ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಮೂಲಕೃತಿಗಳ ತರ್ಜುಮೆಯಾಗಲಿ

ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಸಲಹೆ
Last Updated 5 ಮೇ 2015, 6:01 IST
ಅಕ್ಷರ ಗಾತ್ರ

ಮೈಸೂರು: ಬುದ್ಧನ ಮೂಲಕೃತಿಗಳೆಲ್ಲಾ ಪಾಳಿ ಭಾಷೆಯಲ್ಲಿ ರಚನೆಯಾಗಿದ್ದು, ಅವನ್ನು ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರವು ಬುದ್ಧ ಪೂರ್ಣಮಾ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಬುದ್ಧಚಿಂತನೆಯ ಸಾಂಸ್ಕೃತಿಕ ಮಹತ್ವ’ ವಿಷಯ ಕುರಿತು ಅವರು ಮಾತನಾಡಿದರು.

‘ಬುದ್ಧನ ಬಗ್ಗೆ ನಾವು ಈವರೆಗೆ ಓದಿರುವ ಅನೇಕ ಕೃತಿಗಳೆಲ್ಲವೂ ಸಂಸ್ಕೃತಕ್ಕೆ ಆಗಿರುವ ಅನುವಾದವಾಗಿದೆ. ಆದರೆ, ಪಾಳಿ ಭಾಷೆಯಲ್ಲಿನ ಬುದ್ಧನ ಅನೇಕ ಕೃತಿಗಳು ಇಂದಿಗೂ ಅನುವಾದವಾಗಿಲ್ಲ. ಇದಕ್ಕೆ ಕಾರಣ, ಪಾಳಿ ಭಾಷೆಯ ಬಗ್ಗೆ ನಮಗಿರುವ ಅಜ್ಞಾನ. ಪಾಳಿ ಭಾಷೆಯನ್ನು ಗಂಭೀರವಾಗಿ ಅಧ್ಯಯನ ಮಾಡಿ, ಬುದ್ಧನ ಕೃತಿಗಳನ್ನು ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ಭಾಷೆಗಳಿಗೆ ತರ್ಜುಮೆ ಮಾಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಭಗವದ್ಗೀತೆಯ ತಿರಸ್ಕಾರ ಸಲ್ಲ:  ‘ಭಗವದ್ಗೀತೆಯ ಬಗ್ಗೆ ಇತ್ತೀಚೆಗೆ ಅಸಹನೆ ಹುಟ್ಟಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅದನ್ನು ಸುಡುವ ಅಗತ್ಯವಿಲ್ಲ. ಅದರಲ್ಲಿ ಕೆಟ್ಟ ಅಂಶಗಳಿವೆ ಎನ್ನುವುದು ನಿಜ. ಹಾಗೆಂದು, ಅದನ್ನು ಸುಡುವ ಮೂಲಕ ಒಳ್ಳೆಯ ಅಂಶಗಳನ್ನು ಕಳೆದುಕೊಳ್ಳಬಾರದು. ವೈದಿಕ ಸಾಹಿತ್ಯದಲ್ಲಿ ಅಡಿಯಿಂದ ಮುಡಿಯವರೆಗೂ ವಿನಾಶಕಾರಿ ಚಿಂತನೆಯೇ ತುಂಬಿದೆ. ಆ ರೀತಿಯ ಚಿಂತನೆಗಳನ್ನು ಸುಡುವ ಮೂಲಕ ನಮ್ಮ ಪ್ರತಿಭಟನೆ ಸೂಚಿಸ ಬೇಕು’ ಎಂದು ಸಲಹೆ ನೀಡಿದರು.

ದೇವರ ಚಿಂತನೆಯ ಹೆಸರಿನಲ್ಲಿ ಮೌಢ್ಯ ಪ್ರಚಾರ, ಅಸ್ಪೃಶ್ಯತೆಯ ಆಚರಣೆ ಮಾಡುವ ಹುನ್ನಾರವನ್ನು ಬುದ್ಧ ಪರಿಣಾಮಕಾರಿಯಾಗಿ ಬಣ್ಣಿಸಿದ್ದಾನೆ. ಪ್ರಶ್ನಿಸಬೇಕು, ಆಲೋಚಿಸಬೇಕು. ಹೃದಯಕ್ಕೆ ಒಪ್ಪಿಗೆಯಾದ ಬಳಿಕ ಸರಿಯಿ ದ್ದರೆ ಒಪ್ಪಿಕೊಳ್ಳಬೇಕು. ಹಾಗಾದಾಗ ಮಾತ್ರ ಮಾನವಪ್ರಜ್ಞೆಗೆ ಬೆಲೆ, ಜೀವಂತ ವಾಗಿದೆ ಎನ್ನುವುದರ ಪ್ರತೀಕ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹೇಶ್‌ ಹರವೆ ‘ಬುದ್ಧ ಚಿಂತನೆ ಮತ್ತು ಕನ್ನಡ ಸಂವೇದನೆ’ ಕುರಿತು ಉಪನ್ಯಾಸ ನೀಡಿದರು. ಡಾ.ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ನರೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT