ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲಾ ಮಕ್ಕಳಿಗೆ ಸರ್ಕಾರದಿಂದಲೇ ‘ಮನುಸ್ಮೃತಿ’

Last Updated 25 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮನುವಿನ ವಿಚಾರಧಾರೆ’ ಮತ್ತು ‘ಮನುಸ್ಮೃತಿಯಲ್ಲಿನ ಮುತ್ತಿನ ಮಾತುಗಳು’ ಎಂಬ ಪುಸ್ತಕಗಳೂ ಸೇರಿದಂತೆ ಅಧ್ಯಾತ್ಮ ಮತ್ತು ಧರ್ಮಕ್ಕೆ ಸಂಬಂಧಿಸಿದ ನೂರಾರು ಪುಸ್ತಕಗಳನ್ನು ರಾಜ್ಯದ ಪ್ರೌಢಶಾಲಾ ಗ್ರಂಥಾಲಯಗಳಿಗೆ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ.

ಪ್ರೊ.ಹಂಪಣ್ಣ ನೇತೃತ್ವದ ಸಮಿತಿ 3–1–2014ರಂದು ಸಭೆ ಸೇರಿ 2013–14ನೇ ಸಾಲಿ­ಗಾಗಿ 849 ಪುಸ್ತಕಗಳನ್ನು ಆಯ್ಕೆ ಮಾಡಿದೆ. ಇದ­ರಲ್ಲಿ ಮಕ್ಕಳಲ್ಲಿ ಕೋಮುವಾದ ಬಿತ್ತುವ ಹಲ­ವಾರು ಪುಸ್ತಕಗಳು ಇವೆ ಎಂಬ ಪುಕಾರು ಕೇಳಿಬಂದಿದೆ.

‘ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ, ಆಧ್ಯಾತ್ಮಿಕ ಚಿಂತನಧಾರೆ, ಅಗ್ನಿ ಸಹಸ್ರನಾಮ, ತಂತ್ರ­­ಸಾಧನೆ’ ಮುಂತಾದ ಪುಸ್ತಕಗಳನ್ನೂ ಪ್ರೌಢ­ಶಾಲಾ ವಿದ್ಯಾರ್ಥಿಗಳಿಗೆ ಹಂಚಲು ಆಯ್ಕೆ ಮಾಡಲಾಗಿದೆ.

ಈ ಬಾರಿ ಪ್ರೌಢಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಳ್ಳಲು ಒಟ್ಟಾರೆ ₨ 1.94 ಕೋಟಿ ಒದಗಿಸಲಾಗಿದೆ. ಇದರಲ್ಲಿ ಕೆಲವೇ ಕೆಲವು ಪ್ರಕಾಶಕರ ಅತಿ ಹೆಚ್ಚಿನ ಮೌಲ್ಯದ ಪುಸ್ತಕಗಳು ಆಯ್ಕೆಯಾಗಿವೆ.

ಮೈಸೂರಿನ ಕೆ.ವಿ.ಶ್ರೀನಿವಾಸ್‌ ಅವರಿಗೆ ಸೇರಿದ ಪ್ರಕಾಶನ ಸಂಸ್ಥೆಯ ಸುಮಾರು ₨ 25 ಲಕ್ಷ ಮೌಲ್ಯದ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ ಅವರ ಮಹಿಮಾ ಪ್ರಕಾಶನದ  21 ಪುಸ್ತಕಗಳು, ಅವರದ್ದೇ ಮಾಲಿಕತ್ವದ ಚನ್ನಕೇಶವ ಪ್ರಕಾಶನ, ಹಿಮವದ್‌ ಪ್ರಕಾಶನ, ಕೀರ್ತನಾ ಗ್ರಾಫಿಕ್ಸ್, ನಿಶಾಂತ ಎಂಟರ್‌ಪ್ರೈಸಸ್‌, ದಿವಾಕರ ಪ್ರಕಾಶನ, ರಚನಾ ಪ್ರಕಾಶನ, ಮಂಜುಳಾ ಪ್ರಕಾಶನ, ಎಸ್‌.ಎಸ್‌.ಪ್ರಕಾಶನ, ವಿ.ವಿ.ಪ್ರಕಾಶನ­ಗಳ ಪುಸ್ತಕಗಳನ್ನೂ ಆಯ್ಕೆ ಮಾಡಲಾಗಿದೆ.

ಇದಲ್ಲದೆ ಕೆ.ವಿ.ಶ್ರೀನಿವಾಸ್‌ ತಮ್ಮ ಹೆಸರಿ­ನಲ್ಲಿಯೇ ಸಲ್ಲಿಸಿದ ಎಚ್‌.ಆರ್‌.­ಚಂದ್ರ­ವ­ದನ­ರಾವ್‌, ನಂಜನಗೂಡು ಸತ್ಯನಾರಾಯಣ, ಆಶಾ­ಕುಮಾರಿ, ಬೆ.ಗೋ.ರಮೇಶ್‌, ಆರ್‌.­ನಾಗೇಂದ್ರ ಅವರ ಪುಸ್ತಕಗಳನ್ನೂ ಆಯ್ಕೆ ಮಾಡಲಾಗಿದೆ.

ಶ್ರೀನಿವಾಸ್‌ ಅವರು ಬೇರೆ ಬೇರೆ ಪ್ರಕಾಶನದ ಹೆಸರಿನಲ್ಲಿ ಪುಸ್ತಕಗಳನ್ನು ಬೇರೆ ಬೇರೆ ವಿಳಾಸಗಳ ಮೂಲಕ ಆಯ್ಕೆ ಸಮಿತಿಗೆ ಸಲ್ಲಿಸಿದ್ದರೂ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಒಟ್ಟು 49 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ.

ಶ್ರೀನಿವಾಸ್‌ ಅಲ್ಲದೆ ಸಪ್ನ ಬುಕ್‌ ಮತ್ತು ಸಹೋದರ ಸಂಸ್ಥೆಗಳು, ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಬೆಂಗಳೂರಿನ ಕೆಲವು ಪ್ರಕಾಶನ ಸಂಸ್ಥೆಗಳ ಅತಿ ಹೆಚ್ಚಿನ ಪುಸ್ತಕ­ಗಳನ್ನೂ ಆಯ್ಕೆ ಮಾಡಲಾಗಿದೆ. ಒಂದೇ ಲೇಖಕರ ಹಲವಾರು ಪುಸ್ತಕಗಳನ್ನೂ ಆಯ್ಕೆ ಮಾಡಲಾಗಿದೆ.

ಒಂದೇ ಶೀರ್ಷಿಕೆಯ ಪುಸ್ತಕವನ್ನು ಬೆಂಗಳೂರು ಮತ್ತು ಮೈಸೂರು ವಿಳಾಸಗಳಿಂದ ಸಲ್ಲಿಸಲಾಗಿದ್ದು ಒಂದೇ ಪಟ್ಟಿಯಲ್ಲಿ ಅದು ಎರಡು ಬಾರಿ ಆಯ್ಕೆಯಾಗಿದೆ.

ಬೆ.ಗೋ.ರಮೇಶ್‌ ಅವರು ಬರೆದ ‘ವಿಜ್ಞಾನಿ­ಗಳು ಯಾರು? ಯಾರು?’ ಎಂಬ ಪುಸ್ತಕವನ್ನು ಬೆಂಗಳೂರಿನ ವಿಳಾಸದಿಂದಲೂ ಸಲ್ಲಿಸಲಾಗಿದೆ. ಮೈಸೂರಿನ ಸರಸ್ವತಿ ಸಾಹಿತ್ಯ ಭಂಡಾರ ವಿಳಾಸದಿಂದಲೂ ಸಲ್ಲಿಕೆಯಾಗಿದೆ. ಈ ಪುಸ್ತಕ ಆಯ್ಕೆ ಪಟ್ಟಿಯಲ್ಲಿ ಎರಡು ಬಾರಿ ಸ್ಥಾನ ಪಡೆದಿದೆ.

ಮುಖ್ಯಮಂತ್ರಿಗೆ ದೂರು: ಆಯ್ಕೆ ಪಟ್ಟಿ ಪ್ರಕಟವಾದ ನಂತರ ವಿಜ್ಞಾನ ಲೇಖಕ ಜಿ.ನಾಗೇಂದ್ರನ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೋಹಿಸಿನ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಹಿ.ಶಿ.ರಾ. ಪತ್ರ: 2013–14ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರು­ವಾಗಲೇ ಜಾನಪದ ತಜ್ಞ ಡಾ.ಹಿ.ಶಿ.­ರಾಮ­ಚಂದ್ರೇ­ಗೌಡ ಅವರು ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಪತ್ರವೊಂದನ್ನು ಬರೆದು, ‘ಕಳೆದ ವರ್ಷ ₨ 3 ಕೋಟಿಗಳನ್ನು ರಾಷ್ಟ್ರೋತ್ಥಾನ ಪರಿಷತ್‌ ಪುಸ್ತಕಗಳಿಗೆ ನೀಡಲಾಗಿದ್ದು ಈ ಬಾರಿ ಕೂಡ ಹಾಗೆಯೇ ಆಗುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ನೇಮಿಸಿದ ಆಯ್ಕೆ ಸಮಿತಿ ಅಧ್ಯಕ್ಷರನ್ನೇ ಉಳಿಸಿ­ಕೊಂಡಿದ್ದರಿಂದ ಈ ಅನುಮಾನ ಉಂಟಾಗಿದೆ. ಈ ಸಮಿತಿ ಆಯ್ಕೆ ಮಾಡುವ ಪುಸ್ತಕಗಳ ಬಗ್ಗೆ ಇಲಾಖೆ ಗಮನ ಹರಿಸಬೇಕು’ ಎಂದು ವಿನಂತಿಸಿಕೊಂಡಿದ್ದರು.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT