ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪಕರ ಅಪವಿತ್ರ ಮೈತ್ರಿ!

Last Updated 29 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಸಹಾಯ­ದಿಂದ ಕೆಲವು ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಮೌಲ್ಯಮಾಪಕರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಅತಿ ಹೆಚ್ಚು ಅಂಕ ಪಡೆದಿರುವುದನ್ನೂ ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.

ಮೌಲ್ಯಮಾಪಕರೊಂದಿಗೆ ಅಭ್ಯರ್ಥಿ­ಗಳು ಮಾಡಿಕೊಂಡ ಅಪವಿತ್ರ ಮೈತ್ರಿಯ ಬಗ್ಗೆ ಇನ್ನಷ್ಟು ತನಿಖೆ ನಡೆಸುವ ಅಗತ್ಯವಿದೆ ಎಂದೂ ಸಿಐಡಿ ಅಭಿಪ್ರಾಯ­ಪಟ್ಟಿದೆ. ಮೌಲ್ಯಮಾಪಕ­ರೊಂದಿಗೆ ಸಂಪರ್ಕ ಬೆಳೆಸಲು ಅಭ್ಯರ್ಥಿಗಳು ಹಲ­ವಾರು ವಿಧದ ತಂತ್ರವನ್ನು ಬಳಸಿದ್ದಾರೆ. ತಮ್ಮ ಸ್ವಂತ ದೂರವಾಣಿಯಲ್ಲದೆ ಇತರೆ ದೂರ­ವಾಣಿ­ಗಳನ್ನೂ ಬಳಸಿರುವ ಸಾಧ್ಯತೆ ಇದೆ ಎಂದು ಸಿಐಡಿ ಶಂಕಿಸಿದೆ. ಕೆಲವು ಮೌಲ್ಯಮಾಪಕರೊಂದಿಗೆ ಅಭ್ಯರ್ಥಿ­ಗಳು ಸಂಪರ್ಕಿಸಿದ ವಿವರ­ಗಳನ್ನು ಸಿಐಡಿ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.

ಭೂಗೋಳ ಶಾಸ್ತ್ರ ಪತ್ರಿಕೆಯ ಮೌಲ್ಯಮಾಪಕ ಹೇಮಚಂದ್ರ ಅವರನ್ನು ಪಿ.ಎಂ.ಚಿದಂಬರ ಎಂಬ ಅಭ್ಯರ್ಥಿ 17 ಬಾರಿ ದೂರವಾಣಿ ಕರೆ ಮಾಡಿ ಸಂಪರ್ಕಿ­ಸಿದ್ದಾರೆ.  ಹೇಮಚಂದ್ರ ಅವರೇ ಚಿದಂಬರ ಅವರನ್ನು 5 ಬಾರಿ ದೂರ­ವಾಣಿ ಕರೆ ಮಾಡಿ ಸಂಪರ್ಕಿಸಿ­ದ್ದಾರೆ. ಚಿದಂಬರ ಅವರು 7 ಎಸ್‌ಎಂಎಸ್‌ ಕಳಿಸಿದ್ದಾರೆ. ಹೇಮಚಂದ್ರ ಅವರ ದೂರವಾಣಿಯಿಂದ ಚಿದಂಬರ ಅವರಿಗೆ 6 ಎಸ್‌ಎಂಎಸ್‌ ರವಾನೆಯಾಗಿವೆ. ಅದೇ ರೀತಿ ಮಂಗಳಾ ಶ್ರೀಧರ್‌ ಅವರ ಆಪ್ತ ಸಹಾಯಕ ಅಶೋಕ್‌ಕುಮಾರ್‌, ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಏಜೆಂಟ್‌ ಅಮರನಾಥ್‌, ಕೆಪಿಎಸ್‌ಸಿ ಉಪ ಕಾರ್ಯದರ್ಶಿ ಲಕ್ಷ್ಮಣ ಕುಕೇನ್‌ ಅವರೂ ಹೇಮಚಂದ್ರ ಅವರನ್ನು ಚಿದಂಬರ ಅವರ ಕಾರಣಕ್ಕಾಗಿಯೇ ಸಂಪರ್ಕಿಸಿ­ದ್ದಾರೆ ಎನ್ನುವುದನ್ನೂ ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಎಲ್ಲರೂ ಮೌಲ್ಯಮಾಪಕ ಹೇಮ­ಚಂದ್ರ ಅವರನ್ನು ಮೌಲ್ಯಮಾಪನ ನಡೆಯುತ್ತಿದ್ದ 2012ರ ಡಿ.25ರಿಂದ 2013ರ ಮೇ 13ರ ಅವಧಿಯಲ್ಲಿ ಸಂಪರ್ಕಿಸಿದ್ದಾರೆ. ಅದೇ ರೀತಿ ಹೇಮ­ಚಂದ್ರ ಅವರು ಅಭ್ಯರ್ಥಿ ಎಚ್‌.ಎ.­ಪ್ರಸನ್ನ ಅವರ ಸಂಪರ್ಕ­ದಲ್ಲಿಯೂ ಇದ್ದರು. ಪ್ರಸನ್ನ ಅವರು ಹೇಮಚಂದ್ರ ಅವರಿಗೆ 15 ಬಾರಿ ದೂರವಾಣಿ ಕರೆ ಮಾಡಿದ್ದರು. ಹೇಮಚಂದ್ರ ಅವರೂ ಪ್ರಸನ್ನ ಅವರಿಗೆ ಎರಡು ಬಾರಿ ದೂರ­ವಾಣಿ ಕರೆ ಮಾಡಿದ್ದರು. ಇಬ್ಬರೂ ಪರ­ಸ್ಪರ ತಲಾ ಎರಡು ಬಾರಿ ಎಸ್‌ಎಂಎಸ್‌ ಕಳುಹಿಸಿದ್ದಾರೆ. ಈ ಇಬ್ಬರೂ 2012ರ ಸೆ.8ರಿಂದ 2013ರ ಜೂನ್‌ 28ರ ಅವಧಿಯಲ್ಲಿ ಸಂಪರ್ಕದಲ್ಲಿದ್ದರು.

ಭೂಗೋಳ ಶಾಸ್ತ್ರದ ಇನ್ನೊಬ್ಬ ಮೌಲ್ಯಮಾಪಕ ಎಲ್‌.ಟಿ.ನಾಯ್ಕ ಅವರು ಪ್ರಿಯದರ್ಶಿನಿ ಸಾನಿಕೊಪ್ಪ ಅವರ ಜೊತೆ ಸಂಪರ್ಕದಲ್ಲಿದ್ದರು. ಪ್ರಿಯ­ದರ್ಶಿನಿ ಸಾನಿಕೊಪ್ಪ ಅವರು ಎಲ್‌.ಟಿ.ನಾಯ್ಕ ಅವರನ್ನು ಆರು ಬಾರಿ ಸಂಪರ್ಕಿಸಿದ್ದರು. ಅಲ್ಲದೆ ಸದಸ್ಯ ಕೃಷ್ಣ­ಪ್ರಸಾದ್‌ ಅವರ ಆಪ್ತ ಸಹಾಯಕ ರಮೇಶ್‌ ಕೂಡ ನಾಯ್ಕ ಅವರನ್ನು ಏಳು ಬಾರಿ ಸಂಪರ್ಕಿಸಿದ್ದರು. ಇವರೆಲ್ಲಾ ಈ ವರ್ಷದ ಫೆ.20ರಿಂದ ಮೇ 4ರ ನಡುವೆ ಸಂಪರ್ಕದಲ್ಲಿದ್ದರು. ಪ್ರಿಯದರ್ಶಿನಿ ಸಾನಿಕೊಪ್ಪ ಅವರು ಭೂಗೋಳಶಾಸ್ತ್ರದ ಇನ್ನೊಬ್ಬ ಮೌಲ್ಯಮಾಪಕ ಎ.ಎಸ್‌.­ಬೀಡಿಕರ್‌ ಅವರನ್ನೂ ಎರಡು ಬಾರಿ ಸಂಪರ್ಕಿಸಿದ್ದರು.

ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೋಸ: ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿ­ಕಾರಿಗಳು ಮತ್ತು ಸಿಬ್ಬಂದಿ ಮೌಲ್ಯ­ಮಾಪಕ­ರೊಂದಿಗೆ ಮಾಡಿ­ಕೊಂಡ ಅಪವಿತ್ರ ಮೈತ್ರಿಯಿಂದಾಗಿ ಮೌಲ್ಯ­ಮಾಪನ ಪ್ರಕ್ರಿಯೆ ಸಂಪೂರ್ಣವಾಗಿ ಹದಗೆಟ್ಟು ಹೋಗಿತ್ತು. ಹಣ ನೀಡಿದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ­ಯ­ಲ್ಲಿಯೇ ಅತಿ ಹೆಚ್ಚಿನ ಅಂಕ ನೀಡಿ ಪ್ರತಿಭಾ­ವಂತ ಅಭ್ಯರ್ಥಿಗಳಿಗೆ ಮೋಸ ಮಾಡ­ಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಸಿಐಡಿ ಹೇಳಿದೆ.

ಭೂಗೋಳಶಾಸ್ತ್ರ ವಿಷಯವನ್ನು ಮುಖ್ಯ ಪರೀಕ್ಷೆಯಲ್ಲಿ ಆಯ್ಕೆ ಮಾಡಿ­ಕೊಂಡ 572 ಅಭ್ಯರ್ಥಿಗಳಲ್ಲಿ 165 ಮಂದಿ ಸಂದರ್ಶನಕ್ಕೆ ಆಯ್ಕೆಯಾ­ಗಿದ್ದಾರೆ. ಅದರಲ್ಲಿ 81 ಮಂದಿ ನೇಮ­ಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿ­ದ್ದಾರೆ. ಸಮಾಜಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡ 429 ಅಭ್ಯರ್ಥಿ­ಗಳ ಪೈಕಿ 71 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದು 25 ಮಂದಿ ಕೆಪಿಎಸ್‌ಸಿ ಸಿದ್ಧಪಡಿಸಿದ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾನವಶಾಸ್ತ್ರ ವಿಷಯದ 614 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಭಾಗಿಯಾಗಿದ್ದು ಅವ­ರಲ್ಲಿ 187 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಅಂತಿಮವಾಗಿ 81 ಮಂದಿ ನೇಮಕಾತಿ ಪಟ್ಟಿಯಲ್ಲಿದ್ದಾರೆ.

ಮನೋವಿಜ್ಞಾನ ವಿಷಯದಲ್ಲಿ 139 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜ­ರಾಗಿದ್ದರೆ 39 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅವರಲ್ಲಿ 11 ಮಂದಿ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅರ್ಥಶಾಸ್ತ್ರದ 47 ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಹಾಜ­ರಾಗಿದ್ದರು. ಅವರಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದು ಎರಡು ಮಂದಿ ಮಾತ್ರ ನೇಮಕಾತಿ ಪಟ್ಟಿಯಲ್ಲಿದ್ದಾರೆ.

ಸಾರ್ವಜನಿಕ ಆಡಳಿತದ 2,514 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದು 454 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಅವರಲ್ಲಿ 158 ಮಂದಿ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ 3,618 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರೆ 606 ಮಂದಿ ಮಾತ್ರ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಅವರಲ್ಲಿ 176 ಮಂದಿ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

1,880 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯ ತೆಗೆದುಕೊಂಡಿದ್ದರು. ಅವರಲ್ಲಿ 428 ಮಂದಿ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. 130 ಮಂದಿ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಪರಾಧಶಾಸ್ತ್ರದ 274 ಮಂದಿಯಲ್ಲಿ 54 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿ ಅವರಲ್ಲಿ 17 ಮಂದಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೃಷಿ ವಿಷಯವನ್ನು ಆಯ್ಕೆ ಮಾಡಿಕೊಂಡ 31 ಮಂದಿಯಲ್ಲಿ 8 ಮಂದಿ ಮಾತ್ರ ಸಂದರ್ಶನಕ್ಕೆ ಹಾಜರಾಗಿ ಇಬ್ಬರು ಮಾತ್ರ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತಿಹಾಸ ವಿಷಯವನ್ನು ಆಯ್ಕೆ ಮಾಡಿಕೊಂಡ 453 ಜನರಲ್ಲಿ 25 ಮಂದಿ ಸಂದರ್ಶನಕ್ಕೆ ಹಾಜರಾಗಿ 5 ಮಂದಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಶು ವಿಜ್ಞಾನ ವಿಷಯದ 53 ಅಭ್ಯರ್ಥಿಗಳ ಪೈಕಿ 27 ಮಂದಿ ಸಂದರ್ಶನಕ್ಕೆ ಹಾಜರಾಗಿ 11 ಮಂದಿ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಸ್ಯ ವಿಜ್ಞಾನದ 75 ಅಭ್ಯರ್ಥಿಗಳ ಪೈಕಿ 10 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರೂ ಯಾರಿಗೂ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಅದೇ ರೀತಿ ವಾಣಿಜ್ಯ ವಿಷಯದ 14, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಗಣಿತ, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಭೂಗರ್ಭ ವಿಜ್ಞಾನ, ಭೌತವಿಜ್ಞಾನ, ಪ್ರಾಣಿವಿಜ್ಞಾನ, ಹಿಂದಿ ಮತ್ತು ಆಡಳಿತ ನಿರ್ವಹಣೆ ವಿಷಯಗಳನ್ನು ಪಡೆದ ಯಾವುದೇ ಅಭ್ಯರ್ಥಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ರಸಾಯನ ವಿಜ್ಞಾನದ ಒಬ್ಬ, ಕಾನೂನು ವಿಷಯದ ಇಬ್ಬರು, ತತ್ವಶಾಸ್ತ್ರದ 15 ಮಂದಿ, ಉರ್ದು ವಿಷಯ ಆಯ್ಕೆ ಮಾಡಿಕೊಂಡ ಒಬ್ಬರು, ಇಂಗ್ಲಿಷ್‌ ಸಾಹಿತ್ಯ ವಿಷಯ ಆಯ್ಕೆ ಮಾಡಿಕೊಂಡ ಇಬ್ಬರು ಮಾತ್ರ ಅಂತಿಮ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಭ್ಯರ್ಥಿಗಳ ಮೇಲೆ ಒತ್ತಡ: ಭೂಗೋಳ ಶಾಸ್ತ್ರ, ಗ್ರಾಮೀಣಾ­ಭಿವೃದ್ಧಿ, ಸಾರ್ವಜನಿಕ ಆಡಳಿತ, ಕನ್ನಡ ಸಾಹಿತ್ಯ ವಿಷಯವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳೇ ನೇಮಕಾತಿ ಪಟ್ಟಿಯಲ್ಲಿ ಅತಿ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದು ಅಧ್ಯಕ್ಷರು ಹಾಗೂ ಸದಸ್ಯರು ತಮಗೆ ಗೊತ್ತಿರುವ ಮೌಲ್ಯ­ಮಾಪಕರ ವಿಷಯವನ್ನೇ ಹೆಚ್ಚಾಗಿ ತೆಗೆದುಕೊಳ್ಳುವಂತೆ ಅಭ್ಯರ್ಥಿಗಳ ಮೇಲೆ ಒತ್ತಡ ತರುತ್ತಿದ್ದರು ಎನ್ನುವ ಆರೋಪಕ್ಕೆ ಇದು ಪುಷ್ಟಿ ಕೊಡುತ್ತದೆ ಎಂದು ಸಿಐಡಿ ವರದಿ ಹೇಳಿದೆ.

ಈ ಬಗ್ಗೆ ಇನ್ನಷ್ಟು ತನಿಖೆಯ ಅಗತ್ಯವಿದೆ ಎಂದೂ ಸಿಐಡಿ ಹೇಳಿದೆ. ಗೋನಾಳ ಭೀಮಪ್ಪ ಭೂಗೋಳವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ತಿಳಿಸುತ್ತಿದ್ದರು ಎಂಬ ಆರೋಪ ಕೂಡ ಇದೆ. ಮೌಲ್ಯಮಾಪಕರು ಅವರಿಗೆ ಗೊತ್ತಿದ್ದರಿಂದ ತಮ್ಮ ಜೊತೆ ವ್ಯವಹಾರ ಕುದುರಿಸಿದವರಿಗೆ ಹೆಚ್ಚಿನ ಅಂಕ ಕೊಡಿಸಿದ್ದಾರೆ ಎಂಬ ಆರೋಪವೂ ಇದೆ. ಇದೆಲ್ಲಾ ಸಿಐಡಿ ತನಿಖೆಯಲ್ಲಿ ನಿಜವಾಗಿದೆ.

(ಮೌಲ್ಯಮಾಪನಕ್ಕೆ ತಜ್ಞರು ಬೇಡ: ನಮ್ಮವರೇ ಸಾಕು: ನಿರೀಕ್ಷಿಸಿ....)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT