ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಕುಟುಂಬದಲ್ಲಿ ಮಳೆಗೆ ಸ್ಥಾನ ಇದೆಯೇ?

Last Updated 11 ಜುಲೈ 2015, 19:30 IST
ಅಕ್ಷರ ಗಾತ್ರ

ಮನೆ ಕಟ್ಟಲು ಹೊರಟವರ ಸಂಭ್ರಮ ಗಮನಿಸಿರುವಿರಾ? ಮೂವತ್ತು ನಲವತ್ತರ ನಿವೇಶನದಲ್ಲಿ ಎಷ್ಟೊಂದು ಆಯ್ಕೆಗಳು! ಎಷ್ಟೊಂದು ಕನಸುಗಳು! ಅಡುಗೆ ಮನೆ ಹೀಗಿರಬೇಕು... ನಡುಮನೆ ದೊಡ್ಡದಾಗಿರಬೇಕು– ಅಲ್ಲಿ ಸೋಫಾ ಸೆಟ್‌ಗೆ, ಟೀವಿಗೆ ಜಾಗ ಇರಬೇಕು. ಮಲಗುವ ಕೋಣೆಯಲ್ಲಿ ಮಂಚದ ಜೊತೆಗೆ ಓದು–ಬರಹಕ್ಕೆಂದು ಕೊಂಚ ಜಾಗವೂ ಬೇಕು. ಇದರ ಜೊತೆಗೆ ಬಚ್ಚಲು, ಹಿತ್ತಲು, ದೇವರಕೋಣೆ, ಊಟದ ಕೋಣೆ, ಹರಟಲೊಂದು ಸ್ಥಳ, ನಾಯಿಗೊಂದು ಗೂಡು, ಮಕ್ಕಳ ಓದಿಗಿಷ್ಟು ಜಾಗ, ಉಗ್ರಾಣ– ಹೀಗೆ ಅವಶ್ಯಕತೆಗಳು ಬೆಳೆಯುತ್ತವೆ. ಆದರೆ, ಈ ಅಗತ್ಯಗಳ ಪಟ್ಟಿಯಲ್ಲಿ ಮಳೆನೀರಿಗೆ ಚೂರು ಜಾಗ ಬೇಡವೆ?

ಗಮನಿಸಿ ನೋಡಿ: ಮನೆಯ ನೀರಿನ ಸಂಗ್ರಹದ ತೊಟ್ಟಿ ದೊಡ್ಡದಾಗಿರುತ್ತದೆ. ಅದು ಈಶಾನ್ಯ ಮೂಲೆಯಲ್ಲಿಯೇ ಇರುತ್ತದೆ. ಮನೆಯ ಮೇಲಿನ ಟ್ಯಾಂಕ್‌ಗಳು ಕೂಡ ಬಕಾಸುರನ ಹೊಟ್ಟೆಗಳಂತಿರುತ್ತವೆ. ಆದರೆ, ಈ ನೀರಿನ ಮೂಲವಾದ ಮಳೆ ನೀರಿಗೆ ಮಾತ್ರ ಮನೆಯ ಪರಿಸರದಲ್ಲಿ ಕೊಂಚವೂ ಜಾಗ ಇರುವುದಿಲ್ಲ. ಯಾಕೆ ಹೀಗೆ?

ಉತ್ತರ ಸ್ಪಷ್ಟ. ಇಂಚು ಭೂಮಿಗೆ ಚಿನ್ನದ ಬೆಲೆ ಇರುವಾಗ ಮಳೆ ನೀರಿಗೆ ಎಲ್ಲಿ ಜಾಗ ತರುವುದು? ಹೌದು, ಭೂಮಿಯ ಬೆಲೆ ಗಗನಕ್ಕೇರಿದೆ. ಯಾವಾಗಲೂ ಏರುಮುಖ ಆಗಿರುವುದರ ಬಗ್ಗೆ ನಮಗೆ ಕುತೂಹಲ, ಆಸ್ಥೆ. ಮಳೆ ಇಳಿಮುಖವಾದುದು. ಅದು ಆಕಾಶದಿಂದ ಭೂಮಿಗೆ ಇಳಿಯುವಂತಹದ್ದು. ಆ ಕಾರಣದಿಂದಲೇ ಅದರ ಬಗ್ಗೆ ಸಸಾರ. ಮನೆಯೊಳಗಿನ ಮಾತು ಬಿಡಿ: ಅಂಗಳಕ್ಕೆ ಬಂದು ನೋಡಿ– ಅಲ್ಲಿ ಸಿಮೆಂಟಿನ ಸಾರಣೆ ಇರುತ್ತದೆ. ಮನೆಯ ಮುಂದೆ ಗುಂಡಿ ಬಿದ್ದು, ಅದರಲ್ಲಿ ಮಳೆ ನೀರು ನಿಂತರೆ ನಾಗರಿಕ ಜಗತ್ತಿಗೆ ಕಸಿವಿಸಿ. ಮಳೆ ನಿಂತ ಕೂಡಲೇ ಅದರ ಪಸೆಯೂ ಕಾಣದಂತಾದರೆ ಮನಸ್ಸಿಗೆ ನೆಮ್ಮದಿ! ತಾರಸಿ ಮೇಲೆ ಬಿದ್ದ ನೀರು, ಅಂಗಳದಲ್ಲಿ ಬಿದ್ದ ನೀರು, ಎಲ್ಲವೂ ಕೊನೆಗೆ ಚರಂಡಿ ಪಾಲಾಗುತ್ತದೆ. ವ್ಯರ್ಥವಾಗಿ ಹರಿದುಹೋಗುವ ನೀರು ಯಾರಿಗೂ ಆತಂಕ ಹುಟ್ಟಿಸುವುದಿಲ್ಲ. ಒಂದು ದೂರವಾಣಿ ಕರೆಗೆ ನೀರು ಹೊತ್ತ ಟ್ಯಾಂಕರ್‌ ಮನೆಗೆ ಬರುತ್ತದೆ. ಆ ಟ್ಯಾಂಕರ್‌ ನೀರು ಸಂಪಿನಲ್ಲಿ ತುಂಬಿಕೊಳ್ಳುತ್ತದೆ. ಹೀಗೆ, ಹಣಕ್ಕೆ ನೀರನ್ನು ಕೊಳ್ಳುವ ಕಿಮ್ಮತ್ತು ಇರುವಾಗ, ಉಚಿತವಾಗಿ ಸುರಿಯುವ ಮಳೆ ನೀರು ಯಾರಿಗೆ ಬೇಕು?

ಹೌದು, ಈ ಮಳೆ ಆತಂಕವನ್ನೂ ಉಂಟು ಮಾಡುತ್ತದೆ. ಮಳೆಯ ನೀರು ರಸ್ತೆಗಳಲ್ಲಿ ಉಸಿರುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತವಾಗುತ್ತದೆ. ಮಳೆಯ ನೀರು ನೆರೆಯ ರೂಪ ತಾಳಿ ಮನೆಗಳಿಗೆ ನುಗ್ಗಿ ಜನರನ್ನು ಉಸಿರುಗಟ್ಟಿಸುತ್ತದೆ. ಈಚಿನ ವರ್ಷಗಳಲ್ಲಿ ಪ್ರತಿ ಮಳೆಗಾಲದಲ್ಲು ಮುಂಬೈ ನಿದ್ದೆಗೆಡುತ್ತದೆ. ಬೆಂಗಳೂರಿನ ಕೆಲವು ಪ್ರದೇಶಗಳು ಜಲಾವೃತಗೊಳ್ಳುತ್ತವೆ. ರಾಜ ಚರಂಡಿಗಳಲ್ಲಿ ಹರಿಯುವ ಮಳೆನೀರಿನಲ್ಲಿ ಮಕ್ಕಳು ಕೊಚ್ಚಿಕೊಂಡು ಹೋದ ಉದಾಹರಣೆಗಳೂ ಇವೆ. ಮಳೆಯ ಈ ಭೀಕರ ರೂಪ ಕಂಡು, ಮಳೆಯನ್ನು ಶಪಿಸುವವರೂ ಇದ್ದಾರೆ. ಈ ಅನಾಹುತವೆಲ್ಲ ಆಧುನಿಕ ಬದುಕಿನಲ್ಲಿ ಮಳೆಗೆ ಸ್ಥಾನ ಕೊಡದೆಹೋದುದರ ಫಲಶ್ರುತಿ ಎನ್ನುವ ಪ್ರವರ ಯಾರಿಗೆ ಬೇಕು? ಯಾಕೆಂದರೆ, ಮಳೆ ನಿಂತ ತಕ್ಷಣವೇ ಧಾವಂತದ ಬದುಕಿನೊಂದಿಗೆ ಓಟ ಮುಂದುವರಿಸಬೇಕಿದೆ.

ಮಳೆ ಎನ್ನುವ ಜೀವ!
ಮಳೆಯನ್ನು ಮಾಯಿ ಎನ್ನುತ್ತೇವೆ. ಜೀವದಾಯಿನಿ ಎನ್ನುತ್ತೇವೆ. ಹೀಗೆ, ಭಾವುಕವಾಗಿ ರೋಚಕವಾಗಿ ಮಾತನಾಡುತ್ತಲೇ ಮಳೆಯನ್ನು ಭೌತಿಕ ಬದುಕಿನಲ್ಲಿ ದೂರ ಇಡುತ್ತೇವೆ. ಭಾವಕೋಶಕ್ಕೆ ಹತ್ತಿರವಾದ ಮಳೆಯನ್ನು ದೈನಿಕದಲ್ಲೂ ಜೊತೆಯಾಗಿಸಿಕೊಳ್ಳುವುದಕ್ಕೆ ಅಗತ್ಯವಾದ ಶಿಕ್ಷಣ ನಮ್ಮಲ್ಲಿ ಅಪರೂಪ. ಶಾಲೆಗಳ ಪಠ್ಯದಲ್ಲಿ, ಕಥೆಗಳಲ್ಲಿ ಮಳೆಯನ್ನು ರೈತನ ಆಪ್ತಮಿತ್ರ ಎಂದು ಹೇಳಿಕೊಡಲಾಗುತ್ತದೆ. ಹಾಗಾದರೆ, ಉಳಿದವರ ಪಾಲಿಗೆ ಮಳೆ ಏನು?

ಮಳೆಯನ್ನು ಮನೆಯ ಸದಸ್ಯನಂತೆ, ಒಂದು ಜೀವಂತ ಸಮೂಹದಂತೆ ಭಾವಿಸುವುದು ಈ ಹೊತ್ತಿನ ಅಗತ್ಯ. ಅಂದಹಾಗೆ, ಮಳೆಯ ಕುರಿತ ಈ ಸಸಾರಕ್ಕೂ ಆಧುನಿಕ ಬದುಕಿಗೂ ಸಂಬಂಧ ಇರುವಂತಿದೆ. ಹಳೆಯ ಕಾಲದ ಗ್ರಾಮೀಣ ಕುಟುಂಬಗಳಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಕ್ಕ ತಂಗಿ, ಅಣ್ಣ ತಮ್ಮಂದಿರು ಇರುವ ಮನೆಯಲ್ಲಿ ದನಕರುಗಳು, ಬೆಕ್ಕುಗಳೂ ಇರುತ್ತಿದ್ದವು. ಅಂಗಳಕ್ಕೆ ಭೂಷಣ ಎಂಬಂತೆ ನಾಯಿ ಇರುತ್ತಿತ್ತು. ಈ ಎಲ್ಲವೂ ಸೇರಿಯೇ ಒಂದು ಕುಟುಂಬ! ನೀರು ಮತ್ತು ಬೆಂಕಿ ಈ ಕುಟುಂಬದ ಅತ್ಯಮೂಲ್ಯ ಅಂಶಗಳಾಗಿದ್ದವು.

ಬೆಂಕಿಪೆಟ್ಟಿಗೆಗಳು ಸಿಗದ ದಿನಗಳಲ್ಲಿ ಒಲೆ ಆರದಂತೆ ಜೋಪಾನ ಮಾಡಿಕೊಂಡು ಬೆಂಕಿಯನ್ನು ಕಾಯ್ದುಕೊಳ್ಳುತ್ತಿದ್ದರು. ಅದೇ ರೀತಿ ನೀರು ಕೂಡ ಮನೆಯ ಆಪ್ತ ಸದಸ್ಯನಾಗಿರುತ್ತಿತ್ತು. ಬಾವಿಯಂತೂ ಗಂಗಾದೇವಿಯ ಅವತಾರ.

ಮಳೆಗಾಲ ಬರಲಿದೆ ಎಂದು ಆಹಾರವನ್ನು ಭದ್ರವಾಗಿ ಇರಿಸುವ ತಯಾರಿ ತಿಂಗಳುಗಟ್ಟಲೆ ಮನೆಯ ಒಳಗೆ ನಡೆಯುತ್ತಿತ್ತು. ಬರುವ ಮಳೆಯನ್ನು ಸ್ವಾಗತಿಸಲು ಮನೆಯ ಹೊರಗೂ ಸಿದ್ಧತೆ ನಡೆಯುತ್ತಿತ್ತು. ತೋಡುಗಳು ಶುಚಿಯಾಗುತ್ತಿದ್ದವು, ಒಣಗಿದ ಕೆರೆಗಳ ಹೂಳು ಬಂಡಿಗಳಲ್ಲಿ ಹೊಲ ಸೇರುತ್ತಿತ್ತು. ಮಳೆ ನೀರು ಹೊಲಗಳಲ್ಲಿ ನಿಂತು ನಿಂತೂ ಬಳಿಕ ಹರಿದು ಹೋಗಲಿ ಎಂದು ಹೊಲದ ಬದುಗಳನ್ನು ಕಟ್ಟಿ, ಹುಲ್ಲು ಕೊಳೆಯುವಂತೆ ಅಕ್ಕರೆ ಮಾಡುತ್ತಿದ್ದರು. ಈ ಪ್ರಕ್ರಿಯೆಯ ನಡುವೆಯೇ ಬೆಳೆಯುವ ಮಕ್ಕಳಿಗೆ ನೀರನ್ನು ಸಂಭಾಳಿಸುವ ಕಲೆ ಕರಗತವಾಗಿಬಿಡುತ್ತಿತ್ತು.

ಗ್ರಾಮೀಣ ಪ್ರದೇಶಗಳಲ್ಲಿ ಹೋಗಿ ನೋಡಿದರೆ ಈಗಲೂ ತೆಂಗಿನ ಕಾಯಿಯನ್ನೋ ಅಥವಾ ಒಂದು ಕಡ್ಡಿಯನ್ನೋ ಕೈಯಲ್ಲಿ ಹಿಡಿದುಕೊಂಡು ಅಂತರ್ಜಲ ಪರೀಕ್ಷೆ ಮಾಡುವವರು ಕಾಣಸಿಗುತ್ತಾರೆ. ಕಾಲೇಜುಗಳಲ್ಲಿ ಕಲಿಯದೇನೇ ಗಟ್ಟಿಮುಟ್ಟು ಮನೆಗಳನ್ನು ನಿರ್ಮಿಸುವ ಮೇಸ್ತ್ರಿಗಳಿದ್ದಾರೆ. ಆಧುನಿಕ ಸಲಕರಣೆಗಳು ಇಲ್ಲದೇನೇ ಗೋಡೆಗುಮ್ಮಟಗಳನ್ನು ಅತ್ಯಂತ ಕರಾರುವಕ್ಕಾಗಿ ರೂಪಿಸುವವರು ಇದ್ದಾರೆ. ಅವರದು ಸಾಂಪ್ರದಾಯಿಕ ಜ್ಞಾನ. ವಿಶ್ವವಿದ್ಯಾಲಯಗಳಲ್ಲಿ ಕಲಿಯದ ಇವರ ತಿಳಿವಳಿಕೆ, ವಾಸ್ತುಶಿಲ್ಪದ ಜಾಣ್ಮೆ ಯಾವ ಎಂಜಿನಿಯರ್‌ಗೂ ಕಡಿಮೆಯಲ್ಲ. ಹೀಗೆ, ಪ್ರಕೃತಿಯ ಮಡಿಲಲ್ಲಿ ಬೆಳೆಯುತ್ತ, ಅದರ ತಾಳಿಕೆ ಬಾಳಿಕೆ ಗಮನಿಸಿಕೊಂಡು ಮನೆಮಠ ನಿರ್ಮಿಸುವ ಚಾತುರ್ಯವನ್ನು, ದೇಸಿ ತಿಳಿವಳಿಕೆಯನ್ನು ‘ಸಾಂಪ್ರದಾಯಿಕ ಜಾನಪದ ಎಂಜಿನಿಯರಿಂಗ್‌’ ಎಂದು ಶ್ರೀಕುಮಾರ್‌ ಬಣ್ಣಿಸುತ್ತಾರೆ. ಸ್ವತಃ ಎಂಜಿನಿಯರ್‌ ಆಗಿರುವ ಅವರು, ‘ಆಧುನಿಕ ಎಂಜಿನಿಯರಿಂಗ್‌ ದೆಸೆಯಿಂದ  ದಾರಿ ತಪ್ಪಿದಂತಾಗಿದೆ ಎಂದು ವಿಷಾದಿಸುತ್ತಾರೆ.

ಮನುಷ್ಯಕೇಂದ್ರಿತ ವಿಶ್ವ
ನದಿ ತಟಗಳಲ್ಲಿ ನಾಗರೀಕತೆಯ ವಿಕಾಸ ಆದುದು ಸರಿಯಷ್ಟೇ. ಈ ವಿಕಾಸದ ಹಾದಿಯಲ್ಲಿ ಮನುಷ್ಯ ಎಷ್ಟು ದೂರ ಬಂದಿದ್ದಾನೆಂದರೆ, ಈಗ ದೂರದ ನದಿಗಳನ್ನೇ ತನ್ನ ಅಗತ್ಯಕ್ಕೆ ತಕ್ಕಂತೆ ಜೋಡಿಸಲು ಹೊರಟಿದ್ದಾನೆ. ಪ್ರಕೃತಿಯನ್ನು ಮಣಿಸಬಯಸುವ ಈ ಧೋರಣೆಯನ್ನು ಪ್ರಸಿದ್ಧ ವಾಸ್ತುಶಿಲ್ಪಿ ನಾಗರಾಜ ವಸ್ತಾರೆ ವಿಶ್ಲೇಷಿಸುವುದು ಹೀಗೆ:

‘‘ಯೂರೋಪಿಯನ್‌ ಎನ್‌ಲೈಟನ್‌ಮೆಂಟ್‌ ಎನ್ನುವ ಪರಿಕಲ್ಪನೆಯಲ್ಲಿ ಎಲ್ಲ ಹಳೆಯ ಸಿದ್ಧಾಂತಗಳನ್ನು ಪ್ರಶ್ನಿಸಬೇಕು ಎಂಬ ನಂಬಿಕೆಯೊಂದು ವ್ಯಾಪಕವಾಗತೊಡಗಿತು. ಜಡ್ಡುಗಟ್ಟಿದ, ಕೆಟ್ಟುಹೋದ ಅಂಶಗಳು ಪ್ರಶ್ನೆಗೆ ಮತ್ತು ವಿರೋಧಿಸುವುದಕ್ಕೆ ಅರ್ಹ ಎನ್ನುವುದು ನಿಜವೇ. ಆದರೆ ಒಳ್ಳೆಯ ಅಂಶಗಳನ್ನೂ ಪ್ರಶ್ನೆ ಮಾಡುವ ಮತ್ತು ವಿರೋಧಿಸುವ ಖಯಾಲಿಯಿಂದಾಗಿ ಹಲವಾರು ಜನಪದ ಮತ್ತು ಜನಪರ ವಿಚಾರಗಳೂ ಅಂಚಿಗೆ ಸರಿದವು. ಉದಾಹರಣೆಗೆ, ಕೆರೆಯ ನೀರಿನ ಕುರಿತ ನಂಬಿಕೆಗಳು. ನಿಂತ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎನ್ನುವ ಮೂಲಕ, ‘ಕೆರೆಯ ನೀರು ಕುಡಿಯಬೇಡಿ’ ಎನ್ನುವ ನಂಬಿಕೆಯನ್ನು ದಾಟಿಸುತ್ತೇವೆ. ಇದರ ಬದಲಾಗಿ ‘ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಕೆರೆಯ ನೀರನ್ನು ಶುದ್ಧೀಕರಿಸಿ ಕುಡಿಯಿರಿ’ ಎನ್ನುವುದು ಹೆಚ್ಚು ಸಮಂಜಸ’’ ಎಂದು ವಸ್ತಾರೆ ಹೇಳುತ್ತಾರೆ.

‘‘ಸ್ಟೀಮ್‌ ಎಂಜಿನ್‌ನ ಆವಿಷ್ಕಾರದ ಮೂಲಕ ಮನುಷ್ಯ ಸಾಗಾಣಿಕೆ ಪ್ರಕ್ರಿಯೆಯನ್ನು ಸುಲಭ ಮಾಡಿಕೊಂಡ. ನೀರು ಇದ್ದಲ್ಲಿ ತನ್ನ ಆಶ್ರಯವನ್ನು ಕಂಡುಕೊಂಡಿದ್ದ ಮನುಷ್ಯ, ನದಿಬಯಲಿನಲ್ಲಿ ಬೀಡು ಬಿಡುತ್ತಿದ್ದ. ಆದರೆ ಯಂತ್ರಗಳ ಮೂಲಕ ಸಾಗಾಣಿಕೆ ಸುಲಭವಾದಾಗ ತಾನಿದ್ದಲ್ಲಿಗೇ ಎಲ್ಲ ವಸ್ತುಗಳೂ ಬರುವಂತೆ ನೋಡಿಕೊಂಡ. ವಸ್ತುಗಳ ಜೊತೆಗೆ ನೀರೂ ತಾನಿರುವಲ್ಲಿಗೇ ಬರಬೇಕು ಎಂಬ ಆಸೆಯೂ ಅವನಲ್ಲಿ ಮೂಡಿದೆ’’ ಎಂದು ಇಂದಿನ ಪರಿಸ್ಥಿತಿಯ ಉದಾಹರಣೆಗಳನ್ನು ವಸ್ತಾರೆ ಹೆಕ್ಕಿ ತೋರಿಸುತ್ತಾರೆ.

ವಸ್ತಾರೆ ಅವರ ಮಾತಿಗೆ ಪೂರಕವಾಗಿ– ‘‘ಸ್ಟೀಮ್‌ ಎಂಜಿನ್‌ ಎನ್ನುವುದು ಬಿಸಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಬಿಸಿ ಮಾಡಬೇಕಾದರೆ ನಮ್ಮಲ್ಲಿರುವ ಇಂಧನವನ್ನು ದಹಿಸಬೇಕಾಗುತ್ತದೆ. ಇಂದಿಗೂ ಇದೇ ಸೂತ್ರದಡಿ ಶಕ್ತಿ ಉತ್ಪಾದಿಸಲಾಗುತ್ತದೆ. ಅದಕ್ಕಾಗಿ ಮುಗಿಯುವ ಸಂಪನ್ಮೂಲವನ್ನು ನಿರಂತರವಾಗಿ ದಹಿಸಲಾಗುತ್ತಿದೆ. ಜೀವನಕ್ಕೆ ಅತ್ಯಗತ್ಯವಾಗಿರುವ ನೀರು ಎಲ್ಲಿಂದಲೋ ಅನಾಯಾಸವಾಗಿ ಪೈಪ್‌ನಲ್ಲಿ ಬರುವಾಗ ಅದರ ಮೂಲಕ್ಕೆ ಬೆಂಕಿ ಬಿದ್ದಿದೆಯೇ ಎನ್ನುವ ಪ್ರಶ್ನೆಯನ್ನು ಯಾರೂ ಕೇಳಿಕೊಳ್ಳುವುದಿಲ್ಲ’’ ಎಂದು ಶ್ರೀಕುಮಾರ್‌ ಹೇಳುತ್ತಾರೆ.

ಮುಂದಿನ ಪೀಳಿಗೆಗೆ ನೀರಿನ ಆಸ್ತಿ
‘‘ಒಂದು ಊರಿಗೆ ಬೇಕಾದ ವಸ್ತುಗಳು ನೂರು ಮೀಟರ್‌ನ ಆಸುಪಾಸಿನಲ್ಲಿಯೇ ಸಿಗಬೇಕು’’ ಎನ್ನುವುದು ಗಾಂಧೀಜಿ ಅವರ ಗ್ರಾಮಸ್ವರಾಜ್ಯ ಪರಿಕಲ್ಪನೆಯ ಮುಖ್ಯವಾದ ಅಂಶ. ಇದು ವರ್ತಮಾನದಲ್ಲಿ ಸಂಪೂರ್ಣ ಬದಲಾಗಿದೆ. ನೀರಿನ ವಿಷಯವನ್ನೇ ನೋಡುವುದಾದರೆ, ನಾವು ಕುಡಿಯುವ ನೀರು ನೂರಾರು ಮೈಲಿಗಳ ದೂರದಿಂದ ಹರಿದುಬಂದಿರುತ್ತದೆ. ಇದರ ಬದಲಿಗೆ, ಅನಾಯಾಸವಾಗಿ ಬೀಳುವ ಮಳೆಯನ್ನು ಭೂಮಿಯಲ್ಲಿ ಇಂಗುವುದಕ್ಕೆ ಬಿಡುವ ಮೂಲಕ ಸ್ಥಳೀಯವಾಗಿ ಜಲ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ನಾವು ಗಮನಹರಿಸುವುದಿಲ್ಲ.

ಕರಾವಳಿಯ ಊರುಗಳಲ್ಲಿ, ಕೇರಳದಲ್ಲಿ ಹಂತಹಂತವಾಗಿ ಗದ್ದೆಗಳಿರುತ್ತವೆ. ಮಳೆ ನೀರು ಬೆಟ್ಟುಗದ್ದೆಗಳಲ್ಲಿ, ಮನೆಯ ಮುಂದೆ ಬಾಕಿಮಾರು ಗದ್ದೆಯಿದ್ದರೆ ಅಲ್ಲಿ ಹರಿಯುತ್ತದೆ. ಆನಂತರ ಮಜಲು ಗದ್ದೆಗಳಿಯುವ ಮಳೆನೀರು, ಪಟ್ಲಗದ್ದೆಯನ್ನೂ ದಾಟಿ, ನೂರಾರು ಕೃಷಿ ಜಮೀನುಗಳನ್ನು ಸುತ್ತುವರಿದು ಕೊನೆಗೆ ಕೆರೆಯನ್ನೋ ಹೊಳೆಯನ್ನೋ ಸೇರುತ್ತದೆ. ಆದರೆ, ನಗರಗಳ ವಿಚಾರವೇ ಬೇರೆ. 30/40ರ ಸೈಟ್‌ನಲ್ಲಿ ಪೂರ್ತಿ ಮನೆ ಎದ್ದುನಿಂತಿರುತ್ತದೆ. ಆ ಮನೆಯ ಬಾಲ್ಕನಿಯು ರಸ್ತೆಗೆ ಚಾಚಿಕೊಂಡಿರುತ್ತದೆ. ಇಂಥ ಪರಿಸರದಲ್ಲಿ ಮಳೆನೀರು ಅನಾಥಪ್ರಜ್ಞೆಯಿಂದ ನರಳುತ್ತದೆ. ಆ ನರಳಿಕೆ ಪರೋಕ್ಷವಾಗಿ ನಮ್ಮದೂ ಹೌದು, ಪ್ರತ್ಯಕ್ಷವಾಗಿ ನಮ್ಮ ಮುಂದಿನ ತಲೆಮಾರಿನದು.

ಎಲ್ಲಿಂದಲೋ ಹರಿದುಬರುವ, ಯಾರೋ ಸಂರಕ್ಷಿಸಿದ ನೀರನ್ನು ಬಳಸುವ ನಾವು, ‘ಒಂದಿಷ್ಟು ನೀರನ್ನು ಇಂಗುವುದಕ್ಕೆ ಬಿಡುತ್ತಿದ್ದೇವೆಯೇ?’ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಮಕ್ಕಳಿಗಾಗಿ ಆಸ್ತಿಪಾಸ್ತಿ ಕೂಡಿಡುತ್ತೇವಲ್ಲ; ಅದಕ್ಕಿಂತಲೂ ಅಮೂಲ್ಯವಾದುದು ನೀರಿನ ಸಂಪನ್ಮೂಲ.

***
ಪ್ರಕೃತಿಯೊಂದಿಗೆ ಸಹನಡೆ
ತಂತ್ರಜ್ಞಾನ ಜನಜೀವನವನ್ನು ಸುಧಾರಿಸಿದೆ. ಪ್ರಕೃತಿಯ ಭಾರೀ ಸವಾಲುಗಳಿಂದ ಮನುಷ್ಯನನ್ನು ರಕ್ಷಿಸಿದೆ. ಇದೆಲ್ಲವೂ ನಿಜ. ಆದರೆ ಈ ಸವಲತ್ತಿನ ಪ್ರಕ್ರಿಯೆ ಮನುಷ್ಯನಲ್ಲಿ ಪ್ರಕೃತಿಯನ್ನು ಬೇಕಾದ ಹಾಗೆ ಮಣಿಸಬಲ್ಲೆ ಎನ್ನುವ ಅಹಂಕಾರ ಸೃಷ್ಟಿಸಿದಂತಿದೆ.

ಪ್ರಕೃತಿಯ ಕುರಿತ ಮನುಷ್ಯನ ಧೋರಣೆಯನ್ನು ಶ್ರೀಕುಮಾರ್‌ ಅವರು ‘‘ನಾವು ಕಟ್ಟುವ ಅಣೆಕಟ್ಟೆಗಳು ಎಷ್ಟು ಕಾಲ ಬಾಳಬಲ್ಲವು ಎಂದು ಲೆಕ್ಕಾಚಾರ ಹಾಕುತ್ತೇವೆ. ಕಟ್ಟಡಗಳು ಬಹುಕಾಲ ಬಾಳಲು ಏನು ಮಾಡಬೇಕು ಎಂದೂ ಚಿಂತಿಸುತ್ತೇವೆ. ನಿರಂತರ ಮಳೆಗೆ ಮಾಸದೇ ಇರುವ ಬಣ್ಣಗಳನ್ನು, ಬಿರುಮಳೆ–ಗಾಳಿಗೆ ಅಲುಗಾಡದ ಸ್ಥಾವರಗಳನ್ನು ಲೆಕ್ಕ ಹಾಕಿ ರೂಪಿಸುತ್ತೇವೆ. ಆದರೆ, ಈ ನಿರ್ಮಾಣಗಳಿಂದಾಗಿ ಪ್ರಕೃತಿಯ ನಿಯತಗತಿಗೆ ಧಕ್ಕೆಯಾಗುತ್ತದೆಯೇ ಎಂದು ನಾವು ಯೋಚಿಸುವುದಿಲ್ಲ. ನಮ್ಮ ಆಸೆಗಳ ರೂಹುಗಳು ಅಲ್ಲಿನ ಪರಿಸರಕ್ಕೆ ಹೊಂದುವಂತಿದೆಯೇ ಎನ್ನುವುದರ ಬಗ್ಗೆ ಗಮನ ಹರಿಸುವುದಿಲ್ಲ’’ ಎನ್ನುತ್ತಾರೆ. ‘‘ಎಂಜಿನಿ­ಯರಿಂಗ್‌ ಎಂಬ ಜ್ಞಾನ ಶಾಖೆಯಲ್ಲಿ ಪ್ರಕೃತಿಯನ್ನೂ ಪಾಲುದಾರ­ನನ್ನಾಗಿ ಮಾಡಬೇಕು. ಅದರ ನಡೆಯನ್ನು ಗಮನಿಸುವ ಕ್ರಮವೊಂದು  ಬೆಳೆಯಬೇಕು’’ ಎನ್ನುವುದು ಅವರ ಆಶಯ.

ಶ್ರೀಕುಮಾರ್ ಹೇಳುವ ಪರಿಕಲ್ಪನೆ ‘ಸುಸ್ಥಿರ ಅಭಿವೃದ್ಧಿ’ಯ ಪರಿಕಲ್ಪನೆಗೆ ಸಮೀಪ. ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಯನ್ನು ಸಾಧ್ಯವಾಗಿಸುವ ಮಾದರಿ ಅವರದು. ಅಂದಹಾಗೆ, ಶ್ರೀಕುಮಾರ್‌ ಅವರದು ಬಾಯಿ­ಮಾತಿನ ಆದರ್ಶವಲ್ಲ. ಅವರು ಕೃಷಿಯಲ್ಲಿ ಪ್ರಯೋಗಶೀಲರು. ಅಡಿಕೆ, ರಬ್ಬರ್‌ನಂತಹ ವಾಣಿಜ್ಯ ಬೆಳೆಗಳ ಬಗ್ಗೆ ಅವರಿಗೆ ಒಲವಿಲ್ಲ. ಅಡಿಕೆ ತೋಟವನ್ನು ತೆಗೆದು ಹಾಕಿ, ಅದರ ಜಾಗದಲ್ಲಿ ತರಕಾರಿ, ಭತ್ತ ಬೆಳೆಯುತ್ತಿದ್ದಾರೆ. ಬಹಳಷ್ಟು ಜನಕ್ಕೆ ಅಪರಿಚಿತವಾಗಿ ಉಳಿದಿರುವ ‘ಸುಸ್ಥಿರ ಅಭಿವೃದ್ಧಿ’ ಪರಿಕಲ್ಪನೆ ಜನಪ್ರಿಯಗೊಳಿಸಲು ಒಂದು ಆಂದೋಲನ ರೂಪಿಸುವ ಪ್ರಯತ್ನ ಅವರದು. ಅವರ ಜೊತೆಗೆ ದಕ್ಷಿಣ ಭಾರತದ ವಿವಿಧೆಡೆಗಳಲ್ಲಿ ಕೃಷಿ, ಸುಸ್ಥಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಗುಂಪೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT