ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಕೇರಿಯಲ್ಲಿ ಸ್ವಾಮೀಜಿಗಳ ಪಾದಯಾತ್ರೆ

ಮುತ್ತು ಕಟ್ಟುವ ಪದ್ಧತಿ; ‘ಪ್ರಜಾವಾಣಿ’ ವರದಿ, ಸಂಪಾದಕೀಯಕ್ಕೆ ಪ್ರಗತಿಪರ ಮಠಾಧೀಶರ ಸ್ಪಂದನ
Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಹಿರೇಸಿಂಧೋಗಿ ಗ್ರಾಮದಲ್ಲಿ ಶುಕ್ರವಾರ ಪ್ರಗತಿಪರ ಮಠಾಧೀಶರ ವೇದಿ­ಕೆಯ 15 ಮಂದಿ ಸ್ವಾಮೀಜಿಗಳು ಇಲ್ಲಿನ ದೇವದಾಸಿ ಕೇರಿಯಲ್ಲಿ ಪಾದಯಾತ್ರೆ ಹಾಗೂ ಗ್ರಾಮದ ಮರುಳಸಿದ್ದೇಶ್ವರ ದೇವಸ್ಥಾನದ ಆವ­ರಣದಲ್ಲಿ ಜನಜಾಗೃತಿ ಸಮಾವೇಶ ನಡೆಸಿದರು.

ಗ್ರಾಮದಲ್ಲಿ ‘ಮುತ್ತು ಕಟ್ಟುವ ಪದ್ಧತಿ ಜೀವಂತ’ ಶೀರ್ಷಿಕೆಯಲ್ಲಿ ಮಾರ್ಚ್‌ 13ರ ‘ಪ್ರಜಾವಾಣಿ’  ವಿಶೇಷ ವರದಿ ಹಾಗೂ ಮಾರ್ಚ್‌ 14ರ ‘ಮೌಢ್ಯಕ್ಕೆ ಕೊನೆಯೆಂದು?’ ಸಂಪಾ­ದಕೀಯ­ವನ್ನು ಆಧರಿಸಿ ಇಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಜನಜಾಗೃತಿ ಸಮಾವೇಶ ನಡೆಸಿದರು.

ಇಲ್ಲಿನ ಎಚ್‌.ಜಿ.ರಾಮುಲು ಕಾಲೊನಿಯಲ್ಲಿ ಬೆಳಿಗ್ಗೆ ಬೆಂಗಳೂರು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು  ಪಾದಯಾತ್ರೆಗೆ ಆಗಮಿಸಿ­ದಾಗ ಕೇರಿಯ ದಲಿತ ಮಹಿಳೆಯರು ಭಕ್ತಿ­ಯಿಂದ ಸ್ವಾಗತಿಸಿ ಪಾದತೊಳೆದರು. ಮನೆ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು ಅಲ್ಲಿನ ಪರಿಸ್ಥಿತಿ­ಯನ್ನು ಮನಗಂಡರು.

ಕೇರಿಯಲ್ಲಿದ್ದ ಸಿದ್ದಯ್ಯ ಎಂಬ ಪೂಜಾರಿ ವಂಶಸ್ಥರು ಮೊದಲು ಇಲ್ಲಿ ದೇವದಾಸಿ ಪದ್ಧತಿ ಇರುವುದನ್ನು ನಿರಾ­ಕರಿಸಿ­ದರು. ‘ಪತ್ರಿಕೆಯಲ್ಲಿ ವರದಿಯಾದದ್ದು ಏನು?’ ಎಂದು ಕೇಳಿದಾಗ, ‘ಸಮೀಪದ ಬಿಸರಳ್ಳಿ­ಯ­ವರು ಯಾರೋ ಬಂದು ಫೋಟೋ ತೆಗೆದು ಇಲ್ಲಿನ ಮಹಿಳೆಯರ ಬಳಿ ಮಾಹಿತಿ ಕೇಳಿ ಪತ್ರಿಕೆ­ಯಲ್ಲಿ ಪ್ರಕಟಿಸಿದ್ದಾರೆ’ ಎಂದು ಹೇಳಿದರು. 

‘ಹಾಗಿದ್ದರೆ ಇಲ್ಲಿನ ಮಹಿಳೆಯರು ಸುಳ್ಳು ಹೇಳಿದ್ದಾರೆಯೇ’ ಎಂದು ಕೇಳಿದಾಗ ಸಿದ್ದಯ್ಯನ ಬಳಿ ಉತ್ತರ­ವಿರ­ಲಿಲ್ಲ. ಮುಂದೆ ಇದೇ ಕಾಲೊನಿಯಲ್ಲಿದ್ದ ಹಿರಿಯ ಮಹಿಳೆ ಸುಂಕಮ್ಮ ನಿಜ ಸಂಗತಿಯನ್ನು ಹೇಳಿದರು.

‘ನಾವೂ ಈ ಪದ್ಧತಿಗೆ ಒಳಗಾಗಿದ್ದೇವೆ. ಈಗಲೂ ಪೂಜಾರಪ್ಪನ ನೇತೃತ್ವದಲ್ಲಿ ಮುತ್ತು­ ಕಟ್ಟುವುದು ನಡೆಯುತ್ತಿದೆ. ಆದರೆ, ಇದು ಅಂತ್ಯ­ವಾಗಬೇಕು. ನಾವು ಅನುಭವಿಸಿದ್ದೇ ಸಾಕು’ ಎಂದು ಹೇಳಿ ಕೈ ಮುಗಿದರು. ಇಲ್ಲಿದ್ದ  60 ಕುಟುಂಬಗಳ ಮನೆಯಲ್ಲಿ ಬಹು­ತೇಕರು ಸ್ಥಳದಲ್ಲಿರಲಿಲ್ಲ. ಇನ್ನೂ ಕೆಲವರು ಪಾದಯಾತ್ರೆ ಬರುತ್ತಿದ್ದಂತೆಯೇ ಚಿಲಕ ಭದ್ರ­ಪಡಿಸಿ ಮನೆಯೊಳಗಿದ್ದರು. ಅಂಥ­ವ­ರನ್ನೂ ಹೊರ­ಕರೆದು ಮಾತನಾಡಿಸಿದರು. ಪುಟ್ಟ­ಮಕ್ಕಳಿಗೆ ಶಿಕ್ಷಣ ಪಡೆಯುವಂತೆ ತಿಳಿಹೇಳಿದರು.

‘ಮುತ್ತು ಕಟ್ಟುವ ಪದ್ಧತಿ ನಡೆಸುವುದಿಲ್ಲ’ ಎಂದು ಹೇಳಿ ಸ್ವಾಮೀಜಿ ಆಣೆ ಮಾಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಡು­ಮಾಮಿಡಿ ಶ್ರೀ, ‘ಮುತ್ತು ಕಟ್ಟುವ ಪದ್ಧತಿ ಇಲ್ಲಿ ಅಸ್ತಿತ್ವದಲ್ಲಿರುವುದು ಮನವರಿಕೆ ಆಗಿದೆ. ಇಂಥ ಅಮಾನವೀಯ ಆಚರಣೆಯನ್ನು ನಿಲ್ಲಿಸಬೇಕು. ಸರ್ಕಾರ, ಆಡಳಿತ, ಸಾಮಾಜಿಕ ವ್ಯವಸ್ಥೆ, ವ್ಯಕ್ತಿಗಳು ಯಾರೇ ಇದನ್ನು ಪ್ರೋತ್ಸಾಹಿಸಿದರೂ ತಪ್ಪು. ಅದು ಮಾನವ ಧರ್ಮಕ್ಕೆ ಅಪಚಾರ. ಆದ್ದರಿಂದ ಮುಂದಿನ ಹಂತದಲ್ಲಿ ನಾವು (ಪ್ರಗತಿಪರ ಮಠಾಧೀಶರು), ಸಾಮಾಜಿಕ ಸಂಘಟನೆಗಳು ಸೇರಿ,
ಅಭಿಪ್ರಾಯ ಹಂಚಿಕೊಂಡು ಮುಂದಿನ ಹಂತದ ಹೋರಾಟ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ’ ಎಂದರು.

ಹಿರಿಯೂರು ತಾಲ್ಲೂಕು ಕೋಡಿಹಳ್ಳಿ, ಆದಿಜಾಂಬವ ಪೀಠದ ಮಾರ್ಕಾಂಡ ಮುನಿ ಸ್ವಾಮೀಜಿ, ಗುಲ್ಬರ್ಗ, ಕೋಡ್ಲಾದ ಉರಿಲಿಂಗಪೆದ್ದಿ ಸಂಸ್ಥಾನಮಠದ ನಂಜುಂಡ ಸ್ವಾಮೀಜಿ, ಸುಲಫಲ ಮಠದ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಶಾಂತ­­ಗಂಗಾಧರ ಸ್ವಾಮೀಜಿ, ಬಾಗಲಕೋಟೆಯ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮೈಸೂರು ಶಿವಯೋಗಾಶ್ರಮದ ಜ್ಞಾನ ಪ್ರಕಾಶ ಸ್ವಾಮೀಜಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT