ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನೀರ್‌ಸೆಲ್ವಂ ಹೊಸ ಸಿ.ಎಂ

Last Updated 28 ಸೆಪ್ಟೆಂಬರ್ 2014, 20:21 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯ­ಮಂತ್ರಿ ಜೆ.ಜಯಲಲಿತಾ ಅವರು ಜೈಲು ಪಾಲಾದ ಕಾರಣ ಅವರ ನಿಷ್ಠಾ­ವಂತ ಒ. ಪನ್ನೀರ್‌ಸೆಲ್ವಂ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ­ಯಾಗು­ವುದಕ್ಕೆ ವೇದಿಕೆ ಸಜ್ಜಾಗಿದೆ.

ಎಐಎಡಿಎಂಕೆ ಪ್ರಧಾನ ಕಚೇರಿ­ಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹಣ­ಕಾಸು ಸಚಿವ ಪನ್ನೀರ್‌ಸೆಲ್ವಂ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾ­ಯಿತು.

೬೩ ವರ್ಷದ ಪನ್ನೀರ್‌ಸೆಲ್ವಂ ಜಯಾ ಅವರ ಬಲಗೈ ಬಂಟನಾಗಿಯೇ ಗುರು­ತಿಸಿ­­ಕೊಂಡವರು. ಮೃದು ಭಾಷಿ­ಯಾ­ಗಿರುವ ಅವರು   ರಾಜ್ಯದಲ್ಲಿ ಬಹು­ಸಂಖ್ಯಾ­ತ­ರಾದ ಮುದುಕುಲ­ಥೋರ್‌ ಸಮುದಾ­ಯಕ್ಕೆ ಸೇರಿದವರು.

೨೦೦೧ರಲ್ಲಿ ಇಂಥದ್ದೇ ಸನ್ನಿವೇಶ ಎದುರಾಗಿದ್ದಾಗ ಅವರು ಕೇವಲ  ಆರು ತಿಂಗಳ ಕಾಲ ಜಯಾ ಉತ್ತರಾ­ಧಿಕಾರಿ­ಯಾಗಿ ಮುಖ್ಯಮಂತ್ರಿ ಹುದ್ದೆ ನಿರ್ವಹಿ­ಸಿದ್ದರು. ತಾನ್ಸಿ ಭೂಹಗರಣ­ದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿ­ನಿಂದಾಗಿ ತಾವು ರಾಜೀನಾಮೆ ನೀಡ­ಬೇಕಾಗಿ ಬಂದಿದ್ದಾಗ ಪನ್ನೀರ್‌­ಸೆಲ್ವಂ ಅವರನ್ನೇ  ಜಯಲಲಿತಾ ಮುಖ್ಯ­ಮಂತ್ರಿ­ಯನ್ನಾಗಿ ಮಾಡಿದ್ದರು. ೨೦೦೧ರ ಸೆ.೨೧ರಿಂದ ೨೦೦೨ರ ಮಾರ್ಚ್‌ ೧ರವರೆಗೆ  ಅವರು ಆಡಳಿತ ನಡೆಸಿದ್ದರು. ಈ ಪ್ರಕರಣದಲ್ಲಿ ಜಯಾ ಖುಲಾಸೆಗೊಂಡ ಬಳಿಕ ಮುಖ್ಯ­ಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಶನಿ­ವಾರ ವಿಶೇಷ ಕೋರ್ಟ್‌ ತಮ್ಮನ್ನು  ಅಪರಾಧಿ ಎಂದು ಘೋಷಿಸಿದ ಬಳಿಕ ಜಯ­ಲಲಿತಾ ಅವರು ಕೋರ್ಟ್‌­ನಿಂದಲೇ ಪನ್ನೀರ್‌ಸೆಲ್ವಂ ಹೆಸರನ್ನು ಮುಖ್ಯಮಂತ್ರಿ ಗಾದಿಗೆ ಸೂಚಿಸಿದ್ದರು ಎನ್ನಲಾಗಿದೆ.

ಜೈಲಿನಲ್ಲಿಯೇ ಚರ್ಚೆ:  ಜಯಾ ಅವರು ಇದಕ್ಕೆ ಮುನ್ನ ಭಾನುವಾರ ಬೆಳಿಗ್ಗೆ ಉತ್ತರಾಧಿಕಾರಿ ಆಯ್ಕೆ ಸಂಬಂಧ ಪನ್ನೀರ್‌ಸೆಲ್ವಂ, ಇಂಧನ ಸಚಿವ ನಾಥಂ ವಿಶ್ವನಾಥನ್‌, ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ ಹಾಗೂ ಸರ್ಕಾರದ ಸಲಹೆಗಾರ್ತಿಯಾಗಿರುವ ಮಾಜಿ ಮುಖ್ಯ­­­ಕಾರ್ಯದರ್ಶಿ ಶೀಲಾ ಬಾಲ­ಕೃಷ್ಣನ್‌ ಜತೆ ಜೈಲಿ­ನಲ್ಲಿಯೇ  ಚರ್ಚೆ ನಡೆಸಿ­ದ್ದರು.

ರಾಜ್ಯಪಾಲರ ಭೇಟಿ: ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ತಕ್ಷಣವೇ  ಪನ್ನೀರ್‌ಸೆಲ್ವಂ, ರಾಜ­ಭವನಕ್ಕೆ ತೆರಳಿ ರಾಜ್ಯಪಾಲ ರೋಸಯ್ಯ ಅವ­ರನ್ನು ಭೇಟಿಯಾದರು. ಗೃಹ ಸಚಿವ ಆರ್‌.ವೈತಿ­ಲಿಂಗಂ, ನಾಥಂ ವಿಶ್ವ­ನಾಥನ್‌, ಹೆದ್ದಾರಿ ಸಚಿವ ಎಡಪ್ಪಡಿ ಪಳನಿಸ್ವಾಮಿ ಕೂಡ ಈ ಸಂದರ್ಭದಲ್ಲಿ ಇದ್ದರು. ಆದರೆ ರಾಜಭನ­ದೊಳಕ್ಕೆ ಮಾಧ್ಯಮ ಪ್ರತಿನಿಧಿ­ಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಇಂದು ಪ್ರಮಾಣವಚನ?: ತಮ್ಮ ಸಂಪುಟ ಸೇರುವ ಸಚಿವರ ಹೆಸರು­ಗಳನ್ನು ಕೂಡ ಪನ್ನೀರ್‌ಸೆಲ್ವಂ ರಾಜ್ಯ­ಪಾಲ­ರಿಗೆ ಕೊಟ್ಟರು. ಕೂಡಲೇ ರಾಜ್ಯ­ಪಾಲರು ಹೊಸ ಸರ್ಕಾರ ರಚಿಸುವಂತೆ ಅವರಿಗೆ ಆಹ್ವಾನ ನೀಡಿದರು. ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ನಡೆ­ಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಯಾ ಉತ್ತರಾಧಿಕಾರಿ ಸ್ಥಾನಕ್ಕೆ ನಾಥಂ ವಿಶ್ವನಾಥಂ, ಸೆಂಥಿಲ್‌ ಬಾಲಾಜಿ ಅವರ ಹೆಸರುಗಳು ಕೂಡ ಕೇಳಿ ಬಂದಿದ್ದವು. ‘ಪನ್ನೀರ್‌ಸೆಲ್ವಂ ಪಕ್ಷದ ಅತಿ ಹಿರಿಯ ನಾಯಕ. ಆದ ಕಾರಣ ಅವರನ್ನೇ ಶಾಸ­ಕಾಂಗ ಪಕ್ಷದ ನಾಯಕ­ನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡ­ಲಾಯಿತು. ‘‘ಅಮ್ಮಾ’’ ನಿರ್ದೋಷಿ ಎಂದು ಸಾಬೀತಾಗಿ ಹೊರ­ಬರುವ ತನಕ ಪನ್ನೀರ್‌ಸೆಲ್ವಂ ಅಧಿಕಾರ­ದಲ್ಲಿರುವರು’ ಎಂದು ಪಕ್ಷದ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.

ಟೀ ಅಂಗಡಿ ನಡೆಸುತ್ತಿದ್ದರು...
ಪನ್ನೀರ್‌ಸೆಲ್ವಂ ಮೊದಲು ಕೃಷಿಕರಾಗಿ­ದ್ದರು. ೧೯೯೬­ರಲ್ಲಿ ಪೆರಿಯಾಕುಳಂ ನಗರಪಾಲಿಕೆ ಅಧ್ಯಕ್ಷರಾಗುವುದಕ್ಕೆ ಮುನ್ನ ಚಹಾ ಮಾರಾಟ ಮಾಡು­ತ್ತಿದ್ದರು.

೨೦೦೧ರಲ್ಲಿ ಪೆರಿಯಾಕುಳಂ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದರು. ನಂತರದಲ್ಲಿ ಕಂದಾಯ ಹಾಗೂ ಲೋಕೋಪಯೋಗಿ ಸಚಿವರಾ­ಗಿ ಕಾರ್ಯ ನಿರ್ವ­ಹಿಸಿದ್ದರು. ೨೦೦೬ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಸೋತಾಗ ಅವರು ವಿಧಾನ­ಸಭೆಯಲ್ಲಿ ವಿರೋಧ ಪಕ್ಷದ ನಾಯ­ಕನಾಗಿ ಕೆಲಸ ಮಾಡಿದ್ದರು. ಪೆರಿಯಾಕುಳಂ ಕ್ಷೇತ್ರದಿಂದ ಎರಡು ಬಾರಿ ಅವರು ಆಯ್ಕೆಯಾಗಿದ್ದಾರೆ. ಪನ್ನೀರ್‌ಸೆಲ್ವಂ ನಿಷ್ಠೆಗೆ ಮಾರುಹೋದ ಜಯಲಲಿತಾ, 201೧ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ  ಮಹತ್ವದ ಹಣ­ಕಾಸು ಖಾತೆಯನ್ನು ಅವರಿಗೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT