ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸಿ.ಎಂ ಆಗಿ ಕೇಜ್ರಿವಾಲ್ ಪ್ರಮಾಣ, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ

Last Updated 28 ಡಿಸೆಂಬರ್ 2013, 11:23 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಆಮ್ ಆದ್ಮಿ ಪಕ್ಷದ ಸಾರಥಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಏಳನೇ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ಸ್ವೀಕರಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂವತ್ಸರದ ಗಾಳಿ ಬೀಸಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಘೋಷಿಸಿರುವ ಕೇಜ್ರಿವಾಲ್ ಅವರು ಇದಕ್ಕೆ ಎಲ್ಲ ಪಕ್ಷಗಳ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ರಾಮ್‌ಲೀಲಾ ಮೈದಾನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಂದ ಅಧಿಕಾರ ಗೌಪ್ಯತಾ ಪ್ರಮಾಣ ಸ್ವೀಕರಿಸಿದ ನಂತರ ಕೇಜ್ರಿವಾಲ್ ಅವರು ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಚಿವರಿಗೆ ಅಧಿಕಾರದ ಮದದಿಂದ ಮೆರೆಯಬೇಡಿ ಎಂಬ ಕಿವಿಮಾತು ಹೇಳುವ ಜತೆಗೆ `ದೊಡ್ಡ ಪಕ್ಷಗಳ ಅಹಂಕಾರ ಮುರಿಯಲು ನಾವು ಅಧಿಕಾರಕ್ಕೆ ಬಂದಿದ್ದೇವೆ. ಇತರೆ ಪಕ್ಷಗಳು ನಮ್ಮನ್ನು ನಾಶಮಾಡದಂತೆ ನಾವು ಎಚ್ಚರದಿಂದರಬೇಕು' ಎಂದು ತಿಳಿಸಿದರು.

ಇದೇ ವೇಳೆ ಮುಂದಿನ ವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದಾಗಿ ತಿಳಿಸಿರುವ ಕೇಜ್ರಿವಾಲ್ ಅವರು `ನಾವು ಇಲ್ಲಿ ಅಧಿಕಾರ ಕಬಳಿಸುವುದಿಲ್ಲ' ಜತೆಗೆ ಪಕ್ಷದ ಅದೃಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಬೃಹತ್ ಪ್ರಮಾಣದಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು `ನಾವು ವಿಶ್ವಾಸಮತ ಯಾಚನೆಯಲ್ಲಿ ಗೆಲ್ಲಲಿ ಅಥವಾ ಸೋಲಲಿ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಒಂದೊಮ್ಮೆ ನಾವು ಸೋತರೆ ಜನರು ನಮಗೆ ಭಾರಿ ಬಹುಮತದೊಂದಿಗೆ ಮತ ಚಲಾಯಿಸುತ್ತಾರೆ' ಎಂದು ಹೇಳಿದರು.

ಸುಮಾರು 20 ನಿಮಿಷಗಳ ಕಾಲ ಭಾಷಣ ಮಾಡಿದ ಕೇಜ್ರಿವಾಲ್ ಅವರು ಆಮ್ ಆದ್ಮಿ (ಜನಸಾಮಾನ್ಯ) ಗೆಲುವಿನಿಂದ ತಮ್ಮ ಸರ್ಕಾರ ರಚನೆಯಾಗುತ್ತಿರುವುದರಿಂದ ಈ ದಿನ ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು.

`ಇಂದು ಪ್ರಮಾಣವಚನ ಸ್ವೀಕರಿಸಿರುವುದು ಕೇಜ್ರಿವಾಲ್ ಅಲ್ಲ ಓರ್ವ ಜನಸಾಮಾನ್ಯ. ಇದು  ಸಾಮಾನ್ಯಜನರ ಗೆಲುವಾಗಿದೆ' ಎಂದ ಅವರು `ಸತ್ಯದ ಮಾರ್ಗವೆಂಬುದು ಸುಲಭದ ದಾರಿಯಲ್ಲ. ಅದು ಮುಳುಗಳಿಂದ ತುಂಬಿದೆ. ಭವಿಷ್ಯದ ಎಲ್ಲ ಸವಾಲುಗಳನ್ನು ನಾವು ಎದುರಿಸುತ್ತೇವೆ' ಎಂದು ತಿಳಿಸಿದರು.

ಸಮಾರಂಭದಲ್ಲಿ ಕೇಜ್ರಿವಾಲ್ ಅವರೊಂದಿಗೆ ಮನೀಶ್  ಸಿಸೋಡಿಯಾ, ಸೋಮನಾಥ್ ಭಾರ್ತಿ, ರಾಖಿ ಬಿರ್ಲಾ, ಸತ್ಯೇಂದ್ರ ಜೈನ್, ಸೌರಭ್ ಭಾರದ್ವಾಜ್ ಹಾಗೂ ಗಿರೀಶ್ ಸೋನಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಯಾರಿಗೆ ಯಾವ ಖಾತೆ?
ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ಧುರೀಣ ಅರವಿಂದ ಕೇಜ್ರಿವಾಲ್ ಅವರು ಪ್ರಮಾಣವಚನ ಸ್ಚೀಕಾರದ ಬೆನ್ನಲ್ಲೇ ಸಚಿವರ ಖಾತೆ ಹಂಚಿಕೆಯನ್ನೂ ಮಾಡಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರು ಗೃಹ, ಹಣಕಾಸು, ಜಾಗೃತಾದಳ, ವಿದ್ಯುತ್, ಯೋಜನೆ ಮತ್ತು ಸೇವಾ ಇಲಾಖೆಗಳನ್ನು ಇಟ್ಟುಕೊಂಡಿದ್ದಾರೆ.

ಸಚಿವ ಮನಿಷ್ ಸಿಸೋಡಿಯಾ ಅವರಿಗೆ ಶಿಕ್ಷಣ, ಸಾರ್ವಜನಿಕ ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ಮತ್ತು ಭೂಮಿ ಹಾಗೂ ಕಟ್ಟಡಗಳ ಇಲಾಖೆಯನ್ನು ವಹಿಸಿಕೊಡಲಾಗಿದೆ.

ಸಚಿವ ಸೋಮನಾಥ ಭಾರ್ತಿ ಅವರಿಗೆ ಆಡಳಿತಾತ್ಮಕ ಸುಧಾರಣೆಗಳು, ಕಾನೂನು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳ ಹೊಣೆಯನ್ನು ಹಾಗೂ ಸಚಿವೆ ರಾಖಿ ಬಿರ್ಲಾ ಅವರಿಗೆ ಸಾಮಾಜಿಕ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳನ್ನು ವಹಿಸಲಾಗಿದೆ.

ಸಚಿವ ಗಿರೀಶ್ ಸೋನಿ ಅವರಿಗೆ ಕಾರ್ಮಿಕ ಇಲಾಖೆ, ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇಲಾಖೆಗಳು ಲಭಿಸಿವೆ. ಇನ್ನು, ಸಚಿವ ಸತ್ಯೇಂದ್ರ ಜೈನ್ ಅವರಿಗೆ ಆರೋಗ್ಯ ಮತ್ತು ಕೈಗಾರಿಕಾ ಇಲಾಖೆಗಳನ್ನು ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT