ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಮಾಧ್ಯಮ: ರಾಜ್ಯದ ಅರ್ಜಿ ವಜಾ

ಪರಿಹಾರಾತ್ಮಕ ಅರ್ಜಿ: ‘ಸುಪ್ರೀಂ’‌ ಮುಖ್ಯ ನ್ಯಾಯಮೂರ್ತಿ ದತ್ತು ನಿರ್ಧಾರ
Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ಮಾತೃಭಾಷೆ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ವಜಾ ಆಗಿದೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯ ವಿಚಾರಣೆ ನಡೆಸಿದ  ಪರಿಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌ ದತ್ತು ತಮ್ಮ ಚೇಂಬರ್‌ನಲ್ಲಿ ವಜಾ ಮಾಡಿದ್ದಾರೆ.

ಮಕ್ಕಳ ಮಾತೃಭಾಷೆಯನ್ನು ತೀರ್ಮಾನಿಸುವುದು ಪೋಷಕರು ಮತ್ತು ಮಕ್ಕಳ ಮೂಲಭೂತ ಹಕ್ಕು. ಯಾವ ಮಾಧ್ಯಮದಲ್ಲಿ ಮಕ್ಕಳು ಕಲಿಯಬೇಕು ಎನ್ನುವುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ರಾಜ್ಯ ಸರ್ಕಾರ ಶಿಕ್ಷಣ ಮಾಧ್ಯಮವನ್ನು ಬಲವಂತವಾಗಿ ಹೇರುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಂವಿಧಾನ ಪೀಠವು ಹೇಳಿತ್ತು.

ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿ ವಜಾಗೊಂಡಿತ್ತು. ಅನಂತರ ಮಾತೃ ಭಾಷಾ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ ವಿವಾದದಲ್ಲಿ ತನಗೆ ಯಾವುದೇ ಪರಿಹಾರವೂ ಸಿಕ್ಕಿಲ್ಲ ಎಂದು ವಾದಿಸಿ ರಾಜ್ಯ ಸರ್ಕಾರವು ಪರಿಹಾರಾತ್ಮಕ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಮಾತೃಭಾಷೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 1989ರ ಜೂನ್‌ 19ರಂದು ಒಂದರಿಂದ ನಾಲ್ಕನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಹೈಕೋರ್ಟ್‌ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್‌ ಪರಿಹಾರಾತ್ಮಕ ಅರ್ಜಿ ವಜಾ ಮಾಡುವುದರೊಂದಿಗೆ ರಾಜ್ಯ ಸರ್ಕಾರಕ್ಕಿದ್ದ ಕಡೆಯ ಅವಕಾಶವೂ ತಪ್ಪಿದಂತಾಗಿದೆ. ಇನ್ನು ಉಳಿದಿರುವುದು ಸಂವಿಧಾನ ತಿದ್ದುಪಡಿ ಮಾತ್ರ. ಅದನ್ನು ಮಾಡುವ ಅಧಿಕಾರ ಇರುವುದು ಸಂಸತ್ತಿಗೆ.

ಈಚೆಗೆ ಮಾತೃಭಾಷಾ ಶಿಕ್ಷಣ ಮಾಧ್ಯಮವಾಗಬೇಕು ಎಂಬ ಅಭಿಪ್ರಾಯವನ್ನು ಆರ್‌ಎಸ್‌ಎಸ್‌ ವ್ಯಕ್ತಪಡಿಸಿದೆ. ಅದನ್ನು ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT