ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕಳ ಮಗಳು ಪುರಸಭೆ ಉಪಾಧ್ಯಕ್ಷೆ!

Last Updated 25 ಅಕ್ಟೋಬರ್ 2014, 5:16 IST
ಅಕ್ಷರ ಗಾತ್ರ

ಗುಲ್ಬರ್ಗ: ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ಪುರಸಭೆ­ಯಲ್ಲಿ ತಾಯಿ ಮಾಳಮ್ಮ ಚಂದಪ್ಪ ಸೈದಾಪುರ (45) ಪೌರ­ಕಾರ್ಮಿಕಳಾಗಿ ದುಡಿಯು­ತ್ತಿದ್ದರೆ, ಅವರ ಪುತ್ರಿ ಮರೆಮ್ಮ (27) ಈಗ ಅದೇ ಪುರಸಭೆಯ ಉಪಾಧ್ಯಕ್ಷೆ­ಯಾಗಿದ್ದಾರೆ!

ಪರಿಶಿಷ್ಟ ಜಾತಿಯ ಮರೆಮ್ಮ ಅವರು ಎಂ.ಎ., ಎಂ.ಇಡಿ ಪದವೀಧರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ವಾಡಿಯ ವಿಜಯನಗರ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಪುರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಎರಡನೇ ಅವಧಿಗೆ ನಡೆದ ಚುನಾ­ವಣೆಯಲ್ಲಿ ಬಿಜೆಪಿ ಬೆಂಬಲದಿಂದ ಮರೆಮ್ಮ ಉಪಾ­ಧ್ಯ­ಕ್ಷೆಯಾಗಿ ಆಯ್ಕೆಯಾ­ಗಿ­ದ್ದಾರೆ. ಉಪಾ­ಧ್ಯಕ್ಷ ಸ್ಥಾನವೂ ಸಾಮಾನ್ಯ ಮಹಿಳೆಗೆ ಮೀಸ­ಲಾ­ಗಿತ್ತು.

‘ನಾನು ಆರು ವರ್ಷ­ದ­ವ­ಳಿ­ದ್ದಾಗ ತಂದೆ­ಯನ್ನು ಕಳೆದು­ಕೊಂಡೆ. ಅಮ್ಮ ಪೌರ­ಕಾರ್ಮಿಕಳಾಗಿ 20 ವರ್ಷಗಳಿಂದ ದುಡಿ­ಯು­ತ್ತಿದ್ದಾಳೆ.
ಅಣ್ಣ ಮಲ್ಲಿಕಾರ್ಜುನ ತರಕಾರಿ ಮಾರುತ್ತಿದ್ದರು. ಅಮ್ಮ–ಅಣ್ಣ ತಾವು ದುಡಿದು ನನ್ನನ್ನು ಓದಿಸಿದರು. ನಾವು ವಾಸಿಸುವ ಪ್ರದೇಶ ಬಹಳ ಹಿಂದುಳಿದಿದೆ.

ಆ ಪ್ರದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದ ಮೊದಲ ಯುವತಿ ನಾನು. ವಿದ್ಯಾವಂತ ಯುವತಿಯ ಹೊಣೆ­ಗಾರಿಕೆ ನಿಭಾಯಿಸಲಿಕ್ಕಾಗಿ ಮತ್ತು ನಮ್ಮ ವಾರ್ಡ್‌ನ ಅಭಿವೃದ್ಧಿಗೆ ಪಣ­ತೊಟ್ಟು ಪುರಸಭೆಗೆ ಸ್ಪರ್ಧಿಸಿದೆ. ಜನ ಗೆಲ್ಲಿಸಿದರು’ ಎಂದು ಮರೆಮ್ಮ ತಮ್ಮ ರಾಜಕೀಯ ಪ್ರವೇಶದ ಬಗೆಯನ್ನು ವಿವರಿಸಿದರು.

‘ಗುಲ್ಬರ್ಗದ ಖಾಸಗಿ ಕಾಲೇ­ಜೊಂ­ದರಲ್ಲಿ ಎಂ.­ಎಸ್‌.­ಡಬ್ಲ್ಯೂಗೆ ಪ್ರವೇಶ ಪಡೆದಿದ್ದೇನೆ. ಗುಲ್ಬರ್ಗ ವಿ.ವಿ.ಯ ಪಿಎಚ್‌.ಡಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೇನೆ. ಸದ್ಯ ನನಗೆ ವಹಿಸಿರುವ ಹೊಣೆಗಾರಿಕೆ ನಿಭಾಯಿಸುವುದರಲ್ಲಿ ಮಗ್ನವಾಗಿದ್ದೇನೆ. ಮದುವೆ– ನೌಕರಿ ಬಗ್ಗೆ ಆಲೋಚಿಸಿಲ್ಲ’ ಎನ್ನುತ್ತಾರೆ ಮರೆಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT