ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಕೇಳೋಕೆ ಕೊಠಡಿಗಳೇ ಇಲ್ಲ

ವಿಜಯಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಗೋಳು: ಸೌಕರ್ಯದ ಕೊರತೆ
Last Updated 13 ಜುಲೈ 2015, 9:34 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಣವಾಗಿ ಶಾಲಾ ಕೊಠಡಿಗಳು ಇಲ್ಲದೆ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ.

ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂಖ್ಯೆ 500ಕ್ಕೂ ಹೆಚ್ಚಿದ್ದು, ಪ್ರಥಮ ಪಿಯುಗೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಆದರೆ ಇಷ್ಟೂ ವಿದ್ಯಾರ್ಥಿಗಳಿಗೆ ಇರುವುದು ಕೇವಲ 3 ಕೊಠಡಿಗಳು ಮಾತ್ರ.

ಕಾಲೇಜಿನ ಹಳೆ ವಿದ್ಯಾರ್ಥಿ ಕನಕರಾಜು ಮಾತನಾಡಿ, ಒಂದು ಕೊಠಡಿಯಲ್ಲಿ 140 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ, ಇದರಿಂದ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತಿಲ್ಲ. ಕಾಲೇಜಿನಲ್ಲಿ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಗಳೂ ಸರಿಯಿಲ್ಲ ಎಂದು ಅವರು ಹೇಳಿದರು.

ಕಾಲೇಜಿಗೆ ಕಿಮ್ಮನೆ ರತ್ನಾಕರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ ₨40 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಆ ರೀತಿಯ ಯಾವುದೆ ಅನುದಾನ ಬಂದಿಲ್ಲ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಶಂಕರ ಹೆಗಡೆ ಮಾತನಾಡಿ, ಕಾಲೇಜಿನ ಪಕ್ಕದಲ್ಲಿಯೆ ಇರುವ ಪ್ರೌಢಶಾಲಾ ವಿಭಾಗಕ್ಕೆಂದು ಹೊಸದಾಗಿ 3 ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ತಾತ್ಕಾಲಿಕವಾಗಿ ಹೊಸ ಕಟ್ಟಡಗಳಲ್ಲಿ ಪಾಠಗಳನ್ನು ಮಾಡಲಾಗುವುದು ಎಂದರು.

ಕಾಲೇಜಿನಲ್ಲಿ ಒಟ್ಟು 14 ಮಂದಿ ಉಪನ್ಯಾಸಕರಿದ್ದು, ನಾಲ್ವರು ಹೆರಿಗೆ ರಜೆಯ ಮೇಲೆ ತೆರಳಿದ್ದಾರೆ. ಈ ತಿಂಗಳಿನಲ್ಲಿ ಇನ್ನೂ ಇಬ್ಬರು ರಜೆಯ ಮೇಲೆ ತೆರಳಿದ್ದು, ಭೂಗೋಳಶಾಸ್ತ್ರ ಮತ್ತು ಅರ್ಥಶಾಸ್ತ್ರಕ್ಕೆ ವಿಷಯವಾರು ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಸ್‌ಬಿಸಿ ಕಮಿಟಿಯಿಂದ ಅತಿಥಿ ಶಿಕ್ಷಕರನ್ನು ಪಡೆದುಕೊಂಡು ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾಲೇಜಿನ ಸುತ್ತಲೂ ಕಾಂಪೌಂಡ್ ಇಲ್ಲದ ಕಾರಣ ಪಾಠ ಪ್ರವಚನಗಳು ನಡೆಯುವ ವೇಳೆ ದ್ವಿಚಕ್ರವಾಹನಗಳು ಓಡಾಡುತ್ತಿರುತ್ತವೆ.  ತರಗತಿಯ ವೇಳೆಯಲೇ ಪುಂಡ ಯುವಕರು ಕಾಲೇಜಿನ ಸಮೀಪ ಬಂದು ವೀಲಿಂಗ್ ಮಾಡುವುದು, ಹಾರ್ನ್‌ ಮಾಡುವುದು ಮತ್ತಿತರ ಚೇಷ್ಟೆಗಳನ್ನು ಮಾಡುತ್ತಿರುತ್ತಾರೆ.  ಕಾಲೇಜಿಗೆ ಶೀಘ್ರವಾಗಿ ಕಾಂಪೌಂಡ್‌ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT