ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸನ್ನ ಉಪವಾಸ ಸತ್ಯಾಗ್ರಹ ಅಬಾಧಿತ

ಕೈಮಗ್ಗ ನೇಕಾರರ ಬೇಡಿಕೆ ಈಡೇರಿಕೆ ಭರವಸೆ
Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗಜೇಂದ್ರಗಡ (ಗದಗ ಜಿಲ್ಲೆ):  ಕೈಮಗ್ಗ ನೇಕಾರರ ಬೇಡಿಕೆ­ಗಳನ್ನು ಈಡೇರಿಸಲು ಆಗ್ರಹಿಸಿ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸೋಮ­ವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ­ದಲ್ಲಿ ವ್ಯತ್ಯಾಸವಾಗಿದೆ. ಆದರೂ ಆಸ್ಪತ್ರೆಗೆ ದಾಖಲಾಗಲು ಅವರು ನಿರಾಕರಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ ಚೋಳಿನ  ಅವರು ಒಕ್ಕೂಟದ ಕಚೇರಿ­ಯಲ್ಲಿ ಪ್ರಸನ್ನ ಅವರ ಆರೋಗ್ಯ ತಪಾಸಣೆ ನಡೆಸಿ­ದಾಗ ಸಕ್ಕರೆ ಪ್ರಮಾಣ ಮತ್ತಷ್ಟು ಕಡಿಮೆ ಆಗಿರುವುದು ಕಂಡು ಬಂತು. ಮಧ್ಯಾಹ್ನ ಮತ್ತೆ ಡಾ.ಮಹೇಶ ನೇತೃ­ತ್ವದ ನಾಲ್ವರು ವೈದ್ಯರ ತಂಡ  ಆರೋಗ್ಯ ತಪಾಸಣೆ ನಡೆಸಿ­ದಾಗ ಪ್ರಸನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಪ್ರಸನ್ನ ಅವರ ಮನವೊಲಿಸಲು ವೈದ್ಯರ ತಂಡ ಪ್ರಯತ್ನಿ­ಸಿ­ದರೂ ಯಶಸ್ವಿಯಾಗಲಿಲ್ಲ. ಬಳಿಕ ವಿಷಯವನ್ನು ಅವರ ಬೆಂಬಲಿಗರಿಗೂ ತಿಳಿಸಲಾಯಿತು.

‘ದೇಹದಲ್ಲಿ ಸಕ್ಕರೆ ಪ್ರಮಾಣ ತೀವ್ರ ಕುಸಿದಿದ್ದರೂ ಆಸ್ಪತ್ರೆಗೆ ದಾಖಲಾಗಲು ಪ್ರಸನ್ನ ಒಪ್ಪಿಕೊಳ್ಳುತ್ತಿಲ್ಲ. ಗಜೇಂದ್ರಗಡ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ಅವರಿಗೆ ಪತ್ರ ಬರೆದಿದ್ದೇನೆ. ಮುಂದಿನ ಕ್ರಮ ಕೈಗೊಳ್ಳುತ್ತಾರೆ’ ಎಂದು ಡಾ. ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ಭರವಸೆ: ಈ ನಡುವೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜು ಮತ್ತು ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಮುದ್ದಯ್ಯ ಸೋಮವಾರ ಸಂಜೆ ಪ್ರಸನ್ನ ಅವರನ್ನು ಭೇಟಿಯಾಗಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಕೈಮಗ್ಗ ತಜ್ಞರ ಸಲಹಾ ಸಮಿತಿ ರಚಿಸಿ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ಪ್ರಸನ್ನ ಅವರಿಗೆ ನೀಡಿದರು. ಇದೇ 11ರಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನೇಕಾರರ ಸಭೆ ನಡೆಸಲಾಗುವುದು ಎಂದು ಲಿಖಿತ ಭರವಸೆ ನೀಡಿದರೂ ಪ್ರಸನ್ನ ಸತ್ಯಾಗ್ರಹ ಹಿಂತೆಗೆದುಕೊಳ್ಳಲಿಲ್ಲ.

‘ಬೇಡಿಕೆ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನೇಕಾರರ ಸಭೆ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಒಕ್ಕೂಟದ ರಾಷ್ಟ್ರೀಯ ಸಂಚಾಲಕರು, ಅಧ್ಯಕ್ಷರು ಹಾಗೂ ಸ್ಥಳೀಯ ನೇಕಾರರ ಜತೆ ಚರ್ಚಿಸಿ ಉಪವಾಸ ಸತ್ಯಾಗ್ರಹ ಹಿಂತೆಗೆದು­ಕೊಳ್ಳುವ ನಿರ್ಧಾರ ಕೈಗೊಳ್ಳಲಾಗು­ವುದು. ಅಲ್ಲಿವರೆಗೂ ಉಪವಾಸ ಮುಂದುವರೆಯಲಿದೆ’ ಎಂದು ಪ್ರಸನ್ನ ನಂತರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಚಂದನಗೌಡ, ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ ಸುರೇಶ ಬಾಬು ಪಾಟೀಲ ಹಾಗೂ ಸ್ಥಳೀಯ ನೇಕಾರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ರೋಣ ಶಾಸಕ ಜಿ.ಎಸ್‌.ಪಾಟೀಲ ಕೂಡ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT