ನೂರು ವರ್ಷಗಳು ತುಂಬಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಇಪ್ಪತ್ತೈದನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಉತ್ಸಾಹದಲ್ಲಿರುವ ಮನು ಬಳಿಗಾರ್ ಅವರು, ಪರಿಷತ್ತನ್ನು ಹೊಸ ಕಾಲದ ಸವಾಲುಗಳಿಗೆ ಸಜ್ಜುಗೊಳಿಸುವ ಸವಾಲನ್ನು ಎದುರಿಸಬೇಕಾಗಿದೆ. ‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎನ್ನುವ ವಿಶೇಷಣ ಹಾಗೂ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ಗಳ ಮೂಲಕ ತನ್ನ ಅಸ್ತಿತ್ವವನ್ನು ಪ್ರಕಟಗೊಳಿಸಿಕೊಂಡು ಬಂದಿರುವ ಪರಿಷತ್ತು ನಿಜವಾದ ಅರ್ಥದಲ್ಲಿ ಕನ್ನಡ ಹಾಗೂ ಕನ್ನಡಿಗರ ಮಾತೃಸಂಸ್ಥೆ ಆಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಕನ್ನಡ ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಸಂವರ್ಧನೆ ಮತ್ತು ಸಂರಕ್ಷಣೆಯ ಆಶಯಗಳು ಸಾಹಿತ್ಯ ಪರಿಷತ್ತಿನ ಆರಂಭದ ಹಿನ್ನೆಲೆಯಲ್ಲಿರುವುದನ್ನು ಗಮನಿಸಬೇಕು. ಆದರೆ, ಈ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಳೆದ ನೂರು ವರ್ಷಗಳಲ್ಲಿ ಪರಿಷತ್ತು ಸಾಧಿಸಿರುವುದೇನು ಎನ್ನುವುದನ್ನು ಪರಿಶೀಲಿಸಿದರೆ ನಿರಾಶೆ ಉಂಟಾಗುತ್ತದೆ.

‘ಸಾಹಿತ್ಯ’ವನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿರುವ ಈ ಸಂಸ್ಥೆ, ದತ್ತಿನಿಧಿ ಕಾರ್ಯಕ್ರಮಗಳು ಹಾಗೂ ಸಮ್ಮೇಳನ ಆಯೋಜಿಸುವಿಕೆಗೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿದೆ. ಸಾಹಿತ್ಯ ಸಮ್ಮೇಳನಗಳು ಕೂಡ ಜಾತ್ರೆಗಳ ಸ್ವರೂಪ ಪಡೆದುಕೊಂಡಿದ್ದು, ಅರ್ಥಪೂರ್ಣ ಸಾಂಸ್ಕೃತಿಕ ಸಂವಾದಗಳಿಗಾಗಿ ಸಹೃದಯರು ಬೇರೆಯದೇ ವೇದಿಕೆಗಳತ್ತ ನೋಡಬೇಕಾಗಿದೆ. ಸಮ್ಮೇಳನದ ನಿರ್ಣಯಗಳು ಕೂಡ ತಮ್ಮ ಗಾಂಭೀರ್ಯವನ್ನು ಕಳೆದುಕೊಂಡು, ಸಾಂಪ್ರದಾಯಿಕ ಘೋಷಣೆಗಳಾಗಿಯಷ್ಟೇ ಉಳಿದಿವೆ.

ಹೊಸ ತಲೆಮಾರಿನ ಬರಹಗಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೂಡ ಪರಿಷತ್ತು ಯಶಸ್ವಿಯಾಗಿಲ್ಲ. ಯುವ ಲೇಖಕರ ಮಾತಿರಲಿ, ಹಿರಿಯ ಬರಹಗಾರರೇ ಪರಿಷತ್ತಿನ ಜೊತೆಗಿನ ಕಳ್ಳುಬಳ್ಳಿ ಸಂಬಂಧ ಕಡಿದುಕೊಂಡಿದ್ದಾರೆ. ಸಾಂಸ್ಕೃತಿಕ ಪ್ರಭೆಯನ್ನು ಕಳೆದುಕೊಂಡಿರುವ ಪರಿಷತ್ತು ಮತ್ತೊಂದು ಸರ್ಕಾರಿ ಪೋಷಿತ ಕಚೇರಿಯಾಗಿ ಬದಲಾಗಿದೆ. ವರ್ತಮಾನದ ಸವಾಲುಗಳಿಗೆ ಎದೆಗೊಡುವ ಬದಲು, ತಾನೇ ಸೃಷ್ಟಿಸಿಕೊಂಡಿರುವ ಭಾವುಕತೆಯ ಚೌಕಟ್ಟಿನಲ್ಲಿ ಮುಳುಗಿರುವುದು ಪರಿಷತ್ತು ದುರ್ಬಲಗೊಳ್ಳಲು ಕಾರಣವಾಗಿದೆ. ಸಿಬ್ಬಂದಿ ಮತ್ತು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರಲ್ಲೇ ಹೆಣಗುತ್ತಿರುವ ಸಂಸ್ಥೆಗೆ ನಾಡು–ನುಡಿಯ ಬಗ್ಗೆ ಚಿಂತಿಸಲು ಸಮಯ ಇಲ್ಲ ಎನ್ನುವಂತಾಗಿದೆ.

ಎರಡು ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಒಳಗೊಂಡಿರುವ ಪರಿಷತ್ತಿಗೆ ಏಷ್ಯಾದಲ್ಲಿಯೇ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಸಾಂಸ್ಕೃತಿಕ ಸಂಸ್ಥೆ ಎನ್ನುವ ಗರಿಮೆಯೂ ಇದೆ. ಆದರೆ, ಈ ಬೃಹತ್ ಸಾಂಸ್ಕೃತಿಕ ಸಂಸ್ಥೆ ನೂರು ವರ್ಷಗಳ ನಂತರವೂ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಲು ಸಾಧ್ಯವಾಗಿಲ್ಲ. ‘ಅಮೃತನಿಧಿ ಚೀಟಿ’, ‘ಕನ್ನಡ ನಿಧಿ’ ಸೇರಿದಂತೆ ಪರಿಷತ್ತಿನ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನಡೆದ ಪ್ರಯತ್ನಗಳು ಯಶಸ್ವಿಯಾಗಿಲ್ಲ.

ಈಗ, ‘ಸರ್ಕಾರದ ಹಣ ಏಕೆ ಪಡೆಯಬಾರದು?’ ಎಂಬಂತಹ ಮಾತುಗಳನ್ನು ಮನು ಬಳಿಗಾರ್ ಆಡಿದ್ದಾರೆ. ಆದರೆ ಪರಿಷತ್ತನ್ನು ಸ್ವಾಯತ್ತ ಸಂಸ್ಥೆಯಾಗಿ ವ್ಯವಸ್ಥಿತವಾಗಿ ಬೆಳೆಸಬೇಕಾದಲ್ಲಿ ಸರ್ಕಾರದ ಅವಲಂಬನೆ ಅತಿಯಾಗಿರಬಾರದು. ಸಂಘಸಂಸ್ಥೆಗಳು, ಉದ್ಯಮಿಗಳು ಅಥವಾ ದಾನಿಗಳ ನೆರವಿನಿಂದ ಪರಿಷತ್ತನ್ನು ವ್ಯವಸ್ಥಿತವಾಗಿ ಬೆಳೆಸಲು ಅವಕಾಶಗಳಿವೆ. ಹಾಗೆಯೇ, ಶಾಸ್ತ್ರೀಯ ಭಾಷೆಯ ಮನ್ನಣೆಯ ನಿಟ್ಟಿನಲ್ಲಿ ‘ಕನ್ನಡ ಬೌದ್ಧಿಕತೆ’ಯ ಕ್ರಿಯಾಕೇಂದ್ರವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಪರಿಷತ್ತು, ಹಳೆಯ ಕೃತಿಗಳ ಮರುಮುದ್ರಣದ ಚಟುವಟಿಕೆಗಳಿಗೆ ತೃಪ್ತಿಹೊಂದಿದಂತಿದೆ.

ಶಿಕ್ಷಣ ಮಾಧ್ಯಮದ ಗೊಂದಲಗಳು ಸೇರಿದಂತೆ ಹೊಸ ಕಾಲದ ಹಲವು ತಾಕಲಾಟಗಳಿಗೆ ಕನ್ನಡ ನುಡಿ ಎದೆಗೊಡಬೇಕಾದ ಸಂದರ್ಭದಲ್ಲಿ ಅದನ್ನು ಸಶಕ್ತಗೊಳಿಸಬೇಕಾದ ನೈತಿಕ ಜವಾಬ್ದಾರಿಯನ್ನು ಪರಿಷತ್ತು ಹೊರಬೇಕಿತ್ತು. ಆದರೆ, ಕನ್ನಡದ ತವಕತಲ್ಲಣಗಳಿಗೆ ತಾನೇತಾನಾಗಿ ಸ್ಪಂದಿಸುವ ಸಂವೇದನೆಯನ್ನು ಕೂಡ ಈಚಿನ ದಿನಗಳಲ್ಲಿ ಕಳೆದುಕೊಂಡಿದೆ. ಕನ್ನಡದ ಅಸ್ಮಿತೆಯ ರೂಪದಲ್ಲಿ ಸದಾಕಾಲ ಕಾರ್ಯ ನಿರ್ವಹಿಸಬೇಕಾದ ನಿಘಂಟು ಕಚೇರಿಯನ್ನು ನಡೆಸುವುದು ಕೂಡ ಪರಿಷತ್ತಿಗೆ ಸಾಧ್ಯವಾಗಿಲ್ಲ. ಅನುಭವದ ಶಕ್ತಿಯಾಗಿ ಪರಿಣಮಿಸಬೇಕಿದ್ದ ಶತಾಯುಷ್ಯ, ಪರಿಷತ್ತಿನ ಪಾಲಿಗೆ ದಣಿವನ್ನು ಉಂಟು ಮಾಡಿದಂತಿದೆ. ಈ ದಣಿವನ್ನು ನೀಗಿಸುವುದು ಪರಿಷತ್ತಿನ ಚುಕ್ಕಾಣಿ ಹಿಡಿಯಲಿರುವ ಮನು ಬಳಿಗಾರ್ ಅವರ ಮೊದಲ ಆದ್ಯತೆಯಾಗಬೇಕು.

ಕಟ್ಟಡಗಳ ನಿರ್ಮಾಣ ಅಥವಾ ಸಮ್ಮೇಳನಗಳ ಆಯೋಜನೆಗಳಂಥ ಚಟುವಟಿಕೆಗಳಿಂದ ಪರಿಷತ್ತಿನ ಭಾವುಕ ಅಸ್ತಿತ್ವ ಮುಂದುವರೆಯಬಹುದೇ ಹೊರತು, ಕನ್ನಡಿಗರ ಅನುಗಾಲದ ಆಪ್ತ ವೇದಿಕೆಯಾಗಿ ಅಥವಾ ವಾಸ್ತವಿಕವಾದಂತಹ ಆಧುನಿಕ ಸವಾಲುಗಳಿಗೆ ದನಿಯಾಗಿ ಪರಿಷತ್ತು ರೂಪುಗೊಳ್ಳಲು ಸಾಧ್ಯವಾಗುವುದಿಲ್ಲ. ಯುವಜನರನ್ನು ಸೆಳೆಯುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಷತ್ತಿಗೆ ಹೊಸ ಉತ್ಸಾಹ ತುಂಬುವ ಮಾತುಗಳನ್ನು ಮನು ಬಳಿಗಾರ್ ಅವರು ಆಡಿದ್ದಾರೆ.

ಇಷ್ಟಾದರೆ ಸಾಲದು. ಭಾವುಕ ಚೌಕಟ್ಟಿನಾಚೆಗೆ ಪರಿಷತ್ತನ್ನು ನಡೆಸುತ್ತ, ಆಧುನಿಕ ಕನ್ನಡದ ನೆಲೆಯನ್ನಾಗಿ ಹಾಗೂ ಹೊಸ ಕಾಲದ ಬಿಕ್ಕಟ್ಟುಗಳ ಚರ್ಚೆಯ ‘ಅನುಭವ ಮಂಟಪ’ವಾಗಿ ಪರಿಷತ್ತನ್ನು ರೂಪಿಸುವುದು ಅವರ ಆದ್ಯತೆಯಾಗಬೇಕು. ಕನ್ನಡದ ಲೇಖಕರೆಲ್ಲರೂ ಅಭಿಮಾನದಿಂದ ಸೇರುವ ಮತ್ತು ಕನ್ನಡಿಗರೆಲ್ಲರೂ ತಮ್ಮನ್ನು ಹೆಮ್ಮೆಯಿಂದ ಗುರ್ತಿಸಿಕೊಳ್ಳಬೇಕಾದ ವೇದಿಕೆಯಾಗಿಯೂ ಪರಿಷತ್ತು ರೂಪುಗೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.