ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದಲ್ಲಿ ದಾಖಲೆ ಮತದಾನ

Last Updated 25 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಭೋಪಾಲ್‌/ಐಜ್ವಾಲ್‌ (ಪಿಟಿಐ): ಮಧ್ಯಪ್ರದೇಶ ಮತ್ತು ಗುಡ್ಡಗಾಡು ರಾಜ್ಯ ಮಿಜೋರಾಂನಲ್ಲಿ  ಸೋಮವಾರ ಬಹುತೇಕ ಶಾಂತಿಯುತ ಮತದಾನ ನಡೆದವು.

ಮಧ್ಯಪ್ರದೇಶದಲ್ಲಿ ಶೇ 70ರಷ್ಟು ದಾಖಲೆ ಪ್ರಮಾಣದಲ್ಲಿ ಮತದಾನ­ವಾಗಿದೆ. 2008ರಲ್ಲಿ ಶೇ 69.58ರಷ್ಟು ಮತದಾನವಾಗಿತ್ತು.

ಧಾರ್‌ ಜಿಲ್ಲೆಯಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡಿದ ಆರೋಪದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ರಂಜನಾ ಬಾಘೇಲ್‌ ವಿರುದ್ಧ ಭಾರತೀಯ ದಂಡ ಸಂಹಿತೆ 353/34 ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

ಭಿಂಡ್‌ ಜಿಲ್ಲೆಯ ಲಹರ್‌ ಮತಗಟ್ಟೆ ಕೇಂದ್ರದ ಬಳಿ ಜಮಾಯಿಸಿದ್ದ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಜೈದೀಪ್‌ ಗೋವಿಂದ್‌ ತಿಳಿಸಿದರು.

ಭಿಂಡ್‌ ಜಿಲ್ಲೆಯಲ್ಲಿ ನಾಲ್ಕು ಕಡೆ ಮತ್ತು ಮೊರೆನಾ ಜಿಲ್ಲೆಯ ಮೂರು ಕಡೆ ಕೆಲವು ಅಹಿತಕರ ಘಟನೆ ಹೊರತುಪಡಿಸಿದರೆ ಮತದಾನ ಶಾಂತಯುತವಾಗಿತ್ತು. ಒಬ್ಬ ವ್ಯಕ್ತಿ ಗಾಯಗೊಂಡಿದ್ದು, 30 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಾವೊವಾದಿಗಳ ಪ್ರಾಬಲ್ಯವಿರುವ ಬಾಲಾಘಾಟ್ ಸೇರಿಂತೆ ಮೂರು ಜಿಲ್ಲೆಗಳಲ್ಲಿ ಭಾರಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಮತಗಟ್ಟೆಗಳ ಸುತ್ತ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಳ್ಳಲಾಯಿತು. ಈ ಜಿಲ್ಲೆಗಳಲ್ಲಿ ಶೇ 70ರಷ್ಟು ಜನರು ಮತ ಚಲಾವಣೆ ಮಾಡಿದರು.

ರಸ್ತೆ ಇಲ್ಲವೆಂದು ಆರೋಪಿಸಿ ಹತ್ತು ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಜನರು ಮತದಾನ ಬಹಿಷ್ಕರಿಸಿದ್ದರು. ಚೌರಿಯಲ್ಲಿ ಗುಂಪೊಂದು ಎಲೆಕ್ಟ್ರಾನಿಕ್‌ ಮತಯಂತ್ರವನ್ನು ಮುರಿದು ಹಾಕಿತು. ನಂತರ ಹೊಸ ಮತಯಂತ್ರ ತರಿಸಿ ಮತದಾನ ಪ್ರಕ್ರಿಯೆ ಮುಂದುವರಿಸಲಾಯಿತು.

ಶೇ 81ರಷ್ಟು ಮತದಾನ:  ಗುಡ್ಡಗಾಡು ರಾಜ್ಯ ಮಿಜೋರಾಂನ 40 ವಿಧಾನ ಸಭಾ ಕ್ಷೇತ್ರಗಳಿಗೆ  ಶೇ 81ರಷ್ಟು ಮತದಾನವಾಗಿದೆ.

ಮುಖ್ಯಮಂತ್ರಿ ಲಾಲ್‌ ಥಾನ್ ಹವ್ಲಾ ಮತ್ತು ಸಂಪುಟದ 11 ಸಚಿವರು ಸೇರಿ 142 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಎಲೆಕ್ಟ್ರಾನಿಕ್‌ ಮತಯಂತ್ರ ಸೇರಿದೆ.

ಮಧ್ಯಾಹ್ನ 3.30ಕ್ಕೆ ಮತದಾನ ಕೊನೆಗೊಂಡಾಗ ದೊರೆತ ಪ್ರಾಥಮಿಕ ಮಾಹಿತಿಯಂತೆ ರಾಜ್ಯದ ಒಟ್ಟು 6.9 ಮತದಾರರಲ್ಲಿ ಶೇ 81ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅಶ್ವನಿಕುಮಾರ್‌ ತಿಳಿಸಿದ್ದಾರೆ.

  ಗ್ರಾಮಾಂತರ ಪ್ರದೇಶಗಳಲ್ಲಿ ನಡೆದ ಮತದಾನದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ 82.35ರಷ್ಟು ಮತದಾನವಾಗಿತ್ತು.

ಮಣಿಪುರ ಚಾಲ್ಫಿಲ್, ತುವಾವ್ಲ್ ಮತ್ತು ಸೆರ್‌ಲೂಯಿಯಲ್ಲಿ ಬಂಡು­ಕೋರರು ಮತದಾನಕ್ಕೆ ಅಡ್ಡಿಪಡಿಸಿದ ವರದಿಗಳಾಗಿವೆ. ಇದನ್ನು ಹೊರತು ಪಡಿಸಿದರೆ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು ಎಂದು ಅಶ್ವನಿ ಕುಮಾರ್‌ ತಿಳಿಸಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌, ಪ್ರಮುಖ ಪ್ರತಿಪಕ್ಷ ಮಿಜೋ ನ್ಯಾಶನಲ್‌ ಫ್ರಂಟ್‌ (ಎಂಎನ್‌ಎಫ್‌), ಮಿಜೋರಾಂ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎಂಡಿಎ), ಮಿಜೋರಾಂ ಪೀಪಲ್ಸ್‌ ಕಾನ್ಫರೆನ್ಸ್‌ (ಎಂಪಿಸಿ) ಮತ್ತು ಮಾರಾಲ್ಯಾಂಡ್‌ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎಂಡಿಎಫ್‌) ಎಲ್ಲ 40 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಜೋರಾಮ್ ರಾಷ್ಟ್ರೀಯ ಪಕ್ಷ (ಜೆಡ್‌ಎನ್‌ಪಿ) 38, ಬಿಜೆಪಿ 17 ಮತ್ತು ಎನ್‌ಸಿಪಿ ಎರಡು ಕಡೆ ಸ್ಪರ್ಧಿಸಿದೆ. ನಾಲ್ವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಒಂದು ಸ್ಥಾನ ಹೊರತು ಪಡಿಸಿದರೆ ಎಲ್ಲ 39 ಕ್ಷೇತ್ರಗಳೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.

ಮುಖ್ಯಮಂತ್ರಿ ಲಾಲ್‌ ಥಾನ್ ಹವ್ಲಾ ಅವರು ಪತ್ನಿ ಸಮೇತರಾಗಿ ಝಾರ್ಕ್ವಾಟ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಇದೇ ಮೊದಲ ಬಾರಿಗೆ ರಾಜ್ಯದ ಹತ್ತು ಕ್ಷೇತ್ರಗಳಲ್ಲಿ ಮತ ಚಲಾವಣೆ ದೃಢೀಕರಣ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಮತ ಸರಿಯಾಗಿ ಚಲಾವಣೆ­ಯಾಗಿದೆ ಎಂಬ ಬಗ್ಗೆ ಮತದಾರರಿಗೆ ಮುದ್ರಿತ ಚೀಟಿ ನೀಡಲಾಯಿತು. ಇದಕ್ಕಾಗಿ ಎಲೆಕ್ಟ್ರಾನಿಕ್‌ ಮತಯಂ­ತ್ರಗಳಿಗೆ ಪುಟ್ಟ ವಿವಿಪಿಎಟಿ ಎಂಬ ಯಂತ್ರವನ್ನು ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT