ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವ ಕಳೆದುಕೊಳ್ಳುತ್ತಿರುವ ಸಾಹಿತ್ಯ

ಜಿಲ್ಲಾ ಕವಿಗೋಷ್ಠಿಯಲ್ಲಿ ಬಿ.ಆರ್‌. ಲಕ್ಷ್ಮಣರಾವ್‌ ಅಭಿಪ್ರಾಯ
Last Updated 3 ನವೆಂಬರ್ 2014, 7:59 IST
ಅಕ್ಷರ ಗಾತ್ರ

ಮೈಸೂರು: ‘ಪ್ರಸ್ತುತ ಕವಿಗೋಷ್ಠಿ ಮಾತ್ರವಲ್ಲ ಇಡೀ ಸಾಹಿತ್ಯವೇ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ’ ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗುಬ್ಬಿಗೂಡು ಸಾಂಸ್ಕೃತಿಕ ಸಿರಿ ಸಂಸ್ಥೆ ಇಲ್ಲಿನ ಕುವೆಂಪುನಗರದ ರೋಟರಿ ಪಶ್ಚಿಮ ಶಾಲಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮ’ದ ಪ್ರಯುಕ್ತ ‘ಜಿಲ್ಲಾ ಕವಿಗೋಷ್ಠಿ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಬಹುಪಾಲು ಕವಿತೆಗಳು ಇಂದು ಆಕರ್ಷಕ ಸಂಗತಿಗಳನ್ನು ಕಳೆದುಕೊಂಡು ಕೇವಲ ಹೇಳಿಕೆಗಳ ಮಟ್ಟದಲ್ಲಿ ಮಾತ್ರ ಅಭಿವ್ಯಕ್ತಗೊಳ್ಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಮಾಧ್ಯಮಗಳೂ ಕವಿಗೋಷ್ಠಿಗಳಿಗೆ ಸರಿಯಾದ ಪ್ರಾಧಾನ್ಯತೆ ನೀಡುತ್ತಿಲ್ಲ’ ಎಂದು ತಿಳಿಸಿದರು.

‘ನವೋದಯದ ಕಾಲಘಟ್ಟದಲ್ಲಿ ಕವಿತೆಗೆ ಅನೇಕ ಆಕರ್ಷಕ ಸಂಗತಿಗಳ ಜತೆಗೆ ವೈವಿಧ್ಯಗಳು ಇದ್ದವು. ವಸ್ತು, ಶೈಲಿ, ಛಂದಸ್ಸುಗಳಲ್ಲಿದ್ದ ವೈವಿಧ್ಯಗಳು ಅಂದು ಕಾವ್ಯದ ಜನಪ್ರಿಯತೆಗೆ ಕಾರಣವಾಗಿದ್ದವು. ಆದರೆ, ನವ್ಯ ಕಾಲಘಟ್ಟದಲ್ಲಿ ಕಾವ್ಯ ಏಕಶಿಲಾ ರೂಪ ಪಡೆದು ಜನಪ್ರಿಯತೆಯಿಂದ ವಿಮುಖವಾಯಿತು’ ಎಂದು ಅವರು ವಿಶ್ಲೇಷಿಸಿದರು. ‘ಕವಿತೆ ಎಂದರೇನು ಎಂಬುದಕ್ಕೆ ಯಾವುದೇ ಸಿದ್ಧಸೂತ್ರ ಇಲ್ಲ. ಮಹಾನ್ ಕವಿಗಳಿಗೂ ಇದು ಹೊಳೆದಿಲ್ಲ. ಹಾಗಾಗಿಯೇ, ಅವರು ಕಟ್ಟಿದ ಕೆಲವು ಪದ್ಯಗಳು ಮಾತ್ರ ಯಶಸ್ವಿಯಾದವೇ ಹೊರತು ಎಲ್ಲಾ ಪದ್ಯಗಳು ಯಶಸ್ಸನ್ನು ಪಡೆಯಲಿಲ್ಲ. ಹಾಗಾಗಿ, ಇದಮಿತ್ಥಂ ಎಂದು ಹೇಳುವಂತಹ ಯಾವುದೇ ಸಿದ್ಧಸೂತ್ರಗಳು ಕವಿತೆಗೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕಟ್ಟಿದ್ದೆಲ್ಲವೂ ಕಟ್ಟುವ ಕವಿತೆಯಾಗಬಹುದೇ ಹೊರತು ಹುಟ್ಟು ಕವಿತೆಯಾಗಲಾರದು. ಪದಗಳಿಗೆ ಮಾಂತ್ರಿಕ ಸ್ಪರ್ಶ ಆದಾಗ ಮಾತ್ರ ಕವಿತೆ ಸಿದ್ಧಿಸುತ್ತದೆ. ಈ ಮಾಂತ್ರಿಕ ಸ್ಪರ್ಶವೇ ಒಂದು ದೊಡ್ಡ ವಿಸ್ಮಯ. ಇದಕ್ಕೆ ಪ್ರತಿಭೆ, ವಿದ್ವತ್ತು, ಅನುಭವ, ಕಲಾಕೌಶಲ ಇರಲೇಬೇಕು. ಇವನ್ನೆಲ್ಲಾ ಇಟ್ಟುಕೊಂಡು ಉತ್ತಮ ಕವಿತೆಗಾಗಿ ಕವಿತೆ ರಚಿಸುತ್ತಾ ಕಾಯಬೇಕು’ ಎಂದು ಯಶಸ್ವಿ ಕವಿತೆ ಕುರಿತು ವಿಶ್ಲೇಷಿಸಿದರು. ‘ಕಾವ್ಯ ಎಂಬುದು ಅಮೃತಕ್ಕೆ ಹಾರುವ ಗರುಡನಾಗಬಾರದು. ಅದು ಮನೆ ಮನೆ ಸಮಾಚಾರ ಹೇಳುವ ಗುಬ್ಬಿಯ ಹಾಗೆ ಇರಬೇಕು. ಇದರೊಂದಿಗೆ ಸದ್ಯದ ಸಮಸ್ಯೆಗೆ ಕವಿತೆ ಸ್ಪಂದಿಸಬೇಕು. ಕಥೆ, ಸುಭಾಷಿತ ವಿಚಾರ ಅಲ್ಲ. ತಮ್ಮ ಅನುಭವವನ್ನು ಹೇಳುವುದೇ ಕವಿತೆ’ ಎಂದು ವಿವರಿಸಿದರು.

ನಂತರ ಅವರು ‘ಎಷ್ಟೊಂದು ಏದುಸಿರು, ಎಷ್ಟು ನಿಟ್ಟುಸಿರು ನಾನು ಉಸಿರಾಡುತ್ತಿರುವ ಈ ಗಾಳಿಯಲ್ಲಿ...’ ಎಂದು ಆರಂಭವಾಗುವ ‘ಅವ್ಯಕ್ತ’ ಎಂಬ ಕವನವನ್ನು, ‘ದಯವಿಟ್ಟು ಸುಟ್ಟುಬಿಡಿ ನನ್ನ ಹೆಣವನ್ನು ನಾನು ಸತ್ತ ಕೂಡಲೇ’ ಎಂದು ಆರಂಭವಾಗುವ ‘ಹೀಗೆ ಒಬ್ಬನ ಮೃತ್ಯು ಪತ್ರ’ ಎಂಬ ಮತ್ತೊಂದು ಕವನವನ್ನು ಓದಿ ಕವಿಗೋಷ್ಠಿಗೆ ಚಾಲನೆ ನೀಡಿದರು. ಕವಿಗಳೇ ಕಿವಿಗಳಾಗುವು ಸ್ಥಿತಿ– ಸಿಪಿಕೆ: ‘ಬಹುಪಾಲು ಕವಿಗೋಷ್ಠಿಗಳಲ್ಲಿ ಇಂದು ಕವಿಗಳೇ ಕಿವಿಗಳಾಗುವ ಸ್ಥಿತಿ ಇದೆ. ಇದು ಶಾಬ್ದಿಕ ಸಂಬಂಧವೂ ಹೌದು, ತಾತ್ವಿಕ ಸಂಬಂಧವೂ ಹೌದು. ಏಕೆಂದರೆ, ಇಂದಿನ ಕಾವ್ಯವನ್ನು ಗ್ರಹಿಸುವುದು ಕಷ್ಟ. ನವ್ಯ ಕಾವ್ಯವನ್ನು ಕಷ್ಟಪಟ್ಟರೆ ಅರಿಯಬಹುದು. ಆದರೆ, ಇಂದಿನ ಕಾವ್ಯವು ಅರ್ಥವಾಗುವುದೇ ಇಲ್ಲ’ ಎಂದು ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.

‘ಇಂದಿನ ಬಹುಪಾಲು ಕವಿಗಳಿಗೆ ಸರಿಯಾಗಿ ಕವನ ಓದುವುದಕ್ಕೂ ಬರುವುದಿಲ್ಲ. ಇನ್ನು ಸಂವಹನದ ಮಾತು ಬಲು ದೂರ. ಬಹುಪಾಲು ಕವಿತೆಗಳು ಮುಖ್ಯವಾಗಿ ಸಂವಹನವೇ ಆಗುತ್ತಿಲ್ಲ. ‘ವಾಚನ ಮತ್ತು ವ್ಯಾಖ್ಯಾನ’ ಎಂಬ ಕಾರ್ಯಕ್ರಮವಿಟ್ಟರೆ ಬಹುಶಃ ಕವಿತೆ ಸಂವಹನ ಆಗಬಹುದೇನೋ’ ಎಂದು ವ್ಯಂಗ್ಯವಾಡಿದರು. ‘ಈವತ್ತಿನ ಕಾವ್ಯ ಏಕರೂಪಿಯಾಗಿದೆ. ಅದು ಬಹುರೂಪಿಯಾಗಬೇಕಾದ ಜರೂರು ಇದೆ. ಕಾವ್ಯವನ್ನು ಅನುಸರಿಸಿ ಮತ, ಮೌಢ್ಯಗಳಿಂದ ಪಾರಾಗಬೇಕಾಗಿದೆ. ಇಂದು ಅನೇಕ ‘ಭಾಗ್ಯ’ಗಳು ಬಂದಿವೆ. ‘ಹಾಡು ಕೇಳಿದರೆ ಹಸಿವಿಲ್ಲ’ ಎಂಬ ಜನಪದರ ನುಡಿಯಂತೆ ‘ಕಾವ್ಯಭಾಗ್ಯ’ವೂ ಇಂದು ಒದಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಬಿ. ಮಹೇಶ್ ಹರವೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT