ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿ.ವಿ: ನೇಮಕಾತಿಯಲ್ಲಿ ಅವ್ಯವಹಾರ

Last Updated 26 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಗಳೂರು: ಸಿಂಡಿಕೇಟ್ ಸಭೆ ನಡೆಯು­ತ್ತಿ­ದ್ದಾಗಲೇ ಹೊರಗೆ ಗುಂಪು­ಗೂಡಿದ್ದ ಸಂಭಾವ್ಯ ಅಭ್ಯರ್ಥಿ­ಗಳಲ್ಲಿ ಸಂತೋಷ ಮೇರೆ ಮೀರಿತ್ತು. ಅವರಿಗೆಲ್ಲ ತಮ್ಮ ನೇಮಕಾತಿಯ ಸುಳಿವು ಸಿಕ್ಕಿತ್ತು. ಸಭೆ ಮುಗಿದ ಕೇವಲ 30 ನಿಮಿಷ­ಗಳಲ್ಲೇ ಸುಮಾರು 9 ವಿಭಾಗಗಳ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ದೊರಕಿಯೇ­ಬಿಟ್ಟಿತ್ತು, ಇವರು ಆದೇಶ ಪಡೆದುದು ಮಾತ್ರವಲ್ಲ, ವಿಭಾಗಗಳ ಮುಖ್ಯಸ್ಥರ ಮತ್ತು ಇತರ ಸಿಬ್ಬಂದಿಯ ಅಭಿಪ್ರಾ­ಯಕ್ಕೂ ಮನ್ನಣೆ ನೀಡದೆ ಕರ್ತವ್ಯಕ್ಕೆ ಹಾಜರಾಗಿಯೇ ಬಿಟ್ಟರು...

ಇದು ಮಂಗಳೂರು ವಿಶ್ವವಿದ್ಯಾಲಯ­ದಲ್ಲಿ ಪ್ರೊಫೆಸರ್‌ಗಳು, ಸಹ ಪ್ರೊಫೆಸರ್‌­ಗಳು, ಸಹಾಯಕ ಪ್ರೊಫೆಸರ್‌ಗಳ ನೇಮಕಾತಿಗಾಗಿ ನಡೆದ ಆಯ್ಕೆಯ ವಿಧಾನ! ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ (ರೂಸಾ) ಬಗೆಗೆ ದೇಶದ ಉನ್ನತ ಶಿಕ್ಷಣ ಸಚಿವರು ಬೆಂಗಳೂರಿ ನಲ್ಲಿ ಒತ್ತು ನೀಡಿದ ಮರು­ದಿನವೇ ವಿಶ್ವವಿದ್ಯಾಲಯದ ಇಂತಹ ‘ಅಕ್ರಮ ನೇಮಕಾತಿ’ಯ ಒಂದೊಂದೇ ಎಳೆ ಬಹಿರಂಗಗೊಳ್ಳ­ತೊಡಗಿದೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ಗಳು, ಸಹ ಪ್ರೊಫೆಸರ್‌ಗಳು ಮತ್ತು ಸಹಾಯಕ ಪ್ರೊಫೆಸರ್‌ಗಳ ನೇಮಕಾತಿಗಾಗಿ ಅಕ್ಟೋಬರ್‌ 27ರಿಂದಲೇ ಆಯ್ಕೆ ಪ್ರಕ್ರಿಯೆ ಆರಂಭ ವಾಗಿತ್ತು. ನೇಮಕಾತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿರುವುದು ಬಹುತೇಕ ಎಲ್ಲಾ ಅಭ್ಯರ್ಥಿಗಳಿಗೂ ತಿಳಿದಿದೆ, ಆದರೂ ಅವರೆಲ್ಲರೂ ತಮ್ಮ ‘ಭವಿಷ್ಯ’ವನ್ನು ಗಮನಿಸಿ ದುಃಖವನ್ನು ಒಡಲಲ್ಲೇ ಇಟ್ಟುಕೊಂಡು ಸುಮ್ಮನಾಗಿ­ದ್ದಾರೆ. ಯಾಕೆಂದರೆ ಇವರೆಲ್ಲ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿ­ದ್ದಾರೆ. ಅಸಮಾ­ಧಾನದ ಒಂದು ಎಳೆ ಹೊರಬಿದ್ದರೂ ಅಕ್ರಮವಾಗಿ ನೇಮಕ­ಗೊಂಡ ಇದೇ ಪ್ರೊಫೆಸರ್‌ಗಳು ಮತ್ತು ಇತರ ಪ್ರಾಧ್ಯಾಪಕರ ಕೈಯಲ್ಲಿ ಅವರು ಚಿತ್ರಹಿಂಸೆ ಅನುಭವಿಸುವ ಅಪಾಯ ಇರುವುದರಿಂದ ಅಕ್ರಮಗಳನ್ನು ಸಹಿಸಿಕೊಂಡು ಕುಳಿತಿದ್ದಾರೆ.

‘ಪ್ರಾಧ್ಯಾಪಕರ ನೇಮಕಾತಿಗಾಗಿಯೇ ನಡೆದ ಸಿಂಡಿಕೇಟ್‌ ಸಭೆಯ ಒಂದೆರಡು ದಿನವಲ್ಲದೆ ನೇಮಕಾತಿ ಆದೇಶ ನೀಡುವ ಸಂಪ್ರದಾಯವೇ ಇಲ್ಲ. ಆದರೆ ಇಲ್ಲಿ ಕೇವಲ 30 ನಿಮಿಷಕ್ಕೇ ನೇಮಕಾತಿ ಆದೇಶ ನೀಡಲಾಗಿದೆ’ ಎಂದು ಮೂಲಗಳು ಹೇಳುತ್ತವೆ.

ನಿಯಮಕ್ಕೆ ಬೆಲೆ ಇಲ್ಲ: ನೇಮಕಾತಿ ಪ್ರಕ್ರಿಯೆ ಆರಂಭಗೊಂಡ ಮೊದಲ ದಿನದಿಂದಲೇ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ. ಮೀಸಲಾತಿ, ಅರ್ಹತೆ, ವಿವೇಚನಾ ಕೋಟಾಗಳಲ್ಲಿ ಕುಲಪತಿ ಅವರು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕನ್ನಡ ವಿಭಾಗದ ಪ್ರೊಫೆಸರ್‌ ಮತ್ತು ಸಹಾಯಕ ಪ್ರೊಫೆಸರ್‌ ನೇಮಕಾತಿ­ಯಲ್ಲಿ ಇಂತಹ ಸ್ಪಷ್ಟ ನಿದರ್ಶನವೊಂದು ಲಭಿಸಿದೆ. ಇತಿಹಾಸ ವಿಭಾಗದ ಸಹಾಯಕ ಪ್ರೊಫೆಸರ್‌ ಹುದ್ದೆಗೆ ಅರ್ಹತೆಯೇ ಇಲ್ಲದ ಮೈಸೂರಿನ ಅಭ್ಯರ್ಥಿಯೊಬ್ಬರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.


ಹೆಚ್ಚಿನ ಅಭ್ಯರ್ಥಿಗಳಿಗೆ ಸಂದರ್ಶನ ಕರೆ ಬಂದುದು ಸಂದರ್ಶನದ ಕೇವಲ 3 ದಿನಗಳ ಮೊದಲಷ್ಟೇ. ಆದರೆ ಯಾರನ್ನು ಆಯ್ಕೆ ಮಾಡಬೇಕು ಎಂದು ಮೊದಲೇ ನಿರ್ಧಾರವಾಗಿತ್ತೋ, ಅವರಿಗೆಲ್ಲಾ ದೂರವಾಣಿ ಮೂಲಕ, ಇಮೇಲ್‌ ಮೂಲಕ ಸಂದರ್ಶನದ ಮಾಹಿತಿ ನೀಡಲಾಗಿತ್ತು. ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳು ಮೈಸೂರು ಭಾಗದ ದಲಿತ ಬಲಗೈ ಪಂಗಡಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

ಪ್ರೊಫೆಸರ್‌ಗಳಿಂದಲೇ ಅರ್ಜಿ!
ಮಂಗಳೂರು ವಿಶ್ವವಿದ್ಯಾಲಯದ ಇಬ್ಬರು ಹಾಲಿ ಪ್ರೊಫೆಸರ್‌ಗಳಾದ ಪ್ರೊ.ಪಟ್ಟಾಭಿ (ವಸ್ತು ವಿಜ್ಞಾನ) ಮತ್ತು ಪ್ರೊ.ಚಂದ್ರಶೇಖರ್‌ (ಸಸ್ಯ ವಿಜ್ಞಾನ) ಅವರು ತಮ್ಮ ವಿಭಾಗಗಳಲ್ಲಿನ ಪ್ರೊಫೆಸರ್‌ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು. ಇತರ ಅಭ್ಯರ್ಥಿಗಳು ಈ ಹುದ್ದೆಯನ್ನು ಭರ್ತಿ ಮಾಡಬಾರದು ಎಂಬ ಒಂದೇ ಒಂದು ಕಾರಣಕ್ಕೆ ಈ ರೀತಿ ಮಾಡಿದರು ಎಂದು ಹೇಳಲಾಗುತ್ತಿದೆ.

ಕುಲಪತಿ ನಿರಾಕರಣೆ
ನೇಮಕಾತಿಯಲ್ಲಿ ಅಕ್ರಮಗಳು ನಡೆದಿ­ರುವ ಆರೋಪ­ಗಳನ್ನು ಮಂಗಳೂರು ವಿಶ್ವವಿದ್ಯಾಲ­ಯದ ಕುಲಪತಿ ಪ್ರೊ.ಟಿ.ಸಿ.­ಶಿವಶಂಕರ­ಮೂರ್ತಿ ಅವರು ಅಲ್ಲಗಳೆ­ದಿದ್ದು, ಅಭ್ಯರ್ಥಿ­ಗಳ ಅರ್ಜಿ­ಗಳನ್ನು ಯಾರು ಬೇಕಾ­ದರೂ ಪರಿಶೀಲಿಸ­ಬಹುದು ಎಂದಿ­ದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೆ ಆರು ದಿನ ಮೊದಲಾಗಿಯೇ ಸಂದರ್ಶನಕ್ಕೆ ಪತ್ರ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT