ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

Last Updated 15 ಡಿಸೆಂಬರ್ 2014, 20:01 IST
ಅಕ್ಷರ ಗಾತ್ರ

ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ): ಬ್ಯಾರಿ ಭಾಷಾ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರೊ.ಬಿ.ಎಂ.ಇಚ್ಲಂಗೋಡು ಅವರನ್ನು 2014ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಬಿ.ಎ.ಮೊಹಮ್ಮದ್‌ ಹನೀಫ್‌ ಸೋಮವಾರ ಇಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಬಿ.ಎ.ಸಂಶುದ್ದೀನ್‌ ಮಡಿಕೇರಿ ಮತ್ತು ಕಲೆ, ಶಿಕ್ಷಣ ಕ್ಷೇತ್ರದ ಸಾಧಕ ಮುಹಮ್ಮದ್‌ ಬ್ಯಾರಿ ಎಡಪದವು ಅವರಿಗೂ ಈ ಬಾರಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.

ಇಚ್ಲಂಗೋಡು ಅವರು ತುಳುನಾಡಿನ ಬ್ಯಾರಿ ಸಂಸ್ಕೃತಿ, ಮೂಡುಬಿದಿರೆ, ಕಾರ್ಕಳದ ಸಾಂಸ್ಕೃತಿಕ ಪರಿಸರ, ಮಂಗಳೂರಿನ ಮುಸ್ಲಿಮರ ಕುರಿತ ಪಕ್ಷಿನೋಟ ಮೊದಲಾದ ವಿಚಾರಗಳಲ್ಲಿ ಸಂಶೋಧನಾ ಅಧ್ಯಯನ ಮಾಡಿದ್ದಾರೆ. ಸಂಶುದ್ದೀನ್‌ ಮಡಿಕೇರಿ ಅವರು, ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು, ನಾಟಕಗಳಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ಬ್ಯಾರಿ ಸಾಹಿತ್ಯ ಅಕಾಡೆಮಿ ರಚನೆಯಾದಾಗ ಅದರ ಮೊದಲ ತಂಡದ ಸದಸ್ಯರಾಗಿ ಮೂರು ವರ್ಷ ಸೇವೆಯನ್ನೂ ಸಲ್ಲಿಸಿದ್ದಾರೆ. ಮುಹಮ್ಮದ್‌ ಬ್ಯಾರಿ ಅವರು 350 ಶಾಲೆಗಳ ಒಕ್ಕೂಟವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಆಂಗ್ಲಮಾಧ್ಯಮ ಶಾಲಾ ಒಕ್ಕೂಟದ ಅಧ್ಯಕ್ಷರಾಗಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮರಿಯಮ್‌ ಇಸ್ಮಾಯಿಲ್‌, ಇಸ್ಮಾಯಿಲ್‌ ಅಜಾದ್‌ ಮೂಡಿಗೆರೆ, ಡಾ.ಎ.ಎಂ.ಶ್ರೀಧರನ್‌, ಉಮರ್‌ ಫಾರೂಕ್‌ ಬಿಕ್ಕೋಡು, ದೇಶ ರಕ್ಷಣೆಗಾಗಿ ಕೆ. ಮಹಮ್ಮದ್‌ ಮಂಡಗದ್ದೆ, ಸಮಾಜ ಸೇವೆಗಾಗಿ ಅಝಲ ಅಯೂಬ್‌, ಬಿ.ಎಚ್‌.ನೂರ್‌ ಮುಹಮ್ಮದ್‌, ಗಾಯನ ಕ್ಷೇತ್ರದ ಸಾಧನೆಗಾಗಿ ಮುಹಮ್ಮದ್‌ ಇಕ್ಬಾಲ್‌ ಕಾಟಿಪಳ್ಳ, ಆರೋಗ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಮೊಯಿದ್ದೀನ್‌ ಕುಂಞಿ ಗರ್ಡಾಡಿ ಮೊದಲಾದವರನ್ನು ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಜನವರಿ 10ರಂದು ಮಧ್ಯಾಹ್ನ 3ಕ್ಕೆ ಚಿಕ್ಕಮಗಳೂರಿನ ಒಕ್ಕಲಿಗರ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಇದೇ ಸಂದರ್ಭ ಬ್ಯಾರಿ ಭಾಷಾ ಸಮ್ಮೇಳನವೂ ನಡೆಯಲಿದೆ. ಸ್ಮರಣಿಕೆ ಸೇರಿ ₨10 ಸಾವಿರವನ್ನು ಗೌರವ ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುವುದು. ಈ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾವವೂ ಇದೆ. ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಅಕಾಡೆಮಿ ಸದಸ್ಯ ಅಬ್ಬಾಸ್‌ ಕಿರುಗುಂದ ಮಾತನಾಡಿ, ಭಾಷೆಯ ಉನ್ನತಿಗಾಗಿ ಭಾಷಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT