ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೋ ಹುಡುಗೀರ ಥರ ಅಳ್ತೀಯಾ?

Last Updated 8 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸ್ಕೂಲ್ ಮುಗಿಸಿಕೊಂಡು ಪುಟ್ಟ ಸಮರ್ಥ ಖುಷಿಯಿಂದ ಓಡಿಬಂದ. ‘ಬಾರೋ ಪುಟ್ಟ’ ಅಂತ ಮುದ್ದಾಡಿದಳು ಅಮ್ಮ. ಊಟ ತಿನ್ನಿಸಿದ್ಲು. ಮುತ್ತುಕೊಟ್ಳು. ಆದ್ರೆ ಪುಟ್ಟನದು ಒಂದೇ ಹಟ– ‘ಅಮ್ಮ ನಾನೂ ನೀನು ಫೈಟಿಂಗ್ ಮಾಡೋಣ, ಫೈಟಿಂಗ್ ಮಾಡೋಣ’ ಅಂತ. ಬೇಡ ಅದ್ರೂ ಬಿಡಲ್ಲ. ‘ಡಿಶೂಂ... ಡಿಶೂಂ... ಡಿಶೂಂ...’

‘ಯಾಕೋ ಕಂದಮ್ಮ, ಅಮ್ಮನಿಗೆ ಯಾರಾದ್ರೂ ಹೊಡೀತಾರೇನೋ?’ ಅಂದ್ರೆ, ‘ನಂಗೆ ಫೈಟಿಂಗ್ ಮಾಡ್ಬೇಕು, ಯಾರ ಜೊತೆ ಮಾಡ್ಲಿ?’ ಅಂತಿದ್ದ. ಅಪ್ಪ, ಚಿಕ್ಕಪ್ಪ, ಅಜ್ಜಿ, ತಾತ ಎಲ್ರಿಗೂ ಮಾತೆತ್ತಿದರೆ  ಬರೇ ಡಿಶೂಂ... ಡಿಶೂಂ... ಪಾಪ, ಮೊನ್ನೆ ಅಜ್ಜಿಗೆ ‘ಡಿಶೂ’ ಮಾಡಿ ಅವರ ಆರ್ಟಿಫಿಶಿಯಲ್ ಹಲ್ಲಿನ ಸೆಟ್ಟೆಲ್ಲ ಬಿದ್ದು ಹೋಗಿದ್ದವು. ಸ್ವಲ್ಪ ನೋವೂ ಆಗಿತ್ತು. ಅಮ್ಮನಿಗೆ ಆವತ್ತು ಸಿಟ್ಟು ಬಂದು, ಪುಟ್ಟನ್ನ ಹಿಡಿದು ಕೂರಿಸಿಕೊಂಡ್ಳು. ಪ್ರೀತಿಯಿಂದ ಮುತ್ತು ಕೊಟ್ಟು ಕೇಳಿದ್ಲು, ‘ಬಂಗಾರ ನೀನು ನನ್ನ ಮುದ್ದು, ನಮ್ಮನೆ ಮುದ್ದು, ಯಾಕೋ ಕಂದ ಎಲ್ರಿಗೂ ಡಿಶೂಂ ಮಾಡೋದು?’

‘ಯಾಕಂದ್ರೆ ನಂಗೆ ಫೈಟಿಂಗ್ ಮಾಡೋಕಿಷ್ಟ’.
‘ಫೈಟಿಂಗ್ ಯಾಕಿಷ್ಟ ನಿಂಗೆ?’
‘ಚೋಟಾಭೀಮ್ ಮಾಡ್ತಾನಲ್ಲ, ಅದಿಕ್ಕೆ’.
‘ಚೋಟಾಭೀಮ್ ಯಾರಾದ್ರೂ ಕೆಟ್ಟವರ್ ಬಂದ್ರೆ, ಕೆಟ್ಟದ್ ಮಾಡಿದ್ರೆ ಮಾತ್ರ ಫೈಟಿಂಗ್ ಮಾಡ್ತಾನೆ ಅಲ್ವ?’
‘ಹ್ಞ’ ಅಂತ ತಲೆಯಾಡಿಸಿದ ಪುಟ್ಟ.
‘ಇಲ್ಯಾರೂ ಕೆಟ್ಟವರೇ ಇಲ್ಲ. ಎಲ್ರೂ ಒಳ್ಳೆಯವರೇ. ಒಳ್ಳೆಯವರಿಗೆಲ್ಲ ಡಿಶುಂ... ಡಿಶುಂ... ಮಾಡೋದ್ ತಪ್ಪಲ್ವಾ?’

ಅಮ್ಮನ ಮಾತಿಂದ ಪುಟ್ಟನಿಗೆ ತಾನು ಮಾಡಿದ್ದು ತಪ್ಪು ಅನಿಸಿತು. ಹೋಗಿ ಅಜ್ಜಿ ತಾತನ ಹತ್ರ ಅಮ್ಮನ ಹತ್ರ ಸಾರಿ ಕೇಳಿದ. ಮರುದಿನ ಪುಟ್ಟನಿಗೆ ಖುಷಿಯೋ ಖುಷಿ. ಅವನ ದೊಡ್ಡಪ್ಪನ ಮಕ್ಕಳಿಬ್ಬರೂ ರಜೆಗೆ ಬಂದರು. ಒಬ್ಬ ಅಣ್ಣ ಮತ್ತು ತಂಗಿ ಪಾಪು ಸಿಕ್ಕಿದ್ರಿಂದ ಪುಟ್ಟನಿಗೆ ಆಟಕ್ಕೆ ಒಳ್ಳೆ ಜತೆ ಸಿಕ್ಕ ಹಾಗಾಯ್ತು. ಪುಟ್ಟ ಮತ್ತು ಅವನ ಅಣ್ಣ ಒಂದು ದಿನ ತರಕಾರಿ ಹೆಚ್ಚುವ ಚಾಕು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಊಟದ ತಟ್ಟೆ ಹಿಡಿದು ಫೈಟಿಂಗ್ ಮಾಡೋಕೆ ಶುರು ಮಾಡಿದ್ರು. ಅಮ್ಮ ನೋಡಿ ಗಾಬರಿಯಾದ್ಲು. ಇಬ್ಬರ ಕೈಲೂ ಚಾಕು ತಟ್ಟೆ ತೆಗೆದಿಟ್ಟು, ‘ಕೈಕಟ್ ಬಾಯ್ ಮುಚ್‌’ ಮಾಡಿ ಅಂದ್ಲು. ಅಮ್ಮಂಗೆ ತುಂಬಾ ಕೋಪ ಬಂದಿತ್ತು. ಆಮೇಲೆ ಅಮ್ಮ ಕೇಳಿದ್ಲು ‘ಚಾಕು ತಗೊಂಡ್ ಯಾರಾದ್ರೂ ಆಟ ಆಡ್ತಾರಾ ಮಕ್ಕಳಾ?’

ಪುಟ್ಟನ ಅಣ್ಣ ಹೇಳಿದ, ‘ಟೀವೀಲಿ ಪವರ್ ರೇಂಜರ್ಸ್ ಅಂತ ಬರತ್ತೆ, ಅದ್ರಲ್ಲಿ ಹಾಗೇ ಆಡ್ತಾರೆ’.
‘ಅದೆಲ್ಲ ಯಾಕ್ ನೋಡ್ತೀಯಾ ಕಂದ?’ ಅಂದಳು ಅಮ್ಮ.
ಪುಟ್ಟ ಮಾತಾಡಲು ಶುರು ಮಾಡಿದ, ‘ಅಮ್ಮ ಅಣ್ಣ ಬರೇ ಫೈಟಿಂಗ್ ಫೈಟಿಂಗೇ ನೋಡೋದು. ನಂಗೂ ಅವನೇ ತೋರ್ಸಿದ್ದು’ ಅಂತ ಹೇಳಿ ತನ್ನದೇನೂ ತಪ್ಪಿಲ್ಲ ಅನ್ನುವಂತೆ ಕೂತ. ಪಾಪ ವಿರಾಟನಿಗೆ ಅಳು ಬಂತು. ಅಮ್ಮ ಅವನನ್ನ ಸಮಾಧಾನ ಮಾಡಿ ‘ನೋಡು ಮಗೂ, ಇನ್ಮೇಲೆ ಹೊಡೆದಾಟ ಬಡಿದಾಟ ಇರೋ ಕಾರ್ಯಕ್ರಮ ನೋಡ್ಲೇಬೇಡಿ, ಅದೆಲ್ಲ ಕೆಟ್ಟದ್ದು’ ಅಂದ್ಲು. ‘ಯಾಕೆ ಕೆಟ್ಟದು?’ ಅಂತ ಪಿಳಿಪಿಳಿ ಕಣ್ಣು ಬಿಟ್ಟ ಪುಟ್ಟ. ಅಮ್ಮ ಅವನನ್ನೂ ಅವನ ಅಣ್ಣನ್ನೂ ತೊಡೆ ಮೇಲೆ ಕೂರಿಸಿಕೊಂಡು ಹೇಳಿದ್ಲು, ‘ನೋಡಿ ಮಕ್ಕಳೇ, ಈಗ ನೀವಿಬ್ರೂ ಚಾಕು ತಗೊಂಡ್ ಫೈಟಿಂಗ್ ಯಾಕ್ ಮಾಡ್ತಾ ಇದ್ರಿ? ಟೀವೀಲಿ ನೋಡಿ ಕಲಿತಿದ್ರಿಂದ ತಾನೇ?’

‘ಹೌದು’ ಅಂತ ಇಬ್ಬರೂ ತಲೆಯಾಡಿಸಿದ್ರು.
‘ಈಗ ಚಾಕು ಅಕಸ್ಮಾತ್ ಪುಟ್ಟು ಕೈಗೋ, ನಿನ್ನ ಹೊಟ್ಟೆಗೋ, ಕಣ್ಣೀಗೋ ಚುಚ್ಕೊಂಡಿದ್ರೆ? ಏನಾಗ್ತಾ ಇತ್ತು ಹೇಳಿ ನೋಡಣ?’
‘ರಕ್ತ ಬರ್ತಾ ಇತ್ತು’ ಅಂದ ಪುಟ್ಟ. ‘ತುಂಬಾ ನೋವಾಗ್ತಾ ಇತ್ತು ಚಿಕ್ಕಮ್ಮ’ ಅಂದ ವಿರಾಟ.
‘ಆಗ ನೋವಿನಿಂದ ಇಬ್ರೂ ಅಳ್ತಾ ಇದ್ರಿ. ಅಮ್ಮಂಗೂ ಅಳು ಬರ್ತಾ ಇತ್ತು. ಅಪ್ಪ, ಅಜ್ಜಿ, ತಾತ ಎಲ್ರೂ ಅಳ್ತಾ ಇದ್ವಿ. ಆಮೇಲೆ ನಿಮ್ಮನ್ನ ಆಸ್ಪತ್ರೆಗ್ ಕರ್ಕೊಂಡ್ ಹೋಗಬೇಕಾಗ್ತಿತ್ತು’.

ಸಮರ್ಥ ಬೆಚ್ಚಿದ. ‘ಅಮ್ಮ ಆಗ ಡಾಕ್ಟರು ಚುಚ್ಚಿ ಮಾಡ್ತಾ ಇದ್ರು ಅಲ್ವ?’ ಕೇಳಿದ. ಅಮ್ಮ ಪುಟ್ಟನ ತಲೆನೇವರಿಸಿ ‘ಹೌದು ಬಂಗಾರ’ ಅಂದಳು. ‘ಸರಿ ಚಿಕ್ಕಮ್ಮ ಇನ್ಮೇಲೆ ಫೈಟಿಂಗ್ ಪ್ರೋಗ್ರಾಂ ನೋಡೋದೂ ಇಲ್ಲ, ನಾವೂ ಫೈಟಿಂಗ್ ಮಾಡಲ್ಲ. ವೀಡಿಯೋ ಗೇಮ್ಸ್ ಆಡಬಹುದು ಅಲ್ವ?’ ಅಂತ  ಪ್ರಶ್ನೆ ಇಟ್ಟ. ಸಮರ್ಥ ಖುಷಿಯಿಂದ ಹೇಳಿದ, ‘ಅಮ್ಮ ಅಣ್ಣನ ಹತ್ರ ಒಂದ್ ವಿಡಿಯೊ ಗೇಮ್ ಇದೆ. ಶೂಟ್ ಮಾಡೋದು ಢಂ... ಡಂ... ಅಂತ ಜಾಸ್ತಿ ಜನಾನ ಶೂಟ್ ಮಾಡಿ ಸಾಯಿಸಿದ್ರೆ ಜಾಸ್ತಿ ಪಾಯಿಂಟ್ಸ್ ಸಿಗತ್ತೆ. ಅಣ್ಣ ನಿನ್ನೆ 102 ಜನರನ್ನ ಸಾಯಿಸ್ದ. 1200 ಪಾಯಿಂಟ್ಸ್ ಸಿಕ್ತು’ ಅಂದ.

ಅಮ್ಮನಿಗೆ ಗಾಬರಿಯಾಯ್ತು. ‘ಸಾಯ್ಸೋ ಆಟಾನಾ?’ ಅಂತ ಕೇಳಿದ್ಲು. ವಿರಾಟ್ ನಕ್ಕು ‘ಏನಾಗಲ್ಲ ದೊಡ್ಡಮ್ಮ. ಸುಮ್ನೆ ಶೂಟ್ ಮಾಡಿದ್ರೆ ರಕ್ತ ಬರತ್ತೆ ಬಿದ್ದೋಗ್ತಾರೆ. ಸತ್ತೋಗ್ತಾರೆ ಅಷ್ಟೆ’ ಅಂದ. ಅಮ್ಮನಿಗೆ ಇನ್ನೂ ಗಾಬರಿ ಆಯ್ತು. ‘ಅಯ್ಯೋ ಮಕ್ಕಳೇ, ಆಟದಲ್ಲೂ ನಾವು ಯಾರಿಗೂ ಹಾನಿ ಮಾಡಬಾರದು, ಕೆಟ್ಟದ್ದು ಮಾಡಬಾರದು. ಅದೊಂದು ಕೆಟ್ಟ ಆಟ ಕಂದಮ್ಮಗಳ. ಅಂತದೆಲ್ಲ ಆಡಲೂಬಾರದು, ನೋಡಲೂಬಾರದು. ನೋಡಿ, ಇನ್ಮೇಲೆ ನಾನೇ ನಿಮಗೆ ಚೆಂದ ಚೆಂದ ಕಥೆ ಹೇಳ್ತೀನಿ. ಹಕ್ಕಿ ಕಥೆ, ಗುಬ್ಬಿ ಕಥೆ, ರಾಜನ ಕಥೆ ಎಲ್ಲ ಹೇಳ್ತೀನಿ’  ಅಂದಳು.

ಮಕ್ಕಳಿಬ್ರಿಗೂ ಬೇಜಾರಾಯಿತು. ‘ಹಾಗಾದ್ರೆ ಟೀವಿ ನೋಡ್ಲೇಬೇಡ್ವ? ಗೇಮ್ಸ್ ಆಡೋದೇ ಬೇಡ್ವ?’ ಅಂತ ಮುಖ ಸಣ್ಣಗೆ ಮಾಡಿಕೊಂಡ್ರು. ‘ಇಲ್ಲ ಮಕ್ಕಳ, ಟೀವೀಲಿ ಒಳ್ಳೊಳ್ಳೆ ಕಥೆಗಳು ಬಂದರೆ ನೋಡಿ, ಒಳ್ಳೆ ಆಟಗಳು ಸಿಕ್ರೆ ಆಡಿ. ಆದ್ರೆ ಅಪ್ಪ, ಅಮ್ಮನನ್ನ ಕೇಳಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೋಬೇಕು ಆಯ್ತಾ’ ಅಂದಳು. ಮಕ್ಕಳಿಬ್ರೂ ಚಪ್ಪಾಳೆ ತಟ್ಟಿ ಓ... ಅಂತ ಕೂಗಿದವು. ಅಷ್ಟರಲ್ಲಿ ಸುವ್ವಿ ಪುಟ್ಟಿ ಅಳುತ್ತಾ ಬಂದ್ಲು. ಅಮ್ಮ ಕೇಳಿದ್ಲು ‘ಯಾಕೆ ಅಳ್ತಾ ಇದೆ ನಮ್ಮ ಮುದ್ದು ಸುವ್ವಿ ಪುಟ್ಟಿ?’
ಪುಟ್ಟಿ ತೊದಲು ಮಾತಲ್ಲಿ ‘ನಂಗೆ ಜಾಮೂನು ಬೇಕು’ ಅಂದ್ಲು. ಅವಳು ಅಳೋದು ನೋಡಿ, ಸಮರ್ಥನಿಗೂ ಅಳು ಬಂತು. ‘ಯಾಕೋ ಹುಡುಗೀರ ಥರ ನೀನೂ ಅಳ್ತೀಯಾ? ನಾವು ಬಾಯ್ಸ್ ಅಳಬಾರದು. ಸ್ಟ್ರಾಂಗ್ ಆಗಿರ್ಬೇಕು’ ಅಂದ ವಿರಾಟ್. ಅಮ್ಮ ಕೇಳಿದಳು ‘ಅಳೋದಂದ್ರೆ ಹುಡುಗೀರು, ಗಂಡು ಮಕ್ಕಳು ಸ್ಟ್ರಾಂಗ್ ಅಂತ ನಿಂಗ್ಯಾರು ಹೇಳಿದೋರು?’

‘ನಮ್ಮಪ್ಪಾನೇ ಹೇಳಿದ್ದು’ ಅಂದ ವಿರಾಟ.
‘ಅಪ್ಪ ಹೇಳಿದ್ದು ತಪ್ಪು ಮಗು, ಗಂಡುಮಕ್ಕಳು ಹೆಣ್ಮಕ್ಕಳು ಇಬ್ರೂ ಸ್ಟ್ರಾಂಗ್. ನೋವಾದ್ರೆ ಎಲ್ರೂ ಅಳ್ತಾರೆ. ಖುಷಿಯಾದ್ರೆ ಎಲ್ರೂ ನಗ್ತಾರೆ. ಪುಟ್ಟಿನೂ ನಿಮ್ ಹಾಗೆ, ನಿಜ ಅಂದ್ರೆ ನಿಮಗಿಂತ ಸ್ಟ್ರಾಂಗ್, ಹಾಗೆಲ್ಲ ಹುಡುಗಿ ಅಂತ ಹೀಯಾಳಿಸಬಾರದು. ತಪ್ಪು ಅದು. ಗೊತ್ತಾಯ್ತಾ?’
ಮಕ್ಕಳು ತಲೆಯಾಡಿಸಿ ಪುಟ್ಟಿಯನ್ನ ಮುದ್ದು ಮಾಡಿದ್ರು. ಬನ್ನಿ, ಈಗ ನಾನು ನಿಮಗೆಲ್ಲ ಜಾಮೂನು ಮಾಡಿಕೊಡ್ತೀನಿ’ ಅಂತ ಅಮ್ಮ ಮೇಲೆದ್ದಳು. ಮೂರೂ ಮಕ್ಕಳೂ ‘ಹೇ.. ಜಾಮೂನು ಜಾಮೂನು’ ಅಂತ ಕೂಗ್ತಾ ಓಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT