ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ದ್ವಿಪಾತ್ರ!

ಅಸ್ಸಾಂನ ದಿಬ್ರುಗಡದಲ್ಲಿ ಪ್ರವಾಸ: ಧಾರವಾಡದಲ್ಲಿ ಮಗಳ ಮದುವೆ...
Last Updated 21 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಧಾರವಾಡ: ರಜೆ ಪ್ರಯಾಣ ರಿಯಾಯಿತಿ (ಎಲ್‌ಟಿಸಿ) ಸೌಲಭ್ಯದಲ್ಲಿ ಅಸ್ಸಾಂ ರಾಜ್ಯದ ದಿಬ್ರುಗಡಕ್ಕೆ ಕುಟುಂಬ ಸಮೇತರಾಗಿ ತೆರಳಲು ಕರ್ನಾಟಕ ವಿಶ್ವವಿದ್ಯಾಲಯದಿಂದ ಅನುಮತಿ ಪಡೆದು, ಅದೇ ಅವಧಿಯಲ್ಲಿ ಮಗಳ ಮದುವೆಯನ್ನು ನಡೆಸುವುದರ ಜತೆಗೆ ನಕಲಿ ಬಿಲ್‌ ನೀಡಿ ವಿ.ವಿಗೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಗಂಗಾಧರಪ್ಪ, ಕಳೆದ ಜೂನ್‌ 1ರಿಂದ 15ರವರೆಗೆ ಅಸ್ಸಾಂನ ದಿಬ್ರುಗಡಕ್ಕೆ ಹೋಗಲು ಎಲ್‌ಟಿಸಿ ನೀಡಬೇಕೆಂದು ಫೆ. 12ರಂದು ಕುಲಸಚಿವರ ಅನುಮತಿ ಕೋರಿದ್ದರು. ಇದನ್ನು ಪುರಸ್ಕರಿಸಿದ ಕುಲಸಚಿವರು ಏಪ್ರಿಲ್‌ 6ರಂದು ನೀಡಿದ ಲಿಖಿತ ಅನುಮತಿಯಲ್ಲಿ, ಡಾ.ಎಂ.ಗಂಗಾಧರಪ್ಪ, ಅವರ ಪತ್ನಿ ನಯನಾ ಗಂಗಾಧರಪ್ಪ, ಪುತ್ರಿಯರಾದ ತ್ರಿಷಾ ಹಾಗೂ ತನ್ವಿ ಇವರನ್ನು ಮಾತ್ರ ಪ್ರವಾಸಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದರು.
ಪ್ರವಾಸದಲ್ಲಿ ಮಗಳ ಮದುವೆ: ಇದಾದ ನಂತರ ಪ್ರೊ. ಗಂಗಾಧರಪ್ಪ ಜೂನ್‌ 1ರಿಂದ 15ರವರೆಗೆ ರಜೆ ಹಾಕಿದ್ದರು.

ದಿಬ್ರುಗಢಕ್ಕೆ ಟಿಕೆಟ್‌ ಕೂಡ ಕಾಯ್ದಿರಿಸಿದ್ದರು. ಆದರೆ ಇದೇ ಅವಧಿಯಲ್ಲಿ ಜೂನ್‌ 7ರಂದು ನಗರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ದೊಡ್ಡ ಮಗಳು ಮನಾಲಿ ಅವರ ಮದುವೆಯನ್ನು ನೆರವೇರಿಸಿದ್ದರು. ಕವಿವಿಯ ಸಿಬ್ಬಂದಿ ಈ ಮದುವೆಯಲ್ಲಿ ಹಾಜರಿದ್ದು ವಧು ವರರನ್ನು ಹಾರೈಸಿದ್ದರು. ಮದುವೆಗೆ ಬಂದಿದ್ದ ಗಣ್ಯರನ್ನು ಖುದ್ದು ಗಂಗಾಧರಪ್ಪ ಹಾಗೂ ಅವರ ಕುಟುಂಬದವರು ಬರಮಾಡಿಕೊಂಡು ಸತ್ಕರಿಸಿದ್ದರು.

ಮದುವೆ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾದ ಅವರು ದಿಬ್ರುಗಡಕ್ಕೆ ಪ್ರಯಾಣ ಬೆಳೆಸಿರುವುದಾಗಿ ನಕಲಿ ಬಿಲ್‌ ನೀಡಿದ್ದರು. ಈ ಕುರಿತು ಕವಿವಿ ಹಣಕಾಸು ಇಲಾಖೆ ಯಾವುದೇ ಪೂರ್ವಾಪರಗಳನ್ನು ವಿಚಾರಿಸದೆ ಆ. 17ರಂದು ₹ 49,480 ಮೊತ್ತದ ಚೆಕ್‌ (ಎಸ್‌ಬಿಐ ಚೆಕ್ ಸಂಖ್ಯೆ 849282) ನೀಡಿದೆ.

ಪ್ರವಾಸಕ್ಕೆ ಹೋಗಿದ್ದರೂ ಪತ್ನಿಗೆ ಪೂರ್ತಿ ಪಗಾರ: ಇದಲ್ಲದೇ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊ. ಗಂಗಾಧರಪ್ಪ ಅವರ ಪತ್ನಿ ನಯನಾ ಗಂಗಾಧರಪ್ಪ ಅವರೂ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿಯೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೂನ್‌ 1ರಿಂದ 17ರವರೆಗೆ ತಾವು ಸೆಮಿಸ್ಟರ್‌ ಕೊನೆಯ ಪರೀಕ್ಷೆಯ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸಿರುವುದಾಗಿ ವಿಶ್ವವಿದ್ಯಾಲಯಕ್ಕೆ ಬಿಲ್‌ ಸಲ್ಲಿಸಿದ್ದಾರೆ. ಹೀಗಾಗಿ ತಿಂಗಳ ಪೂರ್ಣ ಪ್ರಮಾಣದ ವೇತನ ₹19,800 ಅನ್ನು (ಸಿಂಡಿಕೇಟ್ ಬ್ಯಾಂಕ್‌ ಚೆಕ್‌ ಸಂಖ್ಯೆ 220708) ಪಡೆದುಕೊಂಡಿದ್ದಾರೆ.

ಪತ್ನಿಯ ಬಿಲ್‌ ಅನ್ನು  ಗಂಗಾಧರಪ್ಪ ಮಾನ್ಯ ಮಾಡಿ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಒಂದೆಡೆ ಗಂಗಾಧರಪ್ಪ ಪತ್ನಿ ಡಾ.ನಯನಾ ಅವರನ್ನು ದಿಬ್ರುಗಡಕ್ಕೆ ಕರೆದುಕೊಂಡು ಹೋಗಿರುವುದಾಗಿ ವಿ.ವಿಗೆ ತಿಳಿಸಿದ್ದಾರೆ. ಮತ್ತೊಂದೆಡೆ ಪತ್ನಿ ಅದೇ ಅವಧಿಯಲ್ಲಿ ಪರೀಕ್ಷಾ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಿರುವ ಕುರಿತು ಪ್ರಮಾಣೀಕರಿಸಿ ಪೂರ್ಣ ಪ್ರಮಾಣದ ಸಂಬಳವನ್ನೂ ಕೊಡಿಸಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.

ಎಲ್‌ಟಿಸಿ ಭತ್ಯೆ ಪಡೆಯಲು ಪ್ರವಾಸ ಮಾಡಬೇಕೆಂದೇನೂ ಇಲ್ಲ
ಎಲ್‌ಟಿಸಿ ಹಣ ಪಡೆಯಲು ಪ್ರವಾಸ ಮಾಡಲೇಬೇಕೆಂದೇನೂ ಇಲ್ಲ. ಸೇವಾ ಅವಧಿಯಲ್ಲಿ 2 ಬಾರಿ ಎಲ್‌ಟಿಸಿ ಪಡೆಯಬಹುದು ಎಂದಿದೆ. ಅದನ್ನು ಪಡೆದಿದ್ದೇನೆ ಅಷ್ಟೇ. ವಿ.ವಿ ಆಡಳಿತ ಮಂಡಳಿಯವರು ಒಂದು ಬಿಲ್‌ ಕೊಡಿ ಸಾಕು ಎಂದೆನ್ನುತ್ತಾರೆ. ಹೀಗಾಗಿ ಮಗಳ ಮದುವೆಗೆ ರಜೆ ಹಾಕಬೇಕಿತ್ತು. ಅದರ ಜತೆ ಎಲ್‌ಟಿಸಿ ಕೂಡ ಕ್ಲೈಮು ಮಾಡಿದ್ದೇನೆ. ನಯನಾ ಗಂಗಾಧರಪ್ಪ ಅವರಿಗೆ ಸಂಬಂಧಿಸಿದಂತೆ ಅವರು ಕೆಲಸ ಮಾಡಿದ್ದಾರೋ ಇಲ್ಲವೋ ಎಂದು ಯಾರೂ ಕೇಳುವಂತಿಲ್ಲ. ಅವರು ಪರೀಕ್ಷೆಯ ಮೇಲ್ವಿಚಾರಣೆಗಾಗಿ ನಿಯೋಜನೆಗೊಂಡಿದ್ದಕ್ಕೆ ವಿ.ವಿ ನೀಡುವ ಭತ್ಯೆಯನ್ನು ಅವರು ಪಡೆದಿಲ್ಲ’ ಎಂದು ಪ್ರೊ. ಗಂಗಾಧರಪ್ಪ ಹೇಳಿದರು.

ಆದರೆ ಇದಕ್ಕೆ ಡಾ.ನಯನಾ ಗಂಗಾಧರಪ್ಪ ಅವರು ಪ್ರತಿಕ್ರಿಯಿಸಿ, ‘ನನ್ನ ಪತಿ ಎಲ್‌ಟಿಸಿಗೆ ನನ್ನ ಹೆಸರು ಸೇರಿಸಿರುವುದು ನನಗೆ ತಿಳಿದಿಲ್ಲ. ನಾನು ದಿಬ್ರುಗಡಕ್ಕೆ ಹೋಗಿಲ್ಲ. ಮದುವೆಗೆ ಒಂದು ದಿನ ರಜೆ ಹಾಕಿದ್ದೆ ಅಷ್ಟೇ’ ಎಂದು ಹೇಳುತ್ತಾರೆ. ಆದರೆ ದಾಖಲೆ ಹೇಳುವುದೇ ಬೇರೆ.

ಇದು ನಡೆದುಕೊಂಡು ಬಂದಿದೆ
‘ಎಲ್‌ಟಿಸಿ ಪಡೆಯುವುದು ಒಂದು ಅಭ್ಯಾಸವಾಗಿ ನಡೆದುಕೊಂಡು ಬಂದಿದೆ. ಪ್ರತಿಯೊಬ್ಬರೂ ದಿಬ್ರುಗಡಕ್ಕೆ ಎಲ್‌ಟಿಸಿ ಹೋಗುತ್ತೇವೆಂದು ಹೇಳಿ ಅನುಮತಿ ಪಡೆಯುತ್ತಾರೆ. ಅದಕ್ಕೆ ವಿ.ವಿ ಅನುಮತಿಯನ್ನೂ ನೀಡುತ್ತದೆ. ಬಂದ ನಂತರ ಬಿಲ್‌ ನೀಡಬೇಕಾಗುತ್ತದೆ. ಔಪಚಾರಿಕವಾಗಿ ಅದನ್ನು ಪಡೆದು ಅದರ ಪಾಲಿನ ಹಣ ಬಿಡುಗಡೆ ಮಾಡಲಾಗುತ್ತದೆ. ಪ್ರೊ.ಗಂಗಾಧರಪ್ಪ ವಿಷಯದಲ್ಲಿ ನಡೆದಿರುವುದು ವಿ.ವಿ ನಿಯಮಾವಳಿಗೆ ವಿರುದ್ಧವಾದುದು. ಈ ಕುರಿತು ಕುಲಪತಿಯೊಂದಿಗೆ ಚರ್ಚಿಸುತ್ತೇನೆ’ ಎಂದು ಕುಲಸಚಿವ ಡಾ. ಎಂ.ಎನ್‌.ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT