ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದಾಳದ ಧ್ವನಿ ಲಕ್ಷ್ಮಮ್ಮಗೆ ಪ್ರಶಸ್ತಿಯ ಗರಿ

Last Updated 1 ನವೆಂಬರ್ 2014, 9:19 IST
ಅಕ್ಷರ ಗಾತ್ರ

ಯಳಂದೂರು: ಕರ್ನಾಟಕ ಇತಿಹಾಸದಲ್ಲಿ ಕಥನ ಕಾವ್ಯಗಳು, ಹೆಂಗಸರ ಹಾಡ್ಗತೆಗಳು, ಬಿಡಿ ಬಿಡಿ ಗೀತೆಗಳು ರಾತ್ರಿಯ ನೀರವತೆಯಲ್ಲೂ ಕೇಳಿಸುತ್ತವೆ. ಜನಪದರ ಕಲ್ಪನೆಯ ಬಗೆಬಗೆ ಕತೆಗೆ ಜೀವ ತುಂಬುವ ಇಂಥವರು ವಿರಳ. ಇರುಳು ಕತೆ ಮಾಡುವಷ್ಟು ಸುದೀರ್ಘ ಸಂಪತ್ತು ಹೊಂದಿರುವ  ನೆಲದಾಳದ ಧ್ವನಿ ಲಕ್ಮ್ಮಮ್ಮಗೆ 2012ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.                  

‘ನವಿಲು ಬಂತಪ್ಪ ನವಿಲು
ಸೋಗೇಯ ಬಣ್ಣದ ನವಿಲು
ರಾಗಿಯ ಹೊಟ್ಟನ್ನೇ
ಮೇಯದು ನವಿಲು
ರಾಗಿಯ ಕಾಯಮ
ಓಡಿಸಿ ಬರುವಾಗ
ರಾಗವ ಪಾಡಿತು ನವಿಲು’

ಎಂದು ತಾರಕ ಸ್ವರದಲ್ಲಿ ಹಾಡುವಾಗ ಸುತ್ತಲ ಜನಪದರ ಗಮನವೆಲ್ಲ ಎಪ್ಪತ್ತರ ಅಜ್ಜಿಯ ಮೇಲೆ ಹೊರಳುತ್ತದೆ.

ಬೇಸಾಯ ಮಾಡುವಾಗಿನ ಬೇಸರಕ್ಕೆ ಸುತ್ತಲ ಸುಳಿ ಗಾಳಿಯಲ್ಲಿ ಗಾನಸುಧೆಯ ನೀನಾದ ಪಸರಿಸುತ್ತದೆ. ಅತ್ತಾ, ಮಾದಪ್ಪನ ಜಾತ್ರೆಗೆ ಬರುವ ಪರಿಷೆಯ ಕರ್ಣಕ್ಕೂ ಸಂಗೀತದ ಇಂಪು ತುಂಬಿಕೊಳ್ಳತ್ತದೆ. ತನುಮನ ಸುಮಧುರ ಗೀತೆಗೆ ಅರಳುತ್ತದೆ. ಹೌದು. ಇದು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಮ್ಮ ಅವರ ಒಡಲಾಳದ ಜಾನಪದ ಧ್ವನಿ ಎಂಬುದನ್ನು ಮರೆಯಲಾರರು. ತಾಲ್ಲೂಕಿನ ಯರಿಯೂರು ಗ್ರಾಮದ ಈಕೆ ಅನಕ್ಷರಸ್ಥೆ. 30 ವರ್ಷಗಳಿಂದ ರಾಜ್ಯದ ಹಲವು ಕಡೆ ತನ್ನ ರಾಗಗಳನ್ನು ಬಿತ್ತಿದ್ದಾರೆ. 12 ವರ್ಷ ಆಕಾಶವಾಣಿ ಹಾಡುಗಾರ್ತಿಯಾಗಿ ಹಾಗೂ ರಾತ್ರಿ ಪೂರ ಆಡುವಷ್ಟು ಜನಪದರ ಭಂಡಾರ ಇವರ ಮನದಲ್ಲಿ ಅಚ್ಚೊತ್ತಿದೆ.

ಹತ್ತು ಹೆಣ್ಣು ಮಕ್ಕಳ ತುಂಬು ಸಂಸಾರದಲ್ಲಿ ಕಷ್ಟಗಳನ್ನೇ ಅಪ್ಪಿದ್ದೇನೆ. ಮಗ ಮತ್ತು ಪತಿಯೂ ಇಲ್ಲದೇ ಬದುಕು ಸವೆಸಿದ್ದೇನೆ. ಆದರೆ, ನನ್ನವ್ವ ಕಲಿಸಿದ ಹಾಡುಹಸೆ ಬಳುವಳಿಯಾಗಿ ಬಂತು. ಇಳಿ ಹೊತ್ತಲೂ ಬದುಕನ್ನು ಎದುರಿಸುವ ಗಟ್ಟಿತನ ತುಂಬಿತು. ಹೊಲ, ಗದ್ದೆಗಳಲ್ಲಿ ಬೇಸರ ನೀಗಲೂ ಹಾಡಿದಾಗ ಅದೇ ನನಗೆ ಉಸಿರಾಯಿತು. ಬದುಕಿನಲ್ಲಿ ಪ್ರೀತಿ ತುಂಬಿತು ಎಂದು ಕಷ್ಟದ ಜೀವನ ನೆನೆದು ಕಣ್ಣೀರನ್ನು ಒರೆಸಿಕೊಳ್ಳತ್ತಾರೆ ಲಕ್ಷಮ್ಮ.

ಈಕೆ ಈಗ ಜಿಲ್ಲೆಯ ಪ್ರಾಕೃತಿಕ ರಾಯಭಾರಿ. ತನ್ನ ಹಾಡುಗಳಿಂದಲೇ ಪರಿಸರದ ಬಗ್ಗೆ ಜೀವ ತುಂಬುವ ‘ನಾಟಿ ಪದ’ ತಜ್ಞೆ. ಮಹದೇಶ್ವರ, ಧರೆಗೆ ದೊಡ್ಡವರು, ಶನೇಶ್ವರ, ಬಿಳಿಗಿರಿರಂಗ ರನ್ನು ದೈವತ್ವದಿಂದ ಮಾನವತೆ ಕಡೆಗೆ ಧರೆಗಿಳಿಸುವ ಇವರ ಗೀತ ಗಾಯನಕ್ಕೆ ವಿಶಿಷ್ಟ ಸೊಗಡು ಪ್ರಾಪ್ತವಾಗಿದೆ.

‘ರಾಗಿಯ ಕಲ್ಲೆ,
ರಾಜ ಮುತ್ತಿನ ಕಲ್ಲೆ
ನಮ್ಮಪ್ಪನ ಮನೆಯ
ನಿಜಗಲ್ಲು ನಿಜಗಲ್ಲೆ’

ಎಂದು ಗರತಿ ಹಾಡುವಾಗ ರಾಗಿ ಬೀಸುತ್ತಲೇ ತವರು ನೆನೆದು ಹಗುರಾಗುತ್ತಾಳೆ. ರಾಗಿಕಲ್ಲಿಗೆ ಗ್ರಾಮೀಣ ಸಂಸ್ಕೃತಿಯಲ್ಲಿ ಎಂತಹ ಸ್ಥಾನ ನೀಡಿದ್ದರು ಎಂಬುದು ಇದರಿಂದ ವೇದ್ಯ. ಇಂದಿನ ಗ್ರಾಮದ ಹೆಣ್ಣು ಮಕ್ಕಳು ನಮ್ಮ ಜನಪದ ಕಲೆಯನ್ನು ಕಲಿಯಲು ಆಸಕ್ತಿ ತಳೆಯುತ್ತಿಲ್ಲ ಎಂಬ ಕೊರಗು ಇವರನ್ನು ಇನ್ನಿಲ್ಲದಂತೆ ಕಾಡಿದೆ.

‘ಮುರಿದ ಮನೆ, ಸೋರುವ ಗುಡಿಸಲಿನಲ್ಲಿ ವಾಸಿಸುವ ಇವರಿಗೆ ವಸತಿ ಸೌಲಭ್ಯ ಮರೀಚಿಕೆ. ಇವರಿಗೆ ಮಸ್ತಕದಲ್ಲಿ ಹೆಪ್ಪುಗಟ್ಟಿದ ನೂರಾರು ಪದ ವೈವಿಧ್ಯವನ್ನು ಸಂರಕ್ಷಿಸಲು ಇದೂ ಅಡ್ಡಿಯಾಗಿದೆ. ಇವರಿಗೆ ಆರ್ಥಿಕ ನೆರವು ಒದಗಿಸಲು ಮುಂದಾಗಬೇಕು. ಮಕ್ಕಳಿಗೆ ಜಾನಪದ ಕಲೆಯ ಸೊಗಸನ್ನು ಪರಿಚಯಿಸಬೇಕು’ ಎನ್ನುತ್ತಾರೆ ಕಸಾಪ ಕಾರ್ಯದರ್ಶಿ ಫೈರೋಜ್‌ಖಾನ್.

ಹಚ್ಚೋರಿ ರಾಮಪುರ
ಇಚ್ಚೋರಿ ಕೌದಳ್ಳಿ
ಒಬ್ಬರೇ ಬಂದೆಪ್ಪ ಮಾದೇವ
ಒಬ್ಬರೇ ಬಂದೆಪ್ಪ
ಏಳು ಮಲೆಯ ಮಾದಪ್ಪ
ಭಕ್ತರ ಮೇಲೆ ದಯಮಾಡು’

ಎನ್ನುತ್ತಲೇ ಮಾತು ಮುಗಿಸುವ ಲಕ್ಷ್ಮಮ್ಮರನ್ನು ನ. 1ರ ಕನ್ನಡ ರಾಜ್ಯೋತ್ಸವದಂದು ತಾಲ್ಲೂಕು ಆಡಳಿತ ಸನ್ಮಾನಿಸಲು ಸಿದ್ಧತೆ ನಡೆಸಿದೆ. ಇಳಿ ವಯಸ್ಸಿನಲ್ಲೂ 9 ಜನರ ತಂಡ ವನ್ನು ಕಟ್ಟಿಕೊಂಡು ಜನಪದ ಗಾನದ ಸಿರಿ ಬಿತ್ತರಿಸುವ ಈಕೆಯ ಸಾಧನೆ ಗ್ರಾಮೀಣ ಜನಪದಕ್ಕೆ ಸಂದ ಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT