ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆಯ ಭಾರ: ಮೊದಲ ಹೆಜ್ಜೆ

Last Updated 10 ಜುಲೈ 2014, 19:30 IST
ಅಕ್ಷರ ಗಾತ್ರ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ  ಪರವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಮೊದಲ ಬಜೆಟ್‌ನಲ್ಲಿ ದೊಡ್ಡ ಪ್ರಮಾಣದ ಸುಧಾರಣಾ ನೀತಿಗಳು ಪ್ರಕಟವಾಗಿಲ್ಲ. ಎಲ್ಲರನ್ನೂ ಸಂತೃಪ್ತಪ­ಡಿಸುವ ಪ್ರಯತ್ನ ಎದ್ದುಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಂದ­ಗ­ತಿಯ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರದಿಂದ ದೇಶದ ಆರ್ಥಿಕತೆ ಬಸವಳಿದಿದೆ.  ತೊಂಬತ್ತರ ದಶಕದಲ್ಲಿ ಕುಸಿಯುತ್ತಿದ್ದ ಆರ್ಥಿಕ ವ್ಯವಸ್ಥೆಗೆ   1991ರ ಹೊಸ ಆರ್ಥಿಕ ನೀತಿ   ಪುನಶ್ಚೇತನ ನೀಡಿತ್ತು.  ಇದನ್ನು   ಸರಿ­ಗಟ್ಟುವಂತೆ ತೀವ್ರವಾದ ಆರ್ಥಿಕ ಸುಧಾರಣಾ  ಕ್ರಮಗಳನ್ನು ಕೈಗೊಳ್ಳಬೇ­ಕೆಂಬ  ನಿರೀಕ್ಷೆಯ ಒತ್ತಡ ಹೊಸ ಸರ್ಕಾರದ ಮೇಲಿದೆ.

 ಕಳೆದ 30 ವರ್ಷ­ಗಳ­ಲ್ಲಿಯೇ ಅತಿ ಹೆಚ್ಚಿನ  ಬಹುಮತದೊಂದಿಗೆ ಅಧಿಕಾರದ ಗದ್ದುಗೆ­ಯನ್ನು ಏರಿರುವ ಸರ್ಕಾರದ ಮೇಲೆ ಇಂತಹ ಭಾರಿ ನಿರೀಕ್ಷೆ ಸಹಜ­ವಾ­ದುದೇ.  ಸರ್ಕಾರವೇ ಆಶ್ವಾಸನೆ ನೀಡಿರುವ ‘ಒಳ್ಳೆಯ  ದಿನ’ಗಳಿಗಾಗಿ (‘ಅಚ್ಛೆ ದಿನ್’) ಯೋಜನೆ­ಗಳನ್ನು ಮುಂದಿಡುವಂತಹ ಸವಾಲು ಇದು. ಉದ್ಯಮಕ್ಕೆ ಸಹಕಾರಿಯಾಗುವ ನೀತಿಗಳನ್ನು ಸೃಷ್ಟಿಸುವ ಗುರಿಯೇನೊ  ಬಜೆಟ್‌ನಲ್ಲಿ ಸ್ಪಷ್ಟವಾಗಿಯೇ ಇದೆ. ಆರ್ಥಿಕತೆಯ ಪುನರ್ ರಚನೆಗಾಗಿ ಸುಧಾರಣೆಯ ಆಶಯ ಕೂಡ ವ್ಯಕ್ತವಾಗಿದೆ. ಆದರೆ, ಹಿಂದಿನ ಯುಪಿಎ ಸರ್ಕಾರದ ಬಳು­ವಳಿಯಾಗಿರುವ ಶೇ 4.1ರ ವಿತ್ತೀಯ ಕೊರತೆಗೇ ಈ ವರ್ಷ ಬದ್ಧ­ವಾ­ಗಿ­ರು­ವುದಾಗಿ ಸರ್ಕಾರ ಹೇಳಿದೆ.  ಈ ಕೊರತೆಯನ್ನು ಇನ್ನಷ್ಟು ಇಳಿಸಬ­ಹು­ದಾದ ದಿಟ್ಟತನವನ್ನು ಸರ್ಕಾರಕ್ಕೆ ಪ್ರದರ್ಶಿಸಲಾಗಿಲ್ಲ. ಇದಕ್ಕಾಗಿ ಸಬ್ಸಿಡಿ ಕಡಿ­ತ-­­ದಂತಹ ‘ಕಹಿ ಗುಳಿಗೆ’ ಗಳನ್ನು ಅಧಿಕಾರದ ಮೊದಲ ವರ್ಷದಲ್ಲೇ ನೀಡು­ವುದಕ್ಕೆ ಮುಂದಾಗದ ಸರ್ಕಾರ, ಸಮತೋಲನದ ಕಸರತ್ತನ್ನು ಮಾಡಿ­ರು­ವುದು ಸ್ಪಷ್ಟ. ಆದರೆ, ಮುಂದಿನ ವರ್ಷಕ್ಕೆ ವಿತ್ತೀಯ ಕೊರತೆಯನ್ನು

ಶೇ 3.6ಕ್ಕೆ ಇಳಿಸಿ 2016–17ರ ವೇಳೆಗೆ  ಶೇ 3ಕ್ಕೆ ಇಳಿಸುವ ಗುರಿಯನ್ನು ಹೊಂದ­ಲಾಗಿದೆ. ಈ ನಿಟ್ಟಿನಲ್ಲಿ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’  ಎಂಬಂಥ ಸರ್ಕಾರದ ಘೋಷವಾಕ್ಯವನ್ನು ಪರಿ­ಣಾಮ­ಕಾರಿಯಾಗಿ ಜಾರಿಗೆ ತರಲು   ‘ವೆಚ್ಚ ನಿರ್ವಹಣಾ ಆಯೋಗ’ವನ್ನು ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿ­ರುವುದು ಹೊಸ ಹೆಜ್ಜೆ.  ಖರ್ಚು ಸುಧಾರಣೆಯ ಎಲ್ಲಾ  ಆಯಾಮ­ಗಳನ್ನೂ ಇದು ಪರಿಶೀಲಿಸಲಿದೆ.  ಬಡಜನರಿಗೆ ಪೂರ್ಣ ರಕ್ಷಣೆ ಒದಗಿಸುತ್ತಲೇ  ಸಬ್ಸಿಡಿ         ವ್ಯವಸ್ಥೆಯ ಪುನರ್ ಪರಿಶೀಲನೆಯನ್ನು ಈ ಆಯೋಗ ನಡೆಸಲಿದೆ.

ರಕ್ಷಣೆ ಹಾಗೂ ವಿಮೆ ಕ್ಷೇತ್ರದಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆ  (ಎಫ್‌ಡಿಐ) ಮಿತಿಯನ್ನು ಶೇ 26ರಿಂದ ಶೇ 49ಕ್ಕೆ ಹೆಚ್ಚಿಸಿರುವುದಷ್ಟೇ ಆರ್ಥಿಕ ಸುಧಾರಣೆ ಕ್ರಮಗಳಲ್ಲಿ ಮುಖ್ಯವಾದದ್ದು. ಜೊತೆಗೆ ಮೂಲ ಸೌಕರ್ಯ  ಹಾಗೂ ತಯಾ­ರಿಕಾ ವಲಯಕ್ಕೂ ಉತ್ತೇಜನ ಕ್ರಮಗಳು ಪ್ರಕಟ­ವಾಗಿರುವುದು ಉದ್ಯಮಶೀಲತೆಗೆ ಹೊಸ ಚೈತನ್ಯ ತುಂಬುವಂತಹದ್ದು. ಮಧ್ಯ­ಮವರ್ಗದ ಓಲೈಕೆಗೆ ಆದಾಯ ತೆರಿಗೆ ರಿಯಾಯಿತಿಗಳು, ವಿವಿಧ ರೀತಿಯ ಉಳಿತಾಯ ಯೋಜನೆಗಳು ಬಜೆಟ್‌ನಲ್ಲಿ ಸ್ಥಾನ ಪಡೆದು­ಕೊಂ­ಡಿವೆ. ತೆರಿಗೆ ವ್ಯವಸ್ಥೆ ಸರಳಗೊಳಿಸುವ ಉದ್ದೇಶ  ಸ್ವಾಗತಾರ್ಹವಾದದ್ದು. ಮಹಿಳೆಗೆ ಸಂಬಂಧಿಸಿ­ದಂತೆ  ಅಂತಹ ರಚನಾತ್ಮಕ­ವಾದ ಯೋಜನೆ­ಗ­ಳೇನೂ ಇಲ್ಲ. ಸುಮಾರು 29 ಬಿಡಿಬಿಡಿ ಯೋಜನೆ­ಗಳಿಗೆ ರೂ100 ಕೋಟಿ ಹಣ ಹಂಚಿಬಿಟ್ಟಿ­ರುವುದು ಯೋಜನೆಗಳ ಕುರಿತಾಗಿ ಸ್ಪಷ್ಟ ಗುರಿಯ ಕೊರ­ತೆಯನ್ನು ಬಿಂಬಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT