ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನಕ್ಕೆ ಕಣ್ಣಿಲ್ಲ, ಕಾಲಿವೆ..!

Last Updated 25 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುಮಕೂರು: ಆರು ಮಂದಿಯ ಸಂಶೋಧನಾ ಪ್ರಬಂಧಗಳ ಮೌಲ್ಯ­ಮಾಪನ­ವನ್ನು ಎರಡು ತಿಂಗಳಲ್ಲೇ ಪೂರ್ಣಗೊಳಿಸ­ಲಾಗಿದೆ.
ಪ್ರಬಂಧಗಳು ಸಲ್ಲಿಕೆಯಾದ ಎರಡು ತಿಂಗಳ­ಲ್ಲೇ ಮೌಲ್ಯಮಾಪನ ಮುಗಿದು ಪಿಎಚ್‌.ಡಿ ಕೂಡ ನೀಡಲಾಗಿದೆ. ವಿ.ವಿ.ಯ ಪರೀಕ್ಷಾಂಗ ವಿಭಾಗ­ಕ್ಕೆ ಸಲ್ಲಿಕೆ­ಯಾ­ಗುವ ಸಂಶೋಧನಾ ಮಹಾ­ಪ್ರಬಂಧ­ಗಳು ಮೊದಲಿಗೆ ಸಂಬಂಧಿಸಿದ ವಿಭಾ­ಗೀಯ ಪರಿಷತ್ತಿನ ಸಭೆಯ ಮುಂದೆ ಬರ­ಬೇಕು. ಆ ಸಭೆಯಲ್ಲಿ ಭಾಗ­ವಹಿಸುವ ವಿಶ್ವ­ವಿದ್ಯಾಲಯದ ಹೊರ­ಗಿನ ಇಬ್ಬರು ತಜ್ಞರು ಅವು­ಗ­ಳನ್ನು ಓದಿ ಪರಿಶೀಲಿ­ಸಬೇಕು. ಪ್ರಬಂಧಗಳನ್ನು ಮೌಲ್ಯ­­­ಮಾಪನಕ್ಕೆ ಕಳುಹಿಸಿ­ಕೊಡಬಹು­ದೆಂಬ ತೀರ್ಮಾ­ನಕ್ಕೆ ಬಂದ ನಂತರ ಆ ಕುರಿತ ವರದಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.

ಪರೀಕ್ಷಾಂಗ ಕುಲಸಚಿವರು ಸಂಭಾವ್ಯ ಮೌಲ್ಯ­ಮಾಪಕರ ಪಟ್ಟಿ ತಯಾರಿ­ಸುತ್ತಾರೆ. ಕೊನೆಯಲ್ಲಿ ಕುಲಪತಿ, ಪರೀಕ್ಷಾಂಗ ಕುಲಸಚಿವರು ಸೇರಿ ಪ್ರತಿ ಪ್ರಬಂಧಕ್ಕೂ ಇಬ್ಬರು ಮೌಲ್ಯಮಾಪ­ಕರನ್ನು ನಿಯುಕ್ತಿಗೊಳಿಸಿ ಮೌಲ್ಯ­ಮಾಪನ ಮಾಡಿಕೊಡು­ವಂತೆ ಕೋರಿ ಅವರಿಗೆ ಪತ್ರ ಬರೆಯುತ್ತಾರೆ. ಆ ಮೌಲ್ಯಮಾಪಕರು ಒಪ್ಪಿಗೆ ನೀಡಿದರೆ ಮಾತ್ರ ಅವ­ರಿಗೆ ಪ್ರಬಂಧ ಕಳುಹಿಸ­ಬೇಕು. ಮಹಾ­ಪ್ರಬಂಧ­ಗಳು ವಿಜ್ಞಾನ ವಿಷಯಕ್ಕೆ ಸಂಬಂಧ­ಪಟ್ಟಿದ್ದರೆ ಒಬ್ಬ ಮೌಲ್ಯಮಾಪಕ  ಹೊರದೇಶದ­ವರಾಗಿ­ರಬೇಕೆಂಬ ನಿಯಮವಿದೆ.

ವಿವಾದಿತ ಈ ಆರು ಮಂದಿಯಲ್ಲಿ ಐವರ ಪ್ರಬಂಧಗಳು ಸಲ್ಲಿಕೆಯಾದ ೬೬ ದಿನಗಳಲ್ಲೇ ವಿಶ್ವ­ವಿದ್ಯಾಲಯದ ಎಲ್ಲ ವಿಧಿ-ವಿಧಾನಗಳನ್ನು ನಡೆಸ­ಲಾಗಿದೆ. ಎಸ್‌.ಜೆ.ಪ್ರಶಾಂತ್‌ ಪ್ರಬಂಧದ ಪ್ರಕ್ರಿಯೆ­ಗಳೆಲ್ಲಾ ಕೇವಲ ೪೯ ದಿನದಲ್ಲೇ ಮುಗಿದಿವೆ.

ಸವಿತಾ ಒಬ್ಬರ ಪ್ರಬಂಧ ಹೊರತು­ಪಡಿಸಿ ಉಳಿ­ದ­ವರೆಲ್ಲರ ಪ್ರಬಂಧಗಳ ಮೌಲ್ಯಮಾಪನ ರಾಜ್ಯ­ದಲ್ಲೇ ನಡೆಸ­ಲಾಗಿದೆ. ಭೌತಶಾಸ್ತ್ರ ಸಂಶೋಧನಾ ಪ್ರಬಂಧಗಳು ಮೌಲ್ಯಮಾಪನ­ಕ್ಕಾಗಿ ಯಾವ ವಿದೇಶಿ ವಿದ್ವಾಂಸರ ಮುಂದೆಯೂ ಹೋಗಿ­ಲ್ಲ. ಸುನೀತಾ ಅವರ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯದ ಯು.ಎಸ್.­ರಾಯ್ಕರ್ ಮತ್ತು ಕೊಲ್ಹಾಪುರದ ಶಿವಾಜಿ ಯೂನಿ­­ವರ್ಸಿಟಿ ಪ್ರಾಧ್ಯಾಪಕ ವಿಜಯ್ ಫುಲ್ಹಾರಿ ಮೌಲ್ಯಮಾಪನ ಮಾಡಿದ್ದಾರೆ.

ಪ್ರೇಮ್ ಕುಮಾರ್‌ ಅವರ ಪ್ರಬಂಧವನ್ನು ಬೆಂಗಳೂರು ವಿ.ವಿ. ಸಹ ಪ್ರಾಧ್ಯಾಪಕ ಡಾ.ಬಿ.­ರುದ್ರಸ್ವಾಮಿ ಮತ್ತು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವ­ವಿದ್ಯಾಲಯದ ಡಾ.ವೆಂಕಟಸ್ವಾಮಿ ಮಾಡಿದ್ದಾರೆ.

ಪದವಿ ಪ್ರದಾನಕ್ಕೂ ಮುನ್ನ ಮುಕ್ತ ಮೌಖಿಕ ಪರೀಕ್ಷೆ ನಡೆಯಬೇಕು. ಪ್ರಬಂಧ ಮೌಲ್ಯ­ಮಾಪಕ­ರಲ್ಲಿ ಕನಿಷ್ಠ ಒಬ್ಬರಾದರೂ ಈ ಪರೀಕ್ಷೆಗೆ ಹಾಜ­ರಿರ­ಲೇಬೇಕು. ಅಲ್ಲದೇ ಪರೀಕ್ಷೆಗೆ ಹಾಜರಾಗದ ಮೌಲ್ಯಮಾಪಕರು ಕಳುಹಿಸುವ ಲಿಖಿತ ಪ್ರಶ್ನೆಗ­ಳಿಗೆ ಪರೀಕ್ಷೆ­ಯಲ್ಲಿ  ಅಭ್ಯರ್ಥಿ ಉತ್ತರ ನೀಡ­ಬೇಕು. ಈ ಪ್ರಕ್ರಿಯೆ ನಂತರ ಸಂಶೋಧನಾರ್ಥಿಗೆ ಪಿಎಚ್.ಡಿ ಪದವಿ ನೀಡಬಹುದು ಎಂದು ಶಿಫಾರಸು ಮಾಡಲಾಗುತ್ತದೆ.

ಸಿಂಡಿಕೇಟ್ ಸಾಮಾನ್ಯ ಸಭೆಯ ಅನು­ಮೋದನೆ ಬಳಿಕ ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನು ಅಂಚೆ­ಯಲ್ಲಿ ರವಾನಿಸಲಾಗುತ್ತದೆ. ಆದರೆ, ಮುಕ್ತ ಪರೀಕ್ಷೆ ನಡೆದ ದಿನವೇ ಮುಂದಿನ ಪ್ರಕ್ರಿ­ಯೆಗಳನ್ನು ಪೂರ್ಣಗೊಳಿಸದೆ ಈ ಆರು  ಮಂದಿಗೂ ತಾತ್ಪೂರ್ತಿಕ ಪದವಿ ಪತ್ರ ನೀಡ­ಲಾಗಿದೆ. ಕುಲಪತಿ ಶರ್ಮಾ ಅಧಿಕಾರಾವಧಿ ಮುಗಿ­ಯಲು ಕೇವಲ ಐದು ದಿನ ಮಾತ್ರ ಬಾಕಿ ಇತ್ತು.

ಪ್ರೇಮ್‌ಕುಮಾರ್‌, ಸುನೀತಾಗೆ ಮಾರ್ಗ­­ದರ್ಶ­ಕರಾದ ಡಾ.ಎಚ್‌.­ನಾಗಭೂಷಣ್‌ ಮತ್ತು ಕುಲಪತಿ ಎಸ್.ಸಿ.ಶರ್ಮಾ ಜಂಟಿಯಾಗಿ 30 ಪ್ರಬಂಧ­ಗಳನ್ನು ಪ್ರಕಟಿಸಿದ್ದಾರೆ. ಶರ್ಮಾ, ಸುನೀತಾ, ನಾಗಭೂಷಣ್ ಮೂವರೂ ಸೇರಿಕೊಂಡು ಐದು ಸಂಶೋಧನಾ ಪ್ರಬಂಧ­ಗಳನ್ನು ಬರೆದಿ­ದ್ದಾರೆ. ಕುಲಪತಿಯೊಬ್ಬರ ಜೊತೆ ಸೇರಿ ಸಂಶೋಧನಾ ವಿದ್ಯಾರ್ಥಿ ಪ್ರಬಂಧ ಪ್ರಕಟಿ­ಸು­ವುದು ಯಾವ ವಿ.ವಿ.ಯಲ್ಲೂ ಕಾಣದು. ಈ ಎಲ್ಲಾ ನಂಟುಗಳೇ ಪಿಎಚ್‌.ಡಿ ನೀಡು­ವಲ್ಲಿ ಕೆಲಸ ಮಾಡಿವೆ ಎಂಬ ಆರೋಪಗಳಿವೆ.

ಯುಜಿಸಿ ನಿಯಮಾವಳಿ ಉಲ್ಲಂಘಿಸಿ 2012­ರಲ್ಲಿ ನಾಗಭೂಷಣ್‌ ಅವರನ್ನು ಸಹ ಪ್ರಾಧ್ಯಾ­ಪಕ­ರಾಗಿ ನೇರ ನೇಮಕ ಮಾಡಿಕೊಳ್ಳಲಾಗಿದೆ. ನಿಯಮಾ­ವಳಿಗಳ ಪ್ರಕಾರ ಸಹ­ಪ್ರಾಧ್ಯಾ­ಪಕ ಹುದ್ದೆಗೆ ಅರ್ಹತೆ ಪಡೆಯಬೇಕಿದ್ದರೆ ಅವರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ 8 ವರ್ಷಗಳ  ಪಾಠ ಮಾಡಿದ  ಬೋಧನಾ ಅನುಭವ ಇರಬೇಕು. ಆದರೆ ವಿಶ್ವ­ವಿದ್ಯಾಲ­ಯದ ಅಂತರ್ಜಾಲ ತಾಣ­ದಲ್ಲಿ ಇರುವ ನಾಗ­ಭೂಷಣ್‌ ಸ್ವ-ವಿವರದ ಪ್ರಕಾರ ಸಹ ಪ್ರಾಧ್ಯಾ­ಪಕ­ರಾ­ಗುವ ಮೊದಲು ಅವರಿಗಿದ್ದದ್ದು ಒಟ್ಟು ೬ ವರ್ಷಗಳ ಸೇವಾ ಅನುಭವ ಮಾತ್ರ.

ಶರ್ಮಾ ಅವರೊಂದಿಗೆ ನಾಗ­ಭೂಷಣ್‌ ನಿಕಟ ಸಂಪರ್ಕ ಹೊಂದಿ­ದ್ದರು. ಆ ಕಾರಣಕ್ಕಾಗಿ ಎಂಟೇ ತಿಂಗಳಲ್ಲಿ ಶರ್ಮಾ ಅವರ ಆಪ್ತರಾದ ಈ ಇಬ್ಬರು ವಿದ್ಯಾರ್ಥಿಗಳಿಗೆ ಸಂಶೋ­ಧನಾ ಮಾರ್ಗ­ದರ್ಶನ ಮಾಡಿದ್ದಾರೆ. ಇದಕ್ಕೆ ಪ್ರತಿ ಉಪಕಾರವೆಂಬಂತೆ ಶರ್ಮಾ ಅಧಿಕಾರದಿಂದ ನಿರ್ಗಮಿಸುವ ಮುನ್ನ ನಾಗಭೂಷಣ್‌ ಅವರಿಗೆ ಡಿಎಸ್‌ಸಿ ಪದವಿ ನೀಡಿದ್ದಾರೆ.

ಡಾಕ್ಟರೇಟ್‌ ಪಡೆದಿರುವ ಕೇಶವ ಪ್ರಸನ್ನ ಮತ್ತು ತುಂಗಾಮಣಿ ಬೆಂಗ­ಳೂರಿನ ಬಿಎಂಎಸ್ ಎಂಜಿನಿ­ಯರಿಂಗ್ ಕಾಲೇಜಿನಲ್ಲಿ ಈಗ ಸಹ ಪ್ರಾಧ್ಯಾ­ಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಶರ್ಮಾ ಇದೇ ಕಾಲೇಜಿನಲ್ಲಿ ನಿರ್ದೇಶಕರಾಗಿದ್ದಾರೆ.

ಕೇಶವ ಪ್ರಸನ್ನ, ತುಂಗಾಮಣಿ ಅವರ ಸಂಶೋಧನೆಯೇ ಅರೆಕಾಲಿಕವಾಗಿತ್ತು. ಇಬ್ಬರೂ ವಿ.ವಿ. ವಿಜ್ಞಾನ ಕಾಲೇಜಿನಲ್ಲಿ ಅರೆ­­ಕಾಲಿಕ ಉಪನ್ಯಾಸಕರಾಗಿ ಸಂಬಳ ತೆಗೆದು­ಕೊಂಡಿದ್ದಾರೆ ಹಾಗೂ ವಿ.ವಿ. ಕನ್ನಡ ಭಾಷಾಭಿವೃದ್ಧಿ ಯೋಜನೆ­ಯಿಂದ ಮಾಸಿಕ ವೇತನನ್ನೂ ಪಡೆದಿದ್ದಾರೆ.

ಮುಂದಿನ ಭಾಗದಲ್ಲಿ: ನಲವತ್ತೊಂಬತ್ತೇ ದಿನಗಳಲ್ಲಿ ಪಿಎಚ್‌.ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT