ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ಹುಟ್ಟುಹಾಕುವ ದೃಶ್ಯ ಮಾಧ್ಯಮಗಳು

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬೇಸರ
Last Updated 5 ಜುಲೈ 2014, 11:29 IST
ಅಕ್ಷರ ಗಾತ್ರ

ಮೈಸೂರು: ದೃಶ್ಯ ಮಾಧ್ಯಮಗಳು ಮೌಢ್ಯವನ್ನು ಹುಟ್ಟುಹಾಕುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದು, ಸಮಾಜವನ್ನು ವಿಕಾರಗೊಳಿಸು­ತ್ತಿವೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಪಿಯುಸಿಎಲ್‌, ಫ್ರೈಡೇ ಫೋರಂ, ಸಮತಾ ವೇದಿಕೆ, ಮಹಿಳಾ ಒಕ್ಕೂಟದ ಸಹಯೋಗದಲ್ಲಿ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮೌಢ್ಯ ಪ್ರತಿಬಂಧಕ ಕಾಯ್ದೆ ಅನುಷ್ಠಾನ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ವಾಹಿನಿಗಳಲ್ಲಿ ಜಾಹೀರಾತಿನ ಕಾರಣದಿಂದ ವಾಸ್ತು, ಜ್ಯೋತಿಷ ವಿಷಯಗಳಲ್ಲಿ ಯಥಾಸ್ಥಿತಿ ವಾದವನ್ನು ಮುಂದುವರಿಸಿವೆ. ಮಾಧ್ಯಮಗಳ ಮೂಲಕ ಮೌಢ್ಯಗಳು ಬಲಗೊಳ್ಳುತ್ತಿವೆ. ಹೀಗಾಗಿ, ವಾಹಿನಿಗಳಲ್ಲಿ ವಾಸ್ತು, ಜ್ಯೋತಿಷ ಕುರಿತು ಕಾರ್ಯಕ್ರಮಗಳನ್ನು ನಿಷೇಧಿಸಬೇಕು. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯಲ್ಲಿ ಈ ಅಂಶವನ್ನು ಸೇರ್ಪಡೆಗೊಳಿಸಬೇಕು ಎಂದು ಸಲಹೆ ನೀಡಿದರು.

ಜಾತಿ ವ್ಯವಸ್ಥೆ, ಜಮೀನ್ದಾರಿ ಪದ್ಧತಿ ಮೊದಲಾದವು ಗ್ರಾಮೀಣ ಜನರಲ್ಲಿ ಒಗ್ಗಿಕೊಂಡಿವೆ. ಹಳ್ಳಿಯಿಂದ ಹೊರಗೆ ಬಂದಾಗ ಪರಸ್ಪರ ಬೆರೆಯುವ ಗ್ರಾಮದ ವಿವಿಧ ಸಮುದಾಯದವರು ಗ್ರಾಮದಲ್ಲಿ, ಕೇರಿಯಲ್ಲಿ ಬೆರೆಯುವುದಿಲ್ಲ. ಇದು ಗ್ರಾಮೀಣ ಪ್ರದೇಶಗಳ ವಾಸ್ತವ.
ಸಾಮಾಜಿಕ ಭಯ, ಕಟ್ಟಳೆಗಳು ಗ್ರಾಮೀಣ ಯುವಪೀಳಿಗೆಯನ್ನು ಕಾಡುತ್ತಿವೆ. ಹಳ್ಳಿಗಳಲ್ಲೂ ನಿಧಾನವಾಗಿ ಜಾಗೃತಿ ಮೂಡುತ್ತಿ­ರುವುದು ಸಮಾಧಾನದ ಸಂಗತಿ. ಅಸ್ಪೃಶ್ಯತೆ­ಯನ್ನು ಹೋಗಲಾಡಿಸಲು ಮಾನವೀಯ ಮನಸ್ಸು ಬೇಕು ಎಂದು ಕಿವಿಮಾತು ಹೇಳಿದರು.

ಹಿಂದಿನ ಕಾಲದಲ್ಲಿ ದೇಗುಲಗಳಲ್ಲಿ ಶಿಕ್ಷಣ, ನ್ಯಾಯದಾನ, ಸಂಗೀತ ಸೇರಿದಂತೆ ಗ್ರಾಮದ ಆಗುಹೋಗುಗಳ ಸಮಗ್ರ ಚರ್ಚೆ ನಡೆಯುತ್ತಿದ್ದವು. ಆದರೆ, ಆಧುನಿಕ ಯುಗದಲ್ಲಿ ದೇವಾಲಯದ ಪಾತ್ರ ಜನರ ಭಕ್ತಿಗೆ ಮಾತ್ರ ಸೀಮಿತವಾಗಿಬಿಟ್ಟಿವೆ. ದೇವರನ್ನು ನಂಬುವ ಮನಸ್ಸುಗಳ ಪ್ರಮಾಣ ಶೇ 95ರಷ್ಟು ಇದೆ. ದೇವರ ನಿರಾಕರಣೆ ಅಸಾಧ್ಯವಾದ ಮಾತು. ತಿರಸ್ಕಾರದ ನೆಲೆಯಲ್ಲಿ ಹೇಳಿದರೆ ಜನರಿಗೆ ಯಾವುದೂ ನಾಟುವುದಿಲ್ಲ. ಬದಲಿಗೆ ಸಕಾರಾತ್ಮಕವಾಗಿ ಹೇಳುವ ಮೂಲಕ ಜ್ಞಾನ ಮತ್ತು ಅಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ ಎಂದು ತಿಳಿಸಿದರು.

ಅಭಿಪ್ರಾಯಗಳು
ಹಣವಂತರ – ಅಧಿಕಾರಸ್ಥರ ಓಲೈಕೆ ಸಲ್ಲದು
ಪ್ರಜಾಪ್ರಭುತ್ವದಲ್ಲಿ ಅಸಮಾನತೆ, ಲಿಂಗ ಭೇದ, ಜಾತಿ ಪದ್ಧತಿಗಳನ್ನು ನಿವಾರಿಸಲು ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ಆಗುತ್ತಿಲ್ಲ. ಸಮಾನತೆ ಪರವಾದ ಹೋರಾಟಗಳನ್ನು ಕಾಲಕಾಲಕ್ಕೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಶಾಸನ ರಚಿಸುವವರೇ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಕೆಲವು ರಾಜಕಾರಣಿಗಳು ‘ತಾಯತ’ಗಳನ್ನು ಕಟ್ಟಿಕೊಂಡಿರುವುದನ್ನು ಕಾಣಬಹುದು. ವಿಜ್ಞಾನ ಬೋಧಿಸುವವರೇ ಮೌಢ್ಯ ಆಚರಿಸುತ್ತಾರೆ. ಅಂತರಜಾತಿ ವಿವಾಹಕ್ಕೆ ವ್ಯಾಪಕ ವಿರೋಧಗಳು ಎದುರಾಗುತ್ತವೆ. ವೋಟಿನ ಕಾರಣಕ್ಕೆ ಸಜ್ಜನ ರಾಜಕಾರಣಿಗಳೂ ಸಕಲ ಸತ್ಯಗಳನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಹಣವಂತರು, ಅಧಿಕಾರಸ್ಥರನ್ನು ಓಲೈಸುವ ಕೆಲಸ ಆಗಬಾರದು. ತಲೆ ಮೇಲೆ ಮಲ ಹೊರುವ ಪದ್ಧತಿಗೆ ಕೊನೆ ಹಾಡಿದ್ದೇವೆ. ಇನ್ನು ತಲೆ ಒಳಗಿನ ಮಲ ತೆಗೆದುಹಾಕುವ ಕೆಲಸ ಆಗಬೇಕಿದೆ. 
-ಪ್ರೊ.ಕಾಳೇಗೌಡ ನಾಗವಾರ, ಸಾಹಿತಿ

ಬುದ್ಧಿಜೀವಿಗಳಲ್ಲಿ ಕ್ರಿಯಾಶೀಲತೆ ಕೊರತೆ

ನೈತಿಕ ಸಮಾಜದ ಬೆಳವಣಿಗೆಗೆ ಮಾರ್ಗದರ್ಶನ ಅಗತ್ಯ. ವಿಚಾರವಂತರು ಸಮಾಜಕ್ಕೆ ತೆರೆದುಕೊಳ್ಳುವ ಅಗತ್ಯ ಇದೆ. ವಿಚಾರಗಳನ್ನು ಮಾತನಾಡುವುದು ಸುಲಭ, ಆದರೆ, ಕ್ರಿಯೆಗೆ ತರುವುದು ಹೇಗೆ ಎಂಬುದೇ ಮುಂದಿರುವ ಪ್ರಶ್ನೆಯಾಗಿದೆ. ಬಹಳಷ್ಟು ಬುದ್ಧಿಜೀವಿಗಳಲ್ಲಿ ವ್ಯಕ್ತಿತ್ವ ಮತ್ತು ಕ್ರಿಯಾಶೀಲತೆಯ ಕೊರತೆ ಇದೆ. ಸಮಾಜದಲ್ಲಿ ಭ್ರಷ್ಟಾಚಾರವನ್ನು ಸೃಷ್ಟಿಸುವ ವರ್ಗವೇ ಇದೆ. ಬ್ರಾಹ್ಮಣರನ್ನು ಬೈಯ್ಯುವವರೇ ಧಾರ್ಮಿಕ ಕಾರ್ಯಗಳಿಗೆ ಬ್ರಾಹ್ಮಣರೇ ಬೇಕು ಎಂದು ಅವರನ್ನು ಕರೆತರುತ್ತಾರೆ. ಇದು ಎಷ್ಟು ಸರಿ? ಸ್ತ್ರೀಯರ ಮೇಲೆ ದಬ್ಬಾಳಿಕೆಗಳು ಹೆಚ್ಚುತ್ತಿವೆ. ಮಹಿಳೆಯರಿಗೆ ವ್ಯಕ್ತಿತ್ವ ಇದೆ  ಕುವೆಂಪು, ದ.ರಾ. ಬೇಂದ್ರೆ ಅವರು ಸಾಂಸ್ಕೃತಿಕ ನಾಯಕರಾಗಿದ್ದರು. ಅಸಮಾನತೆ, ಅಸ್ಪ್ರಶ್ಯತೆ, ಜಾತಿಯತೆ ನಿವಾರಣೆ ನಿಟ್ಟಿನಲ್ಲಿ ಬುದ್ಧಿಜೀವಿಗಳು ಒಗ್ಗೂಡಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯ ವೈಚಾರಿಕ ವಲಯವಾಗಿ ಬೆಳೆಯಲು ಸಾಕಷ್ಟು ಅವಕಾಶ ಇದೆ.
-ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಚಿಂತಕ

ದಲಿತ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ
ಸಂವಿಧಾನದಲ್ಲಿ ಲಿಂಗ, ಜಾತಿ, ಅಂತಸ್ತು ಈ ಯಾವುದೇ ತಾರತಮ್ಯ ಇಲ್ಲ. ಮಹಿಳೆಯರ ಮೇಲೆ ಶೋಷಣೆಗಳು ನಿರಂತವಾಗಿ ನಡೆಯುತ್ತಿವೆ. ಧರ್ಮದಲ್ಲಿ ಬಹಳಷ್ಟು ಅನ್ಯಾಯಗಳು ನಡೆಯುತ್ತಿವೆ. ವರದಕ್ಷಿಣೆ ಕಾಯ್ದೆ, ದಲಿತ ದೌರ್ಜನ್ಯ ತಡೆ ಕಾಯ್ದೆಗಳನ್ನು ಬಹುತೇಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಸಂಗತಿ. ಕೇವಲ ತಮ್ಮನ್ನು ಗುರುತಿಸಿಕೊಳ್ಳುವುದಕ್ಕಾಗಿಯೇ ರಾಜಕಾರಣ ಮಾಡುವವರು ಹೆಚ್ಚಾಗಿದ್ದಾರೆ. ಹೀಗಾಗಿ ಪ್ರಗತಿಪರ ಚಿಂತನಕಾರರು ಒಗ್ಗೂಡಿ ಪ್ರಜಾಪ್ರಭುತ್ವಕ್ಕೆ ಒತ್ತು ಕೊಡುವ ಕೆಲಸ ಮಾಡಬೇಕಿದೆ.
-ಡಾ. ರತಿರಾವ್‌, ಮಹಿಳಾ ಒಕ್ಕೂಟ

ಸಜಾತಿ ವಿವಾಹ ವಿರೋಧಿಸಿ

ಮೌಢ್ಯ ಕುರಿತು ವಿಷಯ ಆಧಾರಿತ ವಿರೋಧ ಅಗತ್ಯ. ಪೌರೋಹಿತ್ಯ ಸಂಸ್ಕೃತಿಯನ್ನು ವಿರೋಧಿಸಬೇಕಾಗಿದೆಯೇ ವಿನಾ ಬ್ರಾಹ್ಮಣ ಪುರೋಹಿತರನ್ನು ಅಲ್ಲ. ಅಂತರಜಾತಿ ವಿವಾಹಗಳು ಹೆಚ್ಚು ಹೆಚ್ಚು ಆಗದ ಹೊರತು ಜಾತಿ ವಿನಾಶ ಸಾಧ್ಯವಿಲ್ಲ. ಸಜಾತಿ ವಿವಾಹಗಳನ್ನು ವಿರೋಧಿಸಬೇಕು. ಅಂತರಜಾತಿ ವಿವಾಹವಾಗುವವರಿಗೆ ಉದ್ಯೋಗ, ಶಿಷ್ಯವೇತನ ಇತ್ಯಾದಿ ಸವಲತ್ತುಗಳನ್ನು ಕಲ್ಪಿಸಬೇಕು.
–  ಡಾ.ಮಳಲಿ ವಸಂತಕುಮಾರ್, ಸಾಹಿತಿ

ವೃತ್ತಿಯಲ್ಲಿ ಯಾವುದೂ ಮೇಲಲ್ಲ ಮತ್ತು ಯಾವುದೂ ಕೀಳಲ್ಲ. ಪ್ರತಿ ವೃತ್ತಿಗೂ ನೀತಿ– ನಿಯಮಗಳು ಇರುತ್ತವೆ. ವಕೀಲರು ಕಪ್ಪು ಕೋಟು, ವೈದ್ಯರು ಬಿಳಿ ವಸ್ತ್ರ ಧರಿಸಿ ವೃತ್ತಿ ನಿರ್ವಹಿಸುತ್ತಾರೆ. ಗುರುಪರಂಪರೆಯಂತೆ ಮಠಾಧೀಶರು ಖಾವಿ ಧರಿಸುತ್ತಾರೆ. ಖಾವಿ ತೊಟ್ಟ ಮಾತ್ರಕ್ಕೆ ಮಠಾಧೀಶರು ದೈವಾಂಶ ಸಂಭೂತರು ಎಂದು ಅರ್ಥವಲ್ಲ. ಯಾವುದೇ ವೃತ್ತಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪಗಳಾ­ದರೆ ತಿದ್ದುವ ಕೆಲಸ ಆಗಬೇಕು ಎಂದು ತಿಳಿಸಿದರು.

ಸೌಲಭ್ಯ, ಸಂಬಳಕ್ಕಾಗಿ ಅರ್ಚಕರು ಒತ್ತಡ ಹಾಕುತ್ತಿದ್ದಾರೆ. ದೇವರು ಮತ್ತು ಭಕ್ತರ ನಡುವೆ ಅರ್ಚಕರು ಎಂಬ ಮಧ್ಯವರ್ತಿಗಳು ಅಗತ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸೌಲಭ್ಯಗಳಿ­ಗಾಗಿ ಹೋರಾಡುವುದು ಪ್ರತಿಯೊಬ್ಬರ ಹಕ್ಕು ಆಗಿದೆ. ಮಧ್ಯವರ್ತಿಗಳಿಲ್ಲದ ಈ ಪ್ರಪಂಚ ಇಲ್ಲ. ಆದರೆ, ಮಧ್ಯವರ್ತಿಗಳು ಕೊಂಡಿಯಂತೆ ಕಾರ್ಯನಿರ್ವಹಿಸಬೇಕು. ಅರ್ಚಕರ ಸಂಖ್ಯೆ, ಸಂಬಳ, ಸೌಲಭ್ಯ ಇವುಗಳ ನಿರ್ಧಾರ ಆಯಾ ದೇಗುಲದ ಆಡಳಿತ  ಮಂಡಳಿ, ಮುಜರಾಯಿ ಇಲಾಖೆಗೆ ಸಂಬಂಧಿಸಿದ ವಿಚಾರವಾಗಿದೆ. ಆದರೆ, ದೇಗುಲಗಳಲ್ಲಿನ ಮಾರುಕಟ್ಟೆ ಸಂಸ್ಕೃತಿಗೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಹೇಳಿದರು.

ಕೊಲ್ಲೂರಿನ ವೀರಾನಂದ ಸ್ವಾಮೀಜಿ ಸ್ಮಶಾನ ವಿವಾದವು ಸ್ಥಳಾಚಾರ ಮತ್ತು ಶಾಸ್ತ್ರಾಚಾರ ನಡುವಿನ  ಸಂಘರ್ಷವಾಗಿದೆ. ವೈಮನಸ್ಯಗಳು ಏನೇ ಇದ್ದರೂ ಸಮಾಧಿ ತೆಗೆಯಬಾರದು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.

ಪ್ರಗತಿಪರ ಮಠಾಧೀಶರ ವೇದಿಕೆ ವತಿಯಿಂದ ದಲಿತರೊಟ್ಟಿಗೆ ಸಹಪಂಕ್ತಿ ಭೋಜನ ಏರ್ಪಡಿಸುವುದು ಅಥವಾ ದಲಿತರನ್ನೇ ಮಠಕ್ಕೆ ಆಹ್ವಾನಿಸಿ ಭೋಜನ ಆಯೋಜಿಸುವ ಬಗ್ಗೆ ಸಾಹಿತಿಗಳು, ವಿದ್ವಾಂಸರು, ಸಮಾನ ಮನಸ್ಕರೊ­ಡ­ಗೂಡಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌. ಶಿವರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಚ್‌. ಬೀರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಚಂದ್ರಶೇಖರ್‌, ಡಾ.ಎ. ಲಕ್ಷ್ಮಿ ನಾರಾಯಣ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT