ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ ಪ್ರಶಸ್ತಿ ಘೋಷಣೆ ವಿಳಂಬ ಏಕೆ?

ಫೆ.7, 8ರಂದು ಕದಂಬೋತ್ಸವ
Last Updated 20 ಜನವರಿ 2015, 6:48 IST
ಅಕ್ಷರ ಗಾತ್ರ

ಶಿರಸಿ: ರಾಜ್ಯ ಸರ್ಕಾರದ ಪ್ರಮುಖ ಉತ್ಸವಗಳಲ್ಲಿ ಒಂದಾಗಿರುವ ಕದಂಬೋತ್ಸವ ಫೆಬ್ರುವರಿ 7 ಹಾಗೂ 8ರಂದು ಕನ್ನಡದ ಪ್ರಥಮ ರಾಜಧಾನಿ ತಾಲ್ಲೂಕಿನ ಬನವಾಸಿಯಲ್ಲಿ ಜರುಗಲಿದೆ. ಕದಂಬೋತ್ಸವ ಸಮೀಪಿಸುತ್ತಿದ್ದರೂ ಇದೇ ವೇದಿಕೆಯಲ್ಲಿ ಪ್ರದಾನ ಮಾಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿಲ್ಲ.

ಕನ್ನಡ ಭಾಷೆಯ ಬೆಳವಣಿಗೆ, ಕನ್ನಡ ಸಾಹಿತ್ಯದಲ್ಲಿ ಮೇರು ಸಾಧನೆ ಮಾಡಿದ ಸಾಹಿತಿಗೆ ಆದಿಕವಿ ಪಂಪನ ನೆನಪಿನಲ್ಲಿ ಪಂಪ ಪ್ರಶಸ್ತಿ ನೀಡುವ ಸಂಪ್ರದಾಯ 1987ರಲ್ಲಿ ಆರಂಭಗೊಂಡಿತು. ಮೊದಲು ₨ 1ಲಕ್ಷ ಇದ್ದ ಪ್ರಶಸ್ತಿಯ ಮೊತ್ತ 2008ರಿಂದ ₨ 3 ಲಕ್ಷಕ್ಕೆ ಹೆಚ್ಚಳವಾಗಿದೆ. ಪಂಪ ಪ್ರಶಸ್ತಿಯು ಕನ್ನಡದ ಜ್ಞಾನಪೀಠ ಎಂದು ಕರೆಯಿಸಿಕೊಳ್ಳುವಷ್ಟು ಎತ್ತರದ ಸ್ಥಾನದಲ್ಲಿದೆ. ಪ್ರಥಮ ಪ್ರಶಸ್ತಿಗೆ ರಾಷ್ಟ್ರಕವಿ ಕುವೆಂಪು ಭಾಜನರಾಗಿದ್ದರು. ಸರ್ಕಾರವು ವಾರ್ಷಿಕವಾಗಿ ನೀಡುವ ಈ ಪ್ರಶಸ್ತಿಗೆ ಪ್ರತ್ಯೇಕ ಆಯ್ಕೆ ಸಮಿತಿ ರಚನೆ ಮಾಡಿ ಸಾಹಿತಿಯನ್ನು ಆಯ್ಕೆ ಮಾಡಲಾಗುತ್ತದೆ.

ಆರಂಭದ ವರ್ಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಪ್ರಶಸ್ತಿ ಪ್ರದಾನ ಮಾಡುತ್ತಿತ್ತು. ಪಂಪ ನೆಚ್ಚಿದ ನೆಲ ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿ ಪ್ರದಾನ ಜರುಗಬೇಕೆಂಬ ಆಶಯದಿಂದ 1995ರಿಂದ ಕದಂಬೋತ್ಸವದ ಉದ್ಘಾಟನಾ ಸಮಾರಂಭ ದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಕದಂಬೋತ್ಸವದ ಘನತೆಯೂ ಹೆಚ್ಚಿದೆ. ಪಂಪ ಪ್ರಶಸ್ತಿ ಇಲ್ಲದೇ ಕದಂಬೋತ್ಸವ ಇಲ್ಲ ಎನ್ನುವಷ್ಟು ಬೆಸೆದುಕೊಂಡಿದ್ದ ಸ್ಮರಣೀಯ ಕ್ಷಣಗಳು ಒಂದಿಲ್ಲೊಂದು ಕಾರಣದಿಂದ ಇತ್ತೀಚೆಗೆ ಬೇರ್ಪಡುತ್ತಿವೆ.

ಎರಡು ವರ್ಷ ಸ್ಥಗಿತಗೊಂಡಿದ್ದ ಕದಂಬೋತ್ಸವವನ್ನು ರಾಜ್ಯ ಸರ್ಕಾರ ಹಿಂದಿನ ವರ್ಷ ಅದ್ದೂರಿಯಾಗಿ ಆಚರಿಸಿತು. ಉತ್ಸವದ ವೇಳೆ ಕೇವಲ 2012ನೇ ಸಾಲಿನ ಪಂಪ ಪ್ರಶಸ್ತಿಯನ್ನು ಮಾತ್ರ ಘೋಷಿಸಲಾಯಿತು. ಪ್ರಶಸ್ತಿಗೆ ಭಾಜನರಾಗಿದ್ದ ವಿದ್ವಾಂಸ ಶಂಕರ ಭಟ್ಟ ಅವರು ತಾತ್ವಿಕ ಕಾರಣ ನೀಡಿ ಕದಂಬೋತ್ಸವಕ್ಕೆ ಆಗಮಿಸುವುದಿಲ್ಲ ಎನ್ನುವುದನ್ನು ಪೂರ್ವಭಾವಿ ಯಾಗಿ ತಿಳಿಸಿದ್ದರು. 2013ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಿ ಕದಂಬೋತ್ಸವ ವೇದಿಕೆ ಯಲ್ಲಿ ನೀಡುವುದಾಗಿ ಕೊನೆಯ ಕ್ಷಣದವರೆಗೂ ಭರವಸೆ ನೀಡಿದ್ದ ಸರ್ಕಾರ ಜನರ ನಿರೀಕ್ಷೆಯನ್ನು ಹುಸಿಯಾಗಿಸಿತು. ಹೀಗಾಗಿ ಪಂಪ ಪ್ರಶಸ್ತಿ ಪ್ರದಾನ ಇಲ್ಲದೆಯೇ ಕದಂಬೋತ್ಸವ ಜರುಗಿತು.

ಎರಡು ದಶಕಗಳಲ್ಲಿ ಐವರು ಸಾಹಿತಿಗಳು ಕದಂಬೋತ್ಸವ ವೇದಿಕೆಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಲು ಆಗಮಿಸಲಿಲ್ಲ. ಇನ್ನುಳಿದ ಎಲ್ಲ ಕನ್ನಡ ಸಾಹಿತಿ, ಕವಿಗಳು ಕದಂಬೋತ್ಸವದಲ್ಲಿ ಕನ್ನಡದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿರುವುದನ್ನು ಬನವಾಸಿಗರು ಕಣ್ತುಂಬಿಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಕದಂಬೋತ್ಸವಕ್ಕೆ ಇನ್ನು 20 ದಿನಗಳು ಬಾಕಿ ಉಳಿದಿವೆ. ಆದರೆ 2013 ಹಾಗೂ 2014ನೇ ಸಾಲಿನ ಪಂಪ ಪ್ರಶಸ್ತಿ ಘೋಷಣೆ ಇನ್ನೂ ಆಗಿಲ್ಲ. ‘ಪಂಪ ಪ್ರಶಸ್ತಿ ಪ್ರದಾನವೇ ಕದಂಬೋತ್ಸವದ ಪ್ರಮುಖ ಘಟ್ಟವಾಗಿದೆ. ಪಂಪ ಪ್ರಶಸ್ತಿ ಪ್ರದಾನ ಇಲ್ಲದಿದ್ದರೆ ಉತ್ಸವಕ್ಕೆ ಮಹತ್ವ ಬರಲಾರದು. ಪ್ರಶಸ್ತಿ ಘೋಷಣೆಯ ಹೊಣೆ ಹೊತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶೀಘ್ರ ಎಚ್ಚೆತ್ತುಕೊಳ್ಳಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಬನವಾಸಿ ಘಟಕದ ಅಧ್ಯಕ್ಷ ಅರವಿಂದ ಶೆಟ್ಟಿ ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT