ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಾದ ಕನ್ನಡಿಗರ ಸ್ವಾಭಿಮಾನ

ಗೋಕಾಕ್‌ ಚಳವಳಿ ಸ್ಮರಣೆ ಕಾರ್ಯಕ್ರಮದಲ್ಲಿ ಕವಿ ಚೆನ್ನವೀರ ಕಣವಿ ಆತಂಕ
Last Updated 23 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇತ್ತೀಚೆಗೆ ಕನ್ನಡಿಗರ ಸ್ವಾಭಿಮಾನ ಮಂಕಾಗಿ, ಇಂಗ್ಲಿಷ್‌ ವ್ಯಾಮೋಹ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಹಿರಿಯ ಕವಿ ಚೆನ್ನವೀರ ಕಣವಿ ಆತಂಕ ವ್ಯಕ್ತಪಡಿಸಿದರು.

ಗೋಕಾಕ್‌ ಚಳವಳಿಗೆ 33 ವರ್ಷ ತುಂಬಿದ ನೆನಪಿಗಾಗಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಗೋಕಾಕ್‌ ಚಳವಳಿ –33, ಸ್ಮರಣೆ ಮತ್ತು ಪ್ರೇರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಮಕ್ಕಳಿಗೆ ಕನ್ನಡದ ಸಂಸ್ಕಾರ ಸಿಗುತ್ತಿಲ್ಲ. ಕನ್ನಡ ಭಾಷೆ ತುಳಿತಕ್ಕೆ ಒಳಗಾಗಿದೆ. ಕನ್ನಡದ ಉಳಿವಿಗಾಗಿ ಕನ್ನಡಿಗರೆಲ್ಲರೂ ಕನ್ನಡದ ಕಾವಲು­ನಾಯಿಗಳಾಗಬೇಕಿದೆ. ಕನ್ನಡಕ್ಕಾಗಿ ಕನ್ನಡಿಗರೆ­ಲ್ಲರೂ ಒಂದಾ­ಗಬೇಕಿದೆ’ ಎಂದರು.

‘ಗೋಕಾಕ್‌ ಚಳವಳಿಗೆ ನಟ ಡಾ.ರಾಜ್‌ಕುಮಾರ್‌ ಪ್ರವೇಶಿಸಿದ ಬಳಿಕ ಚಳವಳಿಯ ಸ್ವರೂಪ ತೀವ್ರ­ವಾಯಿತು. ಗೋಕಾಕ್‌ ಚಳವಳಿಯ ಯಶಸ್ಸಿನ ಬಹುಪಾಲು ಶ್ರೇಯಸ್ಸು ಡಾ.ರಾಜ್‌ಕುಮಾರ್‌ ಅವರಿಗೆ ಸಲ್ಲಬೇಕು’ ಎಂದು ಹೇಳಿದರು.

‘ಕನ್ನಡದ ಹೋರಾಟದಲ್ಲಿ ಪಾಲ್ಗೊ­ಳ್ಳುವ ಸಂಘಟನೆಗಳ ಕಾರ್ಯ­ಕರ್ತರಿಗೆ ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸದ ಸ್ಥೂಲ ಪರಿಚಯವಾದರೂ ಇರಬೇಕು. ಇದಕ್ಕಾಗಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಒಂದು ತರಬೇತಿ ಶಾಲೆ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ವೇದಿಕೆಯ ಅಧ್ಯಕ್ಷ ಹಾಗೂ ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಭಾಷೆ ಬದುಕಿದ್ದರೆ ಅದು ಕನ್ನಡ ಸಂಘಟ­ನೆಗಳ ಕಾರ್ಯಕರ್ತರಿಂದ ಮಾತ್ರ. ಕನ್ನಡದ ಉಳಿವು ಹಾಗೂ ಬೆಳವಣಿಗೆಯ ಹೋರಾಟಕ್ಕೆ ಸಂಘಟನೆಗಳು ಒಗ್ಗೂಡಬೇಕು’ ಎಂದರು.

‘ರಾಜ್ಯದಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಪಠ್ಯದಲ್ಲಿ ಸೇರಿಸಲು ಅಂದಿನ ಮುಖ್ಯ­ಮಂತ್ರಿ ಗುಂಡೂರಾವ್‌ ಮತ್ತು ಪೇಜಾವರ ಮಠದ ವಿಶ್ವೇಶ­ತೀರ್ಥ ಸ್ವಾಮೀಜಿ ಉತ್ಸುಕರಾಗಿದ್ದರು. ಈ ವಿಚಾರದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ವಿ.ಕೃ.ಗೋಕಾಕ್‌ ಅವರ ನೇತೃತ್ವದಲ್ಲಿ ಸಮಿತಿ ನೇಮಿಸ ಲಾಗಿತ್ತು. ವಿ.ಕೃ.ಗೋಕಾಕ್‌  ಧಾರ ವಾಡಕ್ಕೆ ಬಂದಿದ್ದಾಗ ಗೋಕಾಕ್‌­–  ಗೋಬ್ಯಾಕ್‌ ಎಂಬ ಘೋಷ­ಣೆ­ಯಡಿ ಪ್ರತಿಭಟನೆ ನಡೆಸಿದೆವು’ ಎಂದರು.

‘ಆನಂತರ ಗೋಕಾಕರು ಕನ್ನಡದ ಪರವಾಗಿ ನೀಡಿದ ವರದಿಯನ್ನು ಸರ್ಕಾರ ಅಂಗೀಕರಿಸಲು ವಿಳಂಬ ಧೋರಣೆ ಅನುಸರಿಸುತ್ತಿತ್ತು. ಧಾರ­ವಾ­ಡದ ವಿದ್ಯಾವರ್ಧಕ ಸಂಘದಲ್ಲಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿದ್ದ ಶಂಬಾ­ಜೋಶಿಯವರ ನೇತೃತ್ವದಲ್ಲಿ ಚಳವಳಿ ಆರಂಭಿಸ­ಲಾಯಿತು’ ಎಂದು ಹೇಳಿದರು.

ಚಂದ್ರಶೇಖರ ಪಾಟೀಲ ಅವರ ‘ಗೋಕಾಕ್‌ ಗೋಬ್ಯಾಕ್‌’ ಕೃತಿಯನ್ನು ಚೆನ್ನವೀರ ಕಣವಿ ಬಿಡುಗಡೆಗೊಳಿಸಿದರು. ಸಂಕ್ರಮಣ ಪ್ರಕಾಶನ ಹೊರತಂದಿರುವ ಪುಸ್ತಕದ ಬೆಲೆ ₨ 50.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT