ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಸಮೀಪ ಗಗನನೌಕೆ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ದೇಶದ ಬಹುಮಹ­ತ್ವಾಕಾಂಕ್ಷೆಯ ‘ಮಂಗಳಯಾನ’ ಯೋಜನೆ­­ಯಡಿಯಲ್ಲಿ ಉಡಾಯಿ­ಸಿರುವ ‘ಮಂಗಳ ಕಕ್ಷೆಗಾಮಿ ಗಗನನೌಕೆ’ ಯು (ಮಾರ್ಸ್‌ ಅರ್ಬಿಟರ್‌ ಮಿಷನ್‌ ಸ್ಪೇಸ್‌ಕ್ರಾಫ್ಟ್‌)  ತನ್ನ ಮಾರ್ಗದಲ್ಲಿ ಅರ್ಧದಷ್ಟು ಹಾದಿ  ಕ್ರಮಿಸಿದೆ.

ಬುಧವಾರ ಬೆಳಿಗ್ಗೆ 9.50ಕ್ಕೆ (ಭಾರತೀಯ ಕಾಲಮಾನ) ಈ ನೌಕೆಯು 33.75 ಕೋಟಿ ಕಿ.ಮೀ. ದೂರ ಕ್ರಮಿಸುವ ಮೂಲಕ ಅಂಗಾರಕ­ನತ್ತ ಪಯಣದಲ್ಲಿ ಅರ್ಧದಷ್ಟು ಮಾರ್ಗ­­ವನ್ನು ಯಶಸ್ವಿಯಾಗಿ ದಾಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಇದನ್ನು ಖಾತರಿ ಪಡಿಸಿಕೊಳ್ಳಲು ನಿಯಂತ್ರಣ ಕೇಂದ್ರದಿಂದ ಕಳುಹಿಸಿದ್ದ ಸಂದೇಶವು ಗಗನನೌಕೆಯನ್ನು ತಲುಪಿ ವಾಪಸು ಬರಲು ನಾಲ್ಕು ನಿಮಿಷ 15 ಸೆಕೆಂಡ್‌ಗಳ ಕಾಲ ಹಿಡಿಯಿತು. ಸೌರವ್ಯೂಹದಲ್ಲಿ ಭೂಮಿಯು ಮಂಗಳ ಗ್ರಹಕ್ಕೆ ಅತ್ಯಂತ ಸನಿಹದಲ್ಲಿ ಸುತ್ತುತ್ತಿದ್ದ ದಿವಸದಂದೇ (ಬುಧವಾರ) ಈ ನೌಕೆಯು ತನ್ನ ಮಾರ್ಗದಲ್ಲಿ ಅರ್ಧದಷ್ಟು ದೂರವನ್ನು ಕ್ರಮಿಸಿದೆ ಎಂದು ‘ಇಸ್ರೊ’ ಹೇಳಿದೆ.

ಈ ಮಂಗಳ ನೌಕೆಯನ್ನು ನಾಸಾ ‘ಜೆಟ್‌ ಪ್ರಪಲ್ಷನ್‌ ಪ್ರಯೋಗಾಲಯ’ದ ಬಹುದೂರದ ಅಂತರಿಕ್ಷ ಸಂವಹನ ಸಾಧನದ ಮೂಲಕ ‘ಇಸ್ರೊ’ ನಿರಂತರವಾಗಿ ನಿರ್ವಹಿಸುತ್ತಿದೆ. ನೌಕೆ­ಯಲ್ಲಿರುವ ಐದು ವೈಜ್ಞಾನಿಕ ಸಾಧನಗಳು ಸುಸ್ಥಿತಿಯಲ್ಲಿ ಇವೆ ಎಂದು ‘ಇಸ್ರೊ’ ಹೇಳಿಕೆ ತಿಳಿಸಿದೆ.

ಸಂಭವನೀಯ ಸನ್ನಿವೇಶದಲ್ಲಿ ಸ್ವಯಂ ಚಾಲಿತವಾಗಿ ಕಾರ್ಯೋನ್ಮುಖವಾಗುವ ವ್ಯವಸ್ಥೆಗಳನ್ನು ವಿವಿಧ ಹಂತಗಳಲ್ಲಿ ನಿಯಮಿತವಾಗಿ ಪರಿಶೀಲಿಸಲಾಗಿದೆ. ನಿಯಂತ್ರಣ ಕೇಂದ್ರಕ್ಕೂ ನೌಕೆಗೂ ಸುಲಲಿತ ಸಂವಹನ ಸಾಧಿಸುವ ದೃಷ್ಟಿಯಿಂದ ನೌಕೆಯಲ್ಲಿ ಅಳವಡಿಸ­ಲಾಗಿರುವ ಶಕ್ತಿಶಾಲಿ ಆ್ಯಂಟೆನಾಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು  ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಗಗನನೌಕೆಯು ನಿಗದಿತ ಪಥದಲ್ಲೇ ಸಾಗುತ್ತಿದೆ. ಹೀಗಾಗಿ ಈಗ ‘ಪಥ ಸರಿಪಡಿಸುವ ಕಾರ್ಯಾಚರಣೆ’  (ಟಿಸಿಎಂ) ಅನಗತ್ಯ. ನಿಗದಿಯಾದಂತೆ ಜೂನ್‌ನಲ್ಲಿ ಇಂತಹ ಕಾರ್ಯಾಚರಣೆ ಅಗತ್ಯ ಬಿದ್ದರೆ ಮಾಡಬಹುದು ಎಂದು ‘ಇಸ್ರೊ’ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಗಳನೌಕೆಯ ಕ್ರಮಿಸುವ ಅವಧಿಯಲ್ಲಿ ನಾಲ್ಕು ‘ಟಿಸಿಎಂ’ಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ ಮೊದಲನೆಯ ‘ಟಿಸಿಎಂ’ ಕಳೆದ ಡಿಸೆಂಬರ್ 10ರಂದು ನಡೆದಿದೆ. ಉಳಿದ ಮೂರು ‘ಟಿಸಿಎಂ’ಗಳನ್ನು 2014ರ ಜೂನ್‌, ಆಗಸ್ಟ್‌ ಮತ್ತು ಸೆಪ್ಟೆಂಬರ್‌­ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಹಿನ್ನೆಲೆ: ‘ಮಂಗಳಯಾನ’ದ ಮೊತ್ತ ಮೊದಲ ಈ ಗಗನನೌಕೆಯನ್ನು ಶ್ರೀಹರಿ­ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ 2013ರ ನ. 5ರಂದು ಉಡಾಯಿಸ­ಲಾಯಿತು. ₨ 450 ಕೋಟಿ ವೆಚ್ಚದ ಯೋಜನೆ ಉದ್ದೇಶ ‘ಕೆಂಪು ಗ್ರಹ’ದಲ್ಲಿ ಮಿಥೇನ್‌ ಅನಿಲದ ಕುರುಹನ್ನು ಪತ್ತೆ ಮಾಡು­ವುದಾಗಿದೆ. ಇದಕ್ಕಾಗಿ ನೌಕೆಯಲ್ಲಿ 5 ವೈಜ್ಞಾನಿಕ ಸಾಧನಗಳನ್ನು ಇರಿಸಲಾಗಿದೆ.

ಇದುವರೆಗೂ ಮಂಗಳ ಗ್ರಹದ ಬಗ್ಗೆ ಜಾಗತಿಕವಾಗಿ 51 ಯೋಜನೆಗಳು ನಡೆದಿದ್ದು, ಇದರಲ್ಲಿ 21 ಯೋಜನೆಗಳು ಯಶಸ್ವಿಯಾಗಿವೆ. ‘ಇಸ್ರೊ’ ಎಣಿಸಿದಂತೆ ಎಲ್ಲವೂ ನಡೆದರೆ  ‘ಮಂಗಳಯಾನ’ ಯೋಜನೆ­ಯನ್ನು ಯಶಸ್ವಿಯಾಗಿ ಪೂರೈಸಿದ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತದೆ. ಅಮೆರಿಕ, ರಷ್ಯಾ, ಯೂರೋಪ್‌ಗಳು ‘ಕೆಂಪು ಗ್ರಹ’ದ ಅನ್ವೇಷಣೆಯಲ್ಲಿ ಯಶ ಸಾಧಿಸಿವೆ. ಚೀನಾ ಮತ್ತು ಜಪಾನ್‌ ಅಂಗಾರಕ ಗ್ರಹ ಕುರಿತ ಎರಡನೇ ಬಾರಿಗೆ ನಡೆಸಿದ ಯೋಜನೆಗಳು ವಿಫಲಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT