ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೆರೆಯಂಗಳದಲ್ಲಿ ಹಾಡುಹಕ್ಕಿ ಸತ್ತಿದೆ...

Last Updated 10 ಜನವರಿ 2015, 19:30 IST
ಅಕ್ಷರ ಗಾತ್ರ

ಬತ್ತಿದ ಕೆರೆಯಂಗಳದಲ್ಲಿ
ಹಾಡುಹಕ್ಕಿ ಸತ್ತಿದೆ
ಅದರ ಕತೆಯ ಕೇಳಲಿಕ್ಕೆ
ಯಾರಿಗೆ ಪುರುಸೊತ್ತಿದೆ?

–ಕೆ.ಎಸ್‌. ನರಸಿಂಹಸ್ವಾಮಿ

ಅರಣ್ಯ ಜೀವವೈವಿಧ್ಯದ ತಾಣ. ಮನುಷ್ಯನ ಅತಿಕ್ರಮ ಪ್ರವೇಶದಿಂದ ಅಲ್ಲಿನ ಜೀವಜಾಲ ಛಿದ್ರಗೊಳ್ಳುತ್ತಿದೆ. ಜೀವಿಗಳು ನಿರ್ಭೀತಿಯಾಗಿ ಬದುಕಲು ಮನುಷ್ಯ ಬಿಡಲಾರ. ಆತನ ನಾಲಿಗೆ ರುಚಿಗೆ ಭೂಮಂಡಲದ ಹಲವು ಜೀವಿಗಳು ಗೋಣು ಮುರಿದುಕೊಂಡು ಇಹಲೋಕ ತ್ಯಜಿಸಿವೆ. ಕೆಲವು ವಂಶನಾಶಕ್ಕೆ ಬಂದು ತಲುಪಿವೆ. ಇದಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ‘ದೊರವಾಯನ ಹಕ್ಕಿ’ಯೆಂದು (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಕರೆಯುವ ಪಕ್ಷಿಯೇ ನಿದರ್ಶನ.

ಈ ಹಕ್ಕಿಗೆ ಬಳ್ಳಾರಿ ಭಾಗದಲ್ಲಿ ‘ಎರೆಭೂತ’ ಎಂದು ಕರೆಯುತ್ತಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಭಾಗದಲ್ಲಿ ‘ಎರಲಾಡ’, ‘ಹೆಬ್ಬಕ’ ಎಂಬ ಹೆಸರಿದೆ. ಪ್ರಸ್ತುತ ದೊರವಾಯನ ಹಕ್ಕಿಯ ದಾರುಣ ಕಥೆಗೆ ಯಾವ ಗ್ರೀಕ್‌ ನಾಟಕದ ದುರಂತವೂ ಸಾಟಿಯಾಗಲಾರದು!
ದೊರವಾಯನ ಹಕ್ಕಿ ನೋಡಲು ಮನಮೋಹಕವಾಗಿದೆ. ಹುಲ್ಲುಗಾವಲು ಪ್ರದೇಶದಲ್ಲಿ ಜೋಡಿಯಾಗಿ ಬದುಕುವ ಅಪೂರ್ವ ಸಂಕುಲ. ಎದೆ, ಕುತ್ತಿಗೆ ಭಾಗದಲ್ಲಿ ತೆಳುಹಳದಿ ಬಣ್ಣ. ಬೆನ್ನು, ರೆಕ್ಕೆಗಳು ಗಾಢ ಕಂದುಬಣ್ಣವಿದೆ. ಉಷ್ಟ್ರಪಕ್ಷಿಯಷ್ಟು ಶರೀರ ಮತ್ತು ಉದ್ದ ಕತ್ತು, ಕಾಲುಗಳಿರುವ ಈ ಹಕ್ಕಿಯು ಸರಾಸರಿ 18 ಕೆಜಿ ತೂಗುತ್ತದೆ. ಬಹುಪಾಲು ನೆಲವಾಸಿಯಾಗಿರುವ ಈ ಹಕ್ಕಿಗಳಿಗೆ ಅಪಾಯ ಎದುರಾದಾಗ ಹಾರುವ ಸಾಮರ್ಥ್ಯವೂ ಇದೆ. ಬಾಚಿಹಲ್ಲು ಇರುವ ದಂಶಕ ಪ್ರಾಣಿಗಳು, ಹುಳುಗಳು, ಹುಲ್ಲಿನ ಜಾತಿಯ ತೆನೆ, ಹಲ್ಲಿ, ಕಪ್ಪೆ, ಆಹಾರ ಧಾನ್ಯ, ಸಸ್ಯದ ಚಿಗುರು ಇವುಗಳ ಆಹಾರ.

ಬಾಬರ್‌ಗೆ ಈ ಹಕ್ಕಿಗಳ ಮಾಂಸ ಬಹುಪ್ರಿಯವಾಗಿತ್ತು ಎನ್ನುತ್ತದೆ ಇತಿಹಾಸ. ಭಾರತದ ಪಕ್ಷಿಶಾಸ್ತ್ರದ ಪಿತಾಮಹ ಡಾ. ಸಲೀಂ ಅಲಿ ದೊರವಾಯನ ಹಕ್ಕಿಯನ್ನು ರಾಷ್ಟ್ರಪಕ್ಷಿಯಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದ ಉದಾಹರಣೆಯೂ ಇದೆ. ಈಗ ಹಠಾತ್ತನೆ ವಂಶನಾಶದ ಕಡೆಗೆ ಈ ಹಕ್ಕಿ ಚಲಿಸುತ್ತಿದ್ದು, ಪಕ್ಷಿ ಚರಿತ್ರೆಯಲ್ಲಿ ದಿಗ್ಭ್ರಾಂತಿ ಹುಟ್ಟಿಸಿದೆ.

2012ರ ವೇಳೆ ದೇಶದಲ್ಲಿ ನಡೆದ ಸಮೀಕ್ಷೆ ಪ್ರಕಾರ ಇವುಗಳ ಸಂಖ್ಯೆ 200ಕ್ಕಿಂತಲೂ ಕಡಿಮೆಯಿದೆ. ರಾಜಸ್ತಾನ, ಗುಜರಾತ್‌, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರ ದೊರವಾಯನ ಹಕ್ಕಿಗಳು ಗೋಚರಿಸುತ್ತವೆ. ರಾಜಸ್ತಾನದಲ್ಲಿ ಸುಮಾರು 100 ಹಕ್ಕಿಗಳಿವೆ ಎಂಬ ಅಂದಾಜಿದೆ. ಅಲ್ಲಿನ ಜೈಸೆಮ್ಮಾರ್‌, ಬಾರ್ಮರ್‌, ಬಿಕೆನರ್‌ ಪ್ರದೇಶಕಷ್ಟೇ ಇವುಗಳ ನೆಲೆ ಸೀಮಿತ.

ಎರಡು ದಶಕದ ಹಿಂದೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಭಾಗದ ಹುಲ್ಲುಗಾವಲು ಪ್ರದೇಶ ಈ ಹಕ್ಕಿಗಳಿಗೆ ನೆಲೆಯಾಗಿತ್ತು. ಇವು ಬಳ್ಳಾರಿ ಜಿಲ್ಲೆಯಲ್ಲಿಯೂ ಕಾಣಸಿಗುತ್ತಿದ್ದವು. ಈ ಭಾಗದಲ್ಲಿ ಆರಂಭಗೊಂಡ ಅವ್ಯಾಹತ ಗಣಿಗಾರಿಕೆಗೆ ಹಕ್ಕಿಗಳ ಬದುಕು ನಲುಗಿಹೋಯಿತು. ಹುಲ್ಲುಗಾವಲು ಪ್ರದೇಶ ಉದ್ಯಮಿಗಳಿಗೆ ಲಾಭದ ಗಣಿಯಾಯಿತು. ಇನ್ನೊಂದೆಡೆ ಪಕ್ಷಿಗಳ ನೆಲೆ ಸಂಕುಚಿತಗೊಂಡಿತು. ಬೃಹತ್‌ ಯಂತ್ರಗಳ ದೂಳಿನ ನಡುವೆ ದೊರವಾಯನ ಹಕ್ಕಿಗಳ ರೋದನ ಕ್ಷೀಣಿಸಿತು.
ಎರಡು ವರ್ಷದ ಹಿಂದೆ ಪಕ್ಷಿ ಪ್ರಿಯರಿಗೆ ಬಳ್ಳಾರಿಯ ಜಿಲ್ಲೆಯ ಸಿರುಗುಪ್ಪ, ಚೇಳ್ಳಗುರ್ಕಿ ಭಾಗದಲ್ಲಿ ಎರಡು ದೊರವಾಯನ ಹಕ್ಕಿಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದವು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ನಂತರ ಹಕ್ಕಿಗಳು ಪತ್ತೆಯಾದ ಉದಾಹರಣೆ ಇಲ್ಲ.

ದೊರವಾಯನ ಹಕ್ಕಿಯ ನೆಲೆ ಕೃಷಿ ಚಟುವಟಿಕೆ, ನೀರಾವರಿಗೆ ಬಳಕೆಯಾಗಿದೆ. ಇದರಿಂದ ನೆಲದಲ್ಲಿ ಗೂಡುಕಟ್ಟಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಎಗ್ಗಿಲ್ಲದೆ ಸಾಗಿರುವ ಬೇಟೆಯಿಂದ ಅವುಗಳ ಬದುಕು ಅಳಿವಿನಂಚಿಗೆ ತಲುಪಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಪರಿಚ್ಛೇದ 1ರಲ್ಲಿ ದೊರವಾಯನ ಹಕ್ಕಿ ಬರುತ್ತದೆ. ಇದನ್ನು ಬೇಟೆಯಾಡುವುದು, ಸೆರೆ ಹಿಡಿಯುವುದು ನಿಷಿದ್ಧ. ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಕೇಂದ್ರ ಸರ್ಕಾರ ದೊರವಾಯನ ಹಕ್ಕಿಗಳ ಉಳಿವಿಗೆ ವಿಶೇಷ ಯೋಜನೆ ರೂಪಿಸಿದೆ. ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ) ಮತ್ತು ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌) ಜಂಟಿಯಾಗಿ ರಾಜಸ್ತಾನದಲ್ಲಿ ಈ ಹಕ್ಕಿಗಳ ಸಂರಕ್ಷಣೆಯಲ್ಲಿ ತೊಡಗಿವೆ. ಇವುಗಳ ನೆಲೆ ಇರುವ ರಾಜ್ಯಗಳಲ್ಲಿಯೂ ಸಂರಕ್ಷಣೆಗೆ ಕೇಂದ್ರ ಸೂಚಿಸಿದೆ. 

ವಂಶನಾಶದ ಆತಂಕ
ವಿಕಾಸದ ಹಾದಿಯಲ್ಲಿ ಜೀವಿಯೊಂದರ ವಂಶನಾಶ ಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ, ಮನುಷ್ಯ ಅಲೆಮಾರಿ ಬದುಕು ತ್ಯಜಿಸಿ ನೆಲೆನಿಂತ ದಿನದಿಂದಲೇ ಜೀವಜಾಲ ತತ್ತರಿಸಿದೆ. ಅಂದು ಆರಂಭಗೊಂಡ ಮಾರಣಹೋಮ ಇಂದಿಗೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.

ಮನುಷ್ಯ ಒಂದು ಸಣ್ಣಕಣವನ್ನು ಸೃಷ್ಟಿಸಲಾರ ಎನ್ನುವುದು ವಾಸ್ತವ. ನಿಸರ್ಗದಲ್ಲಿ ಹಸ್ತಕ್ಷೇಪ ಮಾಡಿ ಸಾವಿರಾರು ಪಕ್ಷಿಗಳ ಕೊರಳಿಗೆ ಉರುಳು ಬಿಗಿಯುತ್ತಿರುವುದು ದುರಂತ. ಜಗತ್ತಿಗೆ ಅಹಿಂಸೆಯ ಪಾಠ ಬೋಧಿಸಿದ ಹೆಮ್ಮೆ ಭಾರತಕ್ಕಿದೆ. ಆದರೆ, ದೇಶದಲ್ಲಿ ನಿತ್ಯವೂ ನಡೆಯುತ್ತಿರುವ ಜೀವಿಗಳ ಕಗ್ಗೊಲೆ ಬೆಚ್ಚಿಬೀಳಿಸುತ್ತದೆ.

2014ರ ಜುಲೈನಲ್ಲಿ ಪರಿಸರ ಸಂರಕ್ಷಣಾ ಅಂತರರಾಷ್ಟ್ರೀಯ ಒಕ್ಕೂಟವು (ಐಯುಸಿಎನ್‌) ಪ್ರಕಟಿಸಿರುವ ವರದಿ ಪ್ರಕಾರ ಭಾರತದಲ್ಲಿ 173 ಪ್ರಭೇದಕ್ಕೆ ಸೇರಿದ ಪಕ್ಷಿಗಳು ತನ್ನ ನೆಲೆ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಈ ಪೈಕಿ 15 ಪ್ರಭೇದದ ಪಕ್ಷಿಗಳು ತೀವ್ರ ಅಳಿವಿನಂಚಿಗೆ ತಲುಪಿವೆ. ಭಾರತದ ಜೌಗು ಪ್ರದೇಶಕ್ಕೆ ವಿದೇಶದಿಂದ ವಲಸೆ ಬರುವ ಬೇಯರ್‌ ಪೋಕಾರ್ಡ್‌, ಸೈಬೀರಿಯಾದ ಬೆಳ್ಳಕ್ಕಿ (ಸೈಬೀರಿಯನ್‌ ಕ್ರೇನ್‌) ಸಹ ಕೆಂಪುಪಟ್ಟಿಯಲ್ಲಿವೆ.

ಉಳಿದಂತೆ ಸ್ಪೂನ್‌ ಬಿಲ್ಲಿಡ್‌ ಸ್ಯಾಂಡ್‌ಪೈಪರ್‌, ವೈಟ್‌ ಬೆಲ್ಲೆಡ್‌ ಹೆರಾನ್‌, ಬೆಂಗಾಲ್‌ ಪ್ಲೋರಿಕಾನ್‌, ಗ್ರೇಟ್‌ ಇಂಡಿಯನ್ ಬಸ್ಟರ್ಡ್‌, ಜೋರ್ಡಾನ್ಸ್‌ ಕೋರ್ಸರ್‌, ಸೋಶಿಯೆಬಲ್‌ ಲ್ಯಾಪ್‌ವಿಂಗ್‌, ಫಾರೆಸ್ಟ್‌ ಔಲೆಟ್‌, ಇಂಡಿಯನ್‌ ವಲ್ಚರ್‌, ಕೆಂದಲೆ ರಣಹದ್ದು (ರೆಡ್‌ ಹೆಡೆಡ್‌ ವಲ್ಚರ್‌), ಸ್ಲೆಂಡರ್‌ ಬಿಲ್ಲಿಡ್‌ ವಲ್ಚರ್‌, ಬಿಳಿಬೆನ್ನಿನ ರಣಹದ್ದು(ವೈಟ್‌ ಬ್ಯಾಕ್ಡ್‌ ವಲ್ಚರ್‌), ಹಿಮಾಲಯನ್‌ ಕ್ವೇಲ್‌ ಹಾಗೂ ನಸುಗೆಂಪು ತಲೆಯ ಬಾತು (ಪಿಂಕ್‌ ಹೆಡೆಡ್‌ ಡಕ್‌) ಐಯುಸಿಎನ್‌ ಪ್ರಕಟಿರುವ ಕೆಂಪುಪಟ್ಟಿ­ಯಲ್ಲಿವೆ. ಈ ಪೈಕಿ ಹಿಮಾಲಯನ್‌ ಕ್ವೇಲ್‌, ನಸುಗೆಂಪು ತಲೆಯ ಬಾತು ಈಗಾಗಲೇ ನಿರ್ವಂಶಗೊಂಡಿವೆ.

ನೆಲೆಗೆ ಆಪತ್ತು
ಪರಿಸರದಲ್ಲಿ ಹಕ್ಕಿಗಳ ನೆಲೆಯ ನಾಶಕ್ಕೆ ಹಲವು ಕಾರಣಗಳಿವೆ. ಆಹಾರಕ್ಕಾಗಿ ನಡೆಯುವ ಸ್ಪರ್ಧೆ ಸಹ ವಂಶನಾಶದ ಕಾರಣಗಳಲ್ಲಿ ಒಂದಾಗಿದೆ. ನಿರ್ದಿಷ್ಟ ಪರಿಸರದಲ್ಲಿ ಎರಡು ಸಂಕುಲದ ನಡುವೆ ಒಂದೇ ಬಗೆಯ ಆಹಾರಕ್ಕಾಗಿ ತೀವ್ರ ಸ್ಪರ್ಧೆ ನಡೆಯುವುದು ಸೃಷ್ಟಿ ನಿಯಮ. ಆ ವೇಳೆ ಗೆಲ್ಲುವ ಬಲಿಷ್ಠ ಜೀವಿ ಮಾತ್ರವೇ ಆ ಪ್ರದೇಶದಲ್ಲಿ ನೆಲೆಗೊಳ್ಳಲು ಅರ್ಹತೆ ಪಡೆಯುತ್ತದೆ. ನಿಸರ್ಗದ ಈ ನಿಯಮಕ್ಕೆ ಪಕ್ಷಿಗಳು ಸಹ ಹೊರತಲ್ಲ.

ಒಂದು ಪ್ರದೇಶದಲ್ಲಿ ಸಿಗುವ ಆಹಾರದ ಮೂಲಗಳಿಗೆ ಹೊಂದಿಕೊಳ್ಳಲು ಕೆಲವೊಮ್ಮೆ ಪಕ್ಷಿಗಳಿಗೆ ಸಾಧ್ಯವಾಗುವುದಿಲ್ಲ. ಆಗ ಅದು ಪ್ರಕೃತಿಯಲ್ಲಿ ಬದುಕಲು ಅರ್ಹತೆ ಕಳೆದುಕೊಳ್ಳುತ್ತದೆ. ಇನ್ನೊಂದೆಡೆ ಆದಿಕಾಲದಿಂದಲೂ ಮನುಷ್ಯ ನಡೆಸುತ್ತಿರುವ ವಿವೇಚನಾರಹಿತ ‘ಬೇಟೆ’ ಪಕ್ಷಿಗಳ ಬದುಕಿಗೆ ಕಂಟಕಪ್ರಾಯವಾಗಿದೆ. ಪ್ರಾಣಿಯೊಂದು ಸಮುದಾಯವಾಸಿಯಾದಾಗ ಇತರೇ ಪ್ರಾಣಿಗಳಿಂದಲೂ ತನ್ನನ್ನು ರಕ್ಷಿಸಿಕೊಳ್ಳಬೇಕಿದೆ. ವೈರಿಗಳಿಂದ ರಕ್ಷಣೆ ಪಡೆಯಲು ವಿಫಲವಾಗುವ ಜೀವಿಯ ಸಂಕುಲ ನಿರ್ವಂಶವಾಗುತ್ತದೆ.

ಮಾನವನ ಅಭಿವೃದ್ಧಿ ಕೇಂದ್ರಿತ ಪ್ರಜ್ಞೆಯೇ ಪಕ್ಷಿಗಳ ವಂಶನಾಶಕ್ಕೆ ಪ್ರಧಾನ ಕಾರಣ. ಆಳುವ ಸರ್ಕಾರಗಳು ‘ಅಭಿವೃದ್ಧಿ’ಯ ಅರವಳಿಕೆ ಮದ್ದು ಚುಚ್ಚಿಕೊಂಡಿವೆ. ಸರ್ಕಾರಗಳಿಗೆ ಜೀವವೈವಿಧ್ಯ ಕುರಿತ ತಿಳಿವಳಿಕೆ ಅತ್ಯಲ್ಪ. ಮನುಷ್ಯ ಪರಿಸರದ ಮೇಲೆ ಹೇರುತ್ತಿರುವ ಒತ್ತಡದ ವೇಗೋತ್ಕರ್ಷಕ್ಕೆ ಕೊನೆಯಿಲ್ಲ. ಇದರಿಂದ ಪಕ್ಷಿ ಸಂಕುಲ ಯಾವ ಪ್ರಮಾಣದಲ್ಲಿ ತನ್ನ ನೆಲೆ ಕಳೆದುಕೊಳ್ಳುತ್ತದೆ ಎಂದು ಊಹಿಸುವುದು ಕಷ್ಟಕರ. ಜೌಗು ಪ್ರದೇಶ ನೀರು ಹಕ್ಕಿಗಳಿಗೆ ಪ್ರಶಸ್ತ್ಯವಾದ ನೆಲೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಚಟುಚಟಿಕೆ ಕೈಗೊಳ್ಳುವುದು ಮೂರ್ಖತನ. ಸರ್ಕಾರದ ಅನುದಾನ ವ್ಯಯವಾಗುತ್ತದೆಯೇ ಹೊರತು ಅಭಿವೃದ್ಧಿ ಸಾಧ್ಯವಾಗುವುದಿಲ್ಲ.

ಅಭಿವೃದ್ಧಿಯ ರೇಖೆ ಎಳೆಯಲು ಹೋದಾಗ ನೀರು ಆಶ್ರಯಿಸಿ ಬದುಕುವ ಪಕ್ಷಿಗಳ ನೆಲೆ ನಾಶವಾಗುವುದು ನಿಶ್ಚಿತ. ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಜೌಗು ಪ್ರದೇಶದಲ್ಲಿನ ಜೀವಜಾಲ ಅಪಾಯಕ್ಕೆ ಸಿಲುಕಿದೆ. ಕೆರೆ, ಕಟ್ಟೆಗಳು ಬತ್ತಿಹೋಗಿವೆ. ಕೆಲವು ಅಪಾಯಕಾರಿ ರಾಸಾಯನಿಕಗಳಿಂದ ತುಂಬಿಹೋಗಿವೆ. ಟ್ರ್ಯಾಕ್ಟರ್‌, ಜೆಸಿಬಿಯಂತಹ ಬೃಹತ್‌ ಯಂತ್ರಗಳ ಬಾಯಿಗೆ ಸಿಲುಕಿ ಹುಲ್ಲುಗಾವಲು ಪ್ರದೇಶ ಕೃಷಿ ಭೂಮಿಯಾಗಿದೆ. ಉಷ್ಣವಲಯದ ಬಹುತೇಕ ಅರಣ್ಯ ಪ್ರದೇಶ ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿದೆ.

ಅರಣ್ಯ ನಾಶಕ್ಕೆ ಕೊನೆ ಎಂಬುದೇ ಇಲ್ಲ. ಕಾಡಿನಲ್ಲಿರುವ ಮರವೊಂದು ನಾಶವಾದರೆ ಅದನ್ನು ಅವಲಂಬಿಸಿರುವ 30ಕ್ಕೂ ಹೆಚ್ಚು ಜೀವಿಗಳು ಅಪಾಯಕ್ಕೆ ಸಿಲುಕುತ್ತವೆ ಎನ್ನುತ್ತಾರೆ ಜೀವ ವಿಜ್ಞಾನಿಗಳು. ಇವುಗಳಲ್ಲಿ ಮರಗಳನ್ನೇ ಆಶ್ರಯಿಸಿ ಜೀವಿಸುವ ಮಂಗಟ್ಟೆ, ಗಿಣಿ, ಮರಕುಟಿಗದಂತಹ ಪಕ್ಷಿಗಳು ಸೇರಿವೆ. 

ಸರ್ಕಾರ, ಉದ್ದಿಮೆದಾರರಿಗೆ ಲಾಭವೇ ಮೂಲ ಧ್ಯೇಯ. ಹೀಗಾಗಿ, ಬೆಟ್ಟಗುಡ್ಡಗಳು, ಹುಲ್ಲುಗಾವಲು, ಅರಣ್ಯದ ಒಡಲು ಗಣಿಗಾರಿಕೆಯಿಂದ ಛಿದ್ರಗೊಳ್ಳುತ್ತಿದೆ. ಅದಿರು ತೆಗೆಯಲು ಬಳಸುವ ಯಂತ್ರಗಳು, ಸ್ಫೋಟಕಗಳ ಶಬ್ದಕ್ಕೆ ನೆಲ ಆಶ್ರಯಿಸಿ ಬದುಕುವ ಪಕ್ಷಿಗಳು ಬೆಚ್ಚಿಬೀಳುತ್ತಿವೆ. ನೆಲದಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ತಾಯ್ತನದ ಸುಖ ಅನುಭವಿಸುವ ಭಾಗ್ಯ ಅವುಗಳಿಗೆ ಇಲ್ಲದಂತಾಗಿದೆ.

ಹುಲಿ ಪ್ರೀತಿ ಸಾಕೇ?
ಪಕ್ಷಿಗಳು ಕಾಲದೇಶಗಳನ್ನು ಮೀರಿದ ವಿಶ್ವಮಾನವರು. ಅವುಗಳ ವಿಶ್ವಪರ್ಯಟನೆಗೆ ಅಡೆತಡೆ ಇಲ್ಲ. ಯಾವುದೇ, ರಾಷ್ಟ್ರದ ಕಾನೂನುಗಳಿಗೆ ಅವು ತಲೆಬಾಗುವುದಿಲ್ಲ. ಪ್ರತಿವರ್ಷ ನಿರ್ದಿಷ್ಟ ವೇಳೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಕ್ಕಿಗಳು ಪಯಣಿಸುತ್ತವೆ. ನಿರ್ದಿಷ್ಟ ವೇಳೆ ಪೂರ್ಣಗೊಂಡ ಬಳಿಕ ವಾಪಸ್‌ ತವರಿಗೆ ಮರಳುತ್ತವೆ. ಈ ಯಾತ್ರೆಗೆ ವಲಸೆ ಎನ್ನುತ್ತೇವೆ.

ಭಾರತಕ್ಕೆ ಪ್ರತಿವರ್ಷ ವಿವಿಧ ದೇಶಗಳಿಂದ ಸಾವಿರಾರು ಪಕ್ಷಿಗಳು ವಲಸೆ ಯಾತ್ರೆ ಕೈಗೊಳ್ಳುತ್ತವೆ. ಈ ಪೈಕಿ ಸೈಬೀರಿಯಾ ಬೆಳ್ಳಕ್ಕಿಯೂ ಒಂದಾಗಿದೆ. ಸೈಬೀರಿಯಾದ ಕೊರೆಯುವ ಹಿಮವನ್ನು ತೊರೆದು ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿ ಈ ಬೆಳ್ಳಕ್ಕಿ ಭರತಖಂಡಕ್ಕೆ ವಲಸೆ ಬರುತ್ತದೆ. ಸುಮಾರು 5 ಸಾವಿರ ಕಿ.ಮೀ. ದೂರ ಹಾರಿಬರುವ ಬೆಳ್ಳಕ್ಕಿಯ ವಲಸೆ ಸೋಜಿಗವೇ ಸರಿ. ಸೈಬೀರಿಯಾದಿಂದ ಬರುವ ಈ ಬೆಳ್ಳಕ್ಕಿಗಳಿಗೆ ರಾಜಸ್ತಾನದ ರಾಷ್ಟ್ರೀಯ ಉದ್ಯಾನಗಳೇ ಆಸರೆ. ಕಳೆದ ಎರಡು ವರ್ಷದಿಂದ ಬೆಳ್ಳಕ್ಕಿಗಳು ವಲಸೆ ಬರುವ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಕೇಂದ್ರ, ರಾಜ್ಯ ಸರ್ಕಾರ, ಅರಣ್ಯ ಇಲಾಖೆಯು ಪರಿಸರ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡುತ್ತಿವೆ. ಈ ಪ್ರವಾಸೋದ್ಯಮ ಹುಲಿ ಕೇಂದ್ರಿತವಾಗಿರುವುದು ವಿಪರ್ಯಾಸ. ಹುಲಿ, ಆನೆ, ಚಿರತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಎನ್ನುವುದು ಸತ್ಯ. ಆದರೆ, ಈ ಪ್ರಾಣಿಗಳಿಗೆ ನೀಡಿರುವಷ್ಟೇ ಪ್ರಾಧಾನ್ಯ ಹಕ್ಕಿಗಳ ಸಂರಕ್ಷಣೆಗೆ ಸಿಗದಿರುವುದು ದುರಂತ.

ಭಾರತದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಪಾಯದ ಅಂಚಿನಲ್ಲಿರುವ ಶೇ 50ರಷ್ಟು ಪಕ್ಷಿಗಳು ಕಾಣಸಿಗುವುದಿಲ್ಲ ಎಂದು ಇತ್ತೀಚಿನ ವರದಿಗಳು ಹೇಳುತ್ತವೆ. ಸಫಾರಿ ವಾಹನ ಏರಿ ಹುಲಿಗಾಗಿ ಕಾತರಿಸುವ ಮನಸ್ಸುಗಳಿಗೆ ಹಕ್ಕಿಗಳ ಇಂಪಾದ ಕೂಗು ಕೇಳುವ ವ್ಯವಧಾನ ಬರುವುದು ಯಾವಾಗಲೊ?

ದೇಶದಲ್ಲಿ ಸುಮಾರು 446 ಪಕ್ಷಿ ತಾಣ ಗುರುತಿಸಲಾಗಿದೆ. ಈ ಪೈಕಿ ಅರ್ಧದಷ್ಟು ತಾಣಗಳು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಇದು ಕೂಡ ಪಕ್ಷಿಗಳು ಅಳಿವಿನಂಚಿಗೆ ತಲುಪಿರುವ ಕಾರಣಗಳಲ್ಲಿ ಒಂದಾಗಿದೆ. ಹಕ್ಕಿಗಳಿಗೂ ಭೂಮಂಡಲದಲ್ಲಿ ಜೀವಿಸುವ ಹಕ್ಕಿದೆ. ಇದನ್ನು ನಿರ್ಮೂಲನೆ ಮಾಡುವ ಸ್ವಾತಂತ್ರ್ಯ ಮನುಷ್ಯನಿಗೆ ಇಲ್ಲ. ಜೀವವೈವಿಧ್ಯ ಮರೆಯಾದರೆ ಮಾನವ ಒಂಟಿಯಾಗುತ್ತಾನೆ. ಈ ಕಟುಸತ್ಯ ಅರಿತಾಗಲಷ್ಟೇ ಪಕ್ಷಿ ಸಂಕುಲ ಉಳಿಯಲಿದೆ.

ಡಿಡಿಟಿ ಸೃಷ್ಟಿಸಿದ ಅವಾಂತರ
ಸರ್ಕಾರ ಕೃಷಿಯನ್ನು ಉದ್ಯಮವಾಗಿ ರೂಪಿಸಲು ಹೊರಟಿದೆ. ಇದರಿಂದ ಕೀಟನಾಶಕ, ಕಳೆನಾಶಕದ ಬಳಕೆ ಹೇರಳವಾಗಿದೆ. ಕೀಟನಾಶಕ ಹಕ್ಕಿಗಳ ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಆಹಾರ ಧಾನ್ಯಗಳಲ್ಲೂ ಕೀಟನಾಶಕ ಅಂಶ ಸೇರಿರುತ್ತದೆ. ಕೀಟಗಳು ಕೀಟನಾಶಕ ತಿಂದು ಜೀರ್ಣಿಸಿಕೊಂಡಿರುತ್ತವೆ. ಇಂತಹ ಕೀಟಗಳನ್ನು ತಿನ್ನುವ ಪಕ್ಷಿಗೆ ರಾಸಾಯನಿಕವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಇದರಿಂದ ಹಕ್ಕಿಯ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗುವ ಸಂಭವ ಹೆಚ್ಚು. ಹಕ್ಕಿಗಳು ಇಡುವ ಮೊಟ್ಟೆಗಳ ಮೇಲೆ ಕೀಟನಾಶಕ ಗಂಭೀರ ಪರಿಣಾಮ ಬೀರುತ್ತದೆ.

ಇದಕ್ಕೆ 1940ರ ವೇಳೆ ಅಮೆರಿಕದಲ್ಲಿ ರಾಬಿನ್‌ ಹಕ್ಕಿಗಳು ಎದುರಿಸಿದ ದಾರುಣ ಸ್ಥಿತಿಯೇ ಸಾಕ್ಷಿ. ಭಾರತದಲ್ಲಿ ಇರುವಂತೆ ಅಲ್ಲಿಯೂ ರಾಬಿನ್‌(ಮಡಿವಾಳ) ಹಕ್ಕಿಗಳಿವೆ. ಚೈತ್ರಮಾಸದ ಆರಂಭದ ಸೂಚಕವಾಗಿ ಇವು ಹಾಡುತ್ತವೆ. ಆದರೆ, ಆ ವರ್ಷ ಚಳಿಗಾಲ ಮುಗಿದರೂ ಹಕ್ಕಿಗಳ ರಾಗಾಲಾಪನೆ ಹೊರಬರಲಿಲ್ಲ. ಇದು ಪಕ್ಷಿ ಪ್ರಿಯರಿಗೆ ಗಾಬರಿ ಹುಟ್ಟಿಸಿತು. ಕೊನೆಗೆ, 1954ರಲ್ಲಿ ಮೆಹ್ನೆರ್‌ ಎಂಬ ವಿದ್ಯಾರ್ಥಿ ಈ ನಿಗೂಢ ಭೇದಿಸಲು ಮುಂದಾದ.

ಅಮೆರಿಕದಲ್ಲಿ ಡಿಡಿಟಿ (ಡೈಕ್ಲೋರೋ ಡೈಫಿನಲ್‌ ಟ್ರೈಕ್ಲೋರೋ ಈಥೇನ್‌) ಸಿಂಪಡಣೆಯಾದ ಪ್ರದೇಶಗಳಲ್ಲಿ ರಾಬಿನ್‌ಗಳು ದಾರುಣವಾಗಿ ಸಾವಿಗೀಡಾಗುತ್ತಿದ್ದವು. ಈ ಪಕ್ಷಿಗಳ ಮೊಟ್ಟೆಗಳಿಂದ ಮರಿಗಳು ಹೊರಬರುತ್ತಿರಲಿಲ್ಲ. ಮೊಟ್ಟೆಗಳು ಲೋಳೆಯಾಗುತ್ತಿರುವುದು ಕಂಡುಬಂದಿತು. ಅದಾಗಲೇ ಡಿಡಿಟಿ ರಾಬಿನ್‌ಗಳ ಕೊರಳು ಬಿಗಿದಿತ್ತು.

ಎರೆಹುಳು ರಾಬಿನ್‌ಗಳ ಮುಖ್ಯ ಆಹಾರ. ಡಿಡಿಟಿ ಅಂಶ ಮಣ್ಣಿನಲ್ಲಿ ಸೇರಿಹೋಗಿತ್ತು. ಹೆಚ್ಚು ಎರೆಹುಳು ತಿನ್ನುತ್ತಿದ್ದ ರಾಬಿನ್‌ಗಳು ಸತ್ತು ಹೋಗುತ್ತಿದ್ದವು. ಕಡಿಮೆ ಪ್ರಮಾಣದಲ್ಲಿ ಹುಳು ತಿನ್ನುತ್ತಿದ್ದ ರಾಬಿನ್‌ಗಳ ದೇಹದೊಳಕ್ಕೆ ಡಿಡಿಟಿ ಸೇರಿ ಅವುಗಳ ಸಂತಾನೋತ್ಪತ್ತಿಗೆ ಸಂಚಕಾರ ತಂದಿತ್ತು. ದೃಢವಾಗಿ ಇರಬೇಕಿದ್ದ ಮೊಟ್ಟೆಗಳ ಕವಚ ತೆಳುವಾಗಿ ಹಕ್ಕಿಗಳ ಬದುಕು ಸಂಕಷ್ಟಕ್ಕೆ ಸಿಲುಕಿತು.
ಡಿಡಿಟಿ ಆಹಾರ ಜಾಲದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತು. ಅಲ್ಲಿನ ಹಸಿಬಾಣಂತಿಯರ ಎದೆಹಾಲು ಸೇರಿರುವ ಅಂಶ ಬಯಲಾದಾಗ ಇಡೀ ಅಮೆರಿಕವೇ ಬೆಚ್ಚಿಬಿದ್ದಿತ್ತು. ಅಂತಿಮವಾಗಿ 1960ರಲ್ಲಿ ಸಂಪೂರ್ಣವಾಗಿ ಡಿಡಿಟಿ ಬಳಕೆ ನಿಷೇಧಿಸಲಾಯಿತು. ದುರಂತವೆಂದರೆ ದಾಸ್ತಾನು ಇದ್ದ ಡಿಡಿಟಿಯನ್ನು ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡಿ ಅಮೆರಿಕ ಕೈತೊಳೆದುಕೊಂಡಿತು.

ಡಿಡಿಟಿಯು 2ನೇ ಮಹಾಯುದ್ಧದಲ್ಲಿ ಹೇನುನಾಶಕವಾಗಿ ಬಳಕೆಯಾಗಿತ್ತು. ಧಾನ್ಯ ನಾಶಮಾಡುವ ಕೀಟಗಳನ್ನು ಕೊಲ್ಲುವ ಶಕ್ತಿ ಇದಕ್ಕಿದೆ ಎಂಬ ಪ್ರಚಾರ ಗಿಟ್ಟಿಸಿಕೊಂಡಿತ್ತು. ಕೊನೆಗೆ, ಇಡೀ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡಿತು. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಐವತ್ತು ವರ್ಷ ಕಳೆದರೂ ಡಿಡಿಟಿ ಬಳಕೆಗೆ ಕಡಿವಾಣ ಬಿದ್ದಿಲ್ಲ.ಡೈಕ್ಲೋಫಿನಾಕ್‌ ನೋವು ನಿವಾರಕ ಔಷಧಿ. ಪಶುಗಳಿಗೆ ನೋವು ನಿವಾರಕವಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ 2006ರಲ್ಲಿಯೇ ಇದರ ಬಳಕೆ ನಿಷೇಧಿಸಲಾಗಿದೆ. ಆದರೆ, ಬಳಕೆಗೆ ಕಡಿವಾಣ ಬಿದ್ದಿಲ್ಲ. ಇಂದಿಗೂ ಡೈಕ್ಲೋಫಿನಾಕ್‌ ಸೋಡಿಯಂ ಅನ್ನು ಪಶುಗಳಿಗೆ ನೋವು ನಿವಾರಕವಾಗಿ ಬಳಸಲಾಗುತ್ತಿದೆ.

ಪಶುಗಳಿಗೆ ಒಂದು ಅಥವಾ ಎರಡು ವಾರ ಕಾಲ ಈ ಔಷಧಿ ನೀಡುವುದು ಉಂಟು. ಇಂತಹ ಜಾನುವಾರು ಮೃತಪಟ್ಟರೆ ಅದರಲ್ಲಿ ಔಷಧಿಯ ಪ್ರಮಾಣ ಹೆಚ್ಚಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡೈಕ್ಲೋಫಿನಾಕ್‌ ಅಂಶವಿರುವ ಸತ್ತ ಪಶುಗಳನ್ನು ಭಕ್ಷಿಸುವ ಪ್ರಾಣಿಗಳು, ರಣಹದ್ದುಗಳು ತೀವ್ರ ಬಳಲಿಕೆಗೊಂಡು ಜೀವಕಳೆದುಕೊಳ್ಳುತ್ತವೆ. ದೇಶದಲ್ಲಿ ರಣಹದ್ದುಗಳ ವಿನಾಶಕ್ಕೆ ಈ ಔಷಧಿ ಕಾರಣವಾಗಿದೆ. ರಾಬಿನ್‌ ಹಕ್ಕಿಗಳಂತೆ ರಣಹದ್ದುಗಳಿಗೂ ಈಗ ದಾರುಣ ಸ್ಥಿತಿ ಎದುರಾಗಿದೆ.

ರಣಹದ್ದುಗಳು ಅಪೂರ್ವ ಪಕ್ಷಿ ಸಂಕುಲ. ಅವುಗಳ ಗಾಂಭೀರ್ಯ ನಡುಗೆ ಬೆರಗು ಹುಟ್ಟಿಸುತ್ತದೆ. ತನ್ನ ದೂರದರ್ಶಕ ಕಣ್ಣುಗಳಿಂದ ಆಗಸದಲ್ಲಿ ಎಷ್ಟೇ ಎತ್ತರದಲ್ಲಿದ್ದರೂ ನೆಲವನ್ನು ಶೋಧಿಸಿ ಆಹಾರ ಹುಡುಕುವ ಈ ಮೂಕ ಹಕ್ಕಿಗಳಿಗೆ ಡೈಕ್ಲೋಫಿನಾಕ್‌ ಔಷಧಿಯು ತನ್ನ ಕರುಳು ಹಿಂಡುತ್ತಿರುವುದು ಗೊತ್ತಿಲ್ಲ!

ಕಣ್ಮರೆಯಾದ ಬಸ್ಟರ್ಡ್‌!

ದೊರವಾಯನ ಹಕ್ಕಿಗಳಿಗೆ ಸಂಕೋಚ ಹೆಚ್ಚು. ಮನುಷ್ಯನ ಮುಖ ಕಂಡ ತಕ್ಷಣವೇ ಹುಲ್ಲಿನ ಪೊದೆಗಳಲ್ಲಿ ಮರೆಯಾಗುತ್ತವೆ. ರಾಣೇಬೆನ್ನೂರಿನಲ್ಲಿ ವನ್ಯಜೀವಿಧಾಮವಿದೆ. ಅಲ್ಲಿ ಈಗ ಈ ಹಕ್ಕಿಗಳು ಕಾಣಸಿಗುವುದಿಲ್ಲ. ಅಧಿಕಾರಿಗಳು ಪ್ರದರ್ಶಿಸುವ ಅಜ್ಞಾನ ಹಕ್ಕಿಗಳ ನೆಲೆಗೆ ಆಪತ್ತು ತರುತ್ತದೆ ಎನ್ನುವುದಕ್ಕೆ ಈ ವನ್ಯಜೀವಿಧಾಮವೇ ಮೂಕಸಾಕ್ಷಿ.

ಅಧಿಕಾರಿಯೊಬ್ಬರ ತಲೆಯಲ್ಲಿ ದೊರವಾಯನ ಹಕ್ಕಿಗಳಿಗೆ ನೆರಳು ಬೇಡವೇ? ಎಂಬ ಆಲೋಚನೆ ಹೊಳೆಯಿತು. ಕೂಡಲೇ, ವನ್ಯಜೀವಿಧಾಮದಲ್ಲಿ ನೀಲಗಿರಿ ನೆಟ್ಟರು. ಅಲ್ಲಿಂದಲೇ ಅವುಗಳ ನೆಲೆಗೆ ಸಂಚಕಾರ ಆರಂಭಗೊಂಡಿತು.
1990ರ ವೇಳೆ ಅರಣ್ಯ ವೀಕ್ಷಕನೊಬ್ಬ ವನ್ಯಜೀವಿಧಾಮದಲ್ಲಿ ಓಡಾಡುವಾಗ ದೊರವಾಯನ ಹಕ್ಕಿಯ ಜೋಡಿಯೊಂದು ಕಾಣಿಸಿಕೊಂಡಿತು. ಹೆಣ್ಣು ಹಕ್ಕಿಯು ಮೊಟ್ಟೆ ಇಟ್ಟಿರುವುದು ಕಣ್ಣಿಗೆ ಬಿತ್ತು. ಆತ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ. ಹಿರಿಯ ಅಧಿಕಾರಿಗಳ ವಿಶ್ವಾಸಗಳಿಸುವ ಹುಮ್ಮಸ್ಸಿನಲ್ಲಿ ತಾನು ಪರೋಕ್ಷವಾಗಿ ಹಕ್ಕಿ ಬದುಕಿಗೆ ಸಂಚಕಾರ ತರುತ್ತಿದ್ದೇನೆ ಎನ್ನುವ ಚಿಂತನೆ ಅವನಿಗೆ ಹೊಳೆಯಲಿಲ್ಲ.

ಹಕ್ಕಿಗಳು ಮೊಟ್ಟೆ ಇಟ್ಟಿರುವ ಸುದ್ದಿ ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿಯಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಮುಟ್ಟಿತು. ಕ್ಯಾಮೆರಾದೊಂದಿಗೆ ರಾಣೇಬೆನ್ನೂರಿನತ್ತ ಅಧಿಕಾರಿಗಳ ದಂಡು ಬಂತು. ಗೂಡು, ಹಕ್ಕಿಗಳ ಫೋಟೊ ತೆಗೆಯಲು ಹಗಲು, ರಾತ್ರಿ ಕಾದುಕುಳಿತರು. ತನ್ನ ನೆಲೆಯಲ್ಲಿ ಬೂಟಿನ ಸದ್ದು ಕೇಳಿದ ದೊರವಾಯನ ಹಕ್ಕಿಗಳು ವಿಹ್ವಲಗೊಂಡವು.

ಅಧಿಕಾರಿಗಳು ಗುಡಾರ ಕಳಚಿಕೊಂಡು ಹೊರಡಲು ಸಿದ್ಧರಲಿಲ್ಲ. ಮೊಟ್ಟೆಗಳಿಗೆ ನೀವೇ ಕಾವು ನೀಡಿ ಎಂಬರ್ಥದಲ್ಲಿ ಗೂಡನತ್ತ ಅವು ಬರಲೇ ಇಲ್ಲ. ಅಂದು ವನ್ಯಜೀವಿಧಾಮದಲ್ಲಿ ಕಣ್ಮರೆಯಾದ ದೊರವಾಯನ ಹಕ್ಕಿಗಳು ಇಂದಿಗೂ ಅಲ್ಲಿ ಕಾಣಿಸಿಕೊಂಡಿಲ್ಲ!
ಮನುಷ್ಯನ ಹಸ್ತಕ್ಷೇಪದಿಂದ ನೀರು ಹಕ್ಷಿಗಳ ನೆಲೆಯೂ ಸಂಕುಚಿತಗೊಂಡಿದೆ. ಇದಕ್ಕೆ ಮೀನುಗಳನ್ನು ತಿಂದು ಬದುಕುವ ಮೀನು ಗಿಡುಗಗಳು(ಫಿಶ್‌ ಈಗಲ್‌) ಕಣ್ಣೆದುರಿಗೆ ನಿಲ್ಲುತ್ತವೆ.

ದೇಶದ ಬಹುತೇಕ ನದಿಗಳ ದಂಡೆಯ ಅಕ್ಕಪಕ್ಕದಲ್ಲಿ ಬೃಹತ್‌ ಕೈಗಾರಿಕೆಗಳು ತಲೆಎತ್ತಿವೆ. ವಿಷಯುಕ್ತ ರಾಸಾಯನಿಕ ನದಿಗೆ ಸೇರುತ್ತಿದೆ. ಆಹಾರ ಸರಪಳಿ ಸೇರುವ ಈ ವಿಷ ಮೀನುಗಳು ಸೇರಿದಂತೆ ಜಲಚರಗಳನ್ನು ಕೊಲ್ಲುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT