ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿಗಳ ನಡುವೆಯೂ ಅಗತ್ಯ ಕೃತಿ

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಮಮತಾ ರಾವ್ ಅವರ ‘ಜಯಂತ ಕಾಯ್ಕಿಣಿಯವರ ಕಥನಾವರಣ’ ಕಥೆಗಾರ, ಕವಿ, ಅಂಕಣಕಾರ ಜಯಂತರ ಸಾಹಿತ್ಯದ ಬಗ್ಗೆ ಪ್ರಕಟವಾಗಿರುವ ಪ್ರಥಮ ಸ್ವತಂತ್ರ ವಿಮರ್ಶಾ ಕೃತಿ. ಈಗಾಗಲೇ ಏಳು ಕಥಾ ಸಂಕಲನ, ಐದು ಕವನ ಸಂಗ್ರಹ, ಮೂರು ಅಂಕಣ ಬರಹಗಳ ಸಂಗ್ರಹಗಳನ್ನು ಪ್ರಕಟಿಸಿ ಸಮಕಾಲೀನ ಕನ್ನಡ ಲೇಖಕರಲ್ಲಿ ಸ್ವಾನುಭವನಿಷ್ಠ ಲೇಖಕರಾಗಿರುವ ಜಯಂತರ ಸಾಹಿತ್ಯದ ಕುರಿತಂತೆ ಅವರ ಓದುಗರಿಗೆ ಇಂಥ ಕೃತಿಗಳ ಅಗತ್ಯ ಇದ್ದದ್ದು ಸಹಜ. ಅಂಥ ಅಗತ್ಯವನ್ನು ಜಯಂತರ ಕಥಾ ಸಾಹಿತ್ಯ ಕುರಿತ ಈ ಕೃತಿ ಕೆಲ ಮಟ್ಟಿಗೆ ಪೂರೈಸಿದೆ.

ಜಯಂತರ ಕಥಾ ಸಾಹಿತ್ಯವನ್ನು ಯಾರೇ ಬೀಸಾಗಿ ಓದಿದರೂ ಥಟ್ಟನೆ ಅವುಗಳನ್ನು ‘ಗೋಕರ್ಣ ಕಥೆಗಳು’ ಮತ್ತು ‘ಮುಂಬೈ ಕಥೆಗಳು’ ಎಂದು ವಿಭಜಿಸುವುದು ಸಾಧ್ಯ. ಯಾಕೆಂದರೆ ಇದು ಅವರ ಕಥೆಗಳ ಒಡೆದು ಕಾಣುವ ಒಂದು ಪ್ರಮುಖ ಲಕ್ಷಣ. ಈ ಲೇಖಕರೂ ಕೂಡ ಈ ಸಹಜ ಹಾಗೂ ಸುಲಭವಾಗಿ ಗೋಚರಿಸುವ ವರ್ಗೀಕರಣವನ್ನೇ ಆಧಾರವಾಗಿಟ್ಟು ಅವುಗಳ ಅಧ್ಯಯನ ಮಾಡಿದ್ದಾರೆ. ಕಥೆಗಳ ಆವರಣದ ಅಧ್ಯಯನ ಅವರ ಉದ್ದೇಶವಾಗಿರುವುದರಿಂದ ಇದು ಸಹಜವೇ ಆಗಿದೆ.

ಈ ಕೃತಿಯಲ್ಲಿ ಪ್ರಸ್ತಾವನೆ, ಜಯಂತರ ಬದುಕು-ಬರಹ, ಜಯಂತರೊಂದಿಗೆ ಸಂವಾದ, ಗೋಕರ್ಣ ಹಿನ್ನೆಲೆಯಲ್ಲಿ ಬರೆದ ಕಥೆಗಳು, ಮುಂಬಯಿ ಕಥೆಗಳು, ಜಯಂತರ ಕಥೆಗಳಲ್ಲಿ ‘ನಗರ ಜಾನಪದ’ ಮತ್ತು ಜಯಂತರ ಕಥೆಗಳ ಅನನ್ಯತೆ- ಹೀಗೆ ಒಟ್ಟು ಏಳು ಅಧ್ಯಾಯಗಳಿವೆ. ಕನ್ನಡ ಕಥಾ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ವಿಷಯ ಬಂದಾಗಲೆಲ್ಲ ನಮ್ಮ ನೆನಪಿಗೆ ಬರುವ ಎರಡು ಮುಖ್ಯ ಹೆಸರುಗಳೆಂದರೆ ವ್ಯಾಸರಾಯ ಬಲ್ಲಾಳ ಮತ್ತು ಯಶವಂತ ಚಿತ್ತಾಲರದು.

ಇವರು ಕೂಡ ಜಯಂತರಂತೆ ದಶಕಗಳ ಕಾಲ ಮುಂಬೈನಲ್ಲಿದ್ದವರು. ಜಯಂತ ಮತ್ತು ಚಿತ್ತಾಲರ ಕಥೆಗಳನ್ನು ಪರಸ್ಪರ ಹೋಲಿಸುವ ಮೂಲಕ ಅವರಲ್ಲಿಯ ಮೂಲಭೂತ ವ್ಯತ್ಯಾಸವನ್ನು ಅರಿಯಲು ಲೇಖಕಿ ಪ್ರಯತ್ನಿಸುತ್ತಾರೆ. ‘ಚಿತ್ತಾಲರಿಗೆ ಜನರ ಮಾನಸಿಕ ಕ್ಲೇಷ, ದುಗುಡಗಳು, ಅವರು ಎದುರಿಸುವ ಆತಂಕಗಳು ಮುಖ್ಯವಾದರೆ, ಜಯಂತರಿಗೆ ನಗರದ ಸಾಮಾನ್ಯ ಜೀವಿಗಳ ಬದುಕಿನ ಚಿತ್ರ ಮುಖ್ಯವಾಗುತ್ತದೆ. ಅಲಕ್ಷಿತರ ಜೀವನದಲ್ಲಿ ಇನ್ನೂ ಜೀವಂತವಾಗಿರುವ ಮಾನವೀಯತೆಯ ದರ್ಶನ ಮುಖ್ಯವಾಗುತ್ತದೆ’ ಎಂದು ಅವರು ಸರಿಯಾಗಿಯೇ ಗುರುತಿಸುತ್ತಾರೆ.

ಹಾಗೆಯೇ ಅವರು ಜಯಂತರ ಕಥೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಮುಂಬಯಿಯ ಕಥೆಗಳ ಬಗ್ಗೆ ಕಂಡುಕೊಂಡ ಒಳನೋಟಗಳನ್ನು ಅಲ್ಲಗಳೆಯಲಾಗದು. ಉದಾ: ‘ಜಯಂತರ ಪಾತ್ರಗಳಿಗೆ ಭೂತಕಾಲವಿಲ್ಲ; ಅವು ಭವಿಷ್ಯದ ಕುರಿತು ಚಿಂತಿಸುವುದೂ ಇಲ್ಲ; ಕೇವಲ ವರ್ತಮಾನದ ಬದುಕನ್ನು ಹಸನಾಗಿಸುವತ್ತ ಅವುಗಳ ಕಾಳಜಿ ಅಪಾರ’ (ಪು. 74). ‘ಜಯಂತರ ಕಥೆಗಳಲ್ಲಿ ನಗರ ಜೀವನದ ಯಾಂತ್ರಿಕತೆ, ಜನಸಂದಣಿ, ಕೊಳಕು, ಕ್ಷುಲ್ಲಕ ಬದುಕಿನಲ್ಲಿ ಮೂಡುವ ನಿರ್ವಿಕಾರತೆ, ಅನಾಥ ಪ್ರಜ್ಞೆಗಳಿಗಿಂತ ಇವುಗಳ ನಡುವೆಯೂ ಮಿಡಿಯುತ್ತಿರುವ ಮಾನವ ವಿನ್ಯಾಸಗಳು ಕಾಣುತ್ತವೆ’.

‘ಜಯಂತರ ಪಾತ್ರಗಳಿಗೆ ಬಿಡುಗಡೆ ಎಂದರೆ ಓಡಿ ಹೋಗುವುದಲ್ಲ, ಅದು ಬದುಕನ್ನು ಹೊಸ ರೀತಿಯಿಂದ ಎದುರಿಸುವ ಚೈತನ್ಯವನ್ನು ಗಳಿಸುವ ಪ್ರಕ್ರಿಯೆ’ (ಪು.100), ಇತ್ಯಾದಿ. ಇದೆಲ್ಲಕ್ಕಿಂತ ಹೆಚ್ಚಾಗಿ, ಜಯಂತರು ತಮ್ಮ ಕಥೆಗಳಲ್ಲಿ ಮುಂಬೈ ಜೀವನವನ್ನು ದಾಖಲಿಸಿತ್ತಾ, ಒಂದು ರೀತಿಯಲ್ಲಿ ‘ನಗರ ಜಾನಪದ’ವನ್ನು ಕಟ್ಟಿಕೊಡುತ್ತಾರೆ ಎಂದು ಲೇಖಕಿ ಹೇಳುತ್ತಾರೆ. ಇಲ್ಲಿ ಅವರು ಅಲನ್ ದಂಡೆಸ್‌ನ ನಗರ ಜಾನಪದ ಸಿದ್ಧಾಂತದ ಪರಿಪ್ರೇಕ್ಷ್ಯದಲ್ಲಿ ಜಯಂತರ ಕಥೆಗಳನ್ನಿಟ್ಟು ನೋಡುತ್ತಾರೆ.

ನನಗೆ ತಿಳಿದಂತೆ, ಜಯಂತರ ಕಥೆಗಳಿಗೆ  ಈ ಸಿದ್ಧಾಂತವನ್ನು ಮೊಟ್ಟ ಮೊದಲ ಬಾರಿಗೆ ಅನ್ವಯಿಸಿದವರು ಮಮತಾ ರಾವ್. ‘ಹಳ್ಳಿಗಳಿಂದ ನಗರಕ್ಕೆ ಬಂದು ವಾಸಿಸುವವರು, ತಾವು ಹುಟ್ಟಿ ಬೆಳೆದ ಪರಿಸರದ ಕಟ್ಟು ಕಟ್ಟಳೆಗಳನ್ನು, ಆಚಾರ-ವಿಚಾರಗಳನ್ನು, ಉಡುಗೆ-ತೊಡುಗೆ, ಭಾಷೆ-ಕಲೆ, ಆಹಾರ ಪದ್ಧತಿ, ಹಬ್ಬ-ಹರಿದಿನಗಳನ್ನು ತಾವು ವಾಸಿಸುತ್ತಿರುವ ನಗರಗಳಲ್ಲೂ ತಮ್ಮ ಪರಿಯಲ್ಲಿ ಆಚರಿಸುತ್ತಾ, ಅವುಗಳನ್ನು ಕಾಪಿಡುವತ್ತ ಸಾಧ್ಯವಾದಷ್ಟೂ ಹೆಣಗುವುದನ್ನು ಕಾಣಬಹುದು’.

ಇದು ದಂಡೆಸ್ ಸಿದ್ಧಾಂತದ ಮೂಲ ಪ್ರಮೇಯ. ಇದಕ್ಕೆ ‘ಮಿಥುನ್ ನಂಬರ ಟೂ’ ಕಥೆಯಲ್ಲಿ ದೀರ್ಘವಾಗಿ ಬರುವ ಮುಂಬಯಿಯ ಧಾರ್ಮಿಕ ಮೊಸರು ಕುಡಿಕೆ ಉತ್ಸವದ ಚಿತ್ರಣವನ್ನು ಅವರು ಉದಾಹರಿಸುತ್ತಾರೆ. ಜಯಂತ ಕಥೆಗಳ ಪುನರಾವಲೋಕನಕ್ಕೆ ದಂಡೆಸ್ ಸಿದ್ಧಾಂತದ ಅನ್ವಯವು ಒಂದು ಹೊಸ ದೃಷ್ಟಿ ನೀಡೀತು.

ಆದರೆ ಕಥೆಗಳ ಸಹಜ ಪ್ರಾರಂಭಿಕ ವಾಕ್ಯಗಳು– ಉದಾ: ‘ರವಿವಾರದ ಮುಂಜಾವಾದ್ದರಿಂದ ಫ್ಲೋರಾ ಫೌಂಟನ್ ಪ್ರದೇಶ ನಿರ್ಜನವಾಗಿತ್ತು’ (ಗೇಟ್ ವೇ) ಅಥವಾ ‘ಘಾಟಕೋಪರಿನ ಸಿಟಿಬಸ್ ಡಿಪೋದ ಕಂಟ್ರೋಲ್ ರೂಮಿನಲ್ಲಿ ನಡೆದಿರುವ ಸಣ್ಣ ರಂಪ ಡಿಪೋದಲ್ಲಿ ಸಾಲಾಗಿ ಖಾಲಿ ನಿಂತಿರುವ ಡಬಲ್ ಡೆಕ್ಕರ್ ಬಸ್ಸುಗಳಿಗೂ, ಸಾದಾ ಬಸ್‌ಗಳಿಗೂ ಕೇಳುವಂತಿರಲಿಲ್ಲ’ (ಚೌತಿ ಚಂದ್ರ) ಇತ್ಯಾದಿ- ಕೂಡ ನಗರ ಜನಪದವನ್ನು ವ್ಯಕ್ತಗೊಳಿಸುತ್ತವೆ ಎಂಬ ಹೇಳಿಕೆ ಇನ್ನೂ ಹೆಚ್ಚಿನ ವಿವರಣೆಯನ್ನು ಬಯಸುತ್ತದೆ.

ಈ ಕೃತಿಯ ಕೊನೆಯ ಅಧ್ಯಾಯ ‘ಜಯಂತರ ಕಥೆಗಳಲ್ಲಿ ಅನನ್ಯತೆ’. ಇಲ್ಲಿ ಹಲವು ಸಂಗತಿಗಳು ಪುನರಾವರ್ತಿತವಾಗಿವೆ. ಈ ಮೊದಲು ಕಥೆಗಳ ಟಿಪ್ಪಣಿಗಳಲ್ಲಿ ಪ್ರಸ್ತಾಪಿಸಿದ ವಿಷಯಗಳೇ ಮತ್ತೆ ಬಂದಿವೆ. ಆದರೂ ಈ ಅಧ್ಯಾಯದ ಸಶಕ್ತ ಮಹಿಳಾ ಲೋಕ, ವೈವಾಹಿಕ ಜೀವನ, ನೈತಿಕ ಪ್ರಜ್ಞೆ ಮುಂತಾದ ಟಿಪ್ಪಣಿಗಳು ಜಯಂತ ಕಥೆಗಳ ವೈಶಿಷ್ಟ್ಯವನ್ನು ಹೇಳುತ್ತಲೇ ಅವುಗಳ ಸಫಲ ಓದಿಗೆ ದಿಕ್ಸೂಚಿ ನೀಡುತ್ತವೆ.

ಈ ಪುಸ್ತಕದ ಒಂದು ವಿಶೇಷವೆಂದರೆ, ಜಯಂತರ ಬಹುತೇಕ ಎಲ್ಲ ಕತೆಗಳ ಬಗ್ಗೆ ಒಂದು ಚಿಕ್ಕ ಟಿಪ್ಪಣಿಯನ್ನಾದರೂ ನೀಡುವ ಮೂಲಕ ಲೇಖಕಿ ಜಯಂತರ ಕಥಾಭ್ಯಾಸಿಗಳಿಗೆ ಒಂದು ಒಳ್ಳೆಯ ಪ್ರವೇಶವನ್ನೊದಗಿಸಿರುವುದು. ಈ ಟಿಪ್ಪಣಿಗಳು ಸಮಗ್ರವಾಗಿವೆ ಅಷ್ಟೇ ಅಲ್ಲ, ಅಚ್ಚುಕಟ್ಟಾಗಿವೆ ಕೂಡ.

ಇಲ್ಲಿಯೂ ಇನ್ನೂ ಹೆಚ್ಚಿನ ಸುಸಂಬದ್ಧತೆ ಸಾಧ್ಯವಿತ್ತೆನಿಸುತ್ತದೆ. ಜಯಂತರ ಪ್ರಥಮ ಸಂಕಲನ ‘ತೆರೆದಷ್ಟೇ ಬಾಗಿಲು’ ಕೃತಿಯಿಂದ ಮೊದಲಾಗಿ ‘ಬಣ್ಣದ ಕಾಲು’ ಸಂಕಲನದವರೆಗೆ ಗೋಕರ್ಣ ಹಿನ್ನೆಲೆಯ ಕಥೆಗಳನ್ನು ಒಂದೊಂದಾಗಿ ಅವರು ವಿಶ್ಲೇಷಿಸುತ್ತಾರೆ. ಆದರೆ ‘ತೂಫಾನ್ ಮೇಲ್’ ಮತ್ತು ‘ಚಾರ್ಮಿನಾರ್’ ಸಂಕಲನಗಳ ಕಥೆಗಳ ಬಗ್ಗೆ ಬರೆಯುವ  ಮೊದಲು ಅವರ ದ್ವಿತೀಯ ಕಥಾ ಸಂಕಲನ ‘ಗಾಳ’ದ ಕಥೆಗಳನ್ನು ಮಧ್ಯೆ ತಂದುಬಿಡುತ್ತಾರೆ. ಇದಕ್ಕೆ ಕಾರಣ ಗೊತ್ತಾಗುವುದಿಲ್ಲ.

ಪ್ರಬುದ್ಧ ಕಥೆಗಳ ಮಧ್ಯೆ ಪ್ರಾರಂಭಿಕ ಹಂತದ ಕಥೆಗಳ ಸೇರ್ಪಡೆ ತಾರ್ಕಿಕವೆನಿಸುವುದಿಲ್ಲ. ಗೋಕರ್ಣ ಕಥೆಗಳಿರಲಿ, ಮುಂಬಯಿ ಕಥೆಗಳಿರಲಿ, ಪ್ರಾತಿನಿಧಿಕ ಎನ್ನಬಹುದಾದ ಕೆಲವನ್ನು ಆಯ್ದು ಅವುಗಳಲ್ಲಿ ಗೋಕರ್ಣ ಅಥವಾ ಮುಂಬೈ ಚಿತ್ರಣ ಹೇಗೆ ಕಾಲಾನುಕ್ರಮದಲ್ಲಿ ಮಾರ್ಪಡುತ್ತ ಬಂದಿದೆ, ಹೇಗೆ ವಾಸ್ತವವೊಂದು ರೂಪಕದ ಮಟ್ಟಕ್ಕೆ ಏರಿದೆ ಎಂಬುದನ್ನು ಹೇಳಿದ್ದರೆ ಇನ್ನೂ ಹೆಚ್ಚು ಔಚಿತ್ಯಪೂರ್ಣವೆನ್ನಿಸುತ್ತಿತ್ತು. ಗೋಕರ್ಣ ಹಿನ್ನೆಲೆಯ ಕಥೆಗಳಲ್ಲಿ ಲೇಖಕಿ ಹೇಳುವ ಹಾಗೆ ಸಮುದ್ರದ ಪರಿಸರವಿದೆ, ನೈತಿಕ ಪ್ರಜ್ಞೆಯನ್ನು ಪ್ರತಿನಿಧಿಸುವ ಮಾಸ್ತರರಿದ್ದಾರೆ, ಜೀವನದಲ್ಲಿ ಕಂಡುಕೊಂಡ (ಬಹುಶಃ ಕಥೆಗಳಲ್ಲಿ ಬರುವ ವ್ಯಕ್ತಿಗಳು ಕಂಡುಕೊಂಡ) ಮೌಲ್ಯಗಳು, ಕಟುಸತ್ಯಗಳು ಇವೆ, ಬದುಕು ಕಲಿಸಿದ ಪಾಠಗಳಿವೆ. ಇವೆಲ್ಲ ಸರಿ, ಆದರೆ ಅಷ್ಟೇ ಅಲ್ಲ.

ಒಟ್ಟಾರೆ ಈ ಕಥೆಗಳು ಒಂದು ಸಾಮಾನ್ಯ ಘಟನೆಯ ಹಿನ್ನೆಲೆಯಲ್ಲಿ ಮಾನವೀಯ ಸಂಬಂಧಗಳು ದೃಢಗೊಳ್ಳುವುದನ್ನು ಅಥವಾ ಪುನರ್ವಿನ್ಯಾಸಗೊಳ್ಳುವುದನ್ನು, ವ್ಯಕ್ತಿಗಳು ತಮ್ಮ ದೈನಂದಿನ ಕ್ಷುದ್ರತೆಯನ್ನು ಮೀರಲು ಪ್ರಯತ್ನಿಸುವುದನ್ನು ನಿರೂಪಿಸುತ್ತವೆ. ಇದರ ಜೊತೆಜೊತೆಗೇ ಆಧುನಿಕ ಪ್ರವೇಶದಿಂದ ಜನಜೀವನದಲ್ಲಿ ಉಂಟಾಗುವ ಹ್ರಾಸವನ್ನು ಕೂಡಾ ಅವು ತೋರುತ್ತವೆ.

ಒಮ್ಮೊಮ್ಮೆ ಲೇಖಕಿಯ ಹೇಳಿಕೆಗಳು ಅಷ್ಟು ಸ್ಪಷ್ಟವಾಗುವುದಿಲ್ಲ. ‘ತೂಫಾನ್ ಮೇಲ್’ ಮತ್ತು ‘ಚಾರ್ಮಿನಾರ್’ ಕಥಾ ಸಂಕಲನಗಳ ಬಗ್ಗೆ ಬರೆಯುತ್ತಾ ಇಲ್ಲಿಯ ‘ಕಥೆಗಳ ಓಘವು ತೀವ್ರಗೊಳ್ಳುತ್ತಾ ಖಚಿತವಾದ ಮುಕ್ತಾಯವಿಲ್ಲದೆ ಕೊನೆಗೊಳ್ಳುತ್ತವೆ. ಓದಿ ಮುಗಿಸಿದಾಗ ಕಥೆಯು ಅಪೂರ್ಣವಾಗಿದೆ ಎಂಬುದು ಓದುಗನನ್ನು ಬಲವಾಗಿ ಕಾಡುತ್ತದೆ’ (ಪು. 158) ಎನ್ನುತ್ತಾರೆ. ಮುಂದೆ ಪು. 172ರಲ್ಲಿ ‘ಜಯಂತರ ಬಹುತೇಕ ಕಥೆಗಳು ಅಪೂರ್ಣ ಎನ್ನಿಸುತ್ತವೆ. ಕಾದಂಬರಿಯ ಮೊದಲ ಅಧ್ಯಾಯ ಎನ್ನಿಸುವಂಥ ಕಥೆಗಳಿವು’ ಎಂದು ಅಭಿಪ್ರಾಯಪಡುತ್ತಾರೆ.

ಒಂದು ಕಥೆ ಅಪೂರ್ಣವಾಗಿರುವಂತೆ ತೋರುವುದನ್ನು, ಅದಕ್ಕೆ ಖಚಿತವಾದ ಮುಕ್ತಾಯ ಇಲ್ಲದಿರುವುದನ್ನು ಅವರು ಒಂದು ದೋಷವಾಗಿ ಕಾಣುತ್ತಿರುವರೇ ಎಂಬ ಅನುಮಾನ ಬರುವಂತಿದೆ. ಆದರೆ ಕಥೆ open- ended ಆಗಿರುವುದು ದೋಷವಾಗಿರಬೇಕಾಗಿಲ್ಲ ಎಂಬುದು ಅವರಿಗೂ ತಿಳಿಯದ ವಿಷಯವಲ್ಲ.

ಎಲ್ಲ ಸಾಹಿತ್ಯಿಕ ಪಂಥಗಳ ಚೌಕಟ್ಟುಗಳನ್ನು ಮೀರುವ ಜಯಂತರಂಥ ಒಬ್ಬ ಕಥೆಗಾರರ ಬಗ್ಗೆ ಬರೆಯುವಾಗ ಮಿತಿಗಳು ಸಹಜವೇ. ಮಮತಾ ರಾವ್ ಅವರ ಕೃತಿ ಜಯಂತರ ಕಥೆಗಳ ಬಗ್ಗೆ ಅವರಿಗಿರುವ ಪ್ರೀತಿಗೆ ಮತ್ತು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಒಂದು ದ್ಯೋತಕವಾಗಿದೆ. ಜಯಂತ ಕಥೆಗಳ ಸರಿಯಾದ ಓದಿಗೆ ಇದೊಂದು ಮಾರ್ಗದರ್ಶಿಕೆ ಎಂಬುದರಲ್ಲಿ ಸಂಶಯವಿಲ್ಲ. ಮಿತಿಗಳ ನಡುವೆಯೂ ಕಾಲದ ಅಗತ್ಯವನ್ನು ಪೂರೈಸುವ ಸ್ವಾಗತಾರ್ಹ ಕೃತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT