ ವಿವಿಧೆಡೆ ಬೋಧಕರಾಗಿ ಸೇವೆ ಸಲ್ಲಿಸಿದ್ದರು. ನಂತರ ನಗರದಲ್ಲಿದ್ದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ (ಈಗಿನ ಕರ್ನಾಟಕ ರಾಜ್ಯ ಮುಕ್ತ ವಿವಿ) ಉಪನ್ಯಾಸಕರಾದರು. ನಂತರ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು

ಕವಿ ಅಕಬರ ಅಲಿ ಇನ್ನಿಲ್ಲ
ಮೈಸೂರು:
ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದ ಡಾ. ಎಂ.ಅಕಬರ ಅಲಿ (91) ಭಾನುವಾರ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಿವಿಜಿ ಮುಕ್ತಕ ಪ್ರಶಸ್ತಿ ಮೊದಲಾದ ಪುರಸ್ಕಾರ ಗಳಿಗೆ ಭಾಜನರಾಗಿದ್ದರು. ಅಲ್ಲದೆ, ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT