ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಕ್ಷೆ ವಿವಾದ: ಪೇಜಾವರ ಶ್ರೀಗಳ ಪ್ರತಿಕ್ರಿಯೆ

Last Updated 7 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಆಯಾ ಸಮಾಜವನ್ನು ಅವರ ಪಾಡಿಗೆ ಬಿಡುವುದಾದರೆ ಬಸವಣ್ಣನವರು ಎಲ್ಲರಿಗೂ ಲಿಂಗದೀಕ್ಷೆಯನ್ನು ಯಾಕೆ ಕೊಡಬೇಕಿತ್ತು? ಮುರುಘಾ ಶರಣರು ಬೇರೆ ಬೇರೆ ಸಮಾಜಕ್ಕೆ ಬೇರೆ ಬೇರೆ ಗುರುಪೀಠವನ್ನು ಯಾಕೆ ಸ್ಥಾಪಿಸಬೇಕಾಗಿತ್ತು?

‘ಸಂಗತ’ದಲ್ಲಿ (ನ. 5) ಡಾ. ಶಿವಮೂರ್ತಿ ಮುರುಘಾ ಶರಣರ  ಲೇಖನವನ್ನು ಓದಿದೆ. ಮನನೀಯವಾದ ಅನೇಕ ವಿಚಾರಗಳನ್ನು ತಮ್ಮ ಲೇಖನದಲ್ಲಿ ಶರಣರು ವ್ಯಕ್ತಪಡಿಸಿದ್ದಾರೆ. ಆ ಲೇಖನದ ಬಗ್ಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಆರ್ಥಿಕ ವಿಕೇಂದ್ರೀಕರಣ ಮತ್ತು ವಿದ್ಯೆಯ ವಿಕೇಂದ್ರೀಕರಣವು ಹೇಗೆ ಸಹಾಯಕವಾಗುತ್ತ ದೆಯೋ, ಧರ್ಮದ ವಿಕೇಂದ್ರೀಕರಣವೂ ಅಷ್ಟೇ ಅವಶ್ಯವಾಗಿದೆ. ಧರ್ಮಾಚರಣೆಗಳನ್ನು ಒಂದೇ ಸಮುದಾಯದಲ್ಲಿ ಸೀಮಿತಗೊಳಿಸದೆ ಎಲ್ಲಾ ವರ್ಗಗಳಲ್ಲಿ ಅದನ್ನು ವಿಸ್ತರಿಸಿದರೆ ಸಮಾನತೆ ಯನ್ನು ಸಾಧಿಸಲು ಅನುಕೂಲವಾಗುವುದು.

ಬಸವಣ್ಣನವರು ಎಲ್ಲರಿಗೂ ಲಿಂಗದೀಕ್ಷೆಯನ್ನು ನೀಡಿ ಶಿವಭಕ್ತಿಯ ನೆಲೆಯಲ್ಲಿ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸಿದರು. ಭಾರತದಲ್ಲಿ ಎಲ್ಲಾ ಸಂತರು ಈ ಭಕ್ತಿ ಪಂಥದ ಮುಖಾಂತರವೇ ಸಮಾನತೆಯ ಸಾಧನೆಗಾಗಿ ಪ್ರಯತ್ನಿಸಿದರು. ಮುರುಘಾ ಶರಣರು ಹೇಳಿದಂತೆ ಶಿವದೀಕ್ಷೆಯು ಉತ್ತಮ ಸಂಸ್ಕಾರವನ್ನು ನೀಡುವ ಪ್ರಕ್ರಿಯೆಯಾ ಗಿದೆ. ನಾವಾಗಿಯೇ ಮುಂದೆ ಬಂದು ವೈಷ್ಣವ ದೀಕ್ಷೆಯನ್ನು ಕೊಡುವುದಾಗಿ ಹೇಳಿಲ್ಲ.

ಮಾಧ್ಯಮದ ಪ್ರತಿನಿಧಿಯೊಬ್ಬರು ‘ಕುರುಬ ರಿಗೆ ನೀವು ವೈಷ್ಣವ ದೀಕ್ಷೆಯನ್ನು ನೀಡಲು ಸಿದ್ಧರಿದ್ದೀರಾ’ ಎಂದು ಕೇಳಿದಾಗ ಕೊಡುವುದಿಲ್ಲ ಎಂದು  ಹೇಳಬೇಕಿತ್ತೇ? ಇದು ಅಸಮಾನತೆಯ ಪ್ರದರ್ಶನವಾಗುವುದಿಲ್ಲವೇ? ಕೊಡುವುದಿಲ್ಲ ವೆಂದು ಹೇಳಿದರೆ ಇಡೀ ಸಮಾಜವನ್ನು ಅಗೌರ ವಿಸಿದಂತಾಗುವುದಿಲ್ಲವೇ? ಇದೂ ಒಂದು ದೊಡ್ಡ ವಿವಾದವಾಗುತ್ತಿತ್ತು. ‘ಕುರುಬರು ಬಯಸಿದರೆ ಅವರಿಗೆ ವೈಷ್ಣವ ದೀಕ್ಷೆಯನ್ನು ಕೊಡಬಹುದು’ ಎಂದು  ನಾನು ಹೇಳಿದ್ದು ಅಪರಾಧವಾದರೆ, ಕುರುಬರಾಗಿದ್ದು ವೈಷ್ಣವ ದೀಕ್ಷೆಯನ್ನು ಪಡೆದ ಕನಕದಾಸರೂ ಅಪರಾಧಿಗಳಾಗಬೇಕಾಗುತ್ತದೆ. ಆಯಾ  ಸಮಾಜವನ್ನು ಅವರ ಪಾಡಿಗೆ ಬಿಡುವು ದಾದರೆ ಬಸವಣ್ಣನವರು ಎಲ್ಲರಿಗೂ ಲಿಂಗದೀಕ್ಷೆ ಯನ್ನು ಯಾಕೆ ಕೊಡಬೇಕಿತ್ತು? ಮುರುಘಾ ಶರಣರು ಬೇರೆ ಬೇರೆ ಸಮಾಜಕ್ಕೆ ಬೇರೆ ಬೇರೆ ಗುರುಪೀಠವನ್ನು ಯಾಕೆ ಸ್ಥಾಪಿಸಬೇಕಾಗಿತ್ತು?

ಧರ್ಮಪೀಠಾಧಿಪತಿಗಳು ಸಮಾಜಕ್ಕೆ ಧರ್ಮ, ಭಕ್ತಿ, ಸಂಸ್ಕೃತಿ, ನೈತಿಕತೆಯ ಪ್ರಸಾರ ಮಾಡಿದರೆ ಅದು ಅಪರಾಧವಾಗುವುದಿಲ್ಲ. ಅದು ಅವರ ಕರ್ತವ್ಯ. ನಾನು ಈ ಬಗ್ಗೆ ಯಾರಿಗೂ ಒತ್ತಾಯ ಮಾಡಿಲ್ಲ. ಪ್ರಯತ್ನವನ್ನೂ ಮಾಡಿಲ್ಲ. ಈಗಾಗಲೇ ಅನೇಕರು ದೀಕ್ಷೆಯ ಬಗ್ಗೆ ನಮ್ಮನ್ನು ಸಂಪರ್ಕಿ ಸಿದ್ದಾರೆ.

ಇದು ಪೂರ್ತಿಯಾಗಿ ಸಮಾನತೆಯನ್ನು ಸಾಧಿಸದೇ ಇರಬಹುದು. ಆದರೆ ಅಸಮಾನತೆ ಯನ್ನು ನಿವಾರಿಸುವಲ್ಲಿ ಬಹುದೊಡ್ಡ ಹೆಜ್ಜೆಯಾಗಬಹುದು. ಈ ಮಾತಿನಿಂದ ಶರಣರು ನನ್ನ ಕಲ್ಪನೆಯ ದೀಕ್ಷೆಯ ಆಂತರ್ಯವನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಭಾವಿಸುತ್ತೇನೆ.

ನಾನು ವೈಯಕ್ತಿಕ ನಿಯಮದಂತೆ ಬ್ರಾಹ್ಮಣರ ಜೊತೆಗೂ ಸಹಭೋಜನವನ್ನು ಮಾಡುವುದಿ ಲ್ಲವೆಂದು ಹೇಳಿದ್ದೇನೆ. ಆದರೆ,
ಸಹಭೋಜನವನ್ನು  ನಿಷೇಧಿಸಿಲ್ಲ. ನಮ್ಮ ಮಠದ ಲ್ಲಿಯೂ, ಕೃಷ್ಣ  ಮಠದಲ್ಲಿಯೂ ಸಹಪಂಕ್ತಿ ಭೋಜನ ನಡೆಯುತ್ತಲಿದೆ.

ಮಾಂಸಾಹಾರಿಗಳಿಗೂ ವೈಷ್ಣವ ದೀಕ್ಷೆಯನ್ನು ಕೊಡಬುಹುದು ಎಂಬುದು ಮೊದಲಿನಿಂದಲೂ ನನ್ನ ವಿಚಾರವಾಗಿತ್ತು. ಅಂದಿನ ಕಾಲದಲ್ಲಿಯೂ ಶರಣರ ಹೇಳಿಕೆಗೆ ನಾನು ಖಂಡಿತವಾಗಿಯೂ ವಿರುದ್ಧವಾಗಿ ಪ್ರತಿಕ್ರಿಯಿಸಿಲ್ಲ. ಬ್ರಾಹ್ಮಣೇತರರಿಗೆ ಮಾಂಸಾಹಾರವು ನಿಷಿದ್ಧವಲ್ಲ. ಆದರೆ ಮಾನ ವೀಯತೆಗೆ ವಿರೋಧಿಯಾದ ಪ್ರಾಣಿಹಿಂಸೆಗೆ ಕಾರಣವಾದ ಮಾಂಸಾಹಾರವನ್ನು ಬಿಡುವುದು ಉತ್ತಮ ಎಂಬುದು ನನ್ನ ಆಶಯ. ಹಿಂದೂ ಧರ್ಮಗ್ರಂಥಗಳು ಇದನ್ನೇ ಹೇಳಿವೆ. ಇಷ್ಟರಿಂದ  ಮಾಂಸಾಹಾರಿಗಳನ್ನು ನಿಕೃಷ್ಟರೆಂದು  ಭಾವಿಸ ಬಾರದು. ಇಂತಹ ಭಕ್ತಿದೀಕ್ಷೆಯನ್ನು ನೀಡು ವುದು ಅಹಂಕಾರದ ಪ್ರದರ್ಶನವಲ್ಲ. ಇದು ಪೀಠಾಧಿಪತಿಗಳ ಕರ್ತವ್ಯ. ಒಬ್ಬ ಶಿಕ್ಷಕರು, ಕಲಿ ಯಬಯಸುವವರು ನನ್ನಲ್ಲಿಗೆ ಪಾಠಕ್ಕೆ ಬರಬ ಹುದು ಎಂದು  ಹೇಳಿದರೆ ಅದು ಅಹಂಕಾರವೆ ನಿಸುತ್ತದೆಯೇ? ಇದು ಅವರು ಸಮಾಜಕ್ಕೆ ಸಲ್ಲಿಸುವ ಒಂದು ಸೇವೆ.

ನಾನು ದಲಿತರಿಂದಾರಂಭಿಸಿ ಎಲ್ಲರ ಜೊತೆಗೆ ಹೇಗೆ ಸೌಜನ್ಯದಿಂದ ವರ್ತಿಸುತ್ತಿದ್ದೇನೆಂಬುದು ಸರ್ವವಿದಿತ. ನಾನು ಕುರುಬ ಸಮಾಜದ ಮೇಲೆ ಪ್ರೀತಿ, ಅಭಿಮಾನದಿಂದ ಹೇಳಿದ ಮಾತನ್ನು ಅವರಿಗೆ ಅಪಾರ್ಥವಾಗುವಂತೆ ಗೊಂದಲ ಎಬ್ಬಿಸಿದ ಬುದ್ಧಿಜೀವಿಗಳ ಬಗ್ಗೆ ಹೆಚ್ಚೇನು ಬರೆಯಲಿ. ಸಮಗ್ರ ಸಮಾಜದ ಬಗ್ಗೆ ನನ್ನ ಕಳಕಳಿಯನ್ನು ಅರ್ಥಮಾಡಿಕೊಳ್ಳದೆ ಕೇವಲ ದ್ವೇಷ ಬೆಳೆಸುವುದರಿಂದ ಏನೂ ಪ್ರಯೋಜನವಿಲ್ಲ. ಶಾಂತಿ, ಸೌಹಾರ್ದಗಳಿಂದ ಈ ಬಗ್ಗೆ ಚರ್ಚೆಗೆ ನಾನು ಸದಾ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT