ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮತ್ತು ಗಾಂಧಿ

Last Updated 30 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

‘ನಾನು ಮತ್ತು ಗಾಂಧಿ’ ಎಂಬ ವಿಷಯದ ಕುರಿತು ವೈವಿಧ್ಯಮಯ ಅನುಭವಗಳನ್ನು ಹೊತ್ತುತಂದ ಓದುಗರ ಅಸಂಖ್ಯಾತ ಪತ್ರಗಳು ನಮ್ಮನ್ನು ತಲುಪಿವೆ. ಅವುಗಳಲ್ಲಿ ಬಹುತೇಕರು ‘ಗಾಂಧಿವಾದ’ವನ್ನು ಅನುಸರಿಸಲು ಹೋಗಿ ನಿರಾಸೆಯನ್ನೇ ಅನುಭವಿಸಿದ್ದಾರೆ ಎನ್ನುವುದು ಇಂದಿನ ಕಾಲಘಟ್ಟದ ಮೌಲ್ಯನಾಶದ  ಬಹುಮುಖ್ಯ ವಿದ್ಯಮಾನವನ್ನೂ ಪರೋಕ್ಷವಾಗಿ ಸೂಚಿಸುತ್ತಿರಬಹುದೇ?

ಮಹಾತ್ಮಾ ಗಾಂಧಿ ಎನ್ನುವುದು ಒಂದು ವ್ಯಕ್ತಿಯ ಹೆಸರು ಮಾತ್ರವಲ್ಲ.  ವಿಚಾರಧಾರೆಯಾಗಿ, ಸತ್ಯ, ಅಹಿಂಸೆ, ಸಮಾನತೆಗಳಂತಹ ಮಾನವೀಯ ಮೌಲ್ಯಗಳ ಮಾನದಂಡವಾಗಿ, ವೈಚಾರಿಕ ಹೊಳಪನ್ನು ಹೆಚ್ಚಿಸುವ ವಾಗ್ವಾದವಾಗಿ, ಸಂಯಮ–ಸರಳತೆಯ ಬದುಕಿನ ಅನನ್ಯ ಮಾದರಿಯಾಗಿ...

 ಹೀಗೆ  ಗಾಂಧಿ ಹಲವು ನೆಲೆಗಳಲ್ಲಿ  ಜೀವನ ಶೋಧನೆಗೆ ಪ್ರೇರೇಪಿಸುತ್ತಲೇ ಇರುವ ಸಂಕೀರ್ಣ ಶಕ್ತಿಯೂ ಹೌದು. ಬದುಕಿನ ಒಂದಲ್ಲಾ ಒಂದು ಹಂತದಲ್ಲಿ  ಮುಖಾಮುಖಿಯಾಗದೆ ಉಳಿಯುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಳತಾದಷ್ಟೂ ಸಮಕಾಲೀನವೂ ಆಗುತ್ತಿರುವ ಗಾಂಧಿಯ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಈ ಸಲ ಓದುಗರಿಂದ ಪತ್ರಗಳನ್ನು ಆಹ್ವಾನಿಸಲಾಗಿತ್ತು.

 ‘ನಾನು ಮತ್ತು ಗಾಂಧಿ’ ಎಂಬ ವಿಷಯದ ಕುರಿತು ವೈವಿಧ್ಯಮಯ ಅನುಭವಗಳನ್ನು ಹೊತ್ತುತಂದ ಓದುಗರ ಅಸಂಖ್ಯಾತ ಪತ್ರಗಳು ನಮ್ಮನ್ನು ತಲುಪಿವೆ. ಅವುಗಳಲ್ಲಿ ಬಹುತೇಕರು ‘ಗಾಂಧಿವಾದ’ವನ್ನು ಅನುಸರಿಸಲು ಹೋಗಿ ನಿರಾಸೆಯನ್ನೇ ಅನುಭವಿಸಿದ್ದಾರೆ ಎನ್ನುವುದು ಇಂದಿನ ಕಾಲಘಟ್ಟದ ಮೌಲ್ಯನಾಶದ  ಬಹುಮುಖ್ಯ ವಿದ್ಯಮಾನವನ್ನೂ ಪರೋಕ್ಷವಾಗಿ ಸೂಚಿಸುತ್ತಿರಬಹುದೇ?

ಆಂತರಿಕ ಕದನ
ಗಾಂಧಿ ಎಂದೊಡನೆ ನಮ್ಮಲ್ಲನೇಕರಿಗೆ ತಕ್ಷಣ ನೆನಪಿಗೆ ಬರುವುದು ಸತ್ಯಾಗ್ರಹ. ಗಾಂಧಿ ಸತ್ಯಾಗ್ರಹಿಯಷ್ಟೇ ಆಗಿರದೆ ಜೀವನದ ಹಲವು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿದ್ದರು.  ವೈಯಕ್ತಿಕವಾಗಿ ಗಾಂಧೀಜಿ ನನ್ನನ್ನು  ಬಹಳಷ್ಟು ಕಾಡಿದ್ದಿದೆ. ಅವರನ್ನು ಕುರಿತು ಎಡಪಂಥಿ, ಬಲಪಂಥಿ ಲೇಖಕರನೇಕರ ಸಾಹಿತ್ಯವನ್ನು  ಓದಿರುವ ನಾನು, ಗಾಂಧಿ ತಮ್ಮನ್ನರಿಯುವುದಕ್ಕಿಂತ ಮುಂಚೆಯೇ (ಅವರಿಗೆ ಅರಿವು ಮೂಡಿದ್ದು ಯೌವನ ದಾಟಿದ ನಂತರ) ಅಂದರೆ ಬಾಲ್ಯದಿಂದಲೂ ಗಾಂಧಿ– ವಿಚಾರಗಳೊಂದಿಗೆ ಆಂತರಿಕ ಕದನ ಮಾಡುತ್ತಲೇ ಬೆಳೆದಿದ್ದೇನೆ. ಎಲ್ಲಕ್ಕೂ ಮಿಗಿಲಾಗಿ ಗಾಂಧಿ ನನ್ನನ್ನು  ಆಕರ್ಷಿಸಿದ್ದು ಅವರ ಉಪವಾಸ ಮತ್ತು ಮೌನವ್ರತದಿಂದ. ಪ್ರತಿ ವಾರ ಒಂದು ದಿನ ಮೌನದಿಂದಿರುತ್ತಿದ್ದರಂತೆ. ನಾನೂ ಈ ಪ್ರಯೋಗಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿದ್ದಿದೆ....

ಕಳೆದ ವರ್ಷ ನಾನು ದೊಡ್ಡಬಳ್ಳಾಪುರದ ನವೋದಯ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯ ದಿನಗಳನ್ನು ರಾಮಕೃಷ್ಣಾಶ್ರಮದ ವಾತಾವರಣದಲ್ಲಿ ಕಳೆದು ಬಂದಿದ್ದರಿಂದ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ಕಡೆಗೆ ನಾನು ನನ್ನ ಕೆಲವು ಸ್ನೇಹಿತರ ನಡತೆಯಿಂದ ಬೇಸತ್ತು ಅನಿರ್ದಿಷ್ಟಾವಧಿ ಮೌನ ಮತ್ತು ಉಪವಾಸಕ್ಕೆ ಮುಂದಾದೆ.

ನನ್ನ ಆಪ್ತ ಸ್ನೇಹಿತ ತಾನೂ ಊಟ ಬಿಡುವೆನೆಂದಾಗ ‘ನೀನು ಸತ್ತರೂ ಚಿಂತೆಯಿಲ್ಲ’ ಎಂದು ಹಟ ಹಿಡಿದು ಕುಳಿತೆ. ಆ ದಿನ ಭಾನುವಾರ ಅದೇಗೋ ಕಳೆದು ಹೋಯಿತು. ಆದರೆ ಸಮಸ್ಯೆ ಉಲ್ಬಣಿಸಿದ್ದು ಸೋಮವಾರ! ಕ್ಲಾಸಿನಲ್ಲಿ ನನ್ನ ಸ್ನೇಹಿತರು ಶಿಕ್ಷಕರಿಗೆ ಹೇಳುವ ಬೆದರಿಕೆ ಹಾಕತೊಡಗಿದರು. ಆದರೆ ಇಂಗ್ಲಿಷ್‌ ತರಗತಿಯಲ್ಲಿ  ಗ್ರೂಪ್‌ ಡಿಸ್ಕಶನ್‌ ಮಾಡಬೇಕಾದುದ್ದರಿಂದ ಅರ್ಧ ತರಗತಿ ಮುಗಿಯುವವರೆಗೂ ಹೇಗೋ ಸಹಿಸಿಕೊಂಡಿದ್ದ ಸ್ನೇಹಿತರು ಮೇಡಂಗೆ ದೂರು ಕೊಟ್ಟರು. ಆಗ ಸುಮ್ಮನಾದ ಅವರು ನನ್ನನ್ನು
ಆಮೇಲೆ ಕರೆದು ಕೇಳಿದರು.

ನಾನು ನನ್ನ ಮೌನಾಸ್ತ್ರದ ಬಗ್ಗೆ ವಿವರಿಸಿದಾಗ ಸುಮ್ಮನೆ ನಿನ್ನ ಪಾಡಿಗೆ ನೀನಿದ್ದು ಬಿಡು ಎಂದು ಅವರು ಅರುಹಿದರು. ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೆ ನಾನು ಮತ್ತೆ ನನ್ನ ಮೌನ ಮತ್ತು  ಉಪವಾಸದೊಂದಿಗೆ ಮುಂದುವರಿದೆ. ಆದರೆ ನನ್ನನ್ನು ಹತ್ತಿರದಿಂದ ಬಲ್ಲ ಕೆಲ ಸ್ನೇಹಿತರು ಒಂದೆರಡು ಒಪ್ಪಂದಗಳೊಂದಿಗೆ ನನ್ನನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಆ ರಾತ್ರಿ ಚಹಾ ಕುಡಿದು ಮೌನ ಮತ್ತು ಉಪವಾಸ ಮುರಿದೆ. ಆದರೆ ಪ್ರತಿ ರವಿವಾರ ನಾನು ಮಾಡುವ ಉಪವಾಸ ಮತ್ತು ಮೌನವ್ರತಕ್ಕೆ ಅಡ್ಡಿ ಪಡಿಸಬಾರದು ಮತ್ತೆ ಯಾವುದೇ ಶಿಕ್ಷಕರಿಗೂ ಇದು ಗೊತ್ತಾಗಬಾರದು ಎಂಬ ಷರತ್ತಿನೊಂದಿಗೆ! ರವಿವಾರ ಬಂತೆಂದರೆ ನನ್ನ ಮೌನ ಮತ್ತು ಉಪವಾಸ ಕ್ರಮ ಬದ್ಧವಾಗಿ ನಡೆಯುತ್ತಿತ್ತು. ಆದಷ್ಟು ಆ ದಿನ ಶಿಕ್ಷಕರ ಕಣ್ಣಿಗೆ ಬೀಳದೆ ಅವರಿಂದ ದೂರವಿರಲು ಯತ್ನಿಸುತ್ತಿದ್ದೆ. ಕೆಲವು ಸಾರಿ ಅವರೇ ಕರೆದು ಏನಾದರೂ ಸಹಾಯ ಕೇಳಿದರೆ ಮರು ಮಾತಾಡದೆ ಕೆಲಸ ಮಾಡಿದ್ದಿದೆ. ರಜಾ ದಿನಗಳಂದು ಶಾಲೆಯಲ್ಲಿ ಮಕ್ಕಳ ಹಾಜರಾತಿ ಅತಿಮುಖ್ಯವಾಗುತ್ತಿತ್ತು. (ನಮ್ಮದು ವಸತಿ ಶಾಲೆ).

ನಾನು ಶಾಲಾ ನಾಯಕನಾಗಿದ್ದರಿಂದ ಮಕ್ಕಳಿಂದ ಹಾಜರಾತಿ ಸ್ವೀಕರಿಸಿ ಆ ದಿನದ ಡ್ಯೂಟಿ ಟೀಚರ್‌ಗೆ ಸಲ್ಲಿಸುವುದು ವಾಡಿಕೆ. ನಾನಾದರೂ ಆ ದಿನ ಮೌನಿ! ಹಲವು ವಾರಗಳು ಅನಾರೋಗ್ಯದ ಕಾರಣ ಹೇಳಿ ತಪ್ಪಿಸಿಕೊಂಡರೂ ಒಂದು ರವಿವಾರ ಮಾತ್ರ ತುಂಬ ಗರಂ ಆಗಿದ್ದ ಪ್ರಾಂಶುಪಾಲರಿಂದ ಬುಲಾವ್‌ ಬಂತು. ಗ್ರೌಂಡ್‌ನಲ್ಲಿ ಹೋಗಿ ಅವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡದೆ ನಾನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಮುಂದೆ ಉಗಿಸಿಕೊಂಡದ್ದಾಯ್ತು. ಹೀಗೆಯೇ ಅನೇಕ ಸಾರಿ ಪೇಚಿಗೆ ಸಿಲುಕಿದ್ದೇನೆ. ಕಡೆಗೆ ನನ್ನಕ್ಕನ ತೀವ್ರ ಪ್ರತಿರೋಧದಿಂದ ಅದನ್ನು ಬಿಡಬೇಕಾಯ್ತು. ಗಾಂಧಿಯವರ ಚಿಂತನೆಗಳನ್ನು ಅನುಸರಿಸಲು ಸಾಧ್ಯವಾಗದ ಬಗ್ಗೆ ಬಹಳ ನಿರಾಶೆಯಾಗುತ್ತದೆ.
ಮಹಾಂತೇಶ. ಬ. ಬಿ. ಧಾರವಾಡ
***

ಗಾಂಧಿವಾದದಿಂದ ನನಗಾದ ನಿರಾಶೆ
ನಮ್ಮ ದೊಡ್ಡಪ್ಪನವರು ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಅವರ ಹೆಸರು ಹರಪನಹಳ್ಳಿ ಅಡವಿಬಸಪ್ಪ. ಅವರು ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಎರಡು ಸಲ ಮೂರು ತಿಂಗಳಿನಂತೆ ಹಿಂಡಲಗಾ ಜೈಲಿನಲ್ಲಿ ಜೈಲುವಾಸ ಅನುಭವಿಸಿದ್ದರು.

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಹೈದರಾಬಾದ್ ನಿಜಾಮನು ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಸೇರಲು ನಿರಾಕರಿಸಿದಾಗ ಆಗಿನ ಉಪಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರು ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಸೈನ್ಯವು ಬಳ್ಳಾರಿಯಲ್ಲಿ ಠಿಕಾಣಿ ಹಾಕಿದಾಗ ನಮ್ಮ ಸೈನಿಕರಿಗೆ ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆ, ಮಾಡುವುದರಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ನಂತರ ನಡೆದ ಕರ್ನಾಟಕ ಏಕೀಕರಣ ಚಳುವಳಿಗೆ ಶ್ರಮಿಸಿದರು. ನಮ್ಮ ದೊಡ್ಡಪ್ಪನವರು ಆಗ  ಕಂದಾಯ ಇಲಾಖೆಯಲ್ಲಿ ಕಾರಕೂನನಾಗಿ ಕೆಲಸಕ್ಕೆ ಸೇರಿ ಸಿರಸ್ತೇದಾರರವರೆಗೆ ಪ್ರಮೋಷನ್ ಪಡೆದು ನಿವೃತ್ತರಾದರು.

ಯಾರಿಂದಲೂ ಒಂದು ಪೈಸೆ ಲಂಚ ತೆಗೆದುಕೊಳ್ಳದೆ ಪ್ರಾಮಾಣಿಕರಾಗಿದ್ದರು. ತಮ್ಮ ಕೆಲಸ ನಮ್ಮ ದೊಡ್ಡಪ್ಪನವರ ಮೂಲಕ ಸುಲಲಿತವಾಗಿ ಆದಾಗ ರೈತರು ಮೆಚ್ಚುಗೆಯಿಂದ ತಮ್ಮ ಹೊಲದಲ್ಲಿ ಬೆಳೆದ ಬೇಳೆಕಾಳುಗಳನ್ನೋ,  ಬೆಣ್ಣೆಯನ್ನೋ ಮನೆಗೆ ತಂದುಕೊಟ್ಟರೆ, ದೊಡ್ಡಪ್ಪನವರು ನಾನು ಮಾಡುವ ಕೆಲಸಕ್ಕೆ ಸರಕಾರ ನನಗೆ ಸಂಬಳ ಕೊಡುತ್ತದೆ. ಮತ್ಯಾಕೆ ನಿಮ್ಮಿಂದ ಪ್ರತಿಫಲ ಬಯಸಲಿ? ಎಂದು ಸ್ಪಷ್ಟವಾಗಿ ತಿರಸ್ಕರಿಸುತ್ತಿದರು.

ನಿವೃತ್ತರಾದಾಗ ಬಂದ ಉಳಿಸಿದ ಹಣದಿಂದ ಹತ್ತೆಕರೆ ಜಮೀನು ಕೊಂಡು ನಮ್ಮೂರಿನಲ್ಲೇ ನೆಲೆಸಿದರು. ಇವರಿಗೆ ಮೂರು ಜನ ಗಂಡು, ನಾಲ್ಕು ಹೆಣ್ಣು. ಬರೀ ಸಂಬಳದ ಮೇಲಿನ ಜೀವನವಾದ್ದರಿಂದ ಮಕ್ಕಳನ್ನು ಚೆನ್ನಾಗಿ ಓದಿಸಿ ನೌಕರಿ ಕೊಡಿಸಲಾಗಲಿಲ್ಲ. ವರದಕ್ಷಿಣೆ ಕೊಡುವ ಯೋಗ್ಯತೆ ಇಲ್ಲದ್ದರಿಂದ ನಾಲ್ಕು ಹೆಣ್ಣು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ತಮ್ಮ ಹೆಂಡತಿಯ ತಮ್ಮಂದಿರಿಗೆ ಮದುವೆ ಮಾಡಿದರು. ಮೂರನೇ ಮಗಳನ್ನು ರೈತರ ಮನೆಗೆ ಕೊಟ್ಟರು. ಆಕೆ ಎಂದೂ ಹೊಲಕ್ಕೆ ಹೋಗಿ ಕೆಲಸ ಮಾಡಿದಾಕೆ ಅಲ್ಲ. ಮಸಾರಿ ಕಲ್ಲುಭೂಮಿಯಲ್ಲಿ ಆಕೆ ಕೆಲಸ ಮಾಡುವಾಗ ಕೈಬೆರಳುಗಳು ಕಲ್ಲುಗಳಿಗೆ ಸಿಲುಕಿ ಗಾಯಗಳಾಗಿ ಹುಣ್ಣಾಗಿ ಬೆರಳುಗಳ ಒಂದೊಂದು ಗಣ್ಣುಗಳೇ ಉದುರಿ ಹೋದವು. ಇಂತಹ ಸ್ಥಿತಿ ಈಕೆಯದ್ದಾದರೆ, ಎರಡನೇ ಮಗಳನ್ನು ಒಬ್ಬ ಬಡವನಿಗೆ ಮದುವೆ ಮಾಡಿಕೊಟ್ಟರು.

ಹಾಗಾಗಿ ಆಕೆ ರೈತರ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೋಗಬೇಕಾಯಿತು. ಆಕೆಯ ಗಂಡ ಅಕಾಲಿಕ ಮರಣ ಹೊಂದಿದ. ಬಡತನ, ಗಂಡನ ಸಾವು ಎಲ್ಲ ಸೇರಿ ಆಕೆಯ ಮೇಲೆ ಒತ್ತಡ ಹೆಚ್ಚಾಗಿ ಆಕೆ ಹುಚ್ಚಿಯಾದಳು. ಬಡತನ ತಾಳಲಾರದೇ ಎರಡನೇ ಮಗ ದೇಶಾಂತರ ಹೋದ. ಮನೆಯ ತೊಂದರೆಗೆ ಮಾಡಿದ ಸಾಲ ಸೋಲಕ್ಕೆ ಇದ್ದ ಆಸ್ತಿ ಕರಗಿ ಹೋಯಿತು. ಈಗ ಹಿರಿಯಮಗ ಬೇರೆ ಭೂಮಿ ಲಾವಣಿ ಮಾಡುತ್ತಾ ಜೀವನ ನಡೆಸಿದ್ದಾನೆ. ಚಿಕ್ಕವನು ಫೈನಾನ್ಸ್ ಕಂಪನಿಯಲ್ಲಿ ಪಿಗ್ಮಿ ಎತ್ತುತ್ತಾ ಬದುಕುತ್ತಿದ್ದಾನೆ. ಇದೆಲ್ಲವನ್ನು ನೋಡಿದ, ಈಗಲೂ ನೋಡುತ್ತಿರುವ ನನಗೆ ಗಾಂಧಿವಾದ ಹೆಚ್ಚು ನಿರಾಸೆಯುಂಟು ಮಾಡಿದ್ದು ನಿಜ.

ನಮ್ಮ ದೊಡ್ಡಪ್ಪನವರಂತೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹಲವರು ಸ್ವಾತಂತ್ರ್ಯಾನಂತರದಲ್ಲಿ ಗಾಂಧಿವಾದವನ್ನು ತ್ಯಜಿಸಿ ಸಾಕಷ್ಟು ಆಸ್ತಿ ಹಣ ಮಾಡಿಕೊಂಡರು. ಇತ್ತೀಚಿಗೆಂತೂ  ಹೊಲಸು ರಾಜಕೀಯ, ಭ್ರಷ್ಟಾಚಾರ, ಮೋಸ, ವಂಚನೆಗಳ ಆರ್ಭಟದಲ್ಲಿ ಗಾಂಧಿವಾದವನ್ನು ಎಲ್ಲಿ ಹುಡುಕಿದರೂ ಸಿಗದಂತಾಗಿದೆ. ಆದರೆ ಗಾಂಧಿವಾದ ಮತ್ತು ಗಾಂಧೀಜಿಯವರ ಮೇಲೆ ನನಗೆ ಅಪಾರ ಗೌರವವಿದೆ. ಈಗಲೂ ನಾನು ನಮ್ಮ ದೊಡ್ಡಪ್ಪನವರ ಪ್ರಭಾವದಿಂದ ಗಾಂಧಿ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ನಡೆಸುತ್ತಿದ್ದೇನೆ.
ಎ.ಆರ್.ಪಂಪಣ್ಣ,  ವಟ್ಟಮ್ಮನಹಳ್ಳಿ
***
ಗಾಂಧಿ ನಮ್ಮೊಳಗಿನ ಜೀವಂತಿಕೆ
ನನ್ನ ಜೀವನವೇ ನನ್ನ ಸಂದೇಶ ಎಂದು ನಡೆ-ನುಡಿ ಒಂದಾಗಿ ಬದುಕಿದ ಗಾಂಧಿಯವರ ಹಾದಿ ನನ್ನನ್ನು ಆಕರ್ಷಿಸಿದ್ದು, ಆ ಹಾದಿಯಲ್ಲಿ ನಡೆಯಲು ಒಂದಿಷ್ಟು ಪ್ರಯತ್ನ ಮಾಡುವಂತೆ ಮಾಡಿದ್ದಂತೂ ಹೌದು. ಇಡುವ ಪ್ರತಿ ಹೆಜ್ಜೆ ಪ್ರಾಮಾಣಿಕವಾಗಿರುವುದನ್ನು ಕಲಿಸಿದ್ದು, ರಸ್ತೆಬದಿಯ ಅಂಗಡಿಯಲ್ಲಿ, ಬಿಗ್ ಬಜಾರ್, ಶೋರೂಂ, ಆಭರಣದ ಅಂಗಡಿಗಳಲ್ಲಿ ಕಂಡದ್ದನ್ನೆಲ್ಲ ಕೊಂಡುತಂದು ಮನೆಯ ಬೀರುವಿನಲ್ಲಿ ಸೇರಿಸುವ ಕೆಟ್ಟ ಚಟವೊಂದು ನನ್ನೊಳಗೆ ದೂರಾಗಿಸಿದ್ದು ಗಾಂಧಿಯೇ ಎಂದು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ.

ವರ್ತಮಾನದ ನಮ್ಮ ಅನೇಕ ಅವ್ಯವಸ್ಥೆಗಳ ನಡುವೆ ಗಾಂಧಿಯ ಆದರ್ಶಗಳನ್ನು ಪಾಲಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ನನ್ನ ಅನೇಕ ಸ್ನೇಹಿತರಿಗೆ ಅಥವಾ ಗಾಂಧಿ ಹಂಗೆ ಆಡ್ಬೇಡ ಎನ್ನುವ ಹಲವು ಬಾಯಿಗಳಿಗೆ ಗಾಂಧಿ ದೂರದ ವಾಸ್ತವ ಅನಿಸಿದ್ದಿರಬಹುದು. ಆದರೆ ನನಗೆ ಗಾಂಧಿ ಸದಾ ಕಾಲ ಎಲ್ಲ ಒಳಿತುಗಳ ಜೀವಂತಿಕೆಯಾಗಿಯೇ ಕಾಣಿಸುತ್ತಾರೆ.

ಲಂಚಕೊಟ್ಟು ಕೆಲಸಕ್ಕೆ ಸೇರಬಾರದು, ಲಂಚ ಪಡೆಯಬಾರದು, ಪುಕ್ಕಟ್ಟೆ ಸಿಕ್ಕದ್ದಕ್ಕೆಲ್ಲ ಕೈಚಾಚಬಾರದು ಈ ಎಲ್ಲವೂ ತೀರ ಸರಳವಾದ- ಸಹಜವಾದ ಸತ್ಯಗಳು ಮತ್ತೆ ಹಾಗೇ ಬದುಕಲಿಕ್ಕೆ ಗಾಂಧಿಯ ಮಾತುಗಳು ಪ್ರೇರಣೆಯಾದದ್ದು ಸತ್ಯ. ತನ್ನ ಶ್ರಮದಿಂದ ದುಡಿಯದ ಒಂದು ತುತ್ತನ್ನೂ ತಿನ್ನಬೇಡ ಎಂಬ ಗಾಂಧಿ ಮಾತು- ತಟ್ಟೆಮುಂದೆ ಊಟಕ್ಕೆ ಕೂತಾಗಲೆಲ್ಲ ನೆನಪಾಗುತ್ತದೆ. ಈ ತುತ್ತಿಗೆ ನಾನೆಷ್ಟು ಅರ್ಹಳು ಎಂಬ ಪ್ರಶ್ನೆ ಕಾಡುತ್ತದೆ. ಕನಿಷ್ಠ ಪಕ್ಷ ನನ್ನನ್ನು ನಾನು ನೋಡಿಕೊಳ್ಳುವಂತೆ ಮಾಡಿದವರಲ್ಲಿ ಗಾಂಧಿ ಅತಿ ಪ್ರಮುಖರು.

ಗಾಂಧಿ ಅಸಾಮಾನ್ಯ ಎನಿಸುವುದು ಅವರು ತೀರ ಸಾಮಾನ್ಯರಂತೆ ಬದುಕಿದ್ದ ರೀತಿಯಿಂದ. ಒಂದು ಪಂಚೆ, ಮೈಮೇಲಿನ ಹೊದಿಕೆಯಲ್ಲಿ ಬರಿಗಾಲ ಫಕೀರನಂತೆ ತಿರುಗಿ ಬದುಕಿದ ಗಾಂಧಿ, ಗಾಂಧಿ ಬಜಾರ್‌ನ ಬಟ್ಟೆ ಅಂಗಡಿಗೆ ಹೋದಾಗಲೆಲ್ಲ ನೆನಪಾಗುತ್ತಾರೆ. ಹರಕು ಚಿಂದಿಯ ಬಟ್ಟೆಯುಟ್ಟ ಮಕ್ಕಳನ್ನು ಕಂಡಾಗಲೆಲ್ಲ ಬಟ್ಟೆಮೇಲಿನ ವ್ಯಾಮೋಹ ಇಲ್ಲವಾಗಿ ಗಾಂಧಿ ಹತ್ತಿರವಾಗುತ್ತಾರೆ. ಬದುಕನ್ನು ಸರಳವಾಗಿ ನೋಡುವ, ಸ್ವೀಕರಿಸುವ ಪಾಠ ಕಲಿಸಿದ ಗಾಂಧಿ ತಾತಂಗೆ ಒಂದು ಮುತ್ತಿನ ವಿನಾ ಏನೂ ತಾನೇ ನೀಡಲು ಸಾಧ್ಯ...

ಗಾಂಧಿ ನಮ್ಮಂತೆ ಸಾಮಾನ್ಯ ಮನುಷ್ಯರು. ಆದರೆ ಅವರ ಬದುಕಿನ ಕ್ರಮ ಇಂದಿಗೂ ನನಗೆ ನನ್ನಂಥವರಿಗೆ ಬೆರಗಿನ ಜೊತೆಗೆ ಒಂದು ಆಶಾವಾದವನ್ನು ಹುಟ್ಟಿಸುತ್ತದೆ. ಗಾಂಧೀ ಒಂದು ಉತ್ಪ್ರೇಕ್ಷೆಯೂ ಅಲ್ಲ, ಹಾಗೆ ಕೇವಲ ಸರಳವೂ ಅಲ್ಲ. ಸರಳವಾಗಿರುವುದು ಸಂಕೀರ್ಣವಾಗಿರುವುದಕ್ಕಿಂತಲೂ ಕಷ್ಟಕರ. ತಮ್ಮ ನೇರ ಬದುಕು ಮತ್ತು ದಿಟ್ಟ ನಿಲುವಿನ ಮೂಲಕವೇ ನಮ್ಮನ್ನು ಇಂದಿಗೂ ಸರಿಯಾದ ಮಾರ್ಗದಲ್ಲಿ ಬೆಳೆಸುತ್ತಿರುವ ಗಾಂಧಿ ಸದಾ ನನ್ನಲ್ಲಿ ಉಳಿದಿರುವ ಬೆಳಕು.
ಹರ್ಷಿತಾ. ಕೆ, ಶಿವಮೊಗ್ಗ
***
ಅಪ್ಪನೊಳಗಿದ್ದ ಗಾಂಧಿ
ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಗಾಂಧೀಜಿಯ ಬಗ್ಗೆ ಒಂದು ಪಾಠವಿತ್ತು. ಅದರಲ್ಲಿ ಗಾಂಧೀಜಿ ವಿದ್ಯಾರ್ಥಿಯಾಗಿದ್ದಾಗ ತಪ್ಪು ಮಾಡಿ ತಂದೆಯ ಮುಂದೆ ಅದನ್ನು ಒಪ್ಪಿಕೊಳ್ಳುವುದು ಅವರ ತಂದೆ ಅದನ್ನು ಕ್ಷಮಿಸಿಬಿಡುವುದು ತಾತ್ಪರ್ಯ. ಈ ಪಾಠ ಓದಿದ ಮೇಲೆ ನಮ್ಮ ಮನೆಯ ಹಾಲ್‌ನಲ್ಲಿ ತೂಗು ಹಾಕಿದ, ಅದಕ್ಕೆ ಅಲಂಕರಿಸಿದ್ದ, ಕಣ್ಣು ಮುಚ್ಚಿದ್ದ ಭಂಗಿಯಲ್ಲಿದ್ದ ಫೋಟೊ ನೋಡಿ ನನ್ನಮ್ಮನನ್ನು ಇದು ಯಾರ ಫೋಟೊ ಎಂದು ಕೇಳಿದ್ದೆ. ಅಮ್ಮ ಉತ್ತರಿಸಿದ್ದಳು. ‘ಗಾಂಧೀಜಿ ಅವರೇ ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಡಿಸಿದರು. ನಮ್ಮ ದೇಶವ ಬ್ರಿಟಿಷರು ಆಳುತ್ತಿದ್ದರಂತೆ. ಗಾಂಧಿ ಅಜ್ಜಯ್ಯನೇ ಚಳವಳಿ ಮಾಡಿ ಕೊಡಿಸಿದ್ರು. ಮುಂದೆ ಅವರನ್ನೇ ಗುಂಡಿಕ್ಕಿ ಕೊಂದು ಬಿಟ್ಟರು’.  ನನಗೆ ಆವಾಗ ಚಿಕ್ಕವಳಾಗಿದ್ದರಿಂದ ಅಂಥ ಪ್ರಭಾವವೇನೂ ಬೀರಲಿಲ್ಲವಾದರೂ, ಗಾಂಧೀಜಿಯನ್ನು ಕೊಂದಿದ್ದು ನನಗೆ ಏಕೋ ಕೆಟ್ಟದಾಗಿ ಕಂಡಿತ್ತು.

ನಮ್ಮ ತಂದೆ ಯಾವಾಗಲೂ ಬಿಳಿ ಪಂಚೆ ಮತ್ತು ಜುಬ್ಬಾ ಧರಿಸುತ್ತಿದ್ದುದು ತುಂಬಾ ಕುತೂಹಲ ಹುಟ್ಟಿಸಿತ್ತು. ಅಪ್ಪ ಉಪಾಧ್ಯಾಯ ಜೀವನ ಆರಂಭಿಸುವ ಮುಂಚೆ ಕಾಲೇಜು ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಳಲ್ಲಿ ತೊಡಗಿಕೊಂಡವರು. ಆ ದಿನಗಳಲ್ಲೇ ಗಾಂಧೀಜಿಯ ಅನುಯಾಯಿಯಾಗಿದ್ದ ಅವರು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಖಾದಿ ಬಿಟ್ಟು ಬೇರೆ ಉಡುಪು ಧರಿಸುತ್ತಿರಲಿಲ್ಲ. ಸರಳ ಜೀವನವನ್ನು ನಡೆಸುತ್ತಿದ್ದ ಅಪ್ಪ ಮನೆಯಲ್ಲಿ ಎಲ್ಲರಿಗೂ ನಿಬಂಧನೆಗಳನ್ನು ಹೇರಿದ್ದರು. ಮನೆಯಲ್ಲಿ ಶೌಚಾಲಯವನ್ನು ವಾರಕ್ಕೊಮ್ಮೆ ನಾನೇ ಸ್ವಚ್ಛಗೊಳಿಸುವುದು, ನಮ್ಮ ಬಟ್ಟೆ ನಾವೇ ಸ್ವಚ್ಛ ಮಾಡಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚಿನ ಬಟ್ಟೆ ಯಾರಿಗೂ ಇರುತ್ತಿರಲಿಲ್ಲ. ಹೀಗೆ ಮುಂದೆ ಅವರು ಕಾನೂನು ಓದಿ ಲಾಯರ್ ಆಗಿ ರಾಜಕೀಯ ಪ್ರವೇಶಿಸಿದರೂ ಪ್ರಾಮಾಣಿಕರಾಗಿದ್ದು, ಸರ್ಕಾರದಲ್ಲಿ ಉನ್ನತ ಹುದ್ದೆಗೆ ಹೋದರೂ ತಮ್ಮ ಖಾದಿ ಉಡುಪಿನಿಂದ ಹೊರಬರಲಿಲ್ಲ. ಯಾವ ಪ್ರಭಾವವೂ ಅವರ ಮೇಲೆ ಬೀಳದೆ ಸರಳತೆಯಿಂದಲೇ ಬದುಕಿ ನಮಗೆ ಒಬ್ಬ ಶಿಕ್ಷಕ, ಮಾರ್ಗದರ್ಶಕ ಎಲ್ಲರೂ ಆಗಿ ಆದರ್ಶ ಗಾಂಧಿ ಅನುಯಾಯಿಯಾಗಿದ್ದರು.

 ಈ ಎಲ್ಲವೂ ನಮಗೆ ಪಾಠದಂತಿತ್ತು. ಗಾಂಧಿ ನಮ್ಮ ನಡುವೆಯೂ ಇರುವರೆಂದೆನಿಸುತ್ತಿತ್ತು. ಅವರ ಕೆಲವು ನಿಯಮಗಳನ್ನು ನಾವೂ ಅನುಸರಿಸುತ್ತಿದ್ದೇವೆ. ಕೆಲವು ಮಾತ್ರ ಈಗಲೂ ಸಾಧ್ಯವಾಗಿಲ್ಲ. ನಮ್ಮ ಮನೆಯ ಎರಡು ಬೆಡ್‌ರೂಮಿನ ಶೌಚಾಲಯಗಳನ್ನು ನಮ್ಮ ಮಕ್ಕಳು ನಾವೇ ಶುಚಿಗೊಳಿಸುತ್ತೇವೆ. ಈಗಲೂ ನಾನು ಖಾದಿ ಬಟ್ಟೆಯನ್ನೇ ಉಪಯೋಗಿಸುವುದು. ಅಪ್ಪನೊಳಗಿದ್ದ ಗಾಂಧಿ ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.
ಡಿ.ಸುವರ್ಣ, ಬೆಂಗಳೂರು.
***
ಆದರ್ಶ ಪಾಲಿಸಲಾಗದ ವ್ಯಥೆ
ಗಾಂಧೀಜಿಯವರು ಪ್ರತಿ ಕ್ಷಣವೂ ಹಲವಾರು ವಿಷಯಗಳಲ್ಲಿ ನೆನಪಾಗುತ್ತಲೇ ಇರುತ್ತಾರೆ. ಅವರು ಸ್ವಚ್ಛತೆಗೆ ಒತ್ತು ಕೊಟ್ಟ ರೀತಿ ಹಾಗೂ ಹರಿಜನ ಕೇರಿಯ ಶೌಚಾಲಯವನ್ನು ಸ್ವಚ್ಛಗೊಳಿಸಿ, ದೀನ ದಲಿತರಿಗೆ ಸ್ವಚ್ಛತೆಯ ಪಾಠವನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದವರು. ನಮ್ಮ ಮನೆಯನ್ನು ಶುಚಿಗೊಳಿಸುವಾಗಲೂ ಇವರ ಸಿದ್ಧಾಂತ ನೆನಪಾಗುತ್ತದೆ. ಇನ್ನು ವಾಕಿಂಗ್ ಹೊರಟರೆ ಸಾಕು,  ‘ಕಡಿಮೆ ತಿನ್ನಿರಿ, ಹೆಚ್ಚು ನಡೆಯಿರಿ’ ಎಂಬ ಅವರ ತತ್ವ ನೆನಪಾಗುತ್ತದೆ. ಇನ್ನು ಕಾಫಿ ಕುಡಿಯುವಾಗಲಂತೂ ಗಾಂಧೀಜಿಯವರು ಸಕ್ಕರೆ ವಿರೋಧಿಸಿದ, ಹಾಗೂ ಆರೋಗ್ಯಕ್ಕೆ ಅದು ಒಳ್ಳೆಯದಲ್ಲವೆಂದು ಬೆಲ್ಲವನ್ನು ಉಪಯೋಗಿಸಲು ಹೇಳಿದ ಮಾತು ನೆನಪಿಗೆ ಬರುತ್ತದೆ.

ಅಲ್ಲದೆ ಹತ್ತು ನಿಮಿಷಗಳ ಪ್ರಾಣಾಯಾಮಕ್ಕೂ ಒತ್ತು ಕೊಟ್ಟವರು ಗಾಂಧೀಜಿ. ಒಮ್ಮೆ ಸರ್ದಾರರಿಗೆ ಶೀತವಾದಾಗ ಯಾವ ವೈದ್ಯರ ಬಳಿ ಹೋದಾಗಲೂ ಶೀತ ವಾಸಿಯಾಗಲಿಲ್ಲವಂತೆ. ಆಗ ಗಾಂಧೀಜಿಯವರು ಪ್ರಾಣಾಯಾಮ ಹೇಳಿಕೊಟ್ಟು ಶೀತವನ್ನು ವಾಸಿ ಮಾಡಿದರಂತೆ. ಹೀಗಾಗಿ ಪ್ರಾಣಾಯಾಮ ಮಾಡುವಾಗ ಗಾಂಧೀಜಿ ನೆನಪಿಗೆ ಬಾರದಿರುವುದಿಲ್ಲ. ಏಕಾದಶಿಯಂದು ಉಪವಾಸ ಮಾಡುವಾಗ ವಾರಕ್ಕೊಮ್ಮೆ ಉಪವಾಸ ಹಾಗೂ ಒಂದು ದಿನ ಮೌನವ್ರತ ಎನ್ನುತ್ತಿದ್ದ ಗಾಂಧಿ ನೆನಪಾಗುತ್ತಾರೆ.

  ಸ್ನಾನ ಮಾಡಿ ಬಟ್ಟೆ ಹಾಕಿಕೊಳ್ಳಲು ವಾರ್ಡ್‌ರೋಬ್ ಮುಂದೆ ನಿಂತಾಗ ಅಗತ್ಯಕ್ಕಿಂತ ಹೆಚ್ಚು ವಸ್ತ್ರಗಳನ್ನು ಶೇಖರಿಸಬಾರದೆಂಬ ಅವರ ಮಾತು ನೆನಪಾಗುತ್ತದೆ. ಆದರೆ ಅದನ್ನು ಪಾಲಿಸಲಾಗುವುದಿಲ್ಲವೆಂಬ ವ್ಯಥೆ ಕೂಡ ಇದೆ. ‘ಶರೀರವನ್ನು ನಾವು ಗೌರವದಿಂದ ಪೋಷಿಸಿದರೆ, ಅದು ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತದೆ’ ಎಂಬ ಗಾಂಧಿ ಮಾತು ಕಾಯಿಲೆ ಬಂದಾಗ ಕಣ್ಮುಂದೆ ಬರುತ್ತದೆ. 

ಗಾಂಧೀಜಿಯವರ ಪ್ರಕಾರ, ವೈದ್ಯರುಗಳು ಅಸಹಾಯಕರಾಗಿ ವಿಫಲರಾದ ಸಮಯದಲ್ಲಿ ರೋಗಿಯೇ ಏನಾದರೂ ಶೋಧನೆ ಮಾಡಿ, ಅದನ್ನು ತನ್ನ ಮೇಲೆ ತಾನೇ ಪ್ರಯೋಗ ಮಾಡಿ ಆರೋಗ್ಯವನ್ನು ಸರಿಪಡಿಸಿಕೊಳ್ಳುವುದು ಉತ್ತಮ ಎನ್ನುತ್ತಿದ್ದರು. ಈ ಮಾತು ಸಾರ್ವಕಾಲಿಕ ಸತ್ಯವಲ್ಲವೇ?  ಒಟ್ಟಾರೆ ಗಾಂಧೀಜಿ ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ಹಾಸು ಹೊಕ್ಕಿದ್ದಾರೆ. ಅವರ ಆಲೋಚನೆಗಳು ಎಂದಿಗೂ ಪ್ರಸ್ತುತ.
ಸು. ವಿಜಯಲಕ್ಷ್ಮಿ ಶಿವಮೊಗ್ಗ
***
ಗಾಂಧೀಜಿಯ ಗ್ರಾಮಾಭಿವೃದ್ಧಿ ಚಿಂತನೆ
ಮಹಾತ್ಮ ಗಾಂಧಿಯವರ ಸರಳತೆ, ಸ್ವಾವಲಂಬನೆ, ಅಹಿಂಸೆ, ಸತ್ಯ, ಈ ವೈಚಾರಿಕ  ಅಂಶಗಳ ಪ್ರತಿಪಾದನೆಗಳು ನನ್ನ ಜೀವನದಲ್ಲಿ ಅಡಕಗೊಂಡಿವೆ. ಗಾಂಧೀಜಿಯವರ ಸ್ವಾಭಿಮಾನ ತತ್ವವು ನನ್ನ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ನಾನು ಸ್ನಾತಕೋತ್ತರ ಪದವಿ ಪಡೆದೆ. ಆದರೆ ಬೇರೆ ಕಂಪೆನಿಗಳಿಗೆ ಕೆಲಸಕ್ಕೆ ಸೇರದೆ ಗ್ರಾಮೀಣ ಪ್ರದೇಶದಲ್ಲಿ ಸಣ್ಣಮಟ್ಟದಲ್ಲಿ ಸುಮಾರು ನಾಲ್ಕೈದು ಮಂದಿಗೆ ಕೆಲಸ ಕೊಡುವ ರೀತಿಯಲ್ಲಿ, ಜತೆಗೆ ಅವರ ತತ್ವವನ್ನು ಸ್ವತಃ ನಾನು ಪಾಲನೆ ಮಾಡುವುದರ ಜತೆಗೆ ಅವರಲ್ಲಿಯೂ ಗ್ರಾಮೀಣ ಚಿಂತನೆಗಳು, ತತ್ವಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದ್ದೇನೆ.

ಗಾಂಧೀಜಿಯವರ ಗ್ರಾಮಾಭಿವೃದ್ದಿಯೇ ದೇಶದ ಅಭಿವೃದ್ದಿ ಎನ್ನುವ ಚಿಂತನೆಯಲ್ಲಿ ಒಂದಷ್ಟು ಸಮಾನಮನಸ್ಕ ಸ್ನೇಹಿತರು ಸೇರಿಕೊಂಡು ಗ್ರಾಮಾಭಿವೃದ್ದಿಗೆ ಪೂರಕವಾದ ಚಿಂತನೆಗಳನ್ನು ಅಳವಡಿಸಿ ಹಾಗೂ ಯೋಜನೆಗಳನ್ನು ರೂಪಿಸಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ.

ಜತೆಗೆ ಅವರ ಸರಳ ಮಂತ್ರವೂ ಸಹ ನನ್ನ ಬದುಕಿನ ಹಲವಾರು ಸಂಗತಿಗಳಿಗೆ ಕಾರಣವಾಗಿದ್ದು, ಇದಲ್ಲದೆ ನನಗೆ ತಿಳಿದ ಮಟ್ಟಿಗೆ ನೇರವಾಗಿ, ನಿಷ್ಠುರವಾಗಿ ಸತ್ಯವನ್ನು ಪ್ರಾಮಾಣಿಕವಾಗಿ ನುಡಿಯುವ ರೀತಿ ಬದುಕು ನಡೆಸುತ್ತಿದ್ದೇನೆ. ಹಾಗಾಗಿ ಗಾಂಧೀಜಿಯವರ ಹಲವಾರು ತತ್ವಾದರ್ಶಗಳನ್ನು ಅನುಸರಿಸಲು ಪ್ರಯತ್ನಿಸುತ್ತಾ ನನ್ನನ್ನು ನಾನು ಅರಿತುಕೊಳ್ಳಲು ಸಹಾಯಕವಾಗಿದೆ. ಈ ರೀತಿ ಗಾಂಧಿ ನನ್ನೊಳಗೇ ಇದ್ದಾರೆ.
ಅಭಿನಂದನ್ ಎಂ.,  ಮಂಡ್ಯ
***
ಪ್ರತಿ ತಲೆಮಾರಿನ ಅನುರಣನ
‘ಮಹಾತ್ಮ ಗಾಂಧಿ’ ಈ ಹೆಸರೇ ಒಂದು ರೀತಿ ರೋಮಾಂಚನ ಮೂಡಿಸುವಂಥದ್ದು. ಏಕೆಂದರೆ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಂಡಾಗ ಗಾಂಧೀಜಿ ಏನನ್ನು ಬೇಕಾದರೂ ಪಡೆಯಬಹುದಿತ್ತು. ಯಾರು ಏನೂ ಅನ್ನುವಂತಿರಲಿಲ್ಲ. ಆದರೆ ಗಾಂಧೀಜಿ ಸ್ವಾತಂತ್ರ್ಯ ಪಡೆದ ಗಳಿಗೆಯಲ್ಲಿ ತುಂಬಾ ದುಃಖಿತರಾಗಿದ್ದರು. ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ದೇಶ ವಿಭಜನೆಯಾಗಿತ್ತು. ದೇಶದೆಲ್ಲೆಡೆ ಸ್ವಾತಂತ್ರ್ಯದ ಸಂಭ್ರಮ ಆಚರಿಸುತ್ತಿದ್ದರೆ, ಗಾಂಧೀಜಿಯೊಬ್ಬರೇ ದೇಶದ ವಿಭಜನೆ ಬಗ್ಗೆ ದುಃಖಿಸುತ್ತಿದ್ದರು. ರಾಮ ರಹೀಮಾ ತೇರೆ ನಾಮ್ ಹಿಂದೂ ಮುಸ್ಲಿಂ ಬಾಯಿ ಬಾಯಿ ಎನ್ನುತ್ತಿದ್ದ ಅವರ ಅಂತರಾಳ ಎಷ್ಟು ಸ್ವಚ್ಛ ಮನಸ್ಸು ಅನ್ನಿಸುತ್ತದೆ. ಇಂದಿಗೂ ಕಾಶ್ಮೀರ ಸಮಸ್ಯೆ ಒಂದು ಕ್ಯಾನ್ಸರ್‌ ರೋಗದಂತೆ ಎರಡು ರಾಷ್ಟ್ರಕ್ಕೂ ಪೀಡಿಸುತ್ತಿದೆ.

ನಮಗೆ ಇಂಥ ಸಮಯದಲ್ಲಿಯೇ ಗಾಂಧಿ ತೀರಾ ಕಾಡುವುದು. ಏಕೆಂದರೆ ಸ್ವಾತಂತ್ರ್ಯ ಗಳಿಸಿಕೊಂಡೆವು. ಸಂತಸ ಗಳಿಸಲಿಲ್ಲ. ಇಬ್ಬರೂ ಸೇರಿ ಹೋರಾಡಿದೆವು. ಆದರೆ ಬೇರೆ ಬೇರೆಯಾದೆವು. ಏಕೆ, ಅಂದು ಗಾಂಧೀಜಿಗೆ ಕಾಡಿದ ನೋವು ನಮಗೂ ಕಾಡುತ್ತಿದೆ. ಗಾಂಧೀಜಿಯವರ ‘ಸರಳತೆ–ಸ್ವಾವಲಂಬನೆ–ಸ್ವಾಭಿಮಾನ’ ಅವರು ನಡೆದುಕೊಂಡು ಬಂದ ಸರಳ ಜೀವನ, ಆಹಾರ ಪದ್ಧತಿ, ವಸ್ತ್ರಧಾರಣೆ, ಕಾಯಕ ಮಹತ್ವ, ಕ್ರಿಯಾಶೀಲತೆ, ದೇಶೀಯ ಚಳವಳಿ, ಚರಕದ ಮಹತ್ವ, ಬ್ರಿಟಿಷರ ನಿಯಮಗಳ ಬಗ್ಗೆ ತಿರಸ್ಕಾರ, ಗ್ರಾಮೀಣ ಅಭಿವೃದ್ಧಿ, ಮೂಲಭೂತವಾದ ಗುಡಿ ಕೈಗಾರಿಕೆ ಮಹತ್ವ, ಹಳ್ಳಿಗಳ ಉದ್ಧಾರ, ಇವೆಲ್ಲವೂ ಗಾಂಧೀಜಿಯವರ ಸಾರ್ವಕಾಲಿಕ ಸತ್ಯದ ನಿಲುವುಗಳು ಅವೆಲ್ಲವೂ ಇಂದಿಗೂ ಮಾದರಿ. ಅದೇ ನಮಗೂ ಆದರ್ಶ.

ಬಡತನದ ಪಾಠ ಬೋಧಿಸುವಾಗ, ‘ಬಡತನವು ಹಿಂಸೆಯ ಅತಿ ಕೆಟ್ಟ ರೂಪ’ ಎಂದ ಗಾಂಧಿವಾಣಿ ಇಡೀ ವಿಶ್ವಕ್ಕೇ ಒಂದು ಪಾಠ. ಇಂಥ ಸಂದರ್ಭದಲ್ಲಿಯೇ ಗಾಂಧೀಜಿ ಮಾತನಾಡುವುದು, ನಮ್ಮ ಹೃದಯವನ್ನು ತಟ್ಟುವುದು. ಗಾಂಧೀಜಿಯ ಮಾತು ತಲೆಮಾರಿನಿಂದ ತಲೆಮಾರಿಗೆ ಹೊಸ ಹೊಸ ರೂಪ ಪಡೆಯುತ್ತ ಅನುರಣಿಸುವುದು ನಿಜ. ಪ್ರತಿ ಮಾತಿನಲ್ಲೂ ಅವರಿರುವುದೂ ನಿಜ.
ಎಸ್.ಆರ್. ನರಸಿಂಹ ಪ್ರಸಾದ್, ಕುಣಿಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT