ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳು ಬೇಕೇ: ಕಾವೇರಿಸಿದ ಚರ್ಚೆ

ವಚನ ಚಳವಳಿ– ಪರ್ಯಾಯ ಸಂಸ್ಕೃತಿ: ವಿಚಾರ ಸಂಕಿರಣ­
Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಬಸವ ತತ್ವದ ಆಧಾರದ ಮೇಲೆ ‘ಮಠಗಳ ನಿರಾಕರಣೆ’ ಕುರಿತಾದ ಚರ್ಚೆ ಶುಕ್ರವಾರ ನಡೆದ ‘ವಚನ ಚಳವಳಿ–ಪರ್ಯಾಯ ಸಂಸ್ಕೃತಿ’ ವಿಚಾರ ಸಂಕಿರಣ­ದಲ್ಲಿ ತೀವ್ರವಾದ ವಾಗ್ವಾದಕ್ಕೆ ಕಾರಣ­ವಾಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಜತೆಯಾಗಿ ಏರ್ಪಡಿಸಿದ್ದ ಸಮಾರಂಭ ಈ ಪ್ರಸಂಗಕ್ಕೆ ವೇದಿಕೆಯಾಯಿತು.

ಚರ್ಚೆಗೆ ನಾಂದಿ ಹಾಡಿದ ಹಿರಿಯ ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌, ‘ಮಠಗಳು ಸಂಕುಚಿತ ಕೇಂದ್ರ­ಗಳಾಗಿದ್ದು, ಜಾತಿ ವ್ಯವಸ್ಥೆಯನ್ನು ತಾವೇ ಮುಂದೆ­ ನಿಂತು ಬೆಳೆಸುತ್ತಿವೆ. ಜಾತಿ ಚೌಕಟ್ಟನ್ನು ಮೀರಲು ಅವುಗಳಿಗೆ ಸಾಧ್ಯವಾಗಿಲ್ಲ. ಅಂತಹ ಪ್ರಯತ್ನ­ಗ­ಳನ್ನಂತೂ ಅವುಗಳು ಮಾಡಿಯೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಕವಿ ಡಾ.ಎಲ್‌. ಹನುಮಂತಯ್ಯ, ‘ಮಠಗಳ ಅಸ್ತಿತ್ವದ ಪ್ರಶ್ನೆಯನ್ನು ನಾವೀಗ ಎದುರು ಹಾಕಿ­ಕೊಳ್ಳುವ ತುರ್ತು ಅಗತ್ಯವಿದೆ. ಪ್ರಸಕ್ತ ಸಾಮಾಜಿಕ ಸನ್ನಿವೇಶದಲ್ಲಿ ಅಂತಹ ದಿಟ್ಟತನ ಪ್ರದರ್ಶಿಸುವ ಧೈರ್ಯ ಯಾರಿಗಿದೆ’ ಎಂದು ಕೆಣಕಿದರು.

‘ಭಕ್ತಿ ಮಾರ್ಗವನ್ನು ನಿಯಂತ್ರಿಸ­ಬೇಕಿದ್ದ ಮಠ­ಗಳು, ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆ­ದಿವೆ. ಆಧ್ಯಾತ್ಮಿಕ ಸಮಾನತೆ ಸಾಧಿಸುವ ಕೇಂದ್ರಗ­ಳಾಗ­ಬೇಕಿದ್ದ ಅವುಗಳು ಸಂಪತ್ತಿನ ಕ್ರೋಡೀಕರಣದ ಮೂಲಕ ಆಸ್ತಿ ಸಂಗ್ರಹದ ಕೇಂದ್ರಗಳಾಗಿವೆ’ ಎಂದು ಛೇಡಿಸಿದರು.

‘ಮಠಗಳು ಆಧ್ಯಾತ್ಮಿಕ ಸಮಾನತೆ ಕೇಂದ್ರಗಳಾಗ­ಬೇಕು ಅಲ್ಲವೇ? ಹಾಗಾದರೆ ನಾಡಿನ ಎಲ್ಲ ಮಠಗಳ ಸ್ವಾಮೀಜಿಗಳು ಸರದಿ ಪ್ರಕಾರ ಬೇರೆ, ಬೇರೆ ಮಠಗಳಿಗೆ ವರ್ಗಾವಣೆಗೊಂಡು ಧರ್ಮದ ಕೆಲಸ ನಡೆಸಲು ಒಪ್ಪುವರೇ’ ಎಂದು ಅವರು ಪ್ರಶ್ನಿಸಿದರು.

‘ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗೆ ಉಂಟೇನು’ ಎಂಬ ಪ್ರಶ್ನೆಯನ್ನು ಆಗ ವಚನಕಾರರು ಹಾಕಿದರು. ಹಣ–ಆಸ್ತಿ ಸಂಪಾದನೆಗೆ ನಿಂತವರು ಈಗಿನ ಸ್ವಾಮೀಜಿಗಳು. ಈ ಸಮಸ್ಯೆಯನ್ನು ಹೇಗೆ ಎದುರು­ಗೊಳ್ಳಬೇಕು ಎಂಬ ಪ್ರಶ್ನೆಗೆ ನನ್ನ ಬಳಿಯೂ ಪರಿಹಾರ ಇಲ್ಲ’ ಎಂದು ತಿಳಿಸಿದರು.

ಜಾನಪದ ವಿದ್ವಾಂಸ ಡಾ.ಮೀರಾ ಸಾಬಿಹಳ್ಳಿ ಶಿವಣ್ಣ, ‘ಜಾತಿ ವ್ಯವಸ್ಥೆ ಅಳಿಸಬೇಕಾದ ಹೊಣೆಹೊತ್ತ ಶರಣರೇ ಮುಂದೆ ನಿಂತು ಜಾತಿಗೊಂದು ಮಠ ತೆರೆಯುವ ಅನಾಹುತ ಕೆಲಸ ಮಾಡಿ­ದರು. ಈಗ ಬಸವಣ್ಣನ ದೊಡ್ಡ ಪ್ರತಿಮೆ­ಯನ್ನೂ ಪ್ರತಿಷ್ಠಾಪಿಸಲು ಹೊರಟಿ­ದ್ದಾರೆ. ಬಸವ ತತ್ವಗಳಿಗೆ ವಿರುದ್ಧವಾದ ಕಾರ್ಯಗಳು ಇವುಗಳಲ್ಲವೆ’ ಎಂದು ಕೇಳಿದರು.

ಸಂಸ್ಕೃತ ವಿಶ್ವವಿದ್ಯಾಲಯದಿಂದ ಬಂದಿದ್ದ ಸಹಾಯಕ ಪ್ರಾಧ್ಯಾಪಕ­ರೊಬ್ಬರು, ‘ಹಿಂದೆ ಮಠಗ­ಳೆಂದರೆ ವಿದ್ಯೆ ನೀಡುವ ತಾಣಗಳಾಗಿದ್ದವು. ಅವರಿಗೆ ಶಿಕ್ಷಣ ನೀಡುತ್ತಿದ್ದ ವ್ಯಕ್ತಿಯೇ ಗುರುವಾಗಿದ್ದ. ಆದರೀಗ ಅವುಗಳ ಸ್ವರೂಪವೇ ಬದಲಾಗಿದ್ದು, ಸಮಾಜಕ್ಕೆ ಮಠಗಳ ಅಗತ್ಯ ಇಲ್ಲವಾಗಿದೆ. ಯೋಗ್ಯತೆ ಇಲ್ಲದವರು ಅಲ್ಲಿನ ಸ್ವಾಮೀಜಿ ಆಗುತ್ತಿ­ದ್ದಾರೆ. ಐಎಎಸ್‌ ಅಧಿಕಾರಿಗಳಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

‘ಹಲವು ಮಠಗಳಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿದ್ದು, ಭಯೋತ್ಪಾದನೆ ಕೇಂದ್ರಗಳಾಗಿ ಅವುಗಳು ಮಾರ್ಪಟ್ಟಿವೆ’ ಎಂದು ಹೇಳಿದರು.

ಈ ಹೇಳಿಕೆಯಿಂದ ತೀವ್ರವಾಗಿ ಕೆರಳಿದ ಹಿರಿಯ ಸಭಿ­ಕ­ರೊಬ್ಬರು, ‘ಏ ತಮ್ಮಾ, ನಿನ್ನ ವಯಸ್ಸೆಷ್ಟು’ ಎಂದು ಕೇಳಿದರು. ‘ಅನುಭವ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ಬೇಡ. ಮಠಗಳು ಮಾಡುವ ಕೆಲಸ ನಿನಗೆ ಗೊತ್ತೇನು’ ಎಂದು ಪ್ರಶ್ನಿಸಿ­ದರು. ‘ಅರ್ಹತೆ ಇಲ್ಲದೆ ಪೀಠಾಧಿಪತಿಗಳಾದ ಒಬ್ಬ ಸ್ವಾಮೀಜಿ ಹೆಸರು ಹೇಳು ನೋಡೋಣ’ ಎಂದು ಜೋರಿನಿಂದ ಕೇಳಿದರು. ಅವರಿಗೆ ಪೂರಕವಾಗಿ ಹಲವು ಸಭಿಕರು ಎದ್ದುನಿಂತು ಧ್ವನಿಗೂಡಿಸಿದರು.

ಡಾ. ವೀರಣ್ಣ ದಂಡೆ, ‘ಏನನ್ನೋ ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುವ ಅಗತ್ಯವಿಲ್ಲ. ಮಠಗಳು ಜನಕ್ಕೆ ದಾರಿತೋರುವ ದೀಪಗಳಾಗಿವೆ. ಶರಣರ ಮನೆಗಳೇ ಮಠಗಳಾಗಿವೆ. ಜಾತ್ರೆಗಳನ್ನು ನಡೆಸುವ ಮೂಲಕ ತಳ ಸಮುದಾಯದ ಜನಕ್ಕೂ ಆಧ್ಯಾತ್ಮದ ಅನುಭವ ಸಿಗುವಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಹೇಳಿದರು.

ದಂಡೆ ಅವರ ಅಭಿಪ್ರಾಯಕ್ಕೆ ಇನ್ನೊಂದು ಬಣದಿಂದ ತೀವ್ರ ಆಕ್ಷೇಪ ಕೇಳಿಬಂತು. ಮಠಗಳ ಪರ–ವಿರೋಧವಾಗಿ ಕೆಲಕಾಲ ಚಕಮಕಿ ನಡೆಯಿತು. ಮಠಗಳ ಪರವಾಗಿ ನಿಂತವರಲ್ಲಿ ಹಿರಿಯರೇ ಹೆಚ್ಚಾಗಿದ್ದರು. ವಾಗ್ವಾದದ ನಡುವೆಯೇ ಮೈಕ್‌ ಹಿಡಿದು ಎದ್ದು­ನಿಂತ ಪ್ರೊ. ಚಂದ್ರಶೇಖರ ಪಾಟೀಲ, ‘ಮಠಗಳು ಶಿಕ್ಷಣದ ವ್ಯಾಪಾರಿ ಕೇಂದ್ರಗಳಾಗಿವೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಸ್ವಾಮೀಜಿಗಳ ಕೃಪಾ­ಪೋಷಿತ ಕಾಲೇಜುಗಳಲ್ಲಿ ಕೆಲಸ ಮಾಡಿದ ಉಪನ್ಯಾಸ­ಕರು, ಸ್ವಾಮೀಜಿಗಳಿಗೇ ರಾಜಗುರುಗ­ಳಾಗಿ ಕೆಲಸ ಮಾಡುವವರು ಇಲ್ಲಿದ್ದಾರೆ. ಮಠಗಳ ಚರ್ಚೆ ಮುಂದುವರಿದರೆ ಲಾಠಿ ಚಾರ್ಜ್‌ ಆಗುವ ಸಂಭವ ಇದೆ’ ಎಂದು ಚಟಾಕಿ ಹಾರಿಸಿದರು.

ಸ್ವಾಮೀಜಿಗಳಿಗೆ ಮದುವೆ ಮಾಡಿ
ದೇಶದ ಎಲ್ಲ ಮಠಗಳನ್ನು ರಾಷ್ಟ್ರೀಕರಣ ಮಾಡಬೇಕು. ಶ್ರೀಮಂತ ಮಠಗಳನ್ನು ಬ್ಯಾಂಕ್‌ ಆಗಿ ಪರಿವರ್ತಿಸಬೇಕು. ಮಿಕ್ಕ ಮಠಗಳಲ್ಲಿ ಶಾಲೆ ತೆರೆಯಬೇಕು. ಅವುಗಳ ಪೀಠಾಧಿಪತಿಗಳಾಗಿರುವ ಸ್ವಾಮೀಜಿಗಳಿಗೆ ಅನುರೂಪದ ಕನ್ಯೆ ನೋಡಿ ಮದುವೆ ಮಾಡಬೇಕು
ಪ್ರೊ. ಚಂದ್ರಶೇಖರ ಪಾಟೀಲ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT