ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾಕ್ ಮತ್ತು ಮುಸ್ಲಿಂ ಸ್ತ್ರೀವಾದಿ ಕಥನಗಳು

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಇತ್ತೀಚಿನ ಎರಡು ಮಹತ್ವದ ವಿಷಯಗಳು,  ಭಾರತದ ಅಲ್ಪಸಂಖ್ಯಾತರಲ್ಲಿ ಅದರಲ್ಲೂ ಮುಸ್ಲಿಮರಲ್ಲಿ ತಣ್ಣನೆಯ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ಮೊದಲನೆಯದಾಗಿ ಧರ್ಮಾಧಾರಿತ ಜನಗಣತಿ ಸೃಷ್ಟಿಸಿದ ಪಡಿಯಚ್ಚುಗಳನ್ನು ಹೇಗೆ ಪ್ರತಿರೋಧಿಸುವುದು? ಅವುಗಳನ್ನು ಅಂಕಿಅಂಶಗಳ ಮುಖಾಂತರ ಪ್ರತಿರೋಧಿಸಬೇಕೆ? ಐತಿಹಾಸಿಕ ನೆಲೆಗಟ್ಟಿನಲ್ಲೇ? ಭಾರತದ ಸಂದರ್ಭದಲ್ಲಿ ಆಧುನಿಕತೆಯ ಚೌಕಟ್ಟನ್ನು ಅಪ್ಪಿಕೊಂಡಿರುವ ಸಮುದಾಯವೆಂದು ವಾದಿಸುತ್ತಾ ಪ್ರತಿರೋಧಿಸಬೇಕೆ? ಇಲ್ಲವೇ ಸ್ಥಿತ ಪ್ರಜ್ಞರಾಗಿರಬೇಕೆ?

ಈ ಚರ್ಚೆ ಮುಗಿಯದ ಅಧ್ಯಾಯ. ಪ್ರತಿ ಜನಗಣತಿಯ ಸಂದರ್ಭದಲ್ಲಿ ಸಮುದಾಯದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ಬರುವುದು ಸಹಜ. ಅದು ತೀವ್ರವಾದ ಬಲಪಂಥೀಯವಾದಕ್ಕೂ, ಹಿಂದುತ್ವದ ಪ್ರಬಲ ಬೆಳವಣಿಗೆಗೂ ದಾರಿ ಮಾಡಿಕೊಟ್ಟಿರುವುದು ಒಂದು ವಾಸ್ತವ.

ಇವೆಲ್ಲದರ ನಡುವೆ ಇನ್ನೊಂದು ಚರ್ಚೆ ನಡೆಯುತ್ತಿರುವುದು ಹೊರ ಜಗತ್ತಿಗೆ ಹೆಚ್ಚು ತಿಳಿದಂತಿಲ್ಲ. ಈ ಚರ್ಚೆ ಆಂತರಿಕವೆಂದರೂ ಅದರ ಪ್ರಭಾವ ಲಿಂಗಾಧಾರಿತ ಸಮಾಜದ ಮೇಲೆ, ಭಾರತೀಯ ಸ್ತ್ರೀವಾದದ ಮೇಲೆ ಹಾಗೂ ಜಾತ್ಯತೀತ ರಾಜಕಾರಣದ  ಮೇಲೆ ಬೀಳುವುದು  ನಿಚ್ಚಳ.  ಈ  ಚರ್ಚೆ ಮೂಲತಃ ಮುಸ್ಲಿಂ ಮಹಿಳೆಯರ ತಲಾಕ್, ವಿಚ್ಛೇದನ ಕುರಿತಾಗಿದೆ. ತಲಾಕ್ ಚರ್ಚೆ ಮುಸ್ಲಿಂ ಮಹಿಳೆಯರ ಕಥನವೂ, ಸ್ತ್ರೀವಾದದ ಕಥನವೂ ಹೌದು.

ಈ ಚರ್ಚೆಯ ಮುಖ್ಯ ಅಂಶಗಳು ಹೀಗಿವೆ: ಮುಸ್ಲಿಂ ಮಹಿಳೆಗೆ ನೀಡುವ ತಲಾಕ್ ಅನ್ನು ಮೂರು ತಿಂಗಳ ಕಾಲಾವಧಿಯಲ್ಲಿ  ತಿಂಗಳಿಗೊಂದರಂತೆ ನೀಡುವ ಬದಲು ಒಂದೇ ನಿಟ್ಟಿನಲ್ಲಿ ನೀಡಬಹುದೇ? ಒಂದೇ ನಿಟ್ಟಿನಲ್ಲಿ ನೀಡುವ ತಲಾಕ್  ಅನೂರ್ಜಿತವೇ? ಎರಡನೆಯದಾಗಿ, ಸಾಮಾಜಿಕ ತಾಣಗಳಾದ ಟ್ವಿಟರ್, ಮೊಬೈಲ್, ಇ–ಮೇಲ್ ಇಲ್ಲವೇ ಫೋನ್  ಮುಖಾಂತರ ನೀಡುವ ತಲಾಕನ್ನು  ಎಷ್ಟರಮಟ್ಟಿಗೆ ಮಾನ್ಯ ಮಾಡಬಹುದು? ಕೊನೆಯಯದಾಗಿ, ತಲಾಕ್ ನೀಡುವ ಅಥವಾ ಪಡೆಯುವ ಸಂದರ್ಭದಲ್ಲಿ ಅದು ಬರವಣಿಗೆಯ ರೂಪದಲ್ಲಿ  ಇರಬೇಕೇ? ಅಥವಾ ಬಾಯಿ ಮಾತಿನಿಂದ ಉಚ್ಚರಿಸಿದ  ತಲಾಕ್ ನ್ಯಾಯಬದ್ಧವೆ?

ಚರ್ಚೆಗೆ ಅನುವು ಮಾಡಿಕೊಟ್ಟದ್ದು ಆಲ್ ಇಂಡಿಯಾ ಸುನ್ನಿ ಉಲೇಮಾ  ಕೌನ್ಸಿಲ್ ಹಾಗೂ ಧಾರ್ಮಿಕ ಚಿಂತನಾ ಶಾಲೆಗಳಾದ ದಿಯೊಬಂದಿ ಹಾಗೂ ಬೆರೆವಿಲಿಗಳು. ಇವುಗಳು  ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ಗೆ ಪತ್ರ ಬರೆದು ಒಂದೇ ನಿಟ್ಟಿನಲ್ಲಿ ನೀಡುವ ತಲಾಕ್ ಊರ್ಜಿತವೇ ಎಂಬುದರ ಕುರಿತು ಅಭಿಪ್ರಾಯವನ್ನು ಕೇಳಿದಾಗ ಚರ್ಚೆ ಆರಂಭವಾಯಿತು. ತಲಾಕ್ ಅನ್ನು ಒಂದೇ ನಿಟ್ಟಿನಲ್ಲಿ ನೀಡಿದರೂ ಅದು ಸಂಪೂರ್ಣಗೊಂಡ ಪ್ರಕ್ರಿಯೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತೀರ್ಮಾನಿಸಿತ್ತು. ಇದಕ್ಕೆ ಪೂರಕವಾಗಿ  ಹನಫೀ, ಶಾಫಿ, ಮಾಲೀಕಿ ಹಾಗೂ ಹಂಬಲಿ ನಾಲ್ಕು ಪಂಗಡಗಳು ಅನುಮೋದಿಸಿದವು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದು ಭಾರತೀಯ ಮಹಿಳಾ ಆಂದೋಲನ ಎಂಬ ಸ್ತ್ರೀವಾದಿ ಸಂಘಟನೆ. ಇದು ಪುರುಷ ಪ್ರಧಾನವಾದ ಲಾಬೋರ್ಡ್ ಅನ್ನು ವಿರೋಧಿಸುತ್ತದೆಯಲ್ಲದೆ ಅದರ ನಿಲುವುಗಳನ್ನು ಕೂಡ ಪ್ರತಿರೋಧಿಸುತ್ತದೆ. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಅನಿವಾರ್ಯ: ಮುಸ್ಲಿಂ ಮಹಿಳೆಯರು ಆಂತರಿಕವಾಗಿ ಪ್ರತಿರೋಧ ವ್ಯಕ್ತಪಡಿಸಬಲ್ಲರೇ? ಅವರ ಪ್ರತಿರೋಧದ ರೂಪಕಗಳೇನು? ಪ್ರತಿರೋಧದಲ್ಲಿರುವ ಬಹು ಮುಖ್ಯ ವಿಷಯಗಳೇನು? ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಂ ಸ್ತ್ರೀವಾದ ಇದೆಯೇ?

ಇವತ್ತಿನ ಸಂದರ್ಭದಲ್ಲಿ ಮುಸ್ಲಿಂ ಸ್ತ್ರೀವಾದದ ಬೆಳವಣಿಗೆಯನ್ನು ತಳ್ಳಿಹಾಕುವವರ ಸಂಖ್ಯೆ ಸಾಕಷ್ಟಿದೆ. ಧಾರ್ಮಿಕ ಹಾಗೂ ಲಿಂಗಾಧಾರಿತ ಚೌಕಟ್ಟಿನಲ್ಲಿ ಸ್ವಾತಂತ್ರ್ಯ ಎಂಬುದು ಮರೀಚಿಕೆ ಎಂಬ ವಾದವನ್ನು ಮುಂದಿಡಲಾಗುತ್ತದೆ. ಅಲ್ಲದೇ ಮುಸ್ಲಿಂ, ದಲಿತ ಎಂಬ ಹೊಸ  ಬಗೆಯ ಸ್ತ್ರೀವಾದಿ ಚೌಕಟ್ಟುಗಳನ್ನು ನಿರ್ಮಿಸುವುದು ಸರಿಯಲ್ಲ ಎಂಬ ವಾದವನ್ನು ತೇಲಿ ಬಿಡಲಾಗುತ್ತದೆ.

ಒಂದು ಮಾತಂತೂ ಸತ್ಯ: ಮುಸ್ಲಿಂ ಸ್ತ್ರೀವಾದವು ವಿಶಿಷ್ಟವಾದರೂ ಅದನ್ನು ವಿಶಾಲವಾದ ಸ್ತ್ರೀವಾದದ ಭಾಗವೆಂದು ಪ್ರತಿಪಾದಿಸಿ ಅದರ ವಿಶಿಷ್ಟತೆಯನ್ನು ತಳ್ಳಿ ಹಾಕುವ ಸಾಧ್ಯತೆಗಳಿರುತ್ತವೆ. ವಾಸ್ತವವಾಗಿ ಮುಸ್ಲಿಂ ಮಹಿಳೆಯರು ಎದುರಿಸುವ ಸಮಸ್ಯೆಗಳು ಉಳಿದ ಮಹಿಳೆಯರಿಗಿಂತ ವಿಭಿನ್ನ.

ಅವರ ವೈರುಧ್ಯಗಳು ಬೇರೆ ಬೇರೆ. ಅಲ್ಲದೇ ರಾಜಕಾರಣವೂ  ಅವರ ಪರವಾಗಿ ನಿಲ್ಲುವುದೇ ಇಲ್ಲ. ಜಾಗತೀಕರಣದ  ಮಾರ್ಕೆಟ್ ಕೂಡ ಅವರನ್ನು ಅಂಚಿಗೆ ತಳ್ಳುತ್ತದೆ. ಅವರ ಕಥನಗಳು ಸ್ತ್ರೀವಾದದ ಕಥನಗಳ ಭಾಗವಾಗುವುದೇ ಇಲ್ಲ. ಬೌದ್ಧಿಕ ಚರ್ಚೆಗಳಲ್ಲಿ  ಅವರು  ನಾಪತ್ತೆಯಾಗುತ್ತಾರೆ. ಅವರ ಮೇಲಿನ ದೌರ್ಜನ್ಯದ ಕಥನಗಳು ಸರ್ಕಾರಿ ಕಡತಗಳಲ್ಲಿ ದಾಖಲಾಗದೇ ಉಳಿದು ಬಿಡುತ್ತವೆ. ಇವೆಲ್ಲದರ ನಡುವೆ ಮುಸ್ಲಿಂ ಸ್ತ್ರೀವಾದ ಯಾವುದೇ ಸದ್ದು ಗದ್ದಲವಿಲ್ಲದೇ ಕಳೆದ ನಾಲ್ಕು ದಶಕದಿಂದ ಭಾರತದಲ್ಲಿ ಬೆಳೆಯುತ್ತಾ ಬಂದಿದೆ.

ವಿಚಿತ್ರವೆಂದರೆ ಮುಸ್ಲಿಂ ಸ್ತ್ರೀವಾದವು ಇನ್ನಿತರ ಸ್ತ್ರೀವಾದಕ್ಕೆ ಮುಖಾಮುಖಿಯಾಗಿ ಬೆಳೆದಿಲ್ಲ. ಅದು ಬೆಳೆದದ್ದು ಆಂತರಿಕವಾಗಿ, ಅದರಲ್ಲೂ ಆಂತರಿಕ ವಿಮರ್ಶಕರಾಗಿ (ಇಂಟರ್ನಲ್ ಕ್ರಿಟಿಕ್). ಅದರ ವೈಶಿಷ್ಟ್ಯವೆಂದರೆ ಅದು ಸಮುದಾಯದಲ್ಲಿರುವ ವಿವಿಧತೆಯನ್ನು ಅದರಲ್ಲೂ ಜಾತಿ ವಿಭಜನೆಯನ್ನು ಒಪ್ಪುತ್ತದೆ. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸಮಸ್ಯೆಗೆ ಪರಿಹಾರ ಹುಡುಕಲು ಬಯಸುತ್ತದೆ. ಮುಸ್ಲಿಂ ಸ್ತ್ರೀವಾದದ ಮೂಲ ವಸಾಹತುಶಾಹಿಯಲ್ಲಿ ಇದ್ದರೂ ಅದು ಬೆಳೆದದ್ದು  1980ರ ದಶಕದಲ್ಲಿ. 1930ರಲ್ಲಿ ಇದರ ಮೂಲವನ್ನು ನೋಡಬಹುದು.

1930ರ ದಶಕದಲ್ಲಿ ಆಲ್ ಇಂಡಿಯಾ ವಿಮೆನ್ಸ್‌ ಕಾನ್ಫರೆನ್ಸ್‌ ಇದರ ಆರಂಭ ಘಟ್ಟ. ಆ ಸಂದರ್ಭದಲ್ಲಿ ಶೆಫಾ ಹಮೀದ್ ಆಲಿ ಅಧ್ಯಕ್ಷೆಯಾಗಿ ಆಯ್ಕೆಯಾದರು. ಅವರು ಮಾಡಿದ ಮಹತ್ವಪೂರ್ಣ ಕಾರ್ಯವೆಂದರೆ ಮಾದರಿ ನಿಖಾನಾಮವನ್ನು (ವಿವಾಹ ಸಂಹಿತೆ) ಬಿಡುಗಡೆಗೊಳಿಸಿದ್ದು. ಇದರ ವಿಶಿಷ್ಟತೆ ಎಂದರೆ ಅದು ಮಹಿಳೆಯರಿಗೆ ವಿಚ್ಛೇದನಕ್ಕೆ ಅವಕಾಶಕಲ್ಪಿಸಿಕೊಟ್ಟಿತ್ತು. ಅಂದಿನ ವಸಾಹತುಶಾಹಿ ಸಂದರ್ಭದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ. ಈ ವಿವಾಹ ಸಂಹಿತೆ ನಾಲ್ಕು ವಿವಿಧ ಸಂಹಿತೆಗಳಿಗೆ ದಾರಿ ಮಾಡಿಕೊಟ್ಟಿತ್ತು.

1980ರ ದಶಕದ ಶಾ ಬಾನು ಪ್ರಕರಣ ಸ್ತ್ರೀವಾದ ಬೆಳವಣಿಗೆಯ ಆರಂಭದ ಘಟ್ಟ. ಶಾ ಬಾನು ಒಬ್ಬ ವಿಚ್ಛೇದಿತ ಮಹಿಳೆ. ವಿಚ್ಛೇದಿತ ಮಹಿಳೆಗೆ ನೀಡಬೇಕಾದ ಜೀವನಾಂಶ ಕೋರಿ ಅವರು ಕೋರ್ಟಿನ ಮೆಟ್ಟಲೇರಿದ್ದರು. ಕೋರ್ಟ್, ಶಾ ಬಾನು ಪರ ತೀರ್ಪು ನೀಡಿದಾಗ ಅದನ್ನು ಕ್ರಾಂತಿಕಾರಿ ಹೆಜ್ಜೆ ಎಂದು ಸ್ತ್ರೀವಾದಿಗಳು ಗುರುತಿಸಿದರೂ ಅವರಿಗೆ ಅಂದಿನ ದಿನಗಳಲ್ಲಿ  ಒಂದು ಸಂಘಟನೆಯ ಚೌಕಟ್ಟಿರಲಿಲ್ಲ.

ಶಾ ಬಾನು ಪ್ರಕರಣ ಬಹಳಷ್ಟು ವಿಷಯಗಳಿಗೆ ಮಹತ್ವವೆನಿಸುತ್ತದೆ. ಪ್ರಥಮ ಬಾರಿಗೆ ತಲಾಕ್ ಅಥವಾ ವಿಚ್ಛೇದನ, ಮೆಹರ್, ತಲಾಕ್ ಸಂದರ್ಭದಲ್ಲಿ ಮಹಿಳೆಯ ಜೀವನ ನಿರ್ವಹಣೆ, ಬಹು ಪತ್ನಿತ್ವ ಇತ್ಯಾದಿ ವಿಷಯಗಳನ್ನು ಚರ್ಚೆಯ ಭಾಗವಾಗಿ ಇದು ತಂದಿತ್ತು. 

ಯೂನಿಫಾರಂ ಸಿವಿಲ್ ಕೋಡ್‌ನ (ಸಮಾನ ನಾಗರಿಕ ಸಂಹಿತೆ) ಅವಶ್ಯಕತೆಯನ್ನು ಇದೇ ಸಂದರ್ಭದಲ್ಲಿ ಸ್ತ್ರೀವಾದಿಗಳು ಪ್ರತಿಪಾದಿಸಿದರೆ, ಹಿಂದುತ್ವವಾದಿಗಳಲ್ಲಿ  ಮಹಿಳೆ ಕುರಿತಾದ ಕಾಳಜಿಗಿಂತಲೂ ಕೋಮುವಾದದ ಕಾಳಜಿಗಳಿದ್ದವು. ದುರಂತವೆಂದರೆ ಅಂದಿನ ಕೇಂದ್ರ ಸರ್ಕಾರ ಪುರೋಹಿತಶಾಹಿಗೆ ಮಣಿದು  ಮುಸ್ಲಿಂ ಮಹಿಳೆ  ವಿಚ್ಛೇದನ ಹಕ್ಕುಗಳ ರಕ್ಷಣೆ (Muslim Women– Protection of Rights on Divorce Act) ಕಾಯಿದೆಯನ್ನು ಜಾರಿಗೊಳಿಸಿ ಕೋರ್ಟ್‌ನ ಐತಿಹಾಸಿಕ ತೀರ್ಪಿಗೆ ತಿಲಾಂಜಲಿ ನೀಡಿತ್ತು.

ಸರ್ಕಾರ ಅಂದು ಜಾರಿಗೊಳಿಸಿದ ಕಾನೂನಿನಲ್ಲಿ ಎರಡು ಮಹತ್ವದ ನ್ಯೂನತೆಗಳಿದ್ದವು. ವಿಚ್ಛೇದಿತ ಮಹಿಳೆಯನ್ನು ಅವಳ ಕುಟುಂಬ ಅಥವಾ ವಕ್ಫ್ ನೋಡಿಕೊಳ್ಳಬೇಕೆ ಹೊರತು ಅವಳ ತ್ಯಜಿಸಿದ ಗಂಡನಲ್ಲ. ಎರಡನೆಯದಾಗಿ ಮೊದಲ ಬಾರಿಗೆ ತಲಾಕ್ ಎಂದು  ಉಚ್ಚರಿಸಿದ ನಂತರ   ಮೂರು ತಿಂಗಳ ಕಾಲ ಮಾತ್ರ ಅವಳು ತನ್ನ ಪತಿಯಿಂದ ನಿರ್ವಹಣಾ ವೆಚ್ಚ ಪಡೆಯಲು  ಅರ್ಹಳಾಗುತ್ತಾಳೆಯೇ ಹೊರತು ಪೂರ್ಣ ವಿಚ್ಛೇದನ ಪಡೆದ ನಂತರವಲ್ಲ. ಶಾ ಬಾನು ಪ್ರಕರಣ ಭಾರತದಲ್ಲಿ ಹಿಂದುತ್ವ ಬೆಳೆಯಲು ಅವಕಾಶ ನೀಡಿದ್ದನ್ನು ಮರೆಯಬಾರದು.

ಶಾ ಬಾನು ಪ್ರಕರಣದ ಬಹು ಮುಖ್ಯ ಪ್ರಭಾವವೆಂದರೆ ಅದು ಮುಸ್ಲಿಂ ಸ್ತ್ರೀವಾದಕ್ಕೆ ಹಾಗೂ ಪ್ರತಿರೋಧಕ್ಕೆ ಸಾಂಘಿಕ ರೂಪ ನೀಡಿತ್ತು. 1995ರ ಸುಮಾರಿಗೆ ಉಜ್ಮಾ ನಾಹೀದ್‌ರವರ ಮಾದರಿ ನಿಖಾನಾಮ  ಬಿಡುಗಡೆಯಲ್ಲಿ ಅದನ್ನು ನೋಡಬಹುದು. ಈ ಮಾದರಿ ಸಂಹಿತೆ ಮಹಿಳೆಯರ ಪರವಾಗಿತ್ತು: ಅದು ಮೌಖಿಕ, ದೈಹಿಕ ದೌರ್ಜನ್ಯವನ್ನು ಖಂಡಿಸಿತ್ತು ಅಲ್ಲದೇ ಮೂರು ಬಾರಿ ಉಚ್ಚರಿಸಿ ನೀಡುವ ತಲಾಕನ್ನು ತಿರಸ್ಕರಿಸಬೇಕೆಂದು ಕರೆ ಕೊಟ್ಟಿತ್ತು.

ಪುರುಷ ಪ್ರಧಾನವಾದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ಗೆ ಪ್ರತಿರೋಧವಾಗಿ ಹುಟ್ಟಿಕೊಂಡದ್ದು ಮುಸ್ಲಿಂ ವಿಮೆನ್ ಪರ್ಸನಲ್ ಲಾ ಬೋರ್ಡ್. ಇದು ಹುಟ್ಟಿಕೊಂಡದ್ದು 2005ರಲ್ಲಿ. ಇವತ್ತು ಅದರ ಶಾಖೆಗಳು ದೇಶದ ವಿವಿಧ ರಾಜ್ಯಗಳಲ್ಲಿ ಹುಟ್ಟಿಕೊಂಡಿವೆ. ಈ ಪರ್ಸನಲ್ ಲಾ ಬೋರ್ಡ್ ಅನ್ನು ಒಪ್ಪುವವರ ಸಂಖ್ಯೆ ಗಣನೀಯವಾಗಿದೆ. ಇವತ್ತು ಅದು ಎತ್ತಿಕೊಳ್ಳುವ ವಿಷಯ ಅಪಾರ. ಅವುಗಳಲ್ಲಿ ಬಹು ಮುಖ್ಯವಾದದ್ದು ವಿವಾಹ ಮತ್ತು ತಲಾಕ್.

ಇದು ಕೂಡ ಮಾದರಿ ನಿಖಾನಾಮವನ್ನು ತಯಾರಿಸಿತ್ತು. ಈ ನಿಖಾನಾಮ ಕೆಲವು ಕಾರಣಗಳಿಗೆ ವಿಶಿಷ್ಟವಾಗಿದೆ: ಪತಿಯ ಅನೈತಿಕ ಸಂಬಂಧಗಳ ಸಂದರ್ಭದಲ್ಲಿ ಮಹಿಳೆಗೆ ವಿಚ್ಛೇದನಕ್ಕೆ ಅವಕಾಶ ಕಲ್ಪಿಸುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ನೀಡಿದ  ವಿಚ್ಛೇದನವನ್ನು ಅದು ಮಾನ್ಯ ಮಾಡುವುದಿಲ್ಲ. ಸಾಮಾಜಿಕ ತಾಣಗಳಿಂದ ನೀಡಿದ ವಿಚ್ಛೇದನವನ್ನು ಅಥವಾ ತಲಾಕ್ ಅನ್ನು ಕೂಡ ಮಾನ್ಯ ಮಾಡುವುದಿಲ್ಲ.

ಮುಸ್ಲಿಂ ಸ್ತ್ರೀವಾದ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವುಗಳು ಬೇರೆಬೇರೆ ರೂಪಕಗಳಲ್ಲಿ ಅಭಿವ್ಯಕ್ತಗೊಳ್ಳುತ್ತವೆ. 2007ರಲ್ಲಿ ಹುಟ್ಟಿದ ಭಾರತೀಯ ಮುಸ್ಲಿಂ ಮಹಿಳಾ ಸಂಘಟನೆ  ಚಳವಳಿಯ ರೂಪಕವಾಗಿ ಹೊರಹೊಮ್ಮತ್ತಿದೆ. ಜಾತ್ಯತೀತ ನೆಲೆಗಟ್ಟುಗಳನ್ನು ಒಪ್ಪುತ್ತಾ ಧರ್ಮವನ್ನು ಉದಾರವಾದಿ ಚೌಕಟ್ಟಿನಲ್ಲಿ ಪುನರ್ ಪರಿಶೀಲಿಸಲು ಒತ್ತಾಯಿಸುತ್ತದೆ. ಇವತ್ತು ಅದರ ಕೊಡುಗೆ ಬಹಳ. ಹತ್ತು ಹಲವು ಕಡೆ  ‘ಶರಿಯ ಕೋರ್ಟ್‌’ಗಳನ್ನು ಸ್ಥಾಪಿಸಿದ್ದು, ಮುಸ್ಲಿಂ ವೈಯಕ್ತಿಕ ಕಾನೂನಿನ ಕ್ರೋಡೀಕರಣಕ್ಕೆ ಒತ್ತಾಯಿಸಿದ್ದು, ಮುಸ್ಲಿಂ ವಿವಾಹ ಹಾಗೂ ವಿಚ್ಛೇದನೆಗೆ ಕಾನೂನಿನ ಕರಡನ್ನು ತಯಾರಿಸಿದ್ದು– ಇವು ಕೆಲವು ಕೊಡುಗೆಗಳು.

ಇಂತಹ ಹತ್ತು ಹಲವು ರೂಪಕಗಳು ಇವತ್ತು ಸ್ವಾತಂತ್ರ್ಯೋತ್ತರ ಕಾಲಾವಧಿಯಲ್ಲಿ ದೊರೆಯುತ್ತವೆ.  ಕರ್ನಾಟಕದ  ಲೇಖಕಿಯರಾದ ಸಾರಾ ಅಬೂಬಕ್ಕರ್, ಬಾನು ಮುಷ್ತಾಕ್, ಉರ್ದು ಬರಹಗಾರರಾದ ಇಸ್ಮತ್ ಚುಗ್ತಾಯ್, ಶಹದ್ ಜಹಾನ್, ವಜೇದಾ ತಬಸ್ಸುಮ್, ಖುರತ್ತುಮ್ ಹೈದರ್ ಮುಂತಾದವರ ಬರವಣಿಗೆಗಳು ಪ್ರತಿರೋಧಕ್ಕೆ ಸಾಕ್ಷಿಗಳಾಗುತ್ತವೆ .

ಸ್ತ್ರೀವಾದಿಗಳು ಈಗಿನ ಒಂದೇ ನಿಟ್ಟಿನಲ್ಲಿ ನೀಡುವ  ತಲಾಕ್ ಹಾಗೂ ಸಾಮಾಜಿಕ ತಾಣಗಳಿಂದ ನೀಡುವ ತಲಾಕ್ ಅನ್ನು ವಿರೋಧಿಸಲು ಮತ್ತೊಂದು ಮಹತ್ವದ  ಕಾರಣವೂ ಇದೆ. ಒಂದು ಲೆಕ್ಕಾಚಾರದಂತೆ ಶೇ 92 ರಷ್ಟು ಮಹಿಳೆಯರು ಒಂದೇ ನಿಟ್ಟಿನಲ್ಲಿ ನೀಡುವ ತಲಾಕನ್ನು ವಿರೋಧಿಸುತ್ತಾರೆ. ಇದೇ ಸಂದರ್ಭದಲ್ಲಿ ಸ್ತ್ರೀವಾದಿಗಳು ಸಮುದಾಯದಲ್ಲಿ ತಮ್ಮ ಅಸ್ಮಿತೆಯನ್ನು ನಿರ್ಮಿಸುತ್ತಾ ಹೋಗುತ್ತಾರೆ. ಅದು ಪ್ರಾರ್ಥನಾ ಮಂದಿರಗಳಲ್ಲಿ ನಮಾಜ್ ಮಾಡುವ ಬೇಡಿಕೆಗಳಲ್ಲಿ, ಮಹಿಳೆಯರಿಗಾಗಿಯೇ ಸೀಮಿತಗೊಂಡಿರುವ ಪ್ರಾರ್ಥನಾ ಮಂದಿರಗಳ ಸ್ಥಾಪನೆಗಳಲ್ಲಿ, ಮಸೀದಿಗಳಲ್ಲಿ ಇಮಾಮ್‌ಗಳಾಗುವ ಬೇಡಿಕೆಗಳಲ್ಲಿ, ಫತ್ವಗಳ ವಿರೋಧಗಳಲ್ಲಿ, ಮಾವನಿಂದ ಅತ್ಯಾಚಾರಕ್ಕೊಳಗಾದ ಇಮ್ರಾನಾಳ ವಿರೋಧಗಳಲ್ಲಿ ನೋಡಬಹುದು.

ಇವತ್ತು ಸ್ತ್ರೀವಾದಿಗಳು ಬರೇ ‘ಕ್ರಿಟಿಕಲ್ ಇನ್‌ಸೈಡರ್’ಗಳಾಗಿ ಸೀಮಿತಗೊಂಡಿಲ್ಲ. ಅವರ ವಾದಗಳು ಭಾರತದ ಪುರುಷ ಪ್ರಧಾನ ರಾಜಕೀಯವನ್ನು ಪ್ರಶ್ನಿಸುವಷ್ಟು ಬೆಳೆದಿವೆ ಎಂಬುದು ಸ್ಪಷ್ಟ. ಅವರು ಏಕಕಾಲಕ್ಕೆ ಧರ್ಮ ಹಾಗೂ ಜಾತ್ಯತೀತ ಚೌಕಟ್ಟುಗಳೊಂದಿಗೆ ಮುಖಾಮುಖಿಯಾಗುತ್ತಾರೆ. ಅದರರ್ಥ ಮುಸ್ಲಿಂ ಸ್ತ್ರೀವಾದಿ ಕಥನಗಳಿಗೆ, ಮುಸ್ಲಿಂ ಸ್ತ್ರೀವಾದಕ್ಕೆ ಪ್ರತಿರೋಧಗಳಿಲ್ಲವೆಂದಲ್ಲ. ಇವೆಲ್ಲರ ನಡುವೆ ಮುಸ್ಲಿಂ ಸ್ತ್ರೀವಾದಿ ಕಥನಗಳು ವಿಶಾಲವಾದ ಸ್ತ್ರೀವಾದಿ ಕಥನದ ಭಾಗವಾಗಬಲ್ಲವೇ? ಅಥವಾ ಅವರು ಕೂಡ ಸೀಮಿತ ಚೌಕಟ್ಟಿನ ಪ್ರತಿರೋಧಗಳಾಗಿಯೇ ಉಳಿಯುತ್ತಾರೆಯೇ? ಎಂಬ ಪ್ರಶ್ನೆಗಳು ಸದಾ ಉಳಿಯುತ್ತವೆ.

 ಲೇಖಕ ಮುಖ್ಯಸ್ಥ, ರಾಜ್ಯಶಾಸ್ತ್ರ ಆಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT