ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟೊ ಮುಂಬೈ ಬಿಟ್ಟು ಹೋದದ್ದೇಕೆ?

ಜೈಪುರ ಸಾಹಿತ್ಯ ಉತ್ಸವದಲ್ಲಿ ಆಯೇಷಾ ಹೇಳಿದ ಸತ್ಯ
Last Updated 24 ಜನವರಿ 2016, 19:30 IST
ಅಕ್ಷರ ಗಾತ್ರ

ಜೈಪುರ: ಉರ್ದು ಭಾಷೆಯ ಅತ್ಯುತ್ತಮ ಕತೆಗಾರನೆಂದೇ ಸಾದಾತ್ ಹಸನ್ ಮಂಟೊ ಅವರನ್ನು  ಪರಿಗಣಿಸಲಾಗುತ್ತದೆ. ಉರ್ದು ಭಾಷೆ ಮೇಲೆ ಪ್ರಭುತ್ವ ಹೊಂದಿದ್ದ ಅವರು 600ಕ್ಕೂ ಹೆಚ್ಚು ಕತೆಗಳನ್ನು, ನೂರಕ್ಕೂ ಹೆಚ್ಚು ರೇಡಿಯೊ ನಾಟಕಗಳನ್ನು ಬರೆದಿದ್ದರು. ವಿವಾದಗಳ ವಿಷಯಕ್ಕೆ ಬಂದಾಗಲೂ ಅವರಷ್ಟು ವಿವಾದಗಳನ್ನು ಸೃಷ್ಟಿಸಿದ ಅಥವಾ ವಿವಾದಗಳಿಗೆ ಗುರಿಯಾದ ಇನ್ನೊಬ್ಬ ಉರ್ದು ಸಾಹಿತಿ ಇಲ್ಲ ಎನ್ನಬಹುದು. ಮುಂಬೈ ಬಗ್ಗೆ ಅವರಿಗಿದ್ದ ಉತ್ಕಟ ಪ್ರೀತಿಯೂ ಅಷ್ಟೇ ಪ್ರಸಿದ್ಧ. ಹಾಗಾದರೆ ಮಂಟೊ ಮುಂಬೈ ಬಿಟ್ಟು ಲಾಹೋರ್‌ಗೆ ಹೋದದ್ದು ಯಾಕೆ?

ಅವರ ಇರುವ ಹಲವು ಮಿಥ್ಯೆಗಳು ಮತ್ತು ಕೆಲವು ಸತ್ಯಗಳಿಗೆ ಅವರ ಸೋದರ ಸೊಸೆ, ಇತಿಹಾಸಕಾರ್ತಿ ಮತ್ತು ಲೇಖಕಿ ಆಯೇಷಾ ಜಲಾಲ್ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಬೆಳಕು ಚೆಲ್ಲಿದರು. ದಿ ಪಿಟಿ ಆಫ್ ಪಾರ್ಟಿಷನ್: ಮಂಟೊಸ್ ಲೈಫ್ ಅಕ್ರಾಸ್ ಇಂಡಿಯ-ಪಾಕಿಸ್ತಾನ್ ಡಿವೈಡ್ ಎಂಬ ಕೃತಿಯೊಂದನ್ನೂ ಆಯೇಷಾ ರಚಿಸಿದ್ದಾರೆ.

ಮಂಟೊ ಬಗೆಗಿನ ನೆನಪುಗಳನ್ನು ಮಂಟೊ ಮತ್ತು ದೇಶ ವಿಭಜನೆ ಬಗೆಗಿನ ಗೋಷ್ಠಿಯಲ್ಲಿ ಆಯೇಷಾ ತಿರುವಿ ಹಾಕಿದರು. ಅದರ ಸಂಗ್ರಹ ರೂಪ ಇಲ್ಲಿದೆ: ಮಂಟೊಗೆ ಮುಂಬೈ ಬಿಟ್ಟು ಹೋಗಲು ಎಳ್ಳಷ್ಟೂ ಇಷ್ಟ ಇರಲಿಲ್ಲ. ಆದರೆ ಹೆಂಡತಿಯ ಬಲವಂತಕ್ಕಾಗಿ ಲಾಹೋರ್‌ಗೆ ಮರಳಿದರು. ಮಂಟೊ ಹೆಂಡತಿಯ ತಂದೆ, ತಾಯಿ ಲಾಹೋರ್‌ನಲ್ಲಿದ್ದರು. ಯಾವುದೇ ಜವಾಬ್ದಾರಿ ಇಲ್ಲದ ಮಂಟೊ ಜತೆಗೆ ಏಕಾಂಗಿಯಾಗಿ ಮುಂಬೈಯಲ್ಲಿ ನೆಲೆಸುವುದು ಅವರಿಗೆ ಇಷ್ಟ ಇರಲಿಲ್ಲ.

ಲಾಹೋರ್‌ಗೆ ಹೋದ ನಂತರವೂ  ಮಂಟೊಗೆ ಮತ್ತೆ ಮುಂಬೈಗೆ ಬರಬೇಕು ಎಂಬ ಕನಸುಗಳೇ ಇದ್ದವು. ಆದರೆ ಮನೆಯ ಜವಾಬ್ದಾರಿಯ ವಿಚಾರದಲ್ಲಿ ಅಸಡ್ಡೆ ಇದ್ದರೂ ಕುಟುಂಬವನ್ನು ತೊರೆದು ಹೋಗಲು ಅವರು ಮನಸು ಮಾಡಲಿಲ್ಲ. ಮಂಟೊ ಮುಂಬೈಯನ್ನು ತೊರೆಯಲು ಸಾಂಸಾರಿಕ ಸಮಸ್ಯೆ ಕಾರಣವೇ ಹೊರತು ಅವರ ರಾಜಕೀಯ ನಿಲುವುಗಳು ಅಲ್ಲ. ಹಾಗೆ ನೋಡಿದರೆ ಮಂಟೊಗೆ ಸ್ಪಷ್ಟವಾದ ರಾಜಕೀಯ ನಿಲುವುಗಳೇ ಇರಲಿಲ್ಲ. ಅವರಿಗೆ  ಕಾಂಗ್ರೆಸ್‌ನ ರಾಜಕೀಯ ಹೇಗೆ ಅರ್ಥ ಆಗುತ್ತಿರಲಿಲ್ಲವೋ ಮುಸ್ಲಿಂ ಲೀಗ್‌ನ ರಾಜಕೀಯವೂ ಅರ್ಥ ಆಗುತ್ತಿರಲಿಲ್ಲ. ಆದರೆ ಆ ದಿನಗಳ ಎಲ್ಲರಲ್ಲಿಯೂ ಇದ್ದಂತೆ ವಸಾಹತುಶಾಹಿಯ ಮೇಲೆ ಅವರಿಗೂ ಸಿಟ್ಟು ಇತ್ತು.

ಮುಂಬೈಯಲ್ಲಿ ಸಿನಿಮಾಗಳಿಗೆ ಚಿತ್ರಕತೆ ಬರೆಯುತ್ತಿದ್ದ (ಅವರು ಚಿತ್ರಕತೆ ಬರೆದ ಸಿನಿಮಾ ಯಾವುದೂ ದೊಡ್ಡ ಹಿಟ್ ಅನಿಸಿಕೊಂಡಿರಲಿಲ್ಲ) ಮಂಟೊ ಸಿಕ್ಕಾಪಟ್ಟೆ ಮದ್ಯವ್ಯಸನಿ. ಆದರೆ ಮುಂಬೈ ಬಿಟ್ಟು ಹೋಗುವವರೆಗೆ ಅವರಿಗೆ ಕುಡಿತ, ಚಟವಾಗಿ ಅಂಟಿರಲಿಲ್ಲ. ಲಾಹೋರ್‌ಗೆ ಹೋದ ಮೇಲೆ ಮುಂಬೈ ನೆನಪು ಇನ್ನಿಲ್ಲದಂತೆ ಕಾಡುತ್ತಿತ್ತು. ಆ ನೆನಪಿನಲ್ಲಿಯೇ ಅವರು ಬರೆದ ಕತೆಗಳೇ ಅವರಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟವು. ಜತೆಗೆ ಕುಡಿತ ಅತಿಯಾಯಿತು. 

ಮುಂಬೈಯಲ್ಲಿ ಸಿಗುತ್ತಿದ್ದ ಒಳ್ಳೆಯ ಮದ್ಯ ಲಾಹೋರ್‌ನಲ್ಲಿ ಸಿಗುತ್ತಿರಲಿಲ್ಲ. ಕೈಗೆ ಸಿಕ್ಕ ಅಗ್ಗದ ಮದ್ಯವೆಲ್ಲವನ್ನೂ ಕುಡಿದರು. ಅಲ್ಲಿ ಅವರಿಗೆ ಪರಮ ಕುಡುಕರಾದ ಕೆಲವರು ಮಾತ್ರ ಗೆಳೆಯರಾಗಿದ್ದರು. ನಟ ಅಶೋಕ್‌ಕುಮಾರ್, ಗಾಯಕ ಕಿಶೋರ್ ಕುಮಾರ್, ಶ್ಯಾಮ್‌ರಂತಹ ಗೆಳೆಯರು ಪಾಕಿಸ್ತಾನದಲ್ಲಿ ಅವರಿಗೆ ಸಿಗಲಿಲ್ಲ. ಹೀಗೆ ದೇಶ ವಿಭಜನೆ ಅವರ ಪಾಲಿಗೆ ಶಾಪವೂ ವರವೂ ಆಗಿ ಪರಿಣಮಿಸಿತು.

ಅಮಲಿನಲ್ಲಿ ಬರೆಯಲಿಲ್ಲ: ಮದ್ಯದ ಅಮಲಿನಲ್ಲಿಯೇ ಮಂಟೊ ಕತೆಗಳನ್ನು ಬರೆಯುತ್ತಿದ್ದರು ಎಂದು ಹಲವರು ನಂಬಿದ್ದಾರೆ. ಆದರೆ ಮಂಟೊ ಬೆಳಿಗ್ಗೆ ಮತ್ತು ಮಧ್ಯಾಹ್ನದ ಹೊತ್ತು ಬರೆಯುತ್ತಿದ್ದರು. ಆಗ ಕುಡಿಯುತ್ತಿರಲಿಲ್ಲ. ಜತೆಗೆ ದಿನಕ್ಕೊಂದು ಕತೆ ಬರೆದು ಅದನ್ನು ಒಯ್ದು ಯಾವುದೋ ಪತ್ರಿಕೆಗೆ ಮಾರಾಟ ಮಾಡಿ ಕುಡಿಯುತ್ತಿದ್ದರು. ಅವರ ಕುಡಿತದ ಕಾರಣಕ್ಕೆ ಮನೆ ರಣರಂಗವಾಗುತ್ತಿತ್ತು. ಮಂಟೊ ಬರೆದ ಒಂದೇ ಒಂದು ಕತೆಯ ಹಕ್ಕುಸ್ವಾಮ್ಯ ಅವರ ಹೆಂಡತಿಗೆ ಸಿಗಲಿಲ್ಲ. ಹಾಗಾಗಿ ಅವರ ಕುಟುಂಬ ನಿರ್ಗತಿಕವಾಗಿಯೇ ಉಳಿಯುವಂತಾಯಿತು.

ಭಾರತದಲ್ಲಿ ಹೆಚ್ಚು ಓದುಗರು: ಭಾರತದಲ್ಲಿ ಮಂಟೊ ಓದುಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಾಗೆ ಮಂಟೊ ಕುರಿತಂತೆ ಹೆಚ್ಚಿನ ಕೆಲಸವೂ ಇಲ್ಲಿ ನಡೆಯುತ್ತಿದೆ..

ಸಿನಿಮಾಗಳಲ್ಲಿ ಮಿಥ್ಯೆಯೇ ಹೆಚ್ಚು: ಮಂಟೊ ಬಗ್ಗೆ ಕೆಲವು ಸಿನಿಮಾಗಳು, ಟಿ.ವಿ ಧಾರಾವಾಹಿ ಬಂದಿವೆ. ಆದರೆ ಇವುಗಳಲ್ಲಿ ಸತ್ಯಕ್ಕಿಂತ ಕಲ್ಪನೆಯೇ ಹೆಚ್ಚು. ಒಂದು ಸಿನಿಮಾವಂತೂ, ಹುಚ್ಚು ಹಿಡಿದ ಮಂಟೊಗೆ ವಿದ್ಯುತ್ ಶಾಕ್ ಕೊಡುವ ದೃಶ್ಯದ ಮೂಲಕ ಆರಂಭ ಆಗುತ್ತದೆ. ಆದರೆ ಅಂತಹ ಘಟನೆ ಅವರ ಜೀವನದಲ್ಲಿ ನಡೆಯಲೇ ಇಲ್ಲ.

ವೇಶ್ಯೆ ಒಬ್ಬಳು ಮಂಟೊ ಹೆಂಡತಿಗೆ ಮನೆ  ಖರ್ಚಿಗೆ ಹಣ ನೀಡುತ್ತಿರುವ ದೃಶ್ಯಗಳು ಸಿನಿಮಾದಲ್ಲಿ ಇವೆ. ಆದರೆ ಇಂತಹ ಘಟನೆಯೂ ನಡೆದಿಲ್ಲ. ಈಗ ನಟಿ, ನಿರ್ದೇಶಕಿ ನಂದಿತಾ ದಾಸ್ ಮಂಟೊ ಬಗ್ಗೆ ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಅದನ್ನು ಎದುರು ನೋಡುತ್ತಿದ್ದೇನೆ.

ಶಮನದ ಕಾಲ: ಈಗ ವಿಭಜನೆಯ ನೋವುಗಳ ಬಗ್ಗೆ ಮಾತನಾಡುವ ಬದಲಿಗೆ ಅವುಗಳನ್ನು ಶಮನ ಮಾಡುವ ಬಗ್ಗೆ ಯೋಚಿಸಬೇಕಿದೆ.

ಅಶ್ಲೀಲ ಅಭಿವ್ಯಕ್ತಿ: ಇದ್ದುದನ್ನು ಇದ್ದ ಹಾಗೆ ಬರೆಯುತ್ತಿದ್ದ ಮಂಟೊ ವಿರುದ್ಧ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲಿ ದೂರುಗಳು ದಾಖಲಾಗಿದ್ದವು. ಎರಡೂ ದೇಶಗಳಲ್ಲಿಯೂ ಅಶ್ಲೀಲ ಅಭಿವ್ಯಕ್ತಿ ಎಂಬ ಕಾನೂನಿನ ಅಡಿಯಲ್ಲಿಯೇ ದೂರು ದಾಖಲು ಮಾಡಲಾಗಿತ್ತು. ಯಾವ ಪ್ರಕರಣವೂ ಸಾಬೀತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT