ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ ಕಟ್ಟಿದ ಮಹಾಕಾವ್ಯ ‘ಇಳಾಭಾರತಂ’

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ಛಂದಸ್ಸಿನ ಗುಣ ಕಡಿಮೆ­ಯಾಗುತ್ತಿರುವ ಇಂದಿನ ಕಾವ್ಯ ಸಂದರ್ಭದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಮಹಾಕಾವ್ಯವೊಂದು ಬಿಡು ಗಡೆಯ ಸಿದ್ಧತೆಯಲ್ಲಿದೆ. ಅದು-– ಮೈಸೂರಿನ ಪೊಲೀಸ್‌ ಅಕಾಡೆಮಿ ಯಲ್ಲಿ ಉಪ ನಿರ್ದೇಶಕಿಯಾಗಿರುವ ಡಾ. ಧರಣಿದೇವಿ ಮಾಲಗತ್ತಿ ಅವರ ‘ಇಳಾಭಾರತಂ’.

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ 360 ಪುಟಗಳ ಈ ಕೃತಿಯಲ್ಲಿ 14 ಅಧ್ಯಾಯಗಳಿವೆ. ಭಾಮಿನಿ ಷಟ್ಪದಿಯ ತೋರಣ ವಾದರೂ ಇದರ ಹೂರಣ ಆಧುನಿಕ ವಾದುದು. ಜತೆಗೆ, ಪುರುಷರಿಂದ ಪುರುಷರಿಗಾಗಿ ರಚಿತವಾದ ಮಹಾ ಕಾವ್ಯಗಳೇ ಹೆಚ್ಚು. ಆದರೆ, ಧರಣಿದೇವಿ ಅವರ ಈ ಕೃತಿಯಲ್ಲಿ ಮಹಿಳೆಯರ ಮೂಲಕ ಮಹಾಭಾರತವನ್ನು ಭಿನ್ನವಾಗಿ ನೋಡಲಾಗಿದೆ. ಉದಾಹರಣೆಗೆ; ವಿಶ್ವಾಮಿತ್ರನ ಬಳಿಗೆ ಹೋಗೆಂದು ಇಂದ್ರ, ಮೇನಕೆಗೆ ಹೇಳಿದ ಕೂಡಲೇ ಒಪ್ಪಿಕೊಳ್ಳದೆ ಪ್ರಶ್ನಿಸುತ್ತಾಳೆ. ವೇಶ್ಯೆಯರಂತೆ ನನ್ನಂಥವರನ್ನು ಕಂಡಿರಿ ಎನ್ನುತ್ತ, ‘ಗಣಿಕೆಯಾಗಿ ಬಾಳು ಸವೆಸುವ ಮನಸು ನಮ್ಮದೇ ಹೇಳು’ ಎಂದು ಕೇಳುತ್ತಾಳೆ. ಅಲ್ಲದೆ, ಇತರ ರಾಜರ ಹತ್ತಿರ ವಿಷಯ ಸಂಗ್ರಹಿಸಲು ಕಳುಹಿಸಿದಿರಿ, ವಿಷಕನ್ಯೆಯಾಗಿ ಬಳಸಿ­ಕೊಂಡಿರಿ. ನೂರಾರು ದಾರಿಹೋಕರು ನಡೆದಾಡುವ ಜಾಗದಲ್ಲಿ ಹುಲ್ಲು ಹುಟ್ಟದು ಎನ್ನುವ ಹಾಗೆ ನಮಗೂ ಮಕ್ಕಳಾಗಬೇಕೆಂದು ಆಸೆಯಿದ್ದರೂ ಆಗದ ಹಾಗೆ ನೋಡಿಕೊಂಡಿರಿ’ ಎನ್ನುವ ನೋವನ್ನು ಮೇನಕೆ ತೋಡಿಕೊಳ್ಳು­ತ್ತಾಳೆ. 
ಹೀಗೆ ಭಿನ್ನವಾಗಿ ಬರೆದ ಧರಣಿದೇವಿ ಅವರು, ಇದಕ್ಕಾಗಿ 10 ವರ್ಷಗಳನ್ನು ತೆಗೆದುಕೊಂಡಿದ್ದಾರೆ.

‘14 ವರ್ಷಗಳ ಹಿಂದೆ ‘ಅನಿಲಾ­ರಾಧನಾ’ ಎಂಬ ಸಂಯುಕ್ತ ಕಾವ್ಯವನ್ನು ಹೊರತಂದೆವು. ಅನಿಲಾ ರಾಧನಾ ಎಂದರೆ, ಅರವಿಂದ ಮಾಲ ಗತ್ತಿ, ನೀಲಗಿರಿ ತಳವಾರ, ಆರ್‌್ವಿಎಸ್‌ ಸುಂದರಂ, ರಾಗೌ, ಧರಣಿದೇವಿ, ಸಿ. ನಾಗಣ್ಣ ಸೇರಿ ರಚಿಸಿದ ಸಂಯುಕ್ತ ಕಾವ್ಯ. ಆಗ ಮಹಾಕಾವ್ಯ ಬರೆಯ ಬೇಕೆಂಬ ಚರ್ಚೆ ಶುರುವಾಯಿತು. ಆಮೇಲೆ 200 ಪದ್ಯಗಳನ್ನು ರಚಿಸಿ ಸುಮ್ಮನಿದ್ದೆ. ಪ್ರೊ.ನೀಲಗಿರಿ ತಳವಾರ ಅವರು ಒತ್ತಾಯಿಸಿದ ಪರಿಣಾಮ 2010ರಲ್ಲಿ ಈ ಮಹಾಕಾವ್ಯವನ್ನು ಪೂರ್ಣಗೊಳಿ­ಸಿದೆ’ ಎಂದು ಖುಷಿಯಾಗಿ ಅವರು ಹೇಳಿದರು.
ಬಿಬಿಎಂ, ಎಂಕಾಂ ಓದಿದ ನಂತರ ಮ್ಯಾನೇಜ್‌ಮೆಂಟ್‌ ಸೈನ್ಸ್‌ ವಿಷಯ ದಲ್ಲಿ ಪಿಎಚ್.ಡಿ ಪದವಿ ಪಡೆದ   ಅವರು, ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆ ಮೂಲಕ ಕನ್ನಡ ಎಂ.ಎ ಪದವಿ ಪಡೆದರು. ಆದರೆ, ಅವರಿಗೆ ಕಾವ್ಯ ಸಂಸ್ಕಾರ ಸಿಕ್ಕಿದ್ದು ಅವರ ತಾತ ಹರಿದಾಸ ಕುಕ್ಕಾಜೆ ಐತಪ್ಪ ಯಾನೆ ರಾಮಯ್ಯ ನಾಯಕ ಅವರಿಂದ. ಅವರು 1930ರಲ್ಲಿ ಭಾಮಿನಿ ಷಟ್ಪದಿಯಲ್ಲಿ ‘ಜ್ಞಾನಾಮೃತ’ ಎಂಬ ಮಹಾಕಾವ್ಯ ಪ್ರಕಟಿಸಿದ್ದರು. ‘ನಮ್ಮ ತಂದೆ ದೂಮ್ಮಣ್ಣ ರೈ ಅವರು ನಿವೃತ್ತ ಕನ್ನಡ ಅಧ್ಯಾಪಕ. ಮನೆಯಲ್ಲಿ ಈಗಲೂ ಕುಮಾರವ್ಯಾಸ ಭಾರತ ಓದುತ್ತಾರೆ.

90 ವಯಸ್ಸಿನ ಅಜ್ಜಿ ಲಕ್ಷ್ಮೀ ಆಳ್ವ ಈಗಲೂ ಭಾಗವತ ಓದುತ್ತಾಳೆ. ಇವರೆಲ್ಲರೊಂದಿಗೆ ಸಾಹಿತಿ ಪತಿಯಾದ ಪ್ರೊ.ಅರವಿಂದ ಮಾಲಗತ್ತಿ ಜತೆಗಿದ್ದಾರೆ’ ಎಂದು ಸ್ಮರಿಸಿಕೊಳ್ಳುತ್ತಾರೆ ಅವರು. ಒಟ್ಟು 1705 ಪದ್ಯಗಳಿರುವ ಈ ಕೃತಿ ಅ. 30ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಿಡುಗಡೆ­ಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT